/newsfirstlive-kannada/media/post_attachments/wp-content/uploads/2025/04/MODI-MEETING-1.jpg)
ಪಹಲ್ಗಾಮ್ ದಾಳಿಯ ನಂತರ ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ಕಠಿಣ ನಿರ್ಧಾರ ತಾಳಿದೆ. ಉರಿ ಸೇನಾ ಕ್ಯಾಂಪ್, ಪುಲ್ವಾಮಾ ದಾಳಿ ಸಂದರ್ಭದಲ್ಲಿ ಭಾರತೀಯ ಸೇನೆ ದೊಡ್ಡ ಮೊಟ್ಟದಲ್ಲೇ ಪ್ರತೀಕಾರ ತೀರಿಸಿಕೊಂಡಿತ್ತು. ಇಷ್ಟಾದರೂ ಬುದ್ಧಿಕಲಿಯದ ಉಗ್ರ ಪೋಷಕನಿಗೆ ಸರಿಯಾದ ಪಾಠ ಕಲಿಸಲು ಭಾರತ ಮುಂದಾಗಿದೆ.
ರಾಜತಾಂತ್ರಿಕತೆ, ಮಿಲಿಟರಿ ಹಾಗೂ ವಿಶ್ವಸಂಸ್ಥೆಯ ಮೂಲಕ ಕೊಡಲಿ ಪೆಟ್ಟು ನೀಡಲು ನಿನ್ನೆಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ತಂತ್ರದ ಪ್ರಮುಖ ಅಂಶವೇ ಸಿಂಧೂ ಜಲ ಒಪ್ಪಂದ ತಾತ್ಕಾಲಿಕವಾಗಿ ಅಮಾನತು ಮಾಡೋದು. ಅಂತೆಯೇ ಸಭೆಯಲ್ಲಿ ತಾತ್ಕಾಲಿಕವಾಗಿ ಒಪ್ಪಂದವನ್ನು ಅಮಾನತಿನಲ್ಲಿಡಲು ನಿರ್ಧರಿಸಲಾಗಿದೆ. ಇದನ್ನು ಕೇಳಿರುವ ಪಾಕ್ ಬುಡಕ್ಕೆ ಬೆಂಕಿ ಬಿದ್ದಂತೆ ವರ್ತಿಸಲು ಶುರುಮಾಡಿದೆ.
9 ವರ್ಷ ನಡೆದಿತ್ತು ಸಂಧಾನ..!
ಭಾರತದ ಈ ನಿಲುವಿಗೆ ಬೆಚ್ಚಿಬಿದ್ದಿರುವ ಪಾಕ್, ಉನ್ನತ ಮಟ್ಟದ ಸಭೆ ನಡೆಸ್ತಿದೆ. ಅದೇನೇ ಇರಲಿ, ಈಗ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದ ಏನೆಂದು ನೋಡೋದಾದರೆ, ಒಪ್ಪಂದ ಏರ್ಪಟ್ಟಿದ್ದು ಸೆಪ್ಟೆಂಬರ್ 19, 1960. ವಿಶ್ವಬ್ಯಾಂಕ್ 9 ವರ್ಷಗಳ ಕಾಲ 2 ದೇಶಗಳ ಜೊತೆ ನಡೆಸಿದ ಸಂಧಾನದ ಪ್ರತಿಫಲವೇ ಈ ಒಪ್ಪಂದ.
ಇದನ್ನೂ ಓದಿ:ಭಾರತ ಅಟ್ಟಾರಿ ಗಡಿ ಬಂದ್ ಮಾಡಿದರೆ.. ಪಾಕ್ಗೆ ಎಷ್ಟು ಕೋಟಿ ನಷ್ಟ ಆಗಲಿದೆ, ಹೇಗೆಲ್ಲ ಪೆಟ್ಟು ಬೀಳುತ್ತೆ?
ಅಂದಿನ ಭಾರತದ ಪ್ರಧಾನಿ ನೆಹರು ಹಾಗೂ ಪಾಕ್ ಅಧ್ಯಕ್ಷ ಅಯೂಬ್ ಖಾನ್ ನಡುವೆ ಒಪ್ಪಂದ ಏರ್ಪಟ್ಟಿತು. ಒಪ್ಪಂದ ಪ್ರಕಾರ ಪಶ್ಚಿಮಾಭಿಮುಖವಾಗಿ ಹರಿಯುವ ಸಿಂಧೂ, ಚೀನಾಬ್, ಜೀಲಂ ನದಿ ನೀರಿನ ಹಕ್ಕು, ನಿಯಂತ್ರಣ ಪಾಕ್ ಕೈಸೇರಿತು. ಪೂರ್ವಾಭಿಮುಖವಾಗಿ ಹರಿಯುವ ರಾವಿ, ಬೀಯಾಸ್, ಸಟ್ಲೆಜ್ ನದಿಗಳ ನೀರಿನ ಹಕ್ಕು, ನಿಯಂತ್ರಣ ಭಾರತಕ್ಕೆ ಸಿಕ್ಕಿತು. ಈ ಒಪ್ಪಂದದ ಪರಿಣಾಮ ಸಿಂಧೂ, ಚೀನಾಬ್, ಜೀಲಂ ನದಿಗಳ ಮೇಲೆ ಪಾಕ್ ಹಿಡಿತ ಸಾಧಿಸಿದೆ. ಈಗ ಭಾರತ ಒಪ್ಪಂದವನ್ನು ಕಡಿದುಕೊಂಡರೆ ಪಾಕ್ ಈ ನದಿಗಳ ಮೇಲಿನ ಹಕ್ಕು ಮತ್ತು ನಿಯಂತ್ರಣ ಕಳೆದುಕೊಳ್ಳಲಿದೆ.
ಪಾಕ್ಗೆ ನೂರೆಂಟು ತೊಂದರೆ..
ಪಾಕ್ ನದಿಗಳ ಮೇಲಿನ ಹಕ್ಕು ಮತ್ತು ನಿಯಂತ್ರಣ ಕಳೆದುಕೊಂಡರೆ ಸಂಕಷ್ಟಕ್ಕೆ ಬೀಳಲಿದೆ. ಯಾಕೆಂದರೆ ಪಾಕಿಸ್ತಾನದ ಶೇಕಡಾ 80 ರಷ್ಟು ಭೂಪ್ರದೇಶ ಸಿಂಧೂ ನದಿ ಮತ್ತು ಅದರ ಉಪ ನದಿಗಳ ಮೇಲೆ ಅವಲಂಬಿತಗೊಂಡಿದೆ. ಶೇ.90 ರಷ್ಟು ಆಹಾರ ಪದಾರ್ಥಗಳ ಬೆಳೆಗೆ ಇದೇ ನೀರು ಬೇಕು. ಅಲ್ಲಿನ 16 ಮಿಲಿಯನ್ ಹೆಕ್ಟೇರ್ ಕೃಷಿ ಭೂಪ್ರದೇಶ ಸಿಂಧೂ ನದಿಯನ್ನೇ ನೆಚ್ಚಿಕೊಂಡಿದೆ. ಈ ನೀರಿನಲ್ಲಿ ಶೇ 93 ರಷ್ಟು ಕೃಷಿಗೆ, ಶೇ.7 ರಷ್ಟು ಕುಡಿಯಲು ಬಳಸುತ್ತಿದೆ. ಅಷ್ಟೇ ಅಲ್ಲದೇ, ಪಾಕಿಸ್ತಾನದ ಶೇ. 61 ರಷ್ಟು ಮಂದಿ ಸಿಂಧೂ ನದಿಯ ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಪ್ರಮುಖ ನಗರಗಳಾದ ಲಾಹೋರ್, ಕರಾಚಿ, ಮುಲ್ತಾನ್ಗೆ ಸಿಂಧೂ ನದಿ ನೀರು ಬೇಕೇಬೇಕು.
ಅಷ್ಟೇ ಅಲ್ಲ.., ಅಲ್ಲಿನ ಹೈಡ್ರೋ ಪವರ್ ಪ್ರಾಜೆಕ್ಟ್ಗಳಾದ ತರಬೇಲಾ, ಮಂಗಳಾ ಕೂಡ ಇದೇ ನೀರು. ಪಾಕಿಸ್ತಾನದ ಜಿಡಿಪಿಗೆ ಸಿಂಧೂ ನದಿ, ಅದರ ಉಪನದಿಗಳು ಕೊಡುಗೆ ಶೇ. 25 ರಷ್ಟು ಇದೆ. ಈಗಾಗಲೇ ನೀರಿನ ಕೊರತೆ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಭಾರತದ ನಿರ್ಧಾರದಿಂದ ಮತ್ತಷ್ಟು ಹೊಡೆತ ಬೀಳಲಿದೆ.
ಇದನ್ನೂ ಓದಿ:ಪಹಲ್ಗಾಮ್ ದಾಳಿಯಿಂದ ಬದುಕುಳಿದಿದ್ದೇ ಪವಾಡ.. 17 ಮಂದಿಯ ಜೀವ ಉಳಿಸಿದ ಕುದುರೆಗಳು..!
ಪಾಕ್ಗೆ ಭಾರೀ ಪೆಟ್ಟು..!
- ಆಹಾರ ಉತ್ಪಾದನೆಗೆ ಹೊಡೆತ
- ಆಹಾರ ಭದ್ರತೆಗೆ ಪೆಟ್ಟು
- ಆಹಾರದ ಕೊರತೆ ನಿಶ್ಚಿತ
- ಪಾಕ್ ನೆಲ ಬರಡುಭೂಮಿ
- ಪರಿಸರ, ಜೀವ ವೈವಿಧ್ಯಕ್ಕೂ ಹೊಡೆತ
ಭಾರತಕ್ಕೆ ಏನು ಅನುಕೂಲ..?
- ಸಿಂಧೂ ನದಿಯ 5 ಉಪನದಿಗಳ ನೀರನ್ನ ಭಾರತ ಬಳಸಿಕೊಳ್ಳಲಿದೆ
- ಆ ನೀರು ಜಮ್ಮು-ಕಾಶ್ಮೀರ, ಪಂಜಾಬ್ ರಾಜ್ಯಗಳಲ್ಲಿ ಕೃಷಿಗೆ ಬಳಕೆ
- ಜೊತೆಗೆ ವಿದ್ಯುತ್ ಉತ್ಪಾದನೆಗೆ ನದಿಗಳ ನೀರು ಬಳಕೆ
- ಭಾರತದ ಅನೇಕ ಬರಡು ಭೂಮಿಗೆ ನೀರಿನ ಸಿಂಚನ
- ಭಾರತದಲ್ಲಿ ಜಲ ವಿದ್ಯುತ್ ಉತ್ಪಾದನೆ ಹೆಚ್ಚಳ
ಒಪ್ಪಂದ ಅಮಾನತು ಸಾಧ್ಯಾನಾ?
ಅಂದಹಾಗೆ ಭಾರತವು ಏಕಾಏಕಿ ಇಂಡಸ್ ನದಿ ನೀರು ಹಂಚಿಕೆ ಒಪ್ಪಂದ ಅಮಾನತಿನಲ್ಲಿಡಲು ತೀರ್ಮಾನ ತೆಗೆದುಕೊಂಡಿಲ್ಲ. ಕಳೆದ 2 ವರ್ಷಗಳಿಂದ ಅದು ಕಾರ್ಯಪ್ರಗತಿಯಲ್ಲಿದೆ. 2 ವರ್ಷದಿಂದ ಇಂಡಸ್ ನದಿ ನೀರು ಹಂಚಿಕೆ ವಿಚಾರವಾಗಿ ಪಾಕ್ಗೆ ನೋಟಿಸ್ ನೀಡಲಾಗುತ್ತಿದೆ. 2023ರ ಜನವರಿ ಹಾಗೂ ಸೆಪ್ಟೆಂಬರ್ನಲ್ಲಿ ಭಾರತ ನೋಟಿಸ್ ನೀಡಿದೆ.
ನೋಟಿಸ್ನಲ್ಲಿ ಏನಿದೆ..?
ಮೂಲಭೂತ ಮತ್ತು ಸಂದರ್ಭಗಳಲ್ಲಿ ಆಗಿರುವ ಬದಲಾವಣೆಗಳಿಂದಾಗಿ ಸಿಂಧು ನದಿ ಒಪ್ಪಂದ ಮರುಪರಿಶೀಲನೆ ಆಗಬೇಕು. ಜನಸಂಖ್ಯೆಯಲ್ಲಿ ಆಗಿರುವ ಬದಲಾವಣೆ, ಪರಿಸರ, ಭಯೋತ್ಪಾದನೆ, ಕ್ಲೀನ್ ಎನರ್ಜಿ ವಿಷಯಗಳ ವಿಚಾರಕ್ಕೆ ಮರು ಸಂಧಾನ ಆಗಬೇಕು ಎಂದು ಪಾಕ್ಗೆ ನೋಟಿಸ್ ನೀಡಿದೆ. ಪಹಲ್ಗಾಮ್ ದಾಳಿ ನಂತರ ಈ ವಿಚಾರಕ್ಕೆ ಮತ್ತೆ ಮುನ್ನಲೆಗೆ ಬಂದಿದೆ. ನಿನ್ನೆಯ ಸಂಪುಟ ಸಭೆಯಲ್ಲಿ ನೀರು ಹಂಚಿಕೆಯ ಒಪ್ಪಂದ ತಾತ್ಕಾಲಿಕವಾಗಿ ಅಮಾನತು ಮಾಡಲು ನಿರ್ಧಾರ ಮಾಡಲಾಗಿದೆ. ಆದರೆ, ನೀರು ಹಂಚಿಕೆಯ ಒಪ್ಪಂದವನ್ನು ಏಕಪಕ್ಷೀಯವಾಗಿ ಅಮಾನತು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಈ ಒಪ್ಪಂದವು ವಿಶ್ವಬ್ಯಾಂಕ್ ಅಧ್ಯಕ್ಷತೆಯಲ್ಲಿ ನಡೆದಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಪಹಲ್ಗಾಮ್ ಅಟ್ಯಾಕ್ ಮೊದಲೇ ಗೊತ್ತಿತ್ತು; 2 ವಾರದ ಹಿಂದೆ ಪಾಕ್ ನಾಯಕನ ಸುಳಿವು!
ಭಾರತ ಏನು ಮಾಡಬೇಕು..?
ಭಾರತ ಇಂಥ ಕಠಿಣ ನಿರ್ಧಾರ ತೆಗೆದುಕೊಂಡರೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆ ಆಗಲಿದೆ. ಅದೇನೇ ಇರಲಿ, ಭಾರತಕ್ಕೆ ನೋವು ಕೊಡುವ ಪಾಕ್ಗೆ ಬುದ್ಧಿ ಕಲಿಸಬೇಕಿದೆ. ಸಿಂಧೂ ನದಿ, ಅದರ ಉಪನದಿಗಳ ನೀರನ್ನು ಬಳಸಿಕೊಳ್ಳಲು ಭಾರತ ಪ್ಲಾನ್ ಮಾಡಬೇಕಿದೆ. ಈ ನದಿಗಳ ನೀರನ್ನು ಜಮ್ಮು ಕಾಶ್ಮೀರದ ಬರಡು ಭೂಮಿಗಳಿಗೆ ಹರಿಸಲು ಯೋಜನೆ ರೂಪಿಸಬೇಕು.
ಚೀನಾಬ್, ಜೀಲಂ ನದಿಗಳ ನೀರು ಪಾಕ್ಗೆ ಹರಿಯದಂತೆ ತಡೆಯಬೇಕಾದರೆ ದೊಡ್ಡ, ದೊಡ್ಡ ಡ್ಯಾಮ್ಗಳನ್ನು 150 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಮ್ ಗಳನ್ನು ನಿರ್ಮಿಸಿ, ಚೀನಾಬ್, ಜೀಲಂ ನದಿ ನೀರು ಸಂಗ್ರಹಿಸಬೇಕು. ಇದರಿಂದ ಪಕ್ಕದ ಪಂಜಾಬ್, ಹರಿಯಾಣ ರಾಜ್ಯಗಳಿಗೆ ಈ ನೀರನ್ನು ಹರಿಸಬಹುದಾಗಿದೆ. ಆದರೆ ಇದಕ್ಕೆ ಒಂದಷ್ಟು ವರ್ಷಗಳ ಸಮಯ ಬೇಕಾಗುತ್ತದೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ಫಸ್ಟ್, ನ್ಯಾಷನಲ್ ಬ್ಯುರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ