/newsfirstlive-kannada/media/post_attachments/wp-content/uploads/2025/06/kamal-hasan2.jpg)
ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋ ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಹೈಕೋರ್ಟ್ ಜಡ್ಜ್ ತರಾಟೆ ತೆಗೆದುಕೊಂಡಿದ್ದಾರೆ. ಕನ್ನಡಿಗರಿಗೆ ಕ್ಷಮೆ ಕೇಳಲು ಮೊಂಡಾಟ ಪ್ರದರ್ಶಿಸುತ್ತಿದ್ದ ತಮಿಳು ನಟ ಕಮಲ್ ಹಾಸನ್ ‘ನಾನು ಯಾವುದೇ ತಪ್ಪು ಮಾಡಿಲ್ಲ, ಕ್ಷಮೆಯಾಚಿಸುವುದಿಲ್ಲ’ ಎಂದು ಉದ್ಧಟತನ ಮೆರೆದಿದ್ದರು. ಹೀಗಾಗಿ ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಅವರ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಅಂತ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದರು.
ಇದನ್ನೂ ಓದಿ:ಕಮಲ್ ಹಾಸನ್ ಮೇಲೆ ಹಂಸಲೇಖ ಮತ್ತೆ ಗರಂ.. ಕ್ಷಮೆ ಕೇಳದಕ್ಕೆ ಬುದ್ಧಿವಾದ; ಏನಂದ್ರು?
ಇನ್ನೂ, ಥಗ್ ಲೈಫ್ ಸಿನಿಮಾ ರಿಲೀಸ್ಗೆ ಭದ್ರತೆ ಕೋರಿ ಕಮಲ್ ಹಾಸನ್ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ತಮಿಳು ನಟ ಕಮಲ್ ಹಾಸನ್ಗೆ ಜಡ್ಜ್ ತರಾಟೆ ತೆಗೆದುಕೊಂಡಿದ್ದಾರೆ. ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ ಅಂತ ಹೇಳಿದ್ದಾರೆ. ‘ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದ್ರೆ ಹೇಗೆ? ಕನ್ನಡ ಭಾಷೆ ತಮಿಳಿಂದ ಹುಟ್ಟಿದೆ ಅನ್ನೋಕೆ ಅವರೇನು ಇತಿಹಾಸಕಾರರಾ? ಈ ಹಿಂದೆ ರಾಜಗೋಪಾಲಚಾರ್ಯ ಕೂಡ ಕ್ಷಮೆಯನ್ನ ಕೇಳಿದ್ದರು. ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ, ಈ ರೀತಿ ಹೇಳಿಕೆ ನೀಡಬಾರದು. ಆದರೆ ಕಮಲ್ ಹಾಸನ್ ಕ್ಷಮೆ ಕೇಳದೆ ಌಟಿಟ್ಯೂಡ್ ತೋರಿಸುತ್ತಿದ್ದಾರೆ. ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿ ಅಲ್ಲ, ಪಬ್ಲಿಕ್ ಫಿಗರ್. ಅವರು ಮೊದಲು ಕ್ಷಮೆ ಕೇಳಲಿ, ಆಮೇಲೆ ಅರ್ಜಿ ಪರಿಗಣಿಸ್ತೇವೆ’ ಎಂದು ಜಡ್ಜ್ ಹೇಳಿದ್ದಾರೆ.
ಮತ್ತೆ ಮಾತನ್ನು ಮುಂದುವರೆಸಿದ ಅವರು ‘ಈ ತರ ಪರಿಸ್ಥಿತಿ ನಿರ್ಮಾಣ ಆಗೋಕೆ ಕಾರಣ ನೀವೇ? ಈ ರೀತಿ ಪರಿಸ್ಥಿತಿ ಆದ ಮೇಲೆ ನೀವೇ ಭದ್ರತೆ ಕೋರಿದ್ದೀರಿ. ಭದ್ರತೆ ಕೊಡೋದು ಪೊಲೀಸರ ಕೆಲಸ.. ಆದರೆ ಈ ರೀತಿ ಪರಿಸ್ಥಿತಿ ಯಾಕೆ ಬೇಕು? ಸಿನಿಮಾ ಸರಗವಾಗಿ ರಿಲೀಸ್ ಆಗಬೇಕು. ಯಾವುದೇ ರೀತಿ ಸಮಸ್ಯೆ ಆಗಬಾರದು ಅಂದರೆ ಎಲ್ಲಾ ರೀತಿಲೂ ಸಹಕರಿಸಬೇಕು. ಕ್ಷಮೆ ಕೇಳಿದ್ದರೆ ಆಗಿರೋದು. ಕರ್ನಾಟಕ ಜನರಿಗೆ ಭಾಷೆ ಅನ್ನೋದು ಒಂದು ಭಾವನೆ. ಕರ್ನಾಟಕದಿಂದ ತಮಿಳು ಸಿನಿಮಾಗಳಿಗೆ ಕಲೆಕ್ಷನ್ ಇದೆ.. ಬ್ಯೂಸಿನೆಸ್ ಆಗುತ್ತೆ ಆದರೆ ಈ ರೀತಿಯಿಂದ ಏನಾಗುತ್ತೆ? ಕೋಟ್ಯಾಂತರ ರೂಪಾಯಿ ಹಣ ಹಾಕಿದ್ದೀರಾ ಅಂದ್ರೆ ಕ್ಷಮೆ ಕೇಳಿ. ಕಮಲ್ ಹಾಸನ್ ಅವರೇ ಪ್ರೊಡ್ಯಸರ್ ಅಲ್ವಾ’ ಅಂತ ಜಡ್ಜ್ ತರಾಟೆ ತೆಗೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ