/newsfirstlive-kannada/media/post_attachments/wp-content/uploads/2025/04/SINDHU-RIVER-2.jpg)
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ಹತ್ಯಾಕಾಂಡದ ಬಳಿಕ ಭಾರತ-ಪಾಕ್ ನಡುವೆ ಉದ್ವಿಗ್ನತೆ ತಲೆದೋರಿದೆ. ಪಾಕ್ ಪ್ರಾಯೋಜಿತ ಉಗ್ರರು ಧರ್ಮಾಧಾರಿತವಾಗಿ ಗುಂಡಿನ ದಾಳಿ ನಡೆಸಿ 26 ಜನರನ್ನು ಬಲಿ ಪಡೆದಿದ್ದು 17ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಪಾಕ್ ವಿರುದ್ಧ ದೇಶಾದ್ಯಂತ ಅಕ್ರೋಶ ವ್ಯಕ್ತವಾಗಿದೆ. ಪಾಕ್ ವಿರುದ್ಧ ಕಠಿಣ ಕ್ರಮಕ್ಕೆ ದೇಶಾದ್ಯಂತ ಬಹುದೊಡ್ಡ ಕೂಗು ಎದ್ದಿದೆ. ಈ ನಡುವೆ ಪ್ರಧಾನಿ ಮೋದಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಕ್ ವಿರುದ್ಧ ಸಿಂಧೂ ನದಿ ನೀರಿನ ಹಂಚಿಕೆ ಒಪ್ಪಂದ ತಾತ್ಕಾಲಿಕ ಅಮಾನತು ಸೇರಿ ಹಲವು ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Pahalgam; ಹೆಂಡತಿ, ಮಕ್ಕಳ ಮುಂದೆಯೇ IB ಅಧಿಕಾರಿಯ ಜೀವ ತೆಗೆದ ಕ್ರೂರಿಗಳು
1960 ರ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಪಾಕಿಸ್ತಾನದ ಜೀವನಾಡಿ ಎಂದು ಕರೆಯಲ್ಪಡುವ ಸಿಂಧೂ ಮತ್ತು ಅದರ ಉಪನದಿಗಳ ನೀರಿನ ಮೇಲೆ ಭಾರತ ಹಿಡಿತ ಸಾಧಿಸಿದ್ರೆ ಅಲ್ಲಿನ ಜನರು ನೀರಿಗಾಗಿ ಹಾತೊರೆಯುವ ಸ್ಥಿತಿ ನಿರ್ಮಾಣವಾಗಲಿದೆ. ಸಿಂಧೂ ಮತ್ತು ಅದರ ಉಪನದಿಗಳು ನಾಲ್ಕು ದೇಶಗಳ ಮೂಲಕ ಹರಿಯುತ್ತವೆ. ಇಷ್ಟೇ ಅಲ್ಲ, 21 ಕೋಟಿಗೂ ಹೆಚ್ಚು ಜನಸಂಖ್ಯೆ ಸಿಂಧೂ ಮತ್ತು ಅದರ ಉಪನದಿಗಳ ಮೇಲೆ ಅವಲಂಬಿತವಾಗಿದ್ದಾರೆ.
ಸಿಂಧೂ ನದಿ ನೀರು ಒಪ್ಪಂದ ಏನದು?
ಸಿಂಧು ನದಿ ನೀರಿನ ಒಪ್ಪಂದ (Indus Waters Treaty) ಎಂಬುದು 1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಆದ ಅಂತರರಾಷ್ಟ್ರೀಯ ಒಪ್ಪಂದ. ವಿಶ್ವ ಬ್ಯಾಂಕ್‌ನ ಮಧ್ಯಸ್ಥಿಕೆ ಈ ಒಪ್ಪಂದವಾಗಿತ್ತು. ಸಿಂಧು ನದಿ ನೀರನ್ನು ಎರಡೂ ದೇಶಗಳ ನಡುವೆ ಹಂಚಿಕೆ ಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಈ ಒಪ್ಪಂದವು ಇಂದಿಗೂ ಎರಡೂ ದೇಶಗಳ ನಡುವಿನ ನೀರಿನ ಸಂಬಂಧವನ್ನು ನಿಯಂತ್ರಿಸುತ್ತದೆ ಮತ್ತು ಇದನ್ನು ಯಶಸ್ವಿ ಒಪ್ಪಂದವೆಂದು ಪರಿಗಣಿಸಲಾಗುತ್ತದೆ.
ಸಿಂಧೂ ಜಲ ಒಪ್ಪಂದಕ್ಕೆ ಅಂದಿನ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನಿ ಮಿಲಿಟರಿ ಜನರಲ್ ಅಯೂಬ್ ಖಾನ್ ನಡುವೆ ಸೆಪ್ಟೆಂಬರ್ 19, 1960 ರಲ್ಲಿ ಕರಾಚಿಯಲ್ಲಿ ಸಹಿ ಹಾಕಲಾಯಿತು. 62 ವರ್ಷಗಳ ಹಿಂದೆ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ, ಭಾರತವು ಸಿಂಧೂ ಮತ್ತು ಅದರ ಉಪ ನದಿಗಳಿಂದ ಶೇಕಡಾ 19.5 ರಷ್ಟು ನೀರು ಪಡೆದರೆ, ಪಾಕಿಸ್ತಾನ ಸುಮಾರು ಶೇಕಡ 80 ರಷ್ಟು ನೀರು ಪಡೆಯುತ್ತದೆ. ಈ ಒಪ್ಪಂದದ ಪ್ರಕಾರ, ಎರಡೂ ದೇಶಗಳ ನಡುವೆ ಪ್ರತಿ ವರ್ಷ ಸಿಂಧೂ ಜಲ ಆಯೋಗದ ಸಭೆ ನಡೆಸುವುದು ಕಡ್ಡಾಯ.
ಇದನ್ನೂ ಓದಿ: ಪತ್ನಿ, ಮಗನ ಎದುರೇ ಜೀವಬಿಟ್ಟ US ಮೂಲದ ಟೆಕ್ಕಿ.. ದಾಳಿಗೂ ಮುನ್ನ ಸಹೋದರನಿಗೆ ಕರೆ ಮಾಡಿ ಹೇಳಿದ್ದೇನು?
ಭಾರತ ಬಳಸಿದ ನಂತರ ಉಳಿಯುವ ನೀರು ಪಾಕಿಸ್ತಾನಕ್ಕೆ ಹೋಗುತ್ತದೆ. ಸಿಂಧೂ ನದಿ 5 ಉಪನದಿಗಳನ್ನು ಹೊಂದಿದೆ. ರಾವಿ, ಬಿಯಾಸ್, ಸಟ್ಲೆಜ್, ಝೀಲಂ ಮತ್ತು ಚೆನಾಬ್. ಈ ನದಿಗಳು ಸಿಂಧೂ ನದಿಯ ಎಡಭಾಗಕ್ಕೆ ಹರಿಯುತ್ತವೆ. ರಾವಿ, ಬಿಯಾಸ್ ಮತ್ತು ಸಟ್ಲೆಜ್ ಗಳನ್ನು ಪೂರ್ವದ ನದಿಗಳೆಂದು ಕರೆಯಲಾಗುತ್ತದೆ ಮತ್ತು ಚೆನಾಬ್, ಝೀಲಂ ಮತ್ತು ಸಿಂಧೂ ಗಳನ್ನು ಪಶ್ಚಿಮದ ನದಿಗಳೆಂದು ಕರೆಯಲಾಗುತ್ತದೆ. ಸಿಂಧೂ ನದಿ ನೀರಿನ ಒಪ್ಪಂದ ರದ್ದಾಗಿದ್ದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಲಿದೆ.
ಇದನ್ನೂ ಓದಿ: ಆತಂಕದಲ್ಲಿರುವ ಕನ್ನಡಿಗರಿಗೆ ಬಿಗ್ ರಿಲೀಫ್.. ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದ 180 ಕನ್ನಡಿಗರು ಇವತ್ತು ವಾಪಸ್..!
ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ಕೊನೆಯ ಸಭೆ 2022 ರ ಮೇ 30-31 ರಂದು ನವದೆಹಲಿಯಲ್ಲಿ ನಡೆದಿತ್ತು. ಎರಡೂ ದೇಶಗಳು ಈ ಸಭೆಯನ್ನು ಸೌಹಾರ್ದಯುತ ಎಂದು ಕರೆದಿದ್ದವು. ಪೂರ್ವ ನದಿಗಳ ಮೇಲೆ ಭಾರತಕ್ಕೆ ಹಕ್ಕಿದೆ. ಆದರೆ ಪಶ್ಚಿಮ ನದಿಗಳನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಪೂರ್ವದ ಮೂರು ನದಿಗಳಾದ ಸಟ್ಲೆಜ್, ಬಿಯಾಸ್ ಮತ್ತು ರಾವಿಗಳಿಂದ ಹಂಚಿಕೆಯಾದ ಒಟ್ಟು 168 ಮಿಲಿಯನ್ ಎಕರೆ ಅಡಿಗಳಲ್ಲಿ ಭಾರತಕ್ಕೆ 33 ಮಿಲಿಯನ್ ಎಕರೆ ಅಡಿ ವಾರ್ಷಿಕ ನೀರು ಹಂಚಿಕೆಯಾಗಿದೆ.
ಇದನ್ನೂ ಓದಿ: ತಾಯ್ನಾಡಿಗೆ ಬಂದ ಮಂಜುನಾಥ್, ಭರತ್ ಮೃತದೇಹ.. ಅಗಲಿದ ಪುತ್ರನ ನೋಡಿ ತಂದೆ-ತಾಯಿ ಕಣ್ಣೀರು
ಪಾಕಿಸ್ತಾನದ ಶೇ.65ರಷ್ಟು ಭೂಪ್ರದೇಶದ ಕೃಷಿಯು ಸಿಂಧೂ ಮತ್ತು ಉಪನದಿಗಳ ಮೇಲೆ ಅವಲಂಬಿತವಾಗಿದೆ. ಪಾಕಿಸ್ತಾನದಲ್ಲಿ ಬೇಡಿಕೆಯ ಶೇ.90ರಷ್ಟು ಆಹಾರ ಪದಾರ್ಥ ಬೆಳೆಯುವುದು ಸಿಂಧೂ ನದಿ ನೀರಿನಿಂದ. ಪಾಕಿಸ್ತಾನದ ಶೇ.68ರಷ್ಟು ಗ್ರಾಮೀಣ ಜನಸಂಖ್ಯೆ ಸಿಂಧು ನದಿ ನೀರಿನ ಮೇಲೆ ಅವಲಂಬಿತ. ಈಗ ಒಪ್ಪಂದ ರದ್ದಾಗಿದ್ದರಿಂದ ಪಾಕಿಸ್ತಾನಕ್ಕೆ ನೀರಿನ ಸಮಸ್ಯೆ ಜೊತೆ ಪಾಕ್ನ ಆಹಾರ ಭದ್ರತೆಗೂ ಭಾರಿ ಹೊಡೆತ ಬೀಳಲಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಆಹಾರದ ಕೊರತೆ ಉಂಟಾಗಲಿದೆ.
ಭಾರತ- ಪಾಕಿಸ್ತಾನದ ನಡುವೆ ಅದೆಷ್ಟೇ ಉದ್ವಿಗ್ನತೆ ಇದ್ದರೂ ಸಿಂಧೂ ನದಿ ನೀರಿನ ಒಪ್ಪಂದ ಎರಡೂ ದೇಶಗಳ ನಡುವಿನ ಅಪರೂಪದ ಸಹಕಾರದ ಒಪ್ಪಂದ ಎಂದೇ ಹೆಸರಾಗಿತ್ತು. 1965, 1971 ಮತ್ತು 1999ರ ಯುದ್ಧದಂತಹ ಸಂದರ್ಭದಲ್ಲೂ ಈ ಒಪ್ಪಂದಕ್ಕೆ ಧಕ್ಕೆಯಾಗಿರಲಿಲ್ಲ. ಈಗ ಸಿಂಧೂ ನದಿ ನೀರಿನ ಒಪ್ಪಂದ ರದ್ದಾಗಿದ್ದರಿಂದ ಪಾಕಿಸ್ತಾನದಲ್ಲಿ ಆರ್ಥಿಕತೆ, ಆಹಾರ ಭದ್ರತೆ, ಸಾಮಾಜಿಕ ಸ್ಥಿರತೆಗೆ ದೊಡ್ಡ ಹೊಡೆತ ಬೀಳಲಿದೆ.
ವಿಶೇಷ ಲೇಖನ: ವಿಶ್ವನಾಥ್ ಹಿರಿಯ ಕಾಪಿ ಎಡಿಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ