/newsfirstlive-kannada/media/post_attachments/wp-content/uploads/2025/07/non-veg-milk.jpg)
ಭಾರತ ಹಾಗೂ ಅಮೆರಿಕಾದ ನಡುವೆ ವ್ಯಾಪಾರ- ವಾಣಿಜ್ಯ ಒಪ್ಪಂದಕ್ಕೆ ಮಾತುಕತೆಗಳು ನಡೆಯುತ್ತಿವೆ. ಭಾರತದ ವಾಣಿಜ್ಯ ಇಲಾಖೆ ಅಧಿಕಾರಿಗಳು ಹಾಗೂ ಅಮೆರಿಕಾದ ವಾಣಿಜ್ಯ ಇಲಾಖೆ ಅಧಿಕಾರಿಗಳ ನಡುವೆ ಅನೇಕ ಸುತ್ತಿನ ಮಾತುಕತೆಗಳು ನಡೆಯುತ್ತಿವೆ. ಈ ಮಾತುಕತೆ ಇನ್ನೂ ಅಂತಿಮವಾಗುತ್ತಿಲ್ಲ. ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ್ದ ಡೆಡ್ ಲೈನ್ ಒಳಗೆ ಡೀಲ್ ಫೈನಲ್ ಆಗುತ್ತಿಲ್ಲ. ಇದಕ್ಕೆ ಕಾರಣವಾಗಿರೋದು ಡೈರಿ ಮತ್ತು ಕೃಷಿ ಕ್ಷೇತ್ರದ ವಿಷಯಗಳ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡದೇ ಇರೋದು.
ಭಾರತದ ಹೈನುಗಾರಿಕೆಗೆ ಕೊಡಲಿ ಪೆಟ್ಟು
ಅಮೆರಿಕಾವು ಭಾರತದ ಡೈರಿ ಮತ್ತು ಕೃಷಿ ಕ್ಷೇತ್ರಕ್ಕೂ ಎಂಟ್ರಿಯಾಗಲು ಬಯಸಿದೆ. ಭಾರತಕ್ಕೆ ಅಮೆರಿಕಾದಿಂದ ಡೈರಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ ಸೇರಿದಂತೆ ಎಲ್ಲವನ್ನೂ ನೇರವಾಗಿ ರಫ್ತು ಮಾಡಲು ಬಯಸಿದೆ. ಇದನ್ನು ಒಪ್ಪಿಕೊಂಡು ಭಾರತದ ಡೈರಿ ವಲಯಕ್ಕೆ ಅಮೆರಿಕಾಕ್ಕೆ ಎಂಟ್ರಿ ಕೊಡಲು ಭಾರತ ಸಿದ್ಧವಿಲ್ಲ. ಭಾರತದಲ್ಲಿ ಹಳ್ಳಿಗಾಡಿನ ಜನರು ಹಸು ಸಾಕಣೆಯನ್ನು ಜೀವನೋಪಾಯವಾಗಿ ಅವಲಂಬಿಸಿದ್ದಾರೆ. ಅಮೆರಿಕಾದಿಂದ ಭಾರತಕ್ಕೆ ಹಾಲು ಆಮದು ಮಾಡಿದರೆ ಭಾರತದ ಹೈನುಗಾರಿಕೆ ನಂಬಿರುವ ರೈತರ ಬದುಕಿಗೆ ಕೊಡಲಿ ಪೆಟ್ಟು ಕೊಟ್ಟಂತೆ. ಇದಕ್ಕಿಂತ ಮುಖ್ಯವಾಗಿ ಅಮೆರಿಕಾದ ಹಸುಗಳು, ಭಾರತದಂತೆ ಸಾಧು ಹಸುಗಳಲ್ಲ.
ಅಮೆರಿಕಾದಲ್ಲಿ ಮಾಂಸ ತಿನ್ನುವ ಹಸುಗಳು
ಅಮೆರಿಕಾದಲ್ಲಿ ನಾನ್ ವೆಜ್ ತಿನ್ನುವ ಹಸುಗಳಿವೆ. ಈ ನಾನ್ ವೆಜ್ ಹಸುಗಳು ಬೇರೆ ಹಸುಗಳ ರಕ್ತವನ್ನು ಸಹ ಕುಡಿಯುತ್ತವೆ. ಜೊತೆಗೆ ಅಮೆರಿಕಾದ ಹಸುಗಳು ಮಾಂಸ ತಿನ್ನುತ್ತವೆ. ಹೀಗಾಗಿ ಇವುಗಳನ್ನು ನಾನ್ ವೆಜ್ ಹಸುಗಳು ಅಂತಾನೇ ಕರೆಯಲಾಗುತ್ತೆ. ನಾನ್ ವೆಜ್ ಹಸುಗಳ ಹಾಲನ್ನು ಅಮೆರಿಕಾ ಭಾರತಕ್ಕೆ ರಫ್ತು ಮಾಡಲು ಬಯಸಿದೆ. ಆದರೆ ಭಾರತದಲ್ಲಿ ಹಸುವಿನ ಹಾಲಿಗೆ ಭಾರಿ ಪಾವಿತ್ರ್ಯತೆ ಇದೆ . ಹಸುವನ್ನು ಗೋ ಮಾತೆ ಎಂದು ಭಾರತದಲ್ಲಿ ಜನರು ಪೂಜಿಸುತ್ತಾರೆ. ಹಸುವಿನ ಹಾಲು ಬಗ್ಗೆ ಶ್ರದ್ದೆ, ಭಕ್ತಿ, ಗೌರವ ಇದೆ. ದೇವರ ನೈವೇದ್ಯಕ್ಕೂ ಶುದ್ದ ಹಸುವಿನ ಹಾಲು ಬಳಕೆ ಮಾಡಲಾಗುತ್ತೆ. ಹಸುವಿನ ಹಾಲಿನ ಜೊತೆ ಧಾರ್ಮಿಕ, ಸಾಂಸ್ಕೃತಿಕ ನಂಬಿಕೆಗಳಿವೆ. ಹೀಗಾಗಿ ಇಂಥ ದೇಶಕ್ಕೆ ನಾನ್ ವೆಜ್ ಹಸುಗಳ ಹಾಲು ರಫ್ತು ಮಾಡಲು ಅಮೆರಿಕಾ ಹೊರಟಿದೆ. ಆದರೆ ಇದಕ್ಕೆ ಕೇಂದ್ರದ ಮೋದಿ ಸರ್ಕಾರ ಒಪ್ಪಿಲ್ಲ. ಹೀಗಾಗಿ ಭಾರತ- ಅಮೆರಿಕಾ ನಡುವೆ ವ್ಯಾಪಾರ- ವಾಣಿಜ್ಯ ಒಪ್ಪಂದ ಏರ್ಪಟ್ಟಿಲ್ಲ.
ಇದನ್ನೂ ಓದಿ: ಈ ಗ್ರಾಮದಲ್ಲಿ ಮಹಿಳೆಯರದ್ದೇ ಕಾರುಭಾರು.. ಪುರುಷರಿಗೆ ‘ನೋ ಎಂಟ್ರಿ’ ಹಿಂದೆ ಒಂದು ಕ್ರೂರ ಕತೆ..!
ನಾನ್ ವೆಜ್ ಹಸುಗಳ ಹಾಲನ್ನು ಭಾರತಕ್ಕೆ ರಫ್ತು ಮಾಡಲು ಭಾರತದ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಭಾರತ- ಅಮೆರಿಕಾ ವ್ಯಾಪಾರ ವಾಣಿಜ್ಯ ಒಪ್ಪಂದ ಕಗ್ಗಂಟಾಗಿದೆ. ಇನ್ನೂ ಅಧಿಕಾರಿಗಳ ಹಂತದಲ್ಲಿ ಮಾತುಕತೆ ನಡೆಯುತ್ತಿದೆ. ಭಾರತದ ಡೈರಿ ಹಾಗೂ ಕೃಷಿ ವಲಯಕ್ಕೆ ಎಂಟ್ರಿಯಾಗಲು ಅಮೆರಿಕಾ ಪ್ಲಾನ್ ಮಾಡಿದೆ. ನಾನ್ ವೆಜ್ ಹಸುಗಳ ಹಾಲನ್ನು ಭಾರತಕ್ಕೆ ರಫ್ತು ಮಾಡಲ್ಲ ಎಂದು ಭರವಸೆ ಕೊಡಬೇಕು ಎಂದು ಭಾರತ ಪಟ್ಟು ಹಿಡಿದಿದೆ. ಜೊತೆಗೆ ಹಸುವಿನ ಹಾಲು ಬಗ್ಗೆ ಸರ್ಟಿಫಿಕೇಟ್ ಬೇಕೆಂದು ಭಾರತ ಬೇಡಿಕೆ ಇಟ್ಟಿದೆ. ಭಾರತಕ್ಕೆ ಪೂರೈಕೆಯಾಗುವ ಹಾಲು, ನಾನ್ ವೆಜ್ ಹಸುವಿನ ಹಾಲು ಅಲ್ಲ ಎಂಬ ಸರ್ಟಿಫಿಕೇಟ್ ಬೇಕೆಂದು ಭಾರತ ಕೇಳುತ್ತಿದೆ.
ವರ್ಷಕ್ಕೆ ₹1.03 ಲಕ್ಷ ಕೋಟಿ ನಷ್ಟ
ಹಸುವಿನ ಹಾಲು ವಿಷಯದಲ್ಲಿ ಯಾವುದೇ ರಾಜೀ ಸಂಧಾನಕ್ಕೆ ನಾವು ಸಿದ್ಧರಿಲ್ಲ ಎಂದು ಭಾರತ ಸ್ಪಷ್ಟವಾಗಿ ಅಮೆರಿಕಾಕ್ಕೆ ಹೇಳಿದೆ. ಹೀಗಾಗಿ ಭಾರತ- ಅಮೆರಿಕಾದ ಟ್ರೇಡ್ ಡೀಲ್ ಫೈನಲ್ ಆಗುತ್ತಿಲ್ಲ. ಭಾರತದ ಡೈರಿ ವಲಯವನ್ನು ಅಮೆರಿಕಾಕ್ಕೆ ತೆರೆದರೆ ವಾರ್ಷಿಕ 1.03 ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಲಿದೆ. ಭಾರತಕ್ಕೆ ವಾರ್ಷಿಕ 1.03 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂಬ ಅಂದಾಜು ಇದೆ. ಹೀಗಾಗಿ ಡೈರಿ, ಕೃಷಿ ವಲಯವನ್ನು ಅಮೆರಿಕಾಕ್ಕೆ ತೆರೆಯಲು ಭಾರತ ಒಪ್ಪುತ್ತಿಲ್ಲ.
ಇದನ್ನೂ ಓದಿ: ವಿಶ್ವಕ್ಕೆ ದೊಡ್ಡ ಮೆಸೇಜ್​ ಕೊಡಲಿದೆ ಭಾರತ.. ಶೀಘ್ರದಲ್ಲೇ ಹೈಪರ್ಸಾನಿಕ್ ಮಿಸೈಲ್ ವಿಷ್ಣುವಿನ ಪರೀಕ್ಷೆ!
ನೀವು ತಿನ್ನುವ ಬೆಣ್ಣೆಯನ್ನು ಮಾಂಸ ತಿಂದ ಹಸುವಿನ ಹಾಲುನಿಂದ ತಯಾರಿಸಿದೆ ಎಂದರೆ ನಿಮಗೆ ಹೇಗೆ ಅನ್ನಿಸುತ್ತೆ. ಇದನ್ನು ಒಮ್ಮೆ ಊಹಿಸಿಕೊಳ್ಳಿ. ಇದಕ್ಕೆ ಭಾರತ ಎಂದೂ ಕೂಡ ಅವಕಾಶ ಕೊಡಲ್ಲ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನ್ಸ್ ಟಿಟ್ಯೂಟ್ ನ ಅಜಯ ಶ್ರೀವಾಸ್ತವ್ ಹೇಳಿದ್ದಾರೆ.
ಹಾಲು, ಬೆಣ್ಣೆ, ತುಪ್ಪವನ್ನು ಭಾರತದಲ್ಲಿ ಧಾರ್ಮಿಕ ಆಚರಣೆಗಳಿಗೆ ಬಳಸಲಾಗುತ್ತೆ. ದೇವರ ಅಭಿಷೇಕ, ದೇವರ ಪ್ರಸಾದ, ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪವನ್ನು ಬಳಸಲಾಗುತ್ತೆ. ಇವುಗಳೆಲ್ಲಾ ನಾನ್ ವೆಜ್ ಹಸುವಿನ ಉತ್ಪನ್ನಗಳಾದರೆ ಬಳಸುವುದು ಹೇಗೆ? ಜನರ ಧಾರ್ಮಿಕ ನಂಬಿಕೆ, ಭಾವನೆಗೆ ಧಕ್ಕೆ ಬರುತ್ತೆ ಅನ್ನೋದು ಕೇಂದ್ರ ಸರ್ಕಾರದ ಆತಂಕ. ಜೊತೆಗೆ ಭಾರತದಲ್ಲಿ ಕೋಟ್ಯಾಂತರ ಮಂದಿ ಸಸ್ಯಹಾರಿಗಳಿದ್ದಾರೆ. ಸಸ್ಯಹಾರಿಗಳು ಹಸುವಿನ ಹಾಲನ್ನು ಸಸ್ಯಹಾರ ಎಂದೇ ಉಪಯೋಗಿಸುತ್ತಾರೆ. ಅಮೆರಿಕಾದ ನಾನ್ ವೆಜ್ ಹಸುವಿನ ಹಾಲು, ಭಾರತಕ್ಕೆ ಬಂದರೆ ಅದನ್ನು ಮಾಂಸಹಾರದ ಉತ್ಪನ್ನ ಎಂದು ತಿರಸ್ಕರಿಸಬೇಕಾಗುತ್ತೆ.
ಸೀಯಾಟಲ್ ಟೈಮ್ಸ್ ವರದಿಯಲ್ಲಿ ಹಸುಗಳ ನಾನ್​ವೆಜ್ ಅಂಶ ಪ್ರಸ್ತಾಪ
ಅಮೆರಿಕಾದಲ್ಲಿ ಹಸುಗಳಿಗೆ ಹಂದಿ ಮಾಂಸ, ಮೀನು, ಚಿಕನ್, ಬೆಕ್ಕು, ನಾಯಿ ಮಾಂಸವನ್ನು ನೀಡಲಾಗುತ್ತೆ. ಹಸುಗಳು, ಪ್ರೋಟೀನ್​​ಗಾಗಿ ಕುದುರೆ ರಕ್ತ ಹಾಗೂ ಹಂದಿ ಮಾಂಸವನ್ನು ಸೇವಿಸುತ್ತವೆ ಎಂದು ಅಮೆರಿಕಾದ ದಿನ ಪತ್ರಿಕೆ ಸೀಯಾಟಲ್ ಟೈಮ್ಸ್​ನಲ್ಲಿ ವರದಿ ಪ್ರಕಟವಾಗಿದೆ. ಹಸುಗಳ ಆಹಾರವು ಪ್ರಾಣಿಗಳ ಮಾಂಸವನ್ನು ಒಳಗೊಂಡಿದೆ ಎಂದು ಪತ್ರಿಕೆಯ ಲೇಖನದ ಹೆಡ್ ಲೈನ್ ನೀಡಲಾಗಿದೆ. ಕೆಲವೆಡೆ ಅಮೆರಿಕಾದಲ್ಲಿ ಹಸುಗಳಿಗೆ ಪೌಲ್ಟ್ರಿಗಳ ಕಸ, ಕೋಳಿ ರೆಕ್ಕೆಪುಕ್ಕ, ಚಿಕನ್ ಡ್ರಾಪಿಂಗ್ ಅನ್ನು ಕಡಿಮೆ ವೆಚ್ಚದ ಆಹಾರವಾಗಿ ನೀಡಲಾಗುತ್ತಿದೆ ಎಂದು ಸೀಯಾಟಲ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಸಮುದ್ರದಲ್ಲಿ ಮುಳುಗುತ್ತಿರೋ ವಿಶ್ವದ ಅದ್ಭುತ ವಿಮಾನ ನಿಲ್ದಾಣ.. ಇದಕ್ಕೆ ಅಸಲಿ ಕಾರಣವೇನು?
ಭಾರತವು ತನ್ನ ಕೋಟ್ಯಾಂತರ ಹೈನುಗಾರಿಕೆಯ ರೈತರ ಹಿತಾಸಕ್ತಿ ಕಾಪಾಡಲು ಈಗ ಅಮೆರಿಕಾದ ಒತ್ತಡಕ್ಕೆ ಮಣಿಯುತ್ತಿಲ್ಲ. ಭಾರತದ ರೈತರೇ ಈಗ 140 ಕೋಟಿ ಭಾರತೀಯರಿಗೂ ಬೇಕಾದ ಹಾಲು ಅನ್ನು ಪೂರೈಸುತ್ತಿದ್ದಾರೆ. ಡೈರಿ ವಲಯದಲ್ಲಿ 8 ಕೋಟಿ ಜನರು ಉದ್ಯೋಗ ಕಂಡುಕೊಂಡಿದ್ದಾರೆ. 8 ಕೋಟಿ ಜನರಿಗೆ ಡೈರಿ ವಲಯವೇ ಜೀವನೋಪಾಯಕ್ಕೆ ಆಧಾರವಾಗಿದೆ.
ಭಾರತವು ಚೀಸ್, ಬೆಣ್ಣೆ, ಹಾಲಿನ ಪೌಡರ್ ಮೇಲೆ ಹೆಚ್ಚಿನ ಅಮದು ಸುಂಕವನ್ನು ವಿಧಿಸುತ್ತಿದೆ. ಚೀಸ್ ಮೇಲೆ ಶೇ.30 ರಷ್ಟು, ಬೆಣ್ಣೆ ಮೇಲೆ ಶೇ.40 ರಷ್ಟು, ಹಾಲಿನ ಪೌಡರ್ ಮೇಲೆ ಶೇ.60 ರಷ್ಟು ಅಮದು ಸುಂಕ ವಿಧಿಸುತ್ತಿದೆ. ಇದರಿಂದಾಗಿ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾದಂಥ ದೇಶಗಳಿಗೆ ಭಾರತಕ್ಕೆ ಚೀಸ್, ಬೆಣ್ಣೆ, ಹಾಲಿನ ಪೌಡರ್ ರಫ್ತು ಮಾಡಲು ಸಾಧ್ಯವಾಗಿಲ್ಲ.
ಜೊತೆಗೆ ಭಾರತದ ಪಶುವೈದ್ಯಕೀಯ ಇಲಾಖೆಯು, ಹಾಲಿನ ಉತ್ಪನ್ನಗಳ ವೆಟರನರಿ ಸರ್ಟಿಫಿಕೇಟ್ ಅನ್ನು ಕಡ್ಡಾಯ ಮಾಡಿದೆ. ಹಸುಗಳಿಗೆ ನಾನ್ ವೆಜ್ ಆಹಾರ ನೀಡಿಲ್ಲ ಎಂಬುದನ್ನು ಸರ್ಟಿಫಿಕೇಟ್ ನೀಡಬೇಕು. ಅಮೆರಿಕಾವು ಡಬ್ಲ್ಯುಟಿಓ ದಲ್ಲಿ ಟೀಕಿಸಿತ್ತು. ಭಾರತವು ವಾರ್ಷಿಕ 16.8 ಬಿಲಿಯನ್ ಡಾಲರ್ ಮೌಲ್ಯದ ಡೈರಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಜಗತ್ತಿನಲ್ಲಿ ಉತ್ಪಾದನೆಯಾಗುವ ಹಾಲಿನ ಪೈಕಿ ಶೇ.25 ರಷ್ಟು ಅನ್ನು ಭಾರತವು ಉತ್ಪಾದಿಸುತ್ತಿದೆ.
ಇದನ್ನೂ ಓದಿ: ಪಾಕ್​ ನಟಿಯ ದುರಂತ ಅಂತ್ಯ.. 9 ತಿಂಗಳ ಹಿಂದೆಯೇ ಹೋದ ಜೀವ, ತನಿಖೆಯಲ್ಲಿ ಬೆಚ್ಚಿ ಬೀಳಿಸೋ ಅಂಶ ಪತ್ತೆ!
ಭಾರತವು ಅಮೆರಿಕಾದ ಡೈರಿ ಉತ್ಪನ್ನಗಳಿಗೆ ತನ್ನ ಮಾರ್ಕೆಟ್ ಅನ್ನು ತೆರೆದು ಬಿಟ್ಟರೆ ಅಮೆರಿಕಾದಿಂದ ಅಗ್ಗದ ಡೈರಿ ಉತ್ಪನ್ನಗಳು ಭಾರತಕ್ಕೆ ಎಂಟ್ರಿಯಾಗುತ್ತವೆ. ಇದರಿಂದ ಭಾರತದ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆಯೇ ಕುಸಿಯುತ್ತೆ. ಭಾರತದ ಹೈನುಗಾರಿಕೆಯ ರೈತರ ಆದಾಯ, ಜೀವನೋಪಾಯಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ.
ಭಾರತಕ್ಕೆ ವಿದೇಶದಿಂದ ಅಗ್ಗದ ಹಾಲು ಹಾಗೂ ಹಾಲಿನ ಉತ್ಪನ್ನ ಭಾರತಕ್ಕೆ ಬರೋದು ಬೇಡ, ಭಾರತದ ಹೈನುಗಾರಿಕೆಯನ್ನು ಅವಲಂಬಿಸಿರುವ ಕೋಟ್ಯಾಂತರ ಸಣ್ಣ ರೈತರಿಗೆ ತೊಂದರೆಯಾಗುತ್ತೆ ಎಂದು ತುಮಕೂರು ಜಿಲ್ಲೆಯ ರೈತ ನಾಯಕ ಕೆಂಕೆರೆ ಸತೀಶ್ ಹೇಳಿದ್ದಾರೆ. ಭಾರತದ ಡೈರಿ ಉದ್ಯಮವು ವಾರ್ಷಿಕ 8-9 ಲಕ್ಷ ಕೋಟಿ ರೂಪಾಯಿ ಕೊಡುಗೆಯನ್ನು ದೇಶದ ಜಿಡಿಪಿಗೆ ನೀಡುತ್ತಿದೆ. ಗ್ರಾಮೀಣ ಆರ್ಥಿಕತೆಗೆ ಡೈರಿ ವಲಯವು ಅವಿಭಾಜ್ಯ ಅಂಗವಾಗಿದೆ.
ಭಾರತದ ಕೃಷಿ ಕ್ಷೇತ್ರಕ್ಕೂ ಅಮೆರಿಕಾ ಎಂಟ್ರಿಯಾಗಲು ಬಯಸಿದೆ. ಇದರಿಂದ ಭಾರತದ ರೈತರ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಎಂಟ್ರಿಯಾಗಲು ಅಮೆರಿಕಾಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಭಾರತದ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಭಾರತ ಮತ್ತು ಅಮೆರಿಕಾ ನಡುವೆ 2030ರ ವೇಳೆಗೆ 500 ಬಿಲಿಯನ್ ಡಾಲರ್ ನಷ್ಟು ದ್ವಿಪಕ್ಷೀಯ ವಾಣಿಜ್ಯ ವ್ಯವಹಾರ ನಡೆಸಬೇಕೆಂಬ ಗುರಿಯನ್ನು ಭಾರತ- ಅಮೆರಿಕಾ ಹೊಂದಿವೆ. ಹೀಗಾಗಿ ಭಾರತದ ಡೈರಿ, ಕೃಷಿ ಕ್ಷೇತ್ರಕ್ಕೆ ಎಂಟ್ರಿಯಾಗಲು ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ತಮಗೆ ಅವಕಾಶ ನೀಡಬೇಕೆಂದು ಅಮೆರಿಕಾ ಕೇಳುತ್ತಿದೆ. ಡೈರಿ, ಕೃಷಿ ಕ್ಷೇತ್ರಗಳ ವಿಷಯದಲ್ಲಿ ಭಾರತವು ಲಕ್ಷ್ಮಣ ರೇಖೆಯನ್ನು ಎಳೆದಿದೆ. ಈ ಲಕ್ಷ್ಮಣ ರೇಖೆಯನ್ನು ದಾಟಬೇಡಿ ಎಂದು ಅಮೆರಿಕಾಕ್ಕೆ ಸ್ಪಷ್ಟವಾಗಿ ಹೇಳಿದೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ