/newsfirstlive-kannada/media/post_attachments/wp-content/uploads/2025/02/KALPVAS-PRACTICE.jpg)
ಕೇವಲ ಕಲ್ಪನೆ ಮಾಡಿಕೊಳ್ಳಿ ಶತಮಾನಗಳಿಂದ ಹರಿಯುತ್ತಿರುವ ಪವಿತ್ರ ನದಿಯ ದಂಡೆಯ ಮೇಲೆ ನಿಂತು ಮಂತ್ರ ಮತ್ತು ಭಕ್ತಿಯೊಂದಿಗೆ ನಾವು ನಿಂತುಕೊಳ್ಳುವ ಕ್ಷಣಗಳನ್ನ. ಇದು ಕಲ್ಪವಾಸವೆಂಬ ಕಠಿಣ ವ್ರತದ ಸಾರ. ಪ್ರಾಚೀನ ಮತ್ತು ಆಧ್ಯಾತ್ಮಿಕ ವ್ರತವೊಂದು ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಶತಮಾನಗಳಿಂದ ನಿರಂತರವಾಗಿ ಹರಿದು ಬಂದಿದೆ. ಇಡೀ ಒಂದು ತಿಂಗಳು ತ್ರಿವೇಣಿ ಸಂಗಮದ ದಡದಲ್ಲಿಯೇ ಕಳೆದು, ಸರಿಯಾದ ಸಮಯಕ್ಕೆ ಸರಿಯಾದ ಆಚರಣೆಗಳನ್ನು ಮಾಡಿ ದೇಹ ಮತ್ತು ಆತ್ಮಗಳ ಬಗ್ಗೆ ಈ ಜಗತ್ತಿನ ಸತ್ಯದ ಅರಿವಿನ ಬಗ್ಗೆ ಮಾಡುವ ಒಂದು ಕಠಿಣ ವ್ರತವೇ ಕಲ್ಪವಾಸ.
ಕಲ್ಪವಾಸ ಎನ್ನುವುದು ಸಂಪೂರ್ಣವಾಗಿ ಹಾಗೂ ಆಳವಾಗಿ ಹಿಂದೂ ಧರ್ಮದಲ್ಲಿ ಬೇರೂರಿರುವ ಒಂದು ಆಚರಣೆ. ಮಾಘಿ ಪೂರ್ಣಿಮೆವರೆಗೂ ತ್ರಿವೇಣಿ ಸಂಗಮದಲ್ಲಿ ನೆಲೆ ನಿಂತು ಸತತವಾಗಿ ದೇಹ ಮತ್ತು ಮನಸ್ಸಿನ ಶುದ್ಧೀಕರಣಕ್ಕಾಗಿ ಕೈಗೊಳ್ಳುವ ಒಂದು ಕಠಿಣ ವ್ರತವಿದು. ಗಂಗಾ, ಯಮುನಾ ಮ್ತು ಸರಸ್ವತಿಯ ತ್ರಿವೇಣಿ ಸಂಗಮದ ಪವಿತ್ರ ಜಲದ ತಟದಲ್ಲಿ ಕುಳಿತು ನಮ್ಮನ್ನೇ ನಾವು ಅರಿಯುವ ಆಚರಣೆಯಿದು. ಇದನ್ನು ಹೇಗೆ ನಡೆಸಲಾಗುತ್ತದೆ ಎಂಬುದನ್ನು ನೋಡಿದರೆ ಅದರ ನಿಯಮಗಳನ್ನು ಅರಿತರೆ ಸಾಮಾನ್ಯದವರಿಗೆ ಇದು ಸಾಧ್ಯವಲ್ಲ ಎನಿಸುತ್ತದೆ
ಪವಿತ್ರ ಸ್ನಾನ: ಕಲ್ಪವಾಸ ವ್ರತ ಕೈಗೊಂಡವರ ದಿನಚರಿ ಆರಂಭವಾಗುವುದೇ ತ್ರಿವೇಣಿ ಸಂಗಮದಲ್ಲಿ ಸೂರ್ಯ ಮೂಡುವ ಮೊದಲೇ ಪವಿತ್ರ ಸ್ನಾನ ಕೈಗೊಳ್ಳುವ ಮೂಲಕ. ನಿತ್ಯದ ಈ ಆಚರಣೆ ದೇಹ ಹಾಗೂ ಆತ್ಮದ ಶುದ್ಧತೆಗಾಗಿ ಮಾಡಲಾಗುತ್ತದೆ. ಕೊರೆಯುವ ಚಳಿಯಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಕಲ್ಪವಾಸ ವ್ರತ ಕೈಗೊಂಡವರು ಮುಂಜಾನೆಯೆದ್ದು ಪವಿತ್ರ ಗಂಗೆಯಲ್ಲಿ ಮಿಂದೆಳುತ್ತಾರೆ. ನಂತರ ಆತ್ಮ ಸಾಕ್ಷಾತ್ಕಾರಕ್ಕಾಗಿ ಪ್ರಾರ್ಥನೆಗಳನ್ನು ಮಾಡುತ್ತಾರೆ.
ಸಂಧ್ಯಾವಂದನೆ ಮತ್ತು ಧ್ಯಾನ: ನಸುಕಿನ ಪವಿತ್ರ ಸ್ನಾನವಾದ ಬಳಿಕ ಭಕ್ತರು ಸಂಧ್ಯಾವಂದನೆಯನ್ನು ಮಾಡುತ್ತಾರೆ. ಈ ಒಂದು ಪದ್ಧತಿ ಪ್ರಾರ್ಥನೆ ಮತ್ತು ಧ್ಯಾನದ ಸಂಯೋಜನೆಯಾಗಿದೆ. ಸಂಧ್ಯಾಕಾಲದಲ್ಲಿ ಈ ಒಂದು ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಈ ವೇಳೆ ಭಕ್ತರು ತಮ್ಮ ಮನಸ್ಸನ್ನು ದೈವಶಕ್ತಿಯತ್ತ ಕೇಂದ್ರಿಕರೀಸುತ್ತಾರೆ. ಆಧ್ಯಾತ್ಮಿಕ ಬೆಳವಣಿಗೆ ಹಾಗೂ ಜಾಗೃತಿಯ ಪೋಷಣೆಗಾಗಿ ಈ ಒಂದು ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ.
ಸತ್ಸಂಗದಲ್ಲಿ ಭಾಗಿಯಾಗುವುದು: ಎಲ್ಲ ಭಕ್ತಾದಿಗಳು ಒಂದು ಕಡೆ ಸೇರಿ ಸತ್ಸಂಗವನ್ನು ಮಾಡುವುದು ಕೂಡ ಕಲ್ಪವಾಸ ವ್ರತದ ಒಂದು ಭಾಗ. ಇಲ್ಲಿ ಆಧ್ಯಾತ್ಮ, ಭಕ್ತಿ ಮತ್ತು ದೇವರ ವಿಷಯಗಳ ಬಗ್ಗೆ ಜ್ಞಾನ ಮತ್ತು ಶಿಕ್ಷಣವನ್ನು ನೀಡಲಾಗುತ್ತದೆ. ಆಧ್ಯಾತ್ಮ ಗುರುಗಳಿಂದ ಆಧ್ಯಾತ್ಮ ಶಕ್ತಿಯ ಬೆಳವಣಿಗೆ ಸೇರಿ ಹಲವು ಧಾರ್ಮಿಕ ಆಚರಣೆಗಳ ಬಗ್ಗೆ ಜ್ಞಾನ ನೀಡಲಾಗುತ್ತದೆ.
ದಾನ ಪುಣ್ಯ: ಕಲ್ಪವಾಸ ವ್ರತ ಕೈಗೊಂಡವರು ಪ್ರಮುಖವಾಗಿ ದಾನ ನೀಡುವುದರಲ್ಲಿ ತೃಪ್ತಿ ಕಾಣುತ್ತಾರೆ. ಗತಿಯಿಲ್ಲದವರಿಗೆ ಭಿಕ್ಷ. ಅಗತ್ಯವಿದ್ದವರಿಗೆ ಊಟ ಹೀಗೆ ಅನೇಕ ರೀತಿಯ ನಿಸ್ವಾರ್ಥ ಕಾರ್ಯದಲ್ಲಿ ತೊಡಗುತ್ತಾರೆ. ಈ ಒಂದು ತತ್ವಗಳಿಂದ ಸಹಾನುಭೂತಿ ಮತ್ತೆ ದಯೆ ಮಾನವನಲ್ಲಿ ಹೇಗಿರಬೇಕು ಎಂಬುದನ್ನು ಕಲಿಯುತ್ತಾರೆ. ತಮ್ಮಲ್ಲಿರುವುದನ್ನು ಇನ್ನೊಬ್ಬರಿಗೆ ಹಂಚುವ ಮೂಲಕ ನಿಸ್ವಾರ್ಥದ ಬದುಕನ್ನು ಹೇಗೆ ಬದುಕಬೇಕು ಎಂಬುದನ್ನು ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ.
ಸರಳತೆಯೊಂದಿಗೆ ಆಧಾತ್ಮಿಕ ಬೆಳವಣಿಗೆ: ಕಲ್ಪವಾಸ ವ್ರತ ಕೈಗೊಂಡವರು ಪ್ರಮುಖವಾಗಿ ತುಂಬಾ ಸರಳವಾಗಿ ಇರುತ್ತಾರೆ. ಟೆಂಟ್ ಇಲ್ಲವೇ ಆಶ್ರಮಗಳಲ್ಲಿ ವಾಸಿಸುತ್ತಾರೆ. ದಿನಕ್ಕೆ ಕೇವಲ ಒಂದೇ ಒಂದು ಬಾರಿ ಊಟ ಮಾಡುತ್ತಾರೆ. ಅದು ಕೂಡ ಸಾತ್ವಿಕ ಆಹಾರ. ಕಲ್ಪವಾಸ ಕೈಗೊಂಡವರು ಮೊದಲು ಸುಖ ಸೌಕರ್ಯಗಳಿಂದ ತಮ್ಮನ್ನು ತಾವು ಬಿಡಿಸಿಕೊಳ್ಳುತ್ತಾರೆ. ಈ ಮೂಲಕ ಅಂತರಂಗದ ಶಾಂತಿಯನ್ನು ಮತ್ತಷ್ಟು ಆಳಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಾರೆ. ಇವೆಲ್ಲವೂ ಕಲ್ಪವಾಸ ವ್ರತ ಕೈಗೊಂಡವರು ಮಾಡುವ ಆಚರಣೆಗಳು. ಸುಮಾರು ಒಂದು ತಿಂಗಳುಗಳ ಕಾಲ ಇವರ ಆಚರಣೆ ತಪ್ಪದೇ ನಿತ್ಯವೂ ಹೀಗೆಯೇ ಪಾಲನೆಯಾಗುತ್ತದೆ ಮಾಘಿ ಪೂರ್ಣಿಮಾ ತಿಥಿಯಂದು ಕೊನೆಯ ಪವಿತ್ರ ಸ್ನಾನ ಮಾಡುವ ಮೂಲಕ ತಮ್ಮ ಕಲ್ಪವಾಸ ಉಪವಾಸವನ್ನು ಮುಗಿಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ