/newsfirstlive-kannada/media/post_attachments/wp-content/uploads/2025/05/operation-sindoor14.jpg)
ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರು ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸುವಾಗ ಧರ್ಮ ಯಾವುದು ಅಂತಾ ಕೇಳಿದ್ದರು. ಯಾರೆಲ್ಲ ತಾನು ಹಿಂದೂ ಎಂದಿದ್ದರೋ ಅವರನ್ನೆಲ್ಲ ಗುಂಡಿಟ್ಟು ಸಾಯಿಸಿದ್ದರು. ಹೆಂಡತಿ, ಮಕ್ಕಳ ಎದುರಲ್ಲೇ ಬರ್ಬರವಾಗಿ ಮುಗಿಸಿದ್ದರು. ಪಾಕ್ ಬೆಂಬಲಿತ ಉಗ್ರರ ಪೈಶಾಚಿಕ ಕೃತ್ಯಕ್ಕೆ ಒಟ್ಟು 26 ಹೆಣ್ಮಕ್ಕಳು ತಮ್ಮ ಸಿಂಧೂರವನ್ನು ಕಳೆದುಕೊಂಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ನಡೆಸಿದೆ.
ಪಾಕ್ಗೆ ನುಂಗಲಾಗದ ಮರ್ಮಾಘಾತ ಕೊಟ್ಟಿರುವ ಭಾರತೀಯ ಸೇನೆ, ಸುಮಾರು 80ಕ್ಕೂ ಹೆಚ್ಚು ಭಯೋತ್ಪಾದಕರನ್ನು ಏಕಕಾಲದಲ್ಲಿ ಹೊಡೆದುರುಳಿಸಿದೆ. ಹೆಣ್ಮಕ್ಕಳ ಸಿಂಧೂರವನ್ನ ಅಳಿಸಿದ್ದ, ಪಾಕ್ ಉಗ್ರರಿಗೆ ಆಪರೇಷನ್ ಸಿಂಧೂರ ಮೂಲಕವೇ ಭಾರತ ಉತ್ತರ ಕೊಟ್ಟಿದೆ. ವಿಶೇಷ ಅಂದರೆ, ಆಪರೇಷನ್ ಸಿಂಧೂರ ಬಗ್ಗೆ ಮಾಹಿತಿ ನೀಡಲು ಭಾರತೀಯ ಸೇನೆ ಇಬ್ಬರು ಮಹಿಳಾ ಸೇನಾಧಿಕಾರಿಗಳನ್ನೇ ಕಳುಹಿಸಿ, ಪಾಕ್ಗೆ ಮತ್ತೊಂದು ರೀತಿಯಲ್ಲಿ ಕೌಂಟರ್ ನೀಡಿದೆ.
ಇದನ್ನೂ ಓದಿ: ವಾಯುಪಡೆಯಿಂದ ಮತ್ತೊಂದು ಅಟ್ಯಾಕ್.. ಪಾಕ್ಗೆ ಚೀನಾ ನೀಡಿದ್ದ ಯುದ್ಧ ವಿಮಾನ JF-17 ಉಡೀಸ್..! VIDEO
ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಸೇನಾಧಿಕಾರಿಗಳ ನೇತೃತ್ವದಲ್ಲಿ ಭಾರತೀಯ ಸೇನೆ ಸುದ್ದಿಗೋಷ್ಠಿ ನಡೆಸಿದೆ. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Wing Commander Vyomika Singh) ಹಾಗೂ ಕರ್ನಲ್ ಸೋಫಿಯಾ ಖುರೇಷಿ (Colonel Sophia Qureshi) ಸುದ್ದಿಗೋಷ್ಠಿಯ ನೇತೃತ್ವ ವಹಿಸಿದ್ದರು. ಜೊತೆಗೆ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಂ ಮೆಸ್ತ್ರಿ ಕೂಡ ಭಾಗಿಯಾಗಿದ್ದರು. ಸುದ್ದಿಗೋಷ್ಠಿಯಲ್ಲಿ ಆಪರೇಷನ್ ಸಿಂಧೂರನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಒಟ್ಟು 9 ಸ್ಥಳಗಳ ಮೇಲೆ ದಾಳಿ ನಡೆದಿರುವ ಬಗ್ಗೆ ಮಹಿಳಾ ಸೇನಾಧಿಕಾರಿಗಳು ಮಾಹಿತಿ ನೀಡಿದರು.
ಯಾರವರು..?
ಸೋಫಿಯಾ ಖುರೇಷಿ ಮೂಲತಃ ಗುಜರಾತ್‌ನವರು. ಇವರು 1981ರಲ್ಲಿ ಗುಜರಾತ್‌ನ ವಡೋದರಾದಲ್ಲಿ ಜನಿಸಿದ್ದರು. ಇವರು ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸೋಫಿಯಾ ಅಜ್ಜ ಕೂಡ ಭಾರತೀಯ ಸೇನೆಯಲ್ಲಿದ್ದರು. ಅವರ ತಂದೆ ಕೂಡ ಕೆಲವು ವರ್ಷಗಳ ಕಾಲ ಸೈನ್ಯದಲ್ಲಿ ಧಾರ್ಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2016ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಕವಾಯತಿನಲ್ಲಿ ಭಾರತೀಯ ತುಕಡಿಯನ್ನು ಮುನ್ನಡೆಸಿ ಗಮನ ಸೆಳೆದಿದ್ದರು. ನಂತರ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿಯಾದರು. ಸೋಫಿಯಾ ಖುರೇಷಿ 1999ರಲ್ಲಿ ಭಾರತೀಯ ಸೇನೆಗೆ ಸೇರಿದರು.
ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ನಂತರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ಸೋಫಿಯಾ ನೇಮಕಗೊಂಡರು. ಸೋಫಿಯಾ 2006ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಮಿಲಿಟರಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 2010ರಿಂದ ಮತ್ತೆ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪಂಜಾಬ್ ಗಡಿಯಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಸಲ್ಲಿಸಿದ್ದ ಸೇವೆಗಾಗಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಅವರಿಂದ ಪ್ರಶಂಸಾ ಪತ್ರವನ್ನು ಸಹ ಪಡೆದಿದ್ದಾರೆ. ಸೋಫಿಯಾ ಖುರೇಷಿ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ.
ವಿಂಗ್ ಕಮಾಂಡರ್ ವ್ಯೋಮಿಕಾ ಯಾರು?
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅನೇಕ ಹೈ-ರಿಸ್ಕ್ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸ್ತಿದ್ದಾರೆ. ಈಶಾನ್ಯ ಭಾರತದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2004ರಲ್ಲಿ ಐಎಎಫ್‌ಗೆ ನೇಮಕಗೊಂಡ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್‌ಗಳನ್ನು ಹಾರಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ. 2017ರಲ್ಲಿ ವಿಂಗ್ ಕಮಾಂಡರ್ ಹುದ್ದೆಗೆ ಬಡ್ತಿ ಪಡೆದ ಅವರು, IAFನಲ್ಲಿ ಮಹಿಳೆಯರಿಗೆ ಮಾರ್ಗದರ್ಶಕರಾಗಿದ್ದಾರೆ. ಅಲ್ಲದೇ ವ್ಯೋಮಿಕಾ ಅವರ ಬಾಲ್ಯದ ಕನಸು ಕೂಡ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದರು ಎಂದು ವರದಿಯಾಗಿದೆ. ಈ ಇಬ್ಬರು ಅಧಿಕಾರಿಗಳನ್ನು ಮುಂದಿಟ್ಟ ಸರ್ಕಾರದ ನಿರ್ಧಾರವು, ಮಹಿಳೆಯರು ಈಗ ಉನ್ನತ ಮಟ್ಟದಲ್ಲಿ ಭದ್ರತೆ, ಕಾರ್ಯತಂತ್ರ ಮತ್ತು ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ