/newsfirstlive-kannada/media/post_attachments/wp-content/uploads/2025/06/darshan26.jpg)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ನಟ ದರ್ಶನ್ ದೇವರ ಮೊರೆ ಹೋಗಿದ್ದಾರೆ. ದೇವರ ಅನುಗ್ರಹ ಪಡೆಯಲು ನಟ ದರ್ಶನ್ ಮುಂದಾಗಿದ್ದಾರೆ. ಇದಕ್ಕಾಗಿ ವರ್ಷಕ್ಕೆ 30 ದಿನ ಮಾತ್ರ ತೆರೆದಿರುವ ಕೇರಳದ ಪುಣ್ಯಕ್ಷೇತ್ರಕ್ಕೆ ದರ್ಶನ್ ತೂಗುದೀಪ ಭೇಟಿ ಕೊಟ್ಟಿದ್ದಾರೆ.
ದರ್ಶನ್ ಭೇಟಿ ಕೊಟ್ಟಿದ್ದು ಯಾವ ದೇವಸ್ಥಾನ?
ಕೇರಳದ ಕೊಣ್ಣುರು ಸಮೀಪದಲ್ಲಿರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ನಟ ದರ್ಶನ್ ತೆರಳಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ವೀರ್ ಗೌಡ ಜೊತೆಗೆ ದರ್ಶನ್ ಶಿವ ದೇಗುಲ ಹೋಗಿ ವಿಶೇಷ ಪೂಜೆ ಪುನಸ್ಕಾರ ಮಾಡಿಸಿದ್ದಾರೆ.
ಕೊಟ್ಟಿಯೂರು ಶಿವ ದೇವಸ್ಥಾನದ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ಶಿವ ದೇವಾಲಯವು ಭಾರತದ ಅತ್ಯಂತ ಪುರಾತನ ಹಾಗೂ ಪವಿತ್ರ ಕ್ಷೇತ್ರಗಳ ಪೈಕಿ ಕೇರಳದ ಕೊಟ್ಟಿಯೂರು ಶಿವ ದೇವಸ್ಥಾನವೂ ಒಂದು. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಈ ದೇವಸ್ಥಾನ ತೆರೆದಿರುವುದು ವರ್ಷಕ್ಕೆ 30 ದಿನಗಳು ಮಾತ್ರ. ಇದು ಶಿವ ತಪಸ್ಸು ಮಾಡಿದ ಪುಣ್ಯ ಸ್ಥಳ ಎಂಬ ನಂಬಿಕೆ ಇದೆ. ಈ ದೇವಾಲಯದ ದೊಡ್ಡ ವಿಶೇಷತೆಯೆಂದರೆ ಅದರ ವಾರ್ಷಿಕ ಉತ್ಸವ, ಇದನ್ನು ವೈಶಾಖಮೋತ್ಸವ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಶಿವಲಿಂಗವು ಸ್ವಯಂಭು ಅಂದರೆ ನೆಲದೊಳಗಿನಿಂದ ಸ್ವಯಂ ಪ್ರತ್ಯಕ್ಷವಾಗಿದ್ದು ಎಂದು ನಂಬಲಾಗಿದೆ. ನದಿಯ ದಡದಲ್ಲಿ ಅಕ್ಕರೆ ಕೊಟ್ಟಿಯೂರು ಮತ್ತು ಇಕ್ಕರೆ ಕೊಟ್ಟಿಯೂರು ಎಂಬ ಎರಡು ದೇವಾಲಯಗಳಿವೆ. ಅಕ್ಕರೆ ಕೊಟ್ಟಿಯೂರು ಶಿವನ ದೇವಾಲಯವಾಗಿದ್ದು, ವಾರ್ಷಿಕ ವೈಶಾಖ ಮಹೋತ್ಸವದ ಸಮಯದಲ್ಲಿ ವರ್ಷದಲ್ಲಿ 28 ದಿನಗಳು ಮಾತ್ರ ತೆರೆದಿರುತ್ತದೆ. ಕೊಟ್ಟಿಯೂರು ದೇವಸ್ಥಾನದಲ್ಲಿ 28 ದಿನಗಳ ಕಾಲ ನಡೆಯುವ ವೈಶಾಖ ಮಹೋತ್ಸವವು ದೇವರಿಗೆ ತುಪ್ಪ ಸ್ನಾನ ಮಾಡಿಸುವ ಮೂಲಕ ಪ್ರಾರಂಭವಾಗುತ್ತದೆ. ಇದನ್ನು ನೆಯ್ಯಟ್ಟಂ ಎಂದು ಕರೆಯಲಾಗುತ್ತದೆ. ವೈಶಾಖಮೋತ್ಸವವು ಭಗವಂತನಿಗೆ ತೆಂಗಿನ ನೀರಿನಿಂದ ಅಭಿಷೇಕ ಮಾಡುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ಈ ಆಚರಣೆಯನ್ನು ಎಲೆನೀರಟ್ಟಂ ಎಂದು ಕರೆಯಲಾಗುತ್ತದೆ. ಕೊಟ್ಟಿಯೂರು ದೇವಾಲಯಗಳ ನವೀಕರಣವನ್ನು ಆದಿ ಗುರು ಶಂಕರಾಚಾರ್ಯರ ಕಾಲದಲ್ಲಿ ಮಾಡಲಾಯಿತು. ಜೊತೆಗೆ ಇಲ್ಲಿನ ವಾರ್ಷಿಕ ಉತ್ಸವವಾದ ವೈಶಾಖಮೋತ್ಸವದ ನಿಯಮಗಳನ್ನು ಸಹ ಶಂಕರಾಚಾರ್ಯರೇ ಮಾಡಿದ್ದಾರೆಂದು ಹೇಳಲಾಗುತ್ತದೆ. ಈ ವರ್ಷದ ಜೂನ್ 8 ರಿಂದ ಜುಲೈ 4ರವರೆಗೆ ಈ ದೇವಸ್ಥಾನ ಭಕ್ತರಿಗಾಗಿ ತೆರೆದಿದೆ. ಇಂತಹ ಸುಸಂದರ್ಭದಲ್ಲಿ ಕೊಟ್ಟಿಯೂರು ಶಿವ ದೇಗುಲಕ್ಕೆ ದರ್ಶನ್ ಭೇಟಿ ನೀಡಿದ್ದಾರೆ. ನೀರಿನಲ್ಲಿ ನಡೆದುಕೊಂಡು ಹೋಗಿ, ದೇವರ ದರ್ಶನ ಪಡೆದ ದರ್ಶನ್ ವಿಶೇಷ ಪೂಜೆ ಕೈಗೊಂಡಿದ್ದಾರೆ.
ಈ ಹಿಂದೆ ಕೇರಳದ ಭಗವತಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ದರ್ಶನ್
ಕೆಲ ತಿಂಗಳ ಹಿಂದೆಯಷ್ಟೇ ಕಣ್ಣೂರಿನ ಮಡಾಯಿಕಾವು ಶ್ರೀ ಭಗವತೀ ದೇವಸ್ಥಾನಕ್ಕೆ ನಟ ದರ್ಶನ್ ಭೇಟಿ ಕೊಟ್ಟಿದ್ದರು. ದೇವಸ್ಥಾನದಲ್ಲಿ ನಟ ದರ್ಶನ್ ತೂಗುದೀಪ ಶತ್ರು ಸಂಹಾರ ಯಾಗ ಮಾಡಿಸಿದ್ದರು. ಶತ್ರು ಸಂಹಾರ ಪೂಜೆಗೆ ಕಣ್ಣೂರಿನ ಮಡಾಯಿಕಾವು ಶ್ರೀ ಭಗವತೀ ದೇವಸ್ಥಾನ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನಕ್ಕೆ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಜೊತೆಗೆ ಬಂದು ದರ್ಶನ್ ತೂಗುದೀಪ ಪೂಜೆ ಸಲ್ಲಿಸಿದ್ದರು. ಆಮೇಲೆ ಆ ದೇವಸ್ಥನಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತರ ಸಂಖ್ಯೆ ಏರಿಕೆಯಾಗಿತ್ತು.
ಈ ದೇವಸ್ಥಾನಕ್ಕೂ ಕರ್ನಾಟಕದ ಭಕ್ತರ ಸಂಖ್ಯೆ ಏರಿಕೆಯಾಗುತ್ತಾ?
ಈಗ ಕೊಣ್ಣುರು ಸಮೀಪದಲ್ಲೇ ಇರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ದರ್ಶನ್ ಭೇಟಿ ಕೊಟ್ಟಿದ್ದಾರೆ. ಆ ವಿಡಿಯೋಗಳು ವೈರಲ್ ಆಗಿವೆ. ಇನ್ಮೇಲೆ ಈ ದೇವಸ್ಥನಕ್ಕೂ ಕರ್ನಾಟಕದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ