/newsfirstlive-kannada/media/post_attachments/wp-content/uploads/2025/07/renukaswami.jpg)
ಸುಪ್ರೀಂಕೋರ್ಟ್ ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಹಾಗೂ ಜಸ್ಟೀಸ್ ಆರ್.ಮಹದೇವನ್ ಅವರ ಪೀಠದಲ್ಲಿ ಇಂದು ನಟ ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಸುಪ್ರೀಂಕೋರ್ಟ್, ನಟ ದರ್ಶನ್ ಗೆ ಜಾಮೀನು ನೀಡಿದ್ದ ಹೈಕೋರ್ಟ್ ಅನ್ನು ತೀವ್ರವಾಗಿ ಟೀಕಿಸಿದೆ. ಹೈಕೋರ್ಟ್ ಆದೇಶಕ್ಕೆ ತೀವ್ರವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದೆ.
ಮೇಲ್ನೋಟಕ್ಕೆ ನಟ ದರ್ಶನ್‌ಗೆ ಜಾಮೀನು ನೀಡುವಾಗ ಹೈಕೋರ್ಟ್, ನ್ಯಾಯಾಂಗದ ಅಧಿಕಾರವನ್ನು ಅಸಂಮಜಸವಾಗಿ ಬಳಸಿಕೊಂಡಿದೆ ಅಷ್ಟೇ ಎಂದು ಸುಪ್ರೀಂಕೋರ್ಟ್ ನೇರವಾಗಿ ಹೇಳಿದೆ. ಅಷ್ಟೇ ಅಲ್ಲ, ಕೆಳ ನ್ಯಾಯಾಲಯದ ಜಡ್ಜ್ ಇಂಥ ತಪ್ಪು ಮಾಡಿದರೇ, ಒಪ್ಪಿಕೊಳ್ಳಬಹುದು, ಆದರೇ, ಹೈಕೋರ್ಟ್ ಜಡ್ಜ್ ಮಾಡಿದರೇ, ಹೇಗೆ? ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಹೈಕೋರ್ಟ್ ಮಾಡಿದ ತಪ್ಪು ಅನ್ನು ನಾವು ಮಾಡಲ್ಲ ಎಂದು ಇಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಹೈಕೋರ್ಟ್ ತನ್ನ ಆದೇಶವನ್ನು ವಿವರಿಸಿರುವ ರೀತಿಯನ್ನು ನೋಡಿದರೇ, ಕ್ಷಮಿಸಿ, ಹೈಕೋರ್ಟ್, ಬೇರೆ ಕೇಸ್ಗಳಲ್ಲೂ ಹೀಗೆ ಆದೇಶ ನೀಡುತ್ತಾ? ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಹೈಕೋರ್ಟ್ ತನ್ನ ಜಾಮೀನು ಆದೇಶಕ್ಕೆ ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲ. ವಿಶೇಷವಾಗಿ ಮರ್ಡರ್ ಕೇಸ್ನಲ್ಲಿ ಬಂಧನದ ಕಾರಣವನ್ನು ತಿಳಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ. ಹೈಕೋರ್ಟ್ ಇಂಥ ತಪ್ಪು ಮಾಡಿದೆ ಎಂದು ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ನಾವು ಆರೋಪಿಗಳು ತಪ್ಪಿತಸ್ಥರು ಅಥವಾ ಆರೋಪಿಗಳು ಖುಲಾಸೆ ಎಂದು ಯಾವುದೇ ತೀರ್ಪು ನೀಡಲ್ಲ. ಹೈಕೋರ್ಟ್, ಖುಲಾಸೆಯ ತೀರ್ಪು ನೀಡಿದೆ ಎಂದು ನಿಮಗೆ ಅನ್ನಿಸುವುದಿಲ್ಲವೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ದೆಹಲಿಯಾತ್ರೆ.. ಮತ್ತೆ ಕಾಂಗ್ರೆಸ್ನಲ್ಲಿ ಬಿಸಿಬಿಸಿ ಟಾಕ್..!
ಸುಪ್ರೀಂಕೋರ್ಟ್ನಲ್ಲಿ ನಟ ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಜಾಮೀನು ಅನ್ನು ರದ್ದುಪಡಿಸಬೇಕೆಂದು ಕೋರಿದ್ದ ಅರ್ಜಿ ವಿಚಾರಣೆಯ ವೇಳೆ ನಟ ದರ್ಶನ್ ಪರ ಸಿದ್ದಾರ್ಥ ದವೆ ಹಾಜರಾಗಿ ವಾದ ಮಂಡಿಸಿದ್ದರು. ಬೆಂಗಳೂರು ಪೊಲೀಸರ ಪರ ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ ವಾದ ಮಂಡಿಸಿದ್ದರು. ಇನ್ನೂ, ರೇಣುಕಾಸ್ವಾಮಿ ಕೊಲೆ ಕೇಸ್ ಅನ್ನು ನಿತ್ಯ ವಿಚಾರಣೆ ನಡೆಸಿ 6 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವುದಾಗಿ ರಾಜ್ಯ ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟ್ಗೆ ತಿಳಿಸಿದ್ದರು. ಬೇರೆ ಖೈದಿಗಳು ವಿಚಾರಣೆ ಇಲ್ಲದೇ ಜೈಲಿನಲ್ಲಿ ಕೊಳೆಯುತ್ತಿರುವಾಗ, ಈ ಕೇಸ್ ವಿಚಾರಣೆಗೆ ಏಕೆ ವಿಶೇಷ ಆದ್ಯತೆ ಕೊಟ್ಟು ನಿತ್ಯ ವಿಚಾರಣೆ ನಡೆಸುವುದು ಎಂದು ಪ್ರಶ್ನೆ ಮಾಡಿತು.
ಇನ್ನೂ ಬಳ್ಳಾರಿ ಸೆಂಟ್ರಲ್ ಜೈಲು ಅಧಿಕಾರಿಗಳು ದರ್ಶನ್ ಆರೋಗ್ಯದ ಬಗ್ಗೆ ನೀಡಿದ ವರದಿಯನ್ನು ವಕೀಲ ಸಿದ್ದಾರ್ಥ ಲೂತ್ರಾ ಅವರು ಸುಪ್ರೀಂಕೋರ್ಟ್ಗೆ ಸಲ್ಲಿಕೆ ಮಾಡಿದ್ದರು. ಜೊತೆಗೆ ಬಳ್ಳಾರಿ ಜಿಲ್ಲಾಸ್ಪತ್ರೆಯ ನ್ಯೂರೋಲಾಜಿ ವೈದ್ಯರು ದರ್ಶನ್ ಆರೋಗ್ಯದ ಬಗ್ಗೆ ನೀಡಿದ್ದ ವರದಿಯೂ ಸಲ್ಲಿಕೆಯಾಗಿದೆ. ವಿಚಾರಣೆ ಆರಂಭವಾಗುತ್ತಿದ್ದಂತೆ, ಬೆಂಗಳೂರು ಪೊಲೀಸರ ಪರ ವಕೀಲ ಸಿದ್ದಾರ್ಥ ಲೂತ್ರಾ ವಾದಮಂಡನೆ ಮಾಡಿದ್ದರು. ಪೊಲೀಸರು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ತನಿಖೆಯನ್ನು ನಡೆಸಿರುವ ವಿಧಾನದ ಬಗ್ಗೆ ಸುಪ್ರೀಂಕೋರ್ಟ್ ಗಮನಕ್ಕೆ ತಂದರು. ಪೊಲೀಸರು ಬೆಂಗಳೂರಿನ ಸುಮನಹಳ್ಳಿ ಬಳಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಸಿಸಿಟಿವಿ ಹಾಗೂ ರಸ್ತೆಯ ಸಿಸಿಟಿವಿಗಳ ಆಧಾರದ ಮೇಲೆ ವಾಹನಗಳ ಪತ್ತೆ ಹಚ್ಚಿದ್ದಾರೆ. ಸುಮನಹಳ್ಳಿಯಿಂದ ಪಟ್ಟಣಗೆರೆವರೆಗೂ 7 ಕಿ.ಮೀವರೆಗೂ ವೆಹಿಕಲ್ಗಳ ಟ್ರ್ಯಾಕ್ ಮಾಡಿದ್ದಾರೆ. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಲಾಗಿದೆ.
ಬಳಿಕ ಪಟ್ಟಣಗೆರೆ ಶೆಡ್ನಿಂದ ಶವ ಸಾಗಿಸಿದ್ದಾರೆ. ಎ 4, 15, 16, 17 ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಸರೆಂಡರ್ ಆಗಿದ್ದಾರೆ. ಎ 4 ಪ್ರಧಾನ ಆರೋಪಿ ಎಂದು ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಪೊಲೀಸರ ಪರ ವಕೀಲ ಸಿದ್ದಾರ್ಥ ಲೂತ್ರಾ ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ್ದರು. ನಾವು ಸಿಡಿಆರ್ ಸಂಗ್ರಹ ಮಾಡಿದ್ದೇವೆ. ಎ 14 ಪ್ರದೋಷ್ ಕೂಡ ಪ್ರಧಾನ ಪಾತ್ರ ವಹಿಸಿದ್ದಾನೆ. ಈತನೇ ಪೊಲೀಸರ ಜೊತೆ ಮಾತನಾಡಿದ್ದಾನೆ. ನಾವು 7 ಜನರ ಜಾಮೀನು ರದ್ದು ಮಾಡಬೇಕೆಂದು ಕೋರಿದ್ದೇವೆ. ನಾವು ಎವಿಡೆನ್ಸ್ ಹೊಂದಿದ್ದೇವೆ. ನಾವು ಡಿಎನ್‌ಎ ಪರೀಕ್ಷೆ ಕೂಡ ನಡೆಸಿದ್ದೇವೆ. ಆರೋಪಿಗಳ ಮೊಬೈಲ್ನಲ್ಲಿ ಪೋಟೋಗಳು ಕೂಡ ಸಿಕ್ಕಿವೆ. ಸಂತ್ರಸ್ತ ರೇಣುಕಾಸ್ವಾಮಿ ತನ್ನ ಜೀವ ಉಳಿಸುವಂತೆ ಆರೋಪಿಗಳ ಎದುರು ಬೇಡಿಕೊಂಡಿದ್ದಾನೆ. ಇದರ ಪೋಟೋ ಕೂಡ ಇದೆ ಎಂದು ಸಿದ್ದಾರ್ಥ ಲೂತ್ರಾ ವಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಪೋಟೋದಲ್ಲಿ ಎಲ್ಲ 7 ಮಂದಿಯೂ ಇದ್ದಾರಾ? ಎಂದು ಪ್ರಶ್ನಿಸಿತು. ಸಾಕ್ಷಿಗಳು ಆರೋಪಿ ದರ್ಶನ್ ಜೊತೆ ಪೋಟೋ ತೆಗೆಸಿಕೊಂಡಿದ್ದಾರೆ. ಆರೋಪಿಗಳು ಹತ್ಯೆಯ ಘಟನೆಯ ಪೋಟೋ, ವಿಡಿಯೋವನ್ನು ತೆಗೆದು ಬೇರೆಯವರಿಗೆ ಕಳಿಸಿದ್ದಾರೆ ಎಂದು ಸಿದ್ದಾರ್ಥ ಲೂತ್ರಾ ವಾದಿಸಿದ್ದರು. ಬಳಿಕ ವಾದ ಮುಂದುವರಿಸಿದ ಸಿದ್ದಾರ್ಥ ಲೂತ್ರಾ ಅವರು ಎ 1 ಪವಿತ್ರಾ ಗೌಡ, ದರ್ಶನ್ ಜೊತೆಯಾಗಿ ವಾಸ ಮಾಡುತ್ತಿದ್ದಾರೆ. ಪವಿತ್ರಾ ಗೌಡ, ದರ್ಶನ್ ಜೊತೆಯಲ್ಲಿ ಆರ್.ಆರ್. ನಗರದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಎ 2 ದರ್ಶನ್, ಡಿ ಬಾಸ್ ದರ್ಶನ್ ಎಂದು ವಕೀಲ ಸಿದ್ದಾರ್ಥ ಲೂತ್ರಾ ಹೇಳಿದ್ದರು. ಸುಪ್ರೀಕೋರ್ಟ್ ನಲ್ಲೂ ಇಂದು ಡಿ ಬಾಸ್ ಪದ ಕೇಳಿ ಬಂದಿತ್ತು.
ಕೊಲೆಯ ಹಿಂದಿನ ಉದ್ದೇಶ ಏನು? ಎಂದು ಸುಪ್ರೀಂಕೋರ್ಟ್ ಬೆಂಗಳೂರು ಪೊಲೀಸರ ಪರ ವಕೀಲ ಸಿದ್ದಾರ್ಥ ಲೂತ್ರಾ ಅವರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸಿದ್ದಾರ್ಥ ಲೂತ್ರಾ, ಚಿತ್ರದುರ್ಗದ ರೇಣುಕಾಸ್ವಾಮಿ, ಪವಿತ್ರಾಗೆ ಮೇಸೇಜ್ ಮಾಡಿದ್ದಾನೆ. ಬಳಿಕ ಪವಿತ್ರಾ ಇದನ್ನು ಎ3 ಪವನ್ಗೆ ಹೇಳಿದ್ದಾಳೆ. ಎ3 ಪವನ್ ಬಳಿಕ ರೇಣುಕಾಸ್ವಾಮಿ ಜೊತೆ ತಾನೇ ಪವಿತ್ರಾ ಎಂಬಂತೆ ನಟಿಸಿ ಸಂಪರ್ಕದಲ್ಲಿದ್ದ. ಇದು ದರ್ಶನ್‌ಗೆ ಗೊತ್ತಾಗಿದೆ. ದರ್ಶನ್ ಕೋಪಗೊಂಡಿದ್ದಾನೆ. ಬಳಿಕ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಶೆಡ್ನಲ್ಲಿ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾರೆ ಎಂದು ನಡೆದ ಘಟನೆಯನ್ನು ಎಳೆ ಎಳೆಯಾಗಿ ಸುಪ್ರೀಂಕೋರ್ಟ್ ಗೆ ವಿವರಿಸಿದ್ದರು.
ಇನ್ನೂ ನಟ ದರ್ಶನ್ ಜೈಲಿನಿಂದ ಬಂದ ಬಳಿಕ ಸಾರ್ವಜನಿಕ ಸಭೆಗೆ ಹಾಜರಾಗಿದ್ದಾನೆ. ಮೆಡಿಕಲ್ ಗ್ರೌಂಡ್ ಮೇಲೆ ದರ್ಶನ್ ಹೈಕೋರ್ಟ್ನಿಂದ ಬೇಲ್ ಪಡೆದಿದ್ದಾರೆ. ಈ ಕೇಸ್ನಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಇನ್ನೂ ದೋಷಾರೋಪ ಹೊರಿಸಿಲ್ಲ ಎಂದು ವಕೀಲ ಸಿದ್ದಾರ್ಥ ಲೂತ್ರಾ ಹೇಳಿದ್ದರು. ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಬಳಿ ಸೆಕ್ಯುರಿಟಿ ಗಾರ್ಡ್ ಶವ ನೋಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಶವದ ಮೇಲೆ ಗಾಯದ ಗುರುತುಗಳಿದ್ದವು ಎಂದು ಪೊಲೀಸರಿಗೆ ಗೊತ್ತಾಗಿದೆ. ಶವ ಪತ್ತೆಯಾದ ಸ್ಥಳಕ್ಕೆ ಪೊಲೀಸರು ಬಂದು ಮಹಜರ್ ಮಾಡಿದ್ದಾರೆ. ಬೆಳಿಗ್ಗೆ 10-11 ಗಂಟೆಗೆ ಮಹಜರ್ ಮಾಡಿದ್ದಾರೆ. ಬಳಿಕ 12 ಗಂಟೆಗೆ ಸಿಸಿಟಿವಿ ಫೋಟೋಜ್ ಸೀಜ್ ಮಾಡಲಾಗಿದೆ. ಸತ್ವ ಅನುಗ್ರಹ ಅಪಾರ್ಟ್ಮೆಂಟ್ನಲ್ಲಿ ಜೂನ್ 8-9ರ ರಾತ್ರಿ ಶವ ತಂದು ಹಾಕಲಾಗಿದೆ. ಸ್ಕಾರ್ಪಿಯೋ ವಾಹನದಲ್ಲಿ ಶವ ತಂದು ಹಾಕಲಾಗಿದೆ. ರೆಡ್ ಜೀಪ್ ಕೂಡ ಬಂದು ಹೋಗಿದೆ. ಸತ್ವ ಅಪಾರ್ಟ್ ಮೆಂಟ್ ಸಿಸಿಟಿವಿ ಯಲ್ಲಿ ಜೀಪ್ ಬಂದು ಹೋಗಿರುವುದು ರೆಕಾರ್ಡ್ ಆಗಿದೆ.
ಇದನ್ನೂ ಓದಿ:ಕೊನೇ ಕ್ಷಣದಲ್ಲಿ ವಕೀಲರ ಬದಲಾವಣೆ.. ನಟ ದರ್ಶನ್‌ಗೆ ಢವಢವ..!
ವಾಹನದಲ್ಲಿದ್ದವರನ್ನು ಐಡೆಂಟಿಫೈ ಮಾಡಲಾಗಿದೆಯೇ? ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು. ಶವ ತಂದು ಹಾಕಿದವರು ವಾಹನದಲ್ಲಿ ಬಂದು ಹೋಗಿದ್ದಾರೆ ಎಂದು ರಾಜ್ಯ ಸರ್ಕಾರದ ವಕೀಲ ಹೇಳಿದ್ದರು. ಎರಡು ಕಾರ್ಗಳಲ್ಲಿ ಬಂದವರನ್ನು ಐಡೆಂಟಿಫೈ ಮಾಡಲಾಗಿದೆಯೇ? ಕಾರ್ ಗಳಲ್ಲಿ ಬಂದವರು ಸಾಕ್ಷ್ಯನಾಶಕ್ಕೆ ಯತ್ನ ಮಾಡಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದ್ದರು. ವಾಹನದಲ್ಲಿದ್ದವರು ಕೂಡ ಈಗ ಜಾಮೀನು ರದ್ದು ಕೋರಿದ್ದೀರಾ? ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು. ಬಿಳಿ ಬಣ್ಣದ ಸ್ಕಾರ್ಪಿಯೋ , ಮತ್ತೊಂದು ಕಾರ್ನಲ್ಲಿದ್ದವರು ಪಟ್ಟಣಗೆರೆಗೆ ಹೋಗಿದ್ದಾರೆ. ಆರ್.ಆರ್. ನಗರದಲ್ಲಿ ಎ 1, ಎ2 ವಾಸ ಇದ್ದಾರೆ. ಪಟ್ಟಣಗೆರೆ ಶೆಡ್ 5-6 ಎಕರೆ ಇದ್ದು, ವಾಹನ ಪಾರ್ಕಿಂಗ್ಗೆ ಬಳಕೆ ಮಾಡಲಾಗುತ್ತಿತ್ತು. ಆರೋಪಿಯೊಬ್ಬನ ಅಂಕಲ್ಗೆ ಈ ಶೆಡ್ ಜಾಗ ಸೇರಿದೆ. ಪಟ್ಟಣಗೆರೆ ಜಯಣ್ಣಗೆ ಈ ಶೆಡ್ ಸೇರಿದೆ ಎಂದು ಸಿದ್ದಾರ್ಥ ಲೂತ್ರಾ ವಾದಿಸಿದ್ದರು. ಎ 1 ಮತ್ತು ಎ2 , ಎ 6, ಎ 7 , ಎ 11 ಎ 12, ಎ 14 ಸೇರಿದಂತೆ ಈ ಏಳು ಮಂದಿಯ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ಸಿದ್ದಾರ್ಥ ಲೂತ್ರಾ ಹೇಳಿದ್ದರು. ಕೊಲೆಗೆ ಯಾರಾದರೂ ಪ್ರತ್ಯಕ್ಷದರ್ಶಿ ಸಾಕ್ಷಿಗಳು ಇದ್ದಾರಾ? ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು.
ಈ ಕೊಲೆ ಕೇಸ್ನಲ್ಲಿ ಪುನೀತ್, ಕಿರಣ್ ಎಂಬ ಇಬ್ಬರು ಪ್ರತ್ಯಕ್ಷದರ್ಶಿಗಳಿದ್ದಾರೆ ಎಂದು ಪೊಲೀಸರ ಪರ ವಕೀಲ ಸಿದ್ದಾರ್ಥ ಲೂತ್ರಾ, ಸುಪ್ರೀಂಕೋರ್ಟ್ಗೆ ತಿಳಿಸಿದರು. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಸಾಂದರ್ಭಿಕ ಸಾಕ್ಷ್ಯಗಳು ಬೆಂಬಲಿಸುತ್ತಿವೆಯೇ? ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು. ಪ್ರದೋಷನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರತ್ಯಕ್ಷದರ್ಶಿ ಪುನೀತ್ ಹೇಳಿಕೆಯನ್ನು 12 ದಿನದೊಳಗಾಗಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ.
ಸೆಕ್ಷನ್ 164 ಅಡಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಕಿರಣ್, ಪ್ರತ್ಯಕ್ಷದರ್ಶಿ ಹೇಳಿಕೆಯನ್ನು ಘಟನೆ ನಡೆದ 7 ದಿನದಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸರ ಪರ ವಕೀಲ ಸಿದ್ದಾರ್ಥ ಲೂತ್ರಾ ವಾದಿಸಿದ್ದರು. ಇನ್ನೂ, ನಟ ದರ್ಶನ್ ಪರ ಹಿರಿಯ ವಕೀಲ ಸಿದ್ದಾರ್ಥ ದವೆ ವಾದಿಸಿದ್ದರು. ಈ ವೇಳೆ ಸುಪ್ರೀಂಕೋರ್ಟ್, ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ನಾವೇಕೆ ನಂಬಬಾರದು ಎಂದು ಹೇಳಿ. ನಾವೇಕೆ ಸಾಂದರ್ಭೀಕ ಸಾಕ್ಷ್ಯ, ಪೋರೆನ್ಸಿಕ್ ವರದಿಯನ್ನು ಕಡೆಗಣಿಸಬಾರದು ಎಂಬುದರ ಬಗ್ಗೆ ಹೇಳಿ. ಇದು ಬರೀ ಕೊಲೆಯಲ್ಲ, ಚೆನ್ನಾಗಿ ರೂಪಿಸಿದ ಷಡ್ಯಂತ್ರದ ಕೊಲೆ ಎಂದು ಹೇಳಿತು. ರೇಣುಕಾಸ್ವಾಮಿಗೆ ಥರ್ಡ್ ಗ್ರೇಡ್ ಕಿರುಕುಳ ನೀಡಿರಬಹುದು. ಆದರೇ, ಇದು ಏಕೆ ಬೇಲ್ ನೀಡುವ ಕೇಸ್ ಎಂದು ನಮಗೆ ಹೇಳಿ ಎಂದು ದರ್ಶನ್ ಪರ ವಕೀಲ ಸಿದ್ದಾರ್ಥ ದವೆಗೆ ಪ್ರಶ್ನಿಸಿತು.
ಆಗ ವಾದ ಮಂಡಿಸಿದ ಸಿದ್ದಾರ್ಥ ದವೆ, ಪ್ರತ್ಯಕ್ಷದರ್ಶಿ ಸಾಕ್ಷಿ ಹೇಳಿಕೆಯನ್ನು ದಾಖಲಿಸಿಕೊಳ್ಳಲು 12 ದಿನ ಏಕೆ ಬೇಕಾಯಿತು? ಸಾಕ್ಷಿಗಳ ಹೇಳಿಕೆಯಲ್ಲಿ ವಿರೋಧಭಾಸವಿದೆ ಎಂದು ಸಿದ್ದಾರ್ಥ ದವೆ ಹೇಳಿದ್ದರು. ನಿಮ್ಮ ವಾಹನದ ಮೇಲಿನ ರಕ್ತದ ಕಲೆಯ ಬಗ್ಗೆ ಏನು ಹೇಳುತ್ತೀರಿ? ಘಟನೆ ನಡೆದಿರುವುದು ಸುಳ್ಳೇ? ಪೋರೆನ್ಸಿಕ್ ಟೆಸ್ಟ್ ರಿಪೋರ್ಟ್ ಪರಿಗಣಿಸಬಾರದೇ ಎಂಬುದರ ಬಗ್ಗೆ ಹೇಳಿ ಎಂದು ಮತ್ತೆ ಸುಪ್ರೀಂಕೋರ್ಟ್, ವಕೀಲ ಸಿದ್ದಾರ್ಥ ದವೆ ಅವರಿಗೆ ಪ್ರಶ್ನಿಸಿತು. ಸಿಸಿಟಿವಿ ಸಾಕ್ಷ್ಯಗಳ ಬಗ್ಗೆ ನೀವು ಏನು ಹೇಳುತ್ತೀರಿ? ಹೈಕೋರ್ಟ್, ಎಲ್ಲ ಬೇಲ್ ಕೇಸ್ಗಳಲ್ಲಿ ಒಂದೇ ರೀತಿಯ ಆದೇಶ ನೀಡಿದೆ. ಹೈಕೋರ್ಟ್ ಜಾಮೀನು ನೀಡಲು ಅಳವಡಿಸಿಕೊಂಡಿರುವ ವಿಧಾನವನ್ನು ನೋಡಿ. ಹೈಕೋರ್ಟ್ ಜಾಮೀನು ಆದೇಶದ ಅಪ್ರೋಚ್ ಬಗ್ಗೆ ನೋಡಿ ಎಂದು ಸಿದ್ದಾರ್ಥ ದವೆ ಅವರಿಗೆ ಹೇಳಿತು.
ಇನ್ನೂ ಸುಪ್ರೀಂಕೋರ್ಟ್, ಎ1 ಆರೋಪಿ ಪವಿತ್ರಾಗೌಡ ಪರ ವಕೀಲರು ಯಾರು ಎಂದು ಕೇಳಿತು. ಆಗ ಮಹಿಳಾ ವಕೀಲರೊಬ್ಬರು ಪವಿತ್ರಾಗೌಡ ಪರ ವಾದ ಮಂಡನೆಗೆ ಹಾಜರಾದರು. ಇದೆಲ್ಲವೂ ಆಗಿದ್ದು ನಿಮ್ಮಿಂದಲೇ. ಎಲ್ಲ ಸಮಸ್ಯೆಗೆ ನೀವೇ ಮೂಲ ಕಾರಣ ಎಂದು ಸುಪ್ರೀಂಕೋರ್ಟ್, ಪವಿತ್ರಾಗೌಡ ಬಗ್ಗೆ ಹೇಳಿತು. ಪವಿತ್ರಾ ಗೌಡ, ಎ3 ಪವನ್ಗೆ 50 ಸಲ ಕಾಲ್ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಸಿದ್ದಾರ್ಥ ಲೂತ್ರಾ ಹೇಳಿದ್ದರು. ಪವನ್ ಮನೆ ಮ್ಯಾನೇಜರ್ ಆಗಿದ್ದರಿಂದ ಅಡುಗೆ ಬಗ್ಗೆ, ಊಟ ತರುವ ಬಗ್ಗೆ ಹೇಳಲು ಕಾಲ್ ಮಾಡಿರಬಹುದು ಎಂದು ಜಡ್ಜ್ ಗಳು ಹಾಸ್ಯ ಮಾಡಿದ್ದರು. ಪವಿತ್ರಾ ಗೌಡ ಮೊದಲನೇ ಮದುವೆ ಡಿವೋರ್ಸ್ ಆಗಿದೆಯಾ? ಪವಿತ್ರಾ ಗೌಡ ಜೀವನದಲ್ಲಿ ಈಗೇನು ಮಾಡುತ್ತಿದ್ದಾರೆ ಎಂದು ಆಕೆಯ ಪರ ವಕೀಲರಿಗೆ ಪ್ರಶ್ನಿಸಿತು. ಪವಿತ್ರಾಗೌಡ ಕಲಾವಿದೆ. ಮೊದಲನೇ ಮದುವೆಯ ಡಿವೋರ್ಸ್ ಆಗಿದೆ ಎಂದು ಆಕೆಯ ಪರ ವಕೀಲರು ಸುಪ್ರೀಂಕೋರ್ಟ್ಗೆ ತಿಳಿಸಿದ್ದರು.
ಇನ್ನೂ, ಕೊನೆಗೆ ಬೆಂಗಳೂರು ಪೊಲೀಸರು ಸಲ್ಲಿಸಿರುವ ಜಾಮೀನು ರದ್ದು ಕೋರಿರುವ ಮೇಲ್ಮನವಿಯ ಆದೇಶವನ್ನು ಕಾಯ್ದಿರಿಸಿರುವುದಾಗಿ ಸುಪ್ರೀಂಕೋರ್ಟ್ ಹೇಳಿತು. ಎ1 , ಎ2 ಆರೋಪಿ ಹೊರತುಪಡಿಸಿ ಉಳಿದ ಆರೋಪಿಗಳ ಪರ ವಕೀಲರು 3 ಪುಟಗಳಲ್ಲಿ ಲಿಖಿತ ವಾದಾಂಶವನ್ನ ಒಂದು ವಾರದಲ್ಲಿ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚಿಸಿತು. ಹೀಗಾಗಿ ಮುಂದಿನ 10-15 ದಿನದಲ್ಲಿ ಸುಪ್ರೀಂಕೋರ್ಟ್ ನಟ ದರ್ಶನ್ ಜಾಮೀನು ಮುಂದುವರಿಯುತ್ತಾ, ರದ್ದಾಗುತ್ತಾ ಎನ್ನುವ ಬಗ್ಗೆ ಆದೇಶ ನೀಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ