/newsfirstlive-kannada/media/post_attachments/wp-content/uploads/2025/07/SUNDAR-1.jpg)
ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡ್ತಿರುವ ಆಟಗಾರರಲ್ಲಿ ವಾಷಿಂಗ್ಟನ್ ಸುಂದರ್ ಸಹ ಒಬ್ಬರು. ಟೀಮ್ ಇಂಡಿಯಾ ಗೆಲುವಿಗಾಗಿ ಹೋರಾಡ್ತಿರುವ ಯುವ ಆಟಗಾರ ಸುಂದರ್ ಬ್ಯಾಟಿಂಗ್- ಬೌಲಿಂಗ್ ಎರಡರಲ್ಲೂ ಮ್ಯಾಜಿಕ್ ಮಾಡಿದ್ದಾರೆ. ಈ ಪರ್ಫಾಮೆನ್ಸ್ ಹೊರತಾಗಿ ಸುಂದರ್ ಬೇರೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸುಂದರ್ ತಂದೆ ಸೆಲೆಕ್ಟರ್ಸ್ ವಿರುದ್ಧ ಕಿಡಿಕಾರಿದ್ದಾರೆ.
ವಾಷ್ಟಿಂಗ್ಟನ್ ಸುಂದರ್, ಪ್ರಸಕ್ತ ಇಂಗ್ಲೆಂಡ್ ಪ್ರವಾಸದಲ್ಲಿ ಕನ್ಸಿಸ್ಟೆಂಟ್ ಆಟದಿಂದಲೇ ವಿಶ್ವ ಕ್ರಿಕೆಟ್ ಲೋಕದ ಅಭಿಮಾನಿಗಳ ಮನ ಗೆದ್ದವ. ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್ ಆಲ್ರೌಂಡರ್ ಆಗುವ ಭರವಸೆ ಹುಟ್ಟಿಸಿದ ಆಲ್ರೌಂಡರ್. ಮ್ಯಾಂಚೆಸ್ಟರ್ನಲ್ಲಿ ಸಿಡಿಸಿದ ಶತಕ.. ಹೈ-ಫ್ರೆಷರ್ ಟೈಮ್ನಲ್ಲಿ ತೋರಿದ ಛಲದ ಹೋರಾಟ ನಿಜಕ್ಕೂ ಅದ್ಭುತ! ತನ್ನ ಸಾಲಿಡ್ ಪ್ರದರ್ಶನದಿಂದ ಸುಂದರ್ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇದ್ರ ನಡುವೆ ಸುಂದರ್ ತಂದೆ ಸೆಲೆಕ್ಟರ್ಸ್ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: NISAR ಉಡಾವಣೆಗೆ ಕೌಂಟ್ಡೌನ್; ಇಸ್ರೋ-ನಾಸಾದ ಈ ಜಂಟಿ ಪ್ರಾಜೆಕ್ಟ್ ವಿಶೇಷತೆಗಳು ಏನೇನು..?
ಚೀಫ್ ಸೆಲೆಕ್ಟರ್ಸ್ ವಿರುದ್ಧ ಸಿಡಿದೆದ್ದ ಸುಂದರ್ ತಂದೆ
ಮ್ಯಾಂಚೆಸ್ಟರ್ನಲ್ಲಿ ಶತಕ ಸಿಡಿಸಿ ಸೋಲಿನಿಂದ ಪಾರು ಮಾಡಿರುವ ಸುಂದರ್, ತಂಡಕ್ಕೆ ನನ್ನ ಅವಶ್ಯಕತೆ ಎಷ್ಟಿದೆ ಎಂಬುವುದರ ಮನದಟ್ಟು ಮಾಡಿದ್ದಾರೆ. ಅತ್ತ ಸುಂದರ್ ಶತಕದ ಸಂಭ್ರಮದಲ್ಲಿ ತೇಲಾಡುತ್ತಿದ್ರೆ. ಇತ್ತ ವಾಷಿಂಗ್ಟನ್ ಸುಂದರ್ ತಂದೆ, ಆಯ್ಕೆ ಸಮಿತಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಗನಿಗೆ ಆದ ಅನ್ಯಾಯದ ಬಗ್ಗೆ ಬೇಸರ ಹೊರಹಾಕಿದ್ದಾರೆ.
ನನ್ನ ಮಗನಿಗೆ ಅವಕಾಶ ಸಿಗ್ತಿಲ್ಲ
ಸುಂದರ್ ನಿರಂತರವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾನೆ. ಆದ್ರೆ ಜನ ಮರೆತು ಬಿಡುತ್ತಾರೆ. ಇತರ ಆಟಗಾರರು ನಿರಂತರವಾಗಿ ಅವಕಾಶ ಪಡೆಯುತ್ತಾರೆ. ನನ್ನ ಮಗನಿಗೆ ಮಾತ್ರ ಅವಕಾಶ ಸಿಗುತ್ತಿಲ್ಲ. 4ನೇ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ ಮಾಡಿದಂತೆ ವಾಷಿಂಗ್ಟನ್, ಯಾವಾಗಲೂ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ನಿರಂತರವಾಗಿ ಐದರಿಂದ 10 ಅವಕಾಶ ಪಡೆಯಬೇಕು. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ನನ್ನ ಮಗನನ್ನ ಆಯ್ಕೆ ಮಾಡದಿರುವುದು ಆಶ್ಚರ್ಯವಾಗಿದೆ. ಆಯ್ಕೆಗಾರರು ನನ್ನ ಮಗನ ಪ್ರದರ್ಶನ ಗಣನೆಗೆ ತೆಗೆದುಕೊಳ್ಳಬೇಕು-ಮಣಿ ಸುಂದರ್, ವಾಷಿಂಗ್ಟನ್ ಸುಂದರ್ ತಂದೆ
ವಾಷಿಂಗ್ಟನ್ ಸುಂದರ್ ತಂದೆ ಸೆಲೆಕ್ಟರ್ಗಳಿಗೆ ಪದೇ ಪದೆ ಚಾನ್ಸ್ ನೀಡುವಂತೆ ಒತ್ತಾಯಿಸಿದ ಹಿಂದೆ ನ್ಯಾಯವೂ ಅಡಗಿದೆ. 5ನೇ ಕ್ರಮಾಂಕದಲ್ಲೇ ಮುಂದುರಿಸಲು ಒತ್ತಾಯಿಸಿದರ ಹಿಂದೆಯೂ ಪ್ರಮುಖ ಅಂಶಗಳೇ ಅಡಗಿದೆ.
ಇದನ್ನೂ ಓದಿ: 8.8 ತೀವ್ರತೆಯಲ್ಲಿ ಭೂಕಂಪ.. ಭಯಾನಕ ಸುನಾನಿ ಎಚ್ಚರಿಕೆ.. ರಷ್ಯಾ ಕರಾವಳಿ ಅಕ್ಷರಶಃ ಪ್ರಕ್ಷುಬದ್ಧ..!
4 ವರ್ಷದಲ್ಲಿ ಆಡಿದ್ದು ಜಸ್ಟ್ 12 ಮ್ಯಾಚ್..!
2021, ಜನವರಿ 15.. ವಾಷ್ಟಿಂಗ್ಟನ್ ಸುಂದರ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದಿನ. ಆಸ್ಟ್ರೇಲಿಯಾ ಎದುರಿನ ಬಾರ್ಡರ್ ಗವಾಸ್ಕರ್ ಟೆಸ್ಟ್ನಲ್ಲಿ ಡೆಬ್ಯು ಮಾಡಿದ್ದ ಸುಂದರ್, ಡೆಬ್ಯೂ ಮ್ಯಾಚ್ನಲ್ಲೇ ಹೋರಾಡಿದ ಪರಿ ನಿಜಕ್ಕೂ ಅದ್ಬುತ. ಡು ಆರ್ ಡೈ ಮ್ಯಾಚ್ನಲ್ಲಿ 161 ರನ್ಗೆ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಬ್ಯಾಟಿಂಗ್‌ಗೆ ಇಳಿದ ಶಾರ್ದೂಲ್ ಜೊತೆ ಅದ್ಭುತ ಬ್ಯಾಟಿಂಗ್ ನಡೆಸಿದ್ರು. ಮೊದಲ ಇನ್ನಿಂಗ್ಸ್ನಲ್ಲಿ 62 ರನ್ ಗಳಿಸಿದ್ದ ಸುಂದರ್, 2ನೇ ಇನ್ನಿಂಗ್ಸ್ನಲ್ಲಿ 22 ರನ್ ಗಳಿಸಿ, 4 ವಿಕೆಟ್ ಪಡೆದು ಮಿಂಚಿದ್ದರು. ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಆ ಬಳಿಕ ಇಂಗ್ಲೆಂಡ್ ಎದುರಿನ ಚೆನ್ನೈ ಟೆಸ್ಟ್ನಲ್ಲಿ ಅಜೇಯ 85 ರನ್ ಗಳಿಸಿದ್ದ ವಾಷಿಂಗ್ಟನ್ ಸುಂದರ್, ಅಹ್ಮದಾಬಾದ್ ಟೆಸ್ಟ್ನಲ್ಲೂ ಅಜೇಯ 96 ರನ್ ಗಳಿಸಿದರು. ಆ ನಂತರ ಸುಂದರ್ಗೆ ಸಿಕ್ಕಿದ್ದು ಅಚ್ಚರಿಯ ಗಿಫ್ಟ್.
ಇದು ನ್ಯಾಯವಲ್ಲ..!
2021ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ 85 ರನ್, ಅಹಮದಾಬಾದ್‌ನಲ್ಲಿ 96 ರನ್ ಗಳಿಸಿದ್ದರು. ಬ್ಯಾಟಿಂಗ್‌ಗೆ ಸಹಕಾರಿಯಲ್ಲದ ಪಿಚ್‌ಗಳಲ್ಲಿ ರನ್ ಗಳಿಸಿದ್ದರು. ಹೀಗಿದ್ದರೂ ಸುಂದರ್ಗೆ ಮುಂದಿನ ಟೆಸ್ಟ್ ಸರಣಿಯಲ್ಲಿ ಅವಕಾಶ ನೀಡಲಿಲ್ಲ. ಸೋತರೆ ನನ್ನ ಮಗನನ್ನ ತಂಡದಿಂದ ಕೈಬಿಡುತ್ತಾರೆ. ಇದು ನ್ಯಾಯವಲ್ಲ-ಮಣಿ ಸುಂದರ್, ವಾಷಿಂಗ್ಟನ್ ಸುಂದರ್ ತಂದೆ
ತಂಡದಲ್ಲಿ ಇಲ್ಲ ಚಾನ್ಸ್..!
ಅಹ್ಮದಾಬಾದ್ ಟೆಸ್ಟ್ ಅಜೇಯ 96 ರನ್ ಗಳಿಸಿದ್ದ ಸುಂದರ್ಗೆ, ತಂಡದಲ್ಲಿ ಸ್ಥಾನ ಫಿಕ್ಸ್ ಎಂಬ ನಿರೀಕ್ಷೆ ಇತ್ತು. ಅದೇ ಟೆಸ್ಟ್ ಪಂದ್ಯದ ಬಳಿಕ ವಾಷ್ಟಿಂಗ್ಟನ್ ಸುಂದರ್ಗೆ ತಂಡದಲ್ಲಿ ಅವಕಾಶ ಇಲ್ಲದಾಯ್ತು. ಸೀನಿಯರ್ ಅಶ್ವಿನ್ ಇದ್ದಾರೆ ಎಂಬ ನೆಪದಲ್ಲಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಸುಂದರ್, ನಂತರ ತಂಡಕ್ಕೆ ಬರಲು ಕಾದಿದ್ದು 3 ವರ್ಷ 7 ತಿಂಗಳು 20 ದಿನ. 2021ರ ಮಾರ್ಚ್ 1ರ ಬಳಿಕ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಸುಂದರ್, 2024ರ ಅಕ್ಟೋಬರ್ನಲ್ಲಿ ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಕಮ್ಬ್ಯಾಕ್ ಮಾಡಿದ್ರು.
ಆ ಕಿವೀಸ್ ಸರಣಿ ಬಳಿಕ ಸುಂದರ್ ನಿರಂತರವಾಗಿ ತಂಡದಲ್ಲಿದ್ದಾರೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಇಲ್ಲ. ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ 2 ಮ್ಯಾಚ್, ಆಸ್ಟ್ರೇಲಿಯಾ ಪ್ರವಾಸದಲ್ಲಿ 3 ಮ್ಯಾಚ್ಗಳಲ್ಲಿ ಮಾತ್ರ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿದ್ರು. ಇದೀಗ ಇಂಗ್ಲೆಂಡ್ ಪ್ರವಾಸದ ಮೊದಲ ಟೆಸ್ಟ್ನಲ್ಲೂ ಬೆಂಚ್ಗೆ ಸೀಮಿತವಾಗಿದ್ದರು. ಇದೇ ಕಾರಣಕ್ಕೆ ಸುಂದರ್ ತಂದೆ ಸೆಲೆಕ್ಟರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿರುದ್ಧ ಕೆಂಡಕಾರಿದ್ದಾರೆ.
ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ