/newsfirstlive-kannada/media/post_attachments/wp-content/uploads/2025/04/CHINA-GREAT-WALL.jpg)
ಚೀನಾದ ಮಹಾಗೋಡೆ, ಯಾರಿಗೆ ಗೊತ್ತಿಲ್ಲ. ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು ಕ್ರಿಸ್ತಪೂರ್ವ 771-476 ರ ಸಮಯದಲ್ಲಿ ನಿರ್ಮಾಣಗೊಂಡ ಜಗತ್ತಿನ ಅತಿಉದ್ದದ ಮಹಾಗೋಡೆ. 2000 ವರ್ಷಗಳ ಹಿಂದೆ ನಿರ್ಮಾಣವಾದ ಈ ಗೋಡೆಯ ಉದ್ದ ಸುಮಾರು 21 ಸಾವಿರದ 196 ಕಿಲೋ ಮೀಟರ್ ಎಂದು ಹೇಳಲಾಗುತ್ತದೆ. ಇಡೀ ವಿಶ್ವದಲ್ಲಿಯೇ ಇಷ್ಟು ಉದ್ದದ ಗೋಡೆಯನ್ನು ನಾವೆಲ್ಲೂ ಕಾಣಲು ಸಾಧ್ಯವಿಲ್ಲ. ಆದ್ರೆ ಇದಕ್ಕೆ ಹೋಲಿಕೆಯಾಗುವ ರೀತಿಯಲ್ಲಿಯೇ ಮಹಾಗೋಡೆಯೊಂದು ಮತ್ತೊಂದು ದೇಶದಲ್ಲಿ ಇದೆ. ಅದು ಕೂಡ ಚೀನಾದ ಮಹಾಗೋಡೆಯ ರೀತಿಯಲ್ಲಿಯೇ ನಿರ್ಮಿಸಲಾಗಿದೆ. ಅದು ಇರೋದು ಭಾರತದಲ್ಲಿ ಅನ್ನೋದು ಇನ್ನೊಂದು ವಿಶೇಷ.
ವಿಶ್ವದ ಎರಡನೇ ಅತಿ ಉದ್ದದ ಗೋಡೆ ಇರೋದು ಭಾರತದ ರಾಜಸ್ಥಾನದಲ್ಲಿ. ಮಹಾರಾಣಾ ಕುಂಭ ಎಂಬ ರಾಜಸ್ಥಾನದ ರಾಜ, 15ನೇ ಶತಮಾನದಲ್ಲಿ ಈ ಗೋಡೆಯನ್ನು ನಿರ್ಮಿಸಿದ. ಇದು ಕುಂಭಗಢ ಕೋಟೆಯಲ್ಲಿ ಇಂದಿಗೂ ನಾವು ಕಾಣಬಹುದು. ವಿಶ್ವದ ಅತಿ ಉದ್ದನೆಯ 2ನೇ ಮಹಾಗೋಡೆಯ ಒಟ್ಟು ಉದ್ದ ಸುಮಾರು 36 ಕಿಲೋ ಮೀಟರ್ ಇದೆ. ಇದನ್ನು ಚೀನಾದ ಗ್ರೇಟ್ ವಾಲ್ ಬಳಿಕ ನಿರ್ಮಾಣವಾದ ಅತಿ ಉದ್ದನೆಯ ಗೋಡೆ ಎಂದು ಹೇಳಲಾಗುತ್ತದೆ.
ರಾಜಸ್ಥಾನದ ರಾಜಸಮಂದ ಜಿಲ್ಲೆಯಲ್ಲಿರುವ ಅರವಾಳಿ ಪರ್ವತಗಳ ಎತ್ತರದಲ್ಲಿ ನಾವು ಈ ಮಹಾಗೋಡೆಯನ್ನು ಕಾಣಬಹುದು. ಇದು ಅನೇಕ ಪ್ರಾಕೃತಿಕ ಸುರಕ್ಷತೆ ಮತ್ತು ಕವಚವನ್ನು ಈ ಬೆಟ್ಟಗಳಿಗೆ ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಕುಂಭಗಢದ ಕೋಟೆಯನ್ನು ಅದರ ನಿರ್ಮಾಣ ಮತ್ತು ಅದು ಸ್ಥಾಪಿತವಾದ ಎತ್ತರದಿಂದ ಹೆಚ್ಚು ಗುರುತಿಸಿಕೊಳ್ಳುತ್ತದೆ. ಈ ಒಂದು ಕೋಟೆಯನ್ನು ವೈರಿಗಳು ಗೆಲ್ಲುವುದು ಅಷ್ಟು ಸರಳವಾಗಿರಲಿಲ್ಲ ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಇನ್ನು ಒಂದು ವಿಶೇಷವೆಂದರೆ ರಜಪೂತ ಸಾಮ್ರಾಜ್ಯ ಎಂದೂ ಮರೆಯಲಾರದ ರಾಜ ಹಾಗೂ ಭಾರತ ಎಂದೂ ಮರೆಯಲಾಗದ ಪ್ರಚಂಡ ವೀರ ಮಹಾರಾಣಾ ಪ್ರತಾಪ್ ಕೂಡ ಜನಿಸಿದ್ದು ಇದೇ ಕುಂಭಗಢ ಕೋಟೆಯಲ್ಲಿ.
ಈ ಒಂದು ಕೋಟೆಗೆ ಒಟ್ಟು 7 ವಿಶಾಲ ಪ್ರವೇಶ ದ್ವಾರಗಳಿವೆ. ಅದರ ಜೊತೆಗೆ ಈ ಕೋಟೆಯ ಒಳಗಡೆ ಸುಮಾರು 300ಕ್ಕೂ ಅಧಿಕ ಮಂದಿರಗಳಿವೆ. 300 ಮಂದಿರಗಳಲ್ಲಿ ಹಿಂದೂ ಮತ್ತು ಜೈನ ದೇವಾಲಯ ಎರಡನ್ನು ಒಳಗೊಂಡಿವೆ. ಇನ್ನು ಕೋಟೆಯಿಂದ ಅನೇಕ ಸುರಂಗ ಮಾರ್ಗಗಳು ತೆರೆದುಕೊಳ್ಳುತ್ತವೆ. ಯುದ್ಧದ ಸಮಯದಲ್ಲಿ ರಾಣಾಗಳು ಗುಪ್ತಮಾರ್ಗದಿಂದ ಮೂಲಕ ವೈರಿಗಳಿಂದ ದೂರ ಉಳಿಯುವ ಸಲುವಾಗಿ ಈ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ.
ಇನ್ನು ಈ ಕೋಟೆಯ ಎತ್ತರ ಸುಮಾರು 11 ಸಾವಿರ ಮೀಟರ್ ಎಂದು ಹೇಳಲಾಗುತ್ತದೆ. ಅಂದ್ರೆ ಸುಮಾರು 3600 ಅಡಿ. ಈ ಕೋಟೆಯ ಮೇಲೆ ಹೋಗಿ ನಿಂತರೆ ನಿಮಗೆ ಸುತ್ತಲೂ ದಟ್ಟವಾದ ಅರಣ್ಯದ ಭವ್ಯದೃಶ್ಯವು ಕಾಣಲು ಸಿಗುತ್ತದೆ. ಇನ್ನು ಕುಂಭಗಢ ಕೋಟೆ ಹಾಗೂ ಅಲ್ಲಿ ನಿರ್ಮಾಣವಾಗಿರುವ 36 ಕಿಲೋ ಮೀಟರ್ ಉದ್ದದ ಮಹಾಗೋಡೆ ಯುನೆಸ್ಕೋದ ವಿಶ್ವ ಪಾರಂಪರಿಕ ಸ್ಥಾನಗಳೆಂದು ಗುರುತಿಸಿಕೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ