/newsfirstlive-kannada/media/post_attachments/wp-content/uploads/2023/08/RIVER-1.jpg)
ಬದುಕು ಎಂಬುದು ಹಲವು ಸಂಕೋಲೆಗಳ ಸಂತೆ. ಇಲ್ಲಿ ನಾವು ಅಂದುಕೊಂಡಂತೆ, ನಾವು ನೆನೆಸಿದಂತೆ ಬದುಕು ಸಾಗುವುದಿಲ್ಲ. ಜೀವನ ಎಂದು ಸರಳ ರೇಖೆಯಲ್ಲಿ ಎಳೆಯಲು ಸಾಧ್ಯವಿಲ್ಲ. ಅದೊಂದು ವಕ್ರರೇಖೆ,ನೂರೆಂಟು ತಿರುವುಗಳು, ನೂರೆಂಟು ಏರೀಳಿತಗಳು. ಬದುಕಿನಲ್ಲಿ ಒಂದೇ ಸ್ಥಿತಿ ಖಾಯಂ ಆಗಿ ಇರಲು ಸಾಧ್ಯವೇ ಇಲ್ಲ. ಸ್ಥಿತಿಗಳು, ಗತಿಗಳು ಬದಲಾಗುವುದೇ ಜೀವನ. ಕೆಲವೊಮ್ಮೆ ಇಡೀ ಬದುಕು ಮಂಕು ಕವಿದಂತೆ ಆಗುತ್ತದೆ. ಎಲ್ಲ ದಾರಿಗಳು ಮುಚ್ಚಿ ಹೋಗಿವೆ, ಮುಂದೆ ಯಾವ ಹಾದಿಯೂ ಕಾಣುತ್ತಿಲ್ಲ ಎಂದೆನೆಸಿ ವಿಷಾದ ಭಾವವೊಂದು ಸೃಷ್ಟಿಯಾಗುತ್ತದೆ. ಆಗ ಜೀವನ ಸ್ಪಷ್ಟ ಒಂಟಿತನದ ಗುಡಿಸಲಿಗೆ ಬಂದು ನಿಂತು ಬಿಡುತ್ತದೆ
ಇದನ್ನೂ ಓದಿ: ಶಾಪಿಂಗ್ ಮಾಲ್ಗಳಲ್ಲಿ ಬಟ್ಟೆ ಟ್ರಯಲ್ ಮಾಡುವವರೇ ಎಚ್ಚರ ಎಚ್ಚರ.. ಈ ಸೋಂಕು ನಿಮಗೂ ತಾಕಬಹುದು
ಕತ್ತಲೆಯಂತಹ ಸಂದರ್ಭಗಳು ಬಂದಾಗ ನಮ್ಮ ನೆರಳು ಕೂಡ ನಮ್ಮ ಜೊತೆ ಬರುವುದನ್ನು ನಿಲ್ಲಿಸುತ್ತದೆ. ಆದರೆ ನೆನಪಿರಲಿ ಎಂತಹುದೇ ಸಂದರ್ಭ ಬಂದಾಗಲೂ ಪ್ರಕೃತಿಯೊಂದಿಗೆ ನಮ್ಮನ್ನು ನಾವು ಬೆಸೆದುಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ಪ್ರಕೃತಿಯಿಂದ ಕಲಿಯುವುದು ನಾವು ತುಂಬಾನೇ ಇರುತ್ತದೆ. ಎಂತಹ ಸಂದರ್ಭ ಗುಡುಗು, ಸಿಡಿಲು ಬಿರುಗಾಳಿ ಬಂದರು ಅಲುಗಾಡದೆ ಅಚಲವಾಗಿ ನಿಲ್ಲುವ ಹಿಮಾಲಯದ ಬೆಟ್ಟಗಳು ನಮಗೆ ಪ್ರೇರಣೆ. ಅದರಂತೆ ಮನುಷ್ಯನ ಬಾಳಿಗೆ ನದಿಯೂ ಕೂಡ ಹಲವು ರೀತಿಯಲ್ಲಿ ಪಾಠವಾಗಿ ನಿಲ್ಲುತ್ತದೆ. ನದಿಯ ಕೆಲವು ಗುಣಗಳನ್ನು ನಾವು ಅಳವಡಿಸಿಕೊಂಡರೆ ನಮ್ಮ ಬದುಕು ಬೇರೆ ದಿಕ್ಕಿನತ್ತೆ ಹೊರಳುತ್ತದೆ. ಹೊಸ ಹಾದಿಗಳು ತೆರೆದುಕೊಳ್ಳುತ್ತವೆ.ನದಿಯೆಂಬ ಗುರು ನಮಗೆ ಏನೆಲ್ಲಾ ಹೇಳಿ ಕೊಡುತ್ತದೆ ಗೊತ್ತಾ?
ನಿಮ್ಮ ಹಾದಿಯನ್ನು ನೀವೆ ಸೃಷ್ಟಿಸಿಕೊಳ್ಳಿ: ನದಿಗೆ ತನ್ನದೇ ಆದ ಒಂದು ಹಾದಿಯಲ್ಲಿ. ಅದು ನುಗ್ಗಿದ್ದೆ ಕಡೆಯಲ್ಲಾ ಅದರದೇ ದಾರಿ. ನೀವು ನದಿಗಳನ್ನು ಸರಿಯಾಗಿ ಗಮನಿಸಿ ನೋಡಿ. ಅವುಗಳು ತಮ್ಮ ಹಾದಿಯನ್ನು ತಾವೇ ಸೃಷ್ಟಿಸಿಕೊಳ್ಳುತ್ತವೆ. ಅವು ಸೃಷ್ಟಿಸಿದ ಹಾದಿಯನ್ನು ಯಾರೆ ಆಕ್ರಮಿಸಿದರು ಅದನ್ನು ಕೊಚ್ಚಿಕೊಂಡು ತನ್ನ ಹಾದಿಯನ್ನು ಮತ್ತೆ ನಿರ್ಮಾಣ ಮಾಡಿಕೊಳ್ಳುವ ಸಾಮರ್ಥ್ಯ ನದಿಗಳಲ್ಲಿದೆ. ನಮ್ಮ ಹಾದಿಯನ್ನು ನಾವೇ ಸೃಷ್ಟಿಸಿಕೊಳ್ಳುವ ಕಲೆಯನ್ನು ಮನುಷ್ಯರಾದ ನಾವು ನದಿಗಳಿಂದ ಕಲಿಯಬೇಕು.
ಇದನ್ನೂ ಓದಿ:ಮನೆಯಿಂದ ಹೊರಬರೋ ಮುನ್ನ ಹುಷಾರ್.. ಬಿಸಿಲಿನಿಂದ ಆರೋಗ್ಯದ ಮೇಲೆ ಆಗೋ ಪರಿಣಾಮವೇನು?
ಸಮಾನತೆ: ನದಿಗಳಿಂದ ಇನ್ನೊಂದು ದೊಡ್ಡ ವಿಷಯ ನಾವು ಕಲಿಯಬೇಕಿರುವುದು ಸಮಾನತೆ. ದಾಹ ಎಂದು ಅದರ ತೀರಕ್ಕೆ ಬಂದವರನ್ನು ನೀರಿಡದೆ ಯಾರನ್ನೂ ಎಂದಿಗೂ ಕೂಡ ನದಿ ವಾಪಸ್ ಕಳುಹಿಸಿಲ್ಲ. ಹೀಗೆಯೇ ನಾವು ಕೂಡ ಯಾವುದೇ ಬೇಧಭಾವವಿಲ್ಲದೇ ನಮ್ಮ ಕರ್ಮವನ್ನು ಮಾಡುತ್ತಲೇ ಸಾಗಬೇಕು.
ಕಠಿಣ ಸಂದರ್ಭಗಳನ್ನು ಎದುರಿಸುವುದು: ನೀವು ಸರಿಯಾಗಿ ನದಿಗಳನ್ನು ಗಮನಿಸಿ ನೋಡಿ. ಪ್ರಕೃತಿಯನ್ನು ನಾವು ಗಮನಿಸುವುದರಿಂದಲೇ ಕಲಿಯುತ್ತೇವೆ. ತನಗೆ ಏನೋ ಅಡ್ಡಿಯಾಯಿತು ಎಂದು ಅದು ಎಂದಿಗೂ ಕೂಡ ತನ್ನ ಗಮ್ಯವನ್ನು ಬೇರೆ ದಿಕ್ಕಿನತ್ತ ತಿರುಗಿಸುವುದಿಲ್ಲ. ತನ್ನ ಹರಿಯುವಿಕೆಯ ಗುಣವನ್ನು, ರಭಸವನ್ನು ಎಂದಿಗೂ ಕಡಿಮೆ ಮಾಡಿಕೊಳ್ಳುವುದಿಲ್ಲ. ಅಡ್ಡಿಯಾಗಿ ನಿಂತಿದ್ದನ್ನೆಲ್ಲಾ ಕೊಚ್ಚಿಕೊಂಡು ತನ್ನ ಒಡಲಲ್ಲಿಯೇ ಎಳೆದುಕೊಂಡು ಮುನ್ನುಗ್ಗುವ ಸ್ವಭಾವ ನದಿಯದ್ದು. ಸಾಧನೆಯ ಹಾದಿಯಲ್ಲಿ ಅಡೆತಡೆಗಳು ಬಂದವು ಅಂತ ದಿಕ್ಕನ್ನು ಬದಲಿಸುವ ಮುನ್ನ ನದಿಯ ಈ ಸ್ವಭಾವವನ್ನು ಅರಿಯಿರಿ.
ನಿರಂತರತೆ: ನಿಂತ ನೀರು ಎಂದಿಗೂ ಕೂಡ ನದಿಯಾಗಲು ಸಾಧ್ಯವಿಲ್ಲ. ಅದು ಕೊಚ್ಚೆಯಾಗಲು ಮಾತ್ರ ಯೋಗ್ಯ. ಯಾವುದು ನಿರಂತರತೆಯಿಂದ ಕೂಡಿದೆಯೋ, ಯಾವುದು ಸದಾ ಚಲನಶೀಲತೆಯನ್ನು ಕಾಯ್ದುಕೊಂಡಿದೆಯೋ ಅದೇ ನದಿ. ಹರಿಯುವಿಕೆಯ ನಿರಂತರತೆಯನ್ನು ಅದು ಎಂದಿಗೂ ಕೂಡ ಬಿಟ್ಟುಕೊಟ್ಟಿಲ್ಲ. ಹೀಗಾಗಿ ನೀವು ಎಂದಿಗೂ ಕೂಡ ನಿಂತ ನೀರಾಗಬೇಡಿ. ಹರಿಯುವ ಹೊಳೆಯಾಗಿ. ಅಂತಿಮವಾಗಿ ಸಾಧನೆಯೆಂಬ ಸಮುದ್ರವನ್ನು ಸೇರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ