/newsfirstlive-kannada/media/post_attachments/wp-content/uploads/2024/11/VIJEYENDRA_ASHOK.jpg)
ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಚುನಾವಣೆ ಹೊತ್ತಲ್ಲೇ ವಕ್ಫ್ ಆಸ್ತಿ ಗದ್ದಲ ತಾರಕಕ್ಕೇರಿದೆ. ರೈತರ ಜಮೀನಿನ ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಹೆಸರು ತಿದ್ದುಪಡಿಗೆ ಈಗಾಗಲೇ ಸಿಎಂ ಸೂಚಿಸಿದ್ದಾರೆ. ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್‌ಗೆ ಆದೇಶ ನೀಡಿದ್ದಾರೆ. ಹೀಗಿದ್ದರೂ ರಾಜ್ಯದಲ್ಲಿ ವಕ್ಫ್ ವಿವಾದ ತಣ್ಣಗಾಗಿಲ್ಲ. ಇದರ ನಡುವೆ ಸರ್ಕಾರದ ವಿರುದ್ಧ ಇವತ್ತು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದೆ.
ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ
ರಾಜ್ಯಾದ್ಯಂತ ವಕ್ಫ್ ಬೋರ್ಡ್‌ನಿಂದ ರೈತರು, ಮಠ, ಗೋಮಾಳ, ರೈತರ ಜಮೀನು ಸೇರಿದಂತೆ ಹಿಂದೂಗಳ ಜಮೀನನ್ನು ಕಬಳಿಕೆ ಮಾಡುತ್ತಿದೆ ಎಂಬ ವಿವಾದ ತಲೆ ಎತ್ತಿದೆ. ಇದರ ಬಗ್ಗೆ ಆರೋಪಿಸಿರುತ್ತಿರುವ ಬಿಜೆಪಿ ಕೂಡ ಇವತ್ತು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಅದರಂತೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಸರ್ಕಾರದ ವಿರುದ್ಧ ಬೀದಿಗಳಿಯಲು ಸಜ್ಜಾಗಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಇದನ್ನೂ ಓದಿ:ವಕ್ಫ್ ವಿವಾದ; ಮುಸ್ಲಿಂರ ಪಹಣಿಯಲ್ಲೂ ಹೆಸರು.. ಕೋರ್ಟ್ಗೆ ಹೋಗುವ ಎಚ್ಚರಿಕೆ ನೀಡಿದ ಮುಖಂಡರು
ವಕ್ಫ್ ಬೋರ್ಡ್ ವಿರುದ್ಧ ಬಿಜೆಪಿ ಕರೆ ಕೊಟ್ಟಿರುವ ಪ್ರತಿಭಟನೆಗೆ ರೈತ ಸಂಘಟನೆಗಳು ಕೂಡ ಸಾಥ್ ನೀಡಿವೆ. ಬೆಳಗಾವಿ, ವಿಜಯಪುರದಲ್ಲಿ ಪ್ರತಿಭಟನೆಗೆ ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ
ಪ್ರತಿಭಟನೆಗೆ ಮುಂದಾದ ಬಿಜೆಪಿಗೆ ಸಿಎಂ ತಿರುಗೇಟು
ವಕ್ಫ್ ಆಸ್ತಿ ವಿವಾದ ಸಂಬಂಧ ಜನಾಕ್ರೋಶಕ್ಕೆ ಗುರಿಯಾಗಿದ್ದ ಸಿಎಂ ಸಿದ್ದರಾಮಯ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯುವಂತೆ ಸೂಚನೆ ನೀಡಿದ್ದಾರೆ. ಇಷ್ಟಾದ್ರೂ ಬಿಜೆಪಿ ಪ್ರತಿಭಟನೆ ಮಾಡಲು ಹೊರಟಿರುವುದಕ್ಕೆ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಕ್ಫ್ ಆಸ್ತಿಯ ವಿವಾದ ಸಂಬಂಧ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು, ತಕ್ಷಣ ವಾಪಸ್ ಪಡೆಯಲು ನಮ್ಮ ಸರ್ಕಾರ ಸೂಚನೆ ನೀಡಿದ ನಂತರ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿರುವುದಕ್ಕೆ ರಾಜಕೀಯ ಲಾಭದ ದುರುದ್ದೇಶ ಇದೆಯೇ ಹೊರತು. ಇದರಲ್ಲಿ ರೈತರ ಹಿತಾಸಕ್ತಿ ರಕ್ಷಣೆಯ ಯಾವ ಸದುದ್ದೇಶ ಇಲ್ಲ. ಹೀಗಾಗಿ ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ. ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯಬೇಕು. ರೈತರ ಪಹಣಿ ಬದಲಾವಣೆ ಸಂಬಂಧ, ಈಗಾಗಲೇ ನೀಡಿರುವ ನೋಟೀಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಕಾನೂನು ಬಾಹಿರವಾಗಿ ಹಾಗೂ ನೋಟೀಸ್ ನೀಡದೆ ಪಹಣಿಯಲ್ಲಿ, ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು, ಅಧಿಕಾರಿಗಳು ಎಚ್ಚರ ವಹಿಸಿ ರೈತರಿಗೆ ತೊಂದರೆ ಆಗುವ ಯಾವುದೇ ತೀರ್ಮಾನವನ್ನು ಕೈಗೊಳ್ಳಬಾರದು ಎಂದು ನಾನು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ಈ ಸೂಚನೆಯ ನಂತರವೂ ಬಿಜೆಪಿ ನಾಯಕರು ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ?.
ಸಿಎಂ ಸಿದ್ದರಾಮಯ್ಯ
ಆಡಳಿತ ಮತ್ತು ವಿಪಕ್ಷದ ನಡುವೆ ವಕ್ಫ್ ಆಸ್ತಿ ಗದ್ದಲ ತಾರಕಕ್ಕೇರಿದ್ದು, ಮಾತಿನ ಜಟಾಪಟಿಯು ಜೋರಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ