ಸೋಫಿಯಾ, ರಾಣಿ ಚೆನ್ನಮ್ಮನ ಮಡಿಲ ಹೆಮ್ಮೆಯ ಸೊಸೆ.. ಈ ಸಿಂಧೂರ ಸಿಂಹಿಣಿ ಖುರೇಷಿ ಲೈಫ್​ ಜರ್ನಿ ಹೇಗಿದೆ?

author-image
Bheemappa
Updated On
ಸೋಫಿಯಾ, ರಾಣಿ ಚೆನ್ನಮ್ಮನ ಮಡಿಲ ಹೆಮ್ಮೆಯ ಸೊಸೆ.. ಈ ಸಿಂಧೂರ ಸಿಂಹಿಣಿ ಖುರೇಷಿ ಲೈಫ್​ ಜರ್ನಿ ಹೇಗಿದೆ?
Advertisment
  • ಆಪರೇಷನ್ ಪರಾಕ್ರಮ ಸೇರಿ ರಕ್ಷಣೆಯಲ್ಲಿ ಖುರೇಷಿ ಪಾತ್ರಕ್ಕೆ ಸೆಲ್ಯೂಟ್​
  • ಗುಜರಾತ್​ನ ಮಗಳು ಸೋಫಿಯಾ ಕರ್ನಾಟಕದ ಸೊಸೆ ಆಗಿದ್ದು ಹೇಗೆ?
  • ಭಾರತದ ಮೊದಲ ಮಹಿಳಾ ಸೇನಾಧಿಕಾರಿ ಯಾರು, ಈಗ ಎಲ್ಲಿದ್ದಾರೆ?

ಆಪರೇಷನ್ ಸಿಂಧೂರದ ಮೂಲಕ ಭಾರತ, ಪಾಕಿಸ್ತಾನಕ್ಕೆ ಬರೀ ಪ್ರತ್ಯುತ್ತರವನ್ನ ಮಾತ್ರ ನೀಡಿದೆ. ಆದ್ರೆ 26 ಜನರ ಬಲಿಯ ಪ್ರತೀಕಾರ ಇನ್ನೂ ತೀರಿಲ್ಲ. ಆದ್ರೆ ಪಾಕಿಸ್ತಾನದ ಹುಟ್ಟಡಗಿಸಿದ ಭಾರತದ ರೋಚಕ ಸಾಧನೆಯನ್ನ ಜಗತ್ತಿನ ಮುಂದಿಟ್ಟಿದ್ದು, ಆ ಇಬ್ಬರು ಲೇಡಿ ಆಫೀಸರ್ಸ್​​. ಇವತ್ತು ಭಾರತ ಮಾತ್ರವಲ್ಲ, ಇಡೀ ಪ್ರಪಂಚವೇ ಈ ಇಬ್ಬರ ನಾರಿ ಮಣಿಯರ ಬಗ್ಗೆ ಮಾತಾಡ್ತಿದೆ. ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್. ಭಾರತ ಮಾತೆಯ ಪುತ್ರಿಯರಿಬ್ಬರು ಪಾಕಿಸ್ತಾನದ ಕ್ರಿಮಿಗಳನ್ನ ಹೊಡೆದುರುಳಿಸಿದ್ದು ಹೇಗೆ ಎನ್ನುವ ಮಾಹಿತಿ ಎಳೆ ಎಳೆಯಾಗಿ ಬಿಚ್ಟಿಟ್ಟಿದ್ದಾರೆ. ಅಷ್ಟಕ್ಕೂ ಸಿಂಧೂರದ ಈ ಸಿಂಹಿಣಿಯರು ಯಾರು?.

ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಸಿಂಧೂರದ ಬೆಲೆ ಏನು ಅನ್ನೋದನ್ನ ಭಾರತ ಮುಟ್ಟಿ ನೋಡಿಕೊಳ್ಳೊ ರೀತಿಯಲ್ಲಿ ತೋರಿಸಿದೆ. ಭಾರತದ ತಂಟೆಗೆ ಬಂದ್ರೆ ಏನಾಗುತ್ತೆ ಅನ್ನೋ ಸಣ್ಣ ಟ್ರೈಲರ್​​ಗೆ ಪಾಕಿಸ್ತಾನ ವಿಲ ವಿಲ ಅಂತ ಒದ್ದಾಡ್ತಿದೆ. ಅದ್ಯಾವಾಗ ಎಲ್ಲಿಂದ ಕ್ಷಿಪಣಿ ಹಾರಿ ಬರುತ್ತೋ ಅಂತ ಕನಸಲ್ಲೂ ಬೆಚ್ಚಿ ಬೀಳ್ತಿದೆ. ಯಾಕಂದ್ರೆ 26 ಜನರ ಮಾರಣಹೋಮಕ್ಕೆ ಭಾರತ ಬರೀ ಪ್ರತ್ಯುತ್ತರವನ್ನ ಮಾತ್ರ ಕೊಟ್ಟಿರೋದು. ಆದ್ರೆ ಪ್ರತೀಕಾರ ಇನ್ನೂ ಬಾಕಿಯಿದೆ. ಈ ಪ್ರತೀಕಾರದ ಜ್ವಾಲೆ ಎಲ್ಲಿ ಇಡೀ ಪಾಕಿಸ್ತಾನವನ್ನೆ ಸುಟ್ಟು ಭಸ್ಮ ಮಾಡಿಬಿಡುತ್ತೇನೋ ಅನ್ನೋ ಭಯದಲ್ಲಿ ಪಾಕಿಸ್ತಾನ ದಿನ ಕಳೀತಾ ಇದೆ. ಆದ್ರೆ ಇವತ್ತು ಭಾರತದಲ್ಲಿ ಆಪರೇಷನ್ ಸಿಂಧೂರದ ಚರ್ಚೆ ಒಂದ್ಕಡೆಯಾದ್ರೆ, ಜಗತ್ತಿನ ಮುಂದೆ ಆಪರೇಷನ್​ ಸಿಂಧೂರದ ಕಂಪ್ಲೀಟ್​ ಡಿಟೇಲ್ಸ್ ಕೊಟ್ಟ ಆ ಇಬ್ಬರು ಆಫೀಸರ್​ ಕಹಾನಿಯೂ ಜನರ ಗಮನ ಸೆಳೆದಿದೆ.

publive-image

ಒಬ್ಬರು ಸೋಫಿಯಾ ಖುರೇಷಿ, ಲೆಫ್ಟಿನೆಂಟ್ ಕರ್ನಲ್. ಇನ್ನೊಬ್ಬರು ವ್ಯೋಮಿಕಾ ಸಿಂಗ್​ ವಿಂಗ್ ಕಮಾಂಡರ್. ಈ ಇಬ್ಬರು ನಾರಿಮಣಿಯರು ಉಗ್ರರ 9 ನೆಲೆಗಳನ್ನ ಭಾರತ ಧ್ವಂಸ ಮಾಡಿದ್ದೇಗೆ ಅಂತ ಎಳೆ ಎಳೆಯಾಗಿ ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದಾರೆ. ಒಬ್ಬರು ಹಿಂದಿಯಲ್ಲಿ ವಿವರಣೆ ನೀಡಿದ್ರೆ, ಮತ್ತೊಬ್ಬರು ಇಂಗ್ಲೀಷ್​ನಲ್ಲಿ ಆಪರೇಷನ ಸಿಂಧೂರ ಕಾರ್ಯಾಚರಣೆಯ ಕಂಪ್ಲೀಟ್​ ಡಿಟೇಲ್ಸ್ ಕೊಟ್ಟಿದ್ದರು. ಈ ಮೂಲಕ ಭಾರತ ಯಾವ ಸಿಂಧೂರವನ್ನ ಪಾಕ್​ ರಾಕ್ಷಸರು ಅಳಿಸಿ ಹಾಕಿದ್ರೂ ಅದೇ ಸಿಂಧೂರವಿಡೊ ನಾರಿಮಣಿಯರ ಶಕ್ತಿ ಎಂಥಾದ್ದು ನರಿ ಬುದ್ಧಿಯ ಪಾಕಿಸ್ತಾನಕ್ಕೆ ತೋರಿಸಿಕೊಟ್ಟಿತ್ತು. ಆದ್ರೆ ಇಡೀ ಜಗತ್ತಿಗೆ​ "ಸಿಂಧೂರ"ದ ಕಥೆ ಹೇಳಿದ್ದ ವೀರ ವನಿತೆಯರ ಕತೆ ದೇಶದ ಜನರನ್ನ ರೋಮಾಂಚನಗೊಳಿಸ್ತಿದೆ. ಅದ್ರಲ್ಲೂ ಕರ್ನಲ್​ ಸೋಫಿಯಾ ಖುರೇಷಿ ನಮ್ಮ ಕರ್ನಾಟಕದ ಸೊಸೆ ಅನ್ನೋ ವಿಚಾರ ಇವತ್ತು ಇಡೀ ಕರುನಾಡನ್ನೆ ಹೆಮ್ಮೆ ಪಡುವಂತೆ ಮಾಡಿದೆ.

ಕರ್ನಲ್​ ಸೋಫಿಯಾ ಬೆಳಗಾವಿ ಸೊಸೆ.. ಯಾರೀ ಸೇನಾನಿ?

ಇವತ್ತು ಇಡೀ ಭಾರತವೇ ಕರ್ನಲ್​ ಸೋಫಿಯಾ ಬಗ್ಗೆ ಮಾತಾಡ್ತಿದೆ. ಯಾರು ಈ ವೀರ ಸೇನಾನಿ ಅಂತ ಗೂಗಲ್ ಮಾಡ್ತಿದೆ. ಆದ್ರೆ ಜಗತ್ತಿನ ಮುಂದೆ ಸಿಂಧೂರ ಅಳಿಸಿದ ಪಾಕಿಸ್ತಾನಿ ಉಗ್ರರ ಮರಣ ಚರಿತ್ರೆಯನ್ನ ತೆರೆದಿಟ್ಟ ಖುರೇಷಿ ನಮ್ಮ ಕರ್ನಾಟಕದ ಸೊಸೆ. ಅದ್ರಲ್ಲೂ ಕುಂದಾನಗರಿ ಬೆಳಗಾವಿಯ ಸೊಸೆ. ಈ ವಿಚಾರ ಇವತ್ತು ಇಡೀ ಕರ್ನಾಟಕವನ್ನ ಹೆಮ್ಮೆ ಪಡುವಂತೆ ಮಾಡಿದೆ. ಖುರೇಷಿ ಮಾವನ ಮನೆಯವರು, ಸಂಬಂಧಿ ಸೇರಿದಂತೆ ಇಡೀ ಬೆಳಗಾವಿಯೇ ಖುರೇಷಿ ಸಾಧನೆ ಕಂಡು ಹೆಮ್ಮೆ ಪಡ್ತಿದೆ. ಗುಜರಾತ್​ನ ಮಗಳು ಕರ್ನಾಟಕದ ಸೊಸೆ ಆಗಿದ್ದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಅದಕ್ಕೂ ಮೊದಲು ಸೋಫಿಯಾ ಖುರೇಷಿ ಸೇನಾಧಿಕಾರಿಯಾಗಿದ್ದೇಗೆ?.

publive-image

ಯಾರು ಈ ಕರ್ನಲ್​ ಸೋಫಿಯಾ ಖುರೇಷಿ?

ಸೋಫಿಯಾ ಖುರೇಷಿ, ಬುಧವಾರ ಆಪರೇಷನ್​ ಸಿಂಧೂರದ ವಿವರನ್ನ ಬಿಚ್ಚಿಟ್ಟಿರುವುದನ್ನು ನೋಡಿದ ಪ್ರತಿಯೊಬ್ಬರು ಹುಟ್ಟಿದ್ರೆ ಇಂಥಾ ಮಗಳು ಹುಟ್ಬೇಕು ಅಂತಿದ್ದಾರೆ. ಅದಕ್ಕೆ ಕಾರಣ ಸೋಫಿಯಾ ಖುರೇಷಿ ಮಾಡಿದ ಸಾಧನೆ. ಅಷ್ಟಕ್ಕೂ ಕರ್ನಲ್​ ಸೋಫಿಯಾ ಖುರೇಷಿ ಹುಟ್ಟಿದ್ದು ಗುಜರಾತ್​ನ ವಡೋದರದಲ್ಲಿ. ಇಂಟರ್​ಸ್ಟಿಂಗ್​ ಏನಂದ್ರೆ ಸೋಫಿಯಾ ರಕ್ತದಲ್ಲೇ ದೇಶಸೇವೆಯ ಛಲವಿದೆ. ಯಾಕಂದ್ರೆ ಈ ಸೋಫಿಯಾ ಖುರೇಷಿ ಇಡೀ ಕುಟುಂಬ ಆರ್ಮಿ ಫ್ಯಾಮಿಲಿ. ಇವರ ಮನೆಯಲ್ಲಿರೋ ಪ್ರತಿಯೊಬ್ಬರು ದೇಶಕ್ಕಾಗಿ ಸೇವೆ ಸಲ್ಲಿಸಿದವರೇ. ಇದೇ ಕಾರಣಕ್ಕೆ ಇವತ್ತು ಸೋಫಿಯಾ ಖುರೇಷಿ ಕೂಡ ದೇಶ ಸೇವೆಯಲ್ಲಿ ತೊಡಗಿದ್ದು, ಲೆಫ್ಟಿನೆಂಟ್ ಕರ್ನಲ್ ಆಗಿ ಕೆಲಸ ಮಾಡ್ತಿದ್ದಾರೆ.

1999 ರಲ್ಲಿ ಭಾರತೀಯ ಸೇನೆಗೆ ಖುರೇಷಿ ಸೇರ್ಪಡೆ

ಹುಟ್ಟಿದ್ದು ಬೆಳೆದಿದ್ದು ಎಲ್ಲ ಗುಜರಾತ್​ನಲ್ಲಾದ್ರೂ ಇವತ್ತು ಸೋಫಿಯಾ ಖುರೇಷಿ ಕರ್ನಾಟಕದ ಹೆಮ್ಮೆಯ ಸೊಸೆ. 1977 ರಲ್ಲಿ ಮಹಾರಾಜ ಸಯ್ಯಜಿರಾವ್ ಯುನಿವರ್ಸಿಟಿಯಲ್ಲಿ ಓದಿದ್ದ ಖುರೇಷಿ ಬಯೋ ಕೆಮಿಸ್ಟ್ರಿಯಲ್ಲಿ ಮಾಸ್ಟರ್ ಕಂಪ್ಲೀಟ್ ಮಾಡಿದ್ದಾರೆ. ಇಲ್ಲಿಂದ ಸೀದಾ ಚೆನ್ನೈಗೆ ಹಾರಿದ್ದ ಸೋಫಿಯಾ ಚೆನ್ನೈನ ಸೇನಾ ತರಬೇತಿಯಲ್ಲಿ ಅಕಾಡೆಮಿಲ್ಲಿ ಟ್ರೈನಿಂಗ್​ ಪಡೆದು 1999 ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು.

ಆಪರೇಷನ್​ ಪರಾಕ್ರಮ್​​ನಲ್ಲೂ ಸೋಫಿಯಾ ಪರಾಕ್ರಮ!

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್​ ಅಗಿ ನೇಮಕವಾಗಿದ್ದ ಸೋಫಿಯಾ 2006ರ ಕಾಂಗೋದಲ್ಲಿ ನಡೆದಿದ್ದ ವಿಶ್ವಂಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಮಿಲಿಟರಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಇದಾದ ಮೇಲೆ 2010 ರಿಂದ ಮತ್ತೆ ಶಾಂತಿಪಾಲನ ಕಾರ್ಯಾಚರಣೆಗಳಲ್ಲಿ ಸೋಫಿಯಾ ತೊಡಗಿಸಿಕೊಂಡಿದ್ದರು. ಆಪರೇಷನ್ ಪರಾಕ್ರಮ ಸೇರಿದಂತೆ ಪ್ರವಾಹ ಸಂದರ್ಭದಲ್ಲಿ ಖುರೇಷಿ ಪಾತ್ರ ದೊಡ್ಡದಿದೆ. ಪಂಜಾಬ್ ಗಡಿ ಪ್ರದೇಶದಲ್ಲಿ ಆಪರೇಷನ್​ ಪರಾಕ್ರಮ್ ಸಮಯದಲ್ಲಿ ಸಲ್ಲಿಸಿದ್ದ ಖುರೇಷಿಗೆ ಈ ಸೇವೆಗಾಗಿ ಪ್ರಶಂಸೆ ಕೂಡ ಸಿಕ್ಕಿದೆ.

publive-image

ಸೇನೆಯ ಮೊದಲ ಮಹಿಳಾ ಅಧಿಕಾರಿಯಾಗಿ ನೇಮಕ!

ಸೋಫಿಯಾ ಖರೇಷಿ ಮೊಟ್ಟ ಮೊದಲ ಬಾರಿಗೆ ದೇಶದ ಗಮನ ಸೆಳೆದಿದ್ದು, 2016 ರಲ್ಲಿ. 2016ರ ಬಹುರಾಷ್ಟ್ರೀಯ ಮಿಲಿಟರಿ ಕವಾಯತಿನಲ್ಲಿ ಭಾರತೀಯ ಸೇನೆಯನ್ನ ಮುನ್ನಡೆಸಿ ಸೋಫಿಯಾ ಗಮನ ಸೆಳೆದಿದ್ರು, ಇದಾದ ಮೇಲೆ ಭಾರತದ ಮೊದಲ ಮಹಿಳಾ ಸೇನಾಧಿಕಾರಿಯಾಗಿ ನೇಮಕಗೊಂಡಿದ್ದ ಖುರೇಷಿ, ಅತಿದೊಡ್ಡ ಮಿಲಿಟರಿ ಕವಾಯತಿನಲ್ಲಿ ಭಾಗವಹಿಸಿದ್ದ ಏಕೈಕ ಮಹಿಳಾ ಅಧಿಕಾರಿಯಾಗಿದ್ದರು. ಭಾರತೀಯ ತಂಡದಲ್ಲಿ ಒಟ್ಟು 40 ಸದಸ್ಯರಿದ್ರೆ, ಈ ಪೈಕಿ ಖುರೇಷಿ ಒಬ್ಬರೇ ಮಹಿಳಾ ಅಧಿಕಾರಿಯಾಗಿದಿದ್ದು ಮತ್ತೊಂದು ಹೆಮ್ಮೆಯ ವಿಷಯ.

ಸೋಫಿಯಾ ಸೇನಾ ಸಾಧನೆ!

  • ಆಪರೇಷನ್ ಪರಾಕ್ರಮ’ದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಭಾಗಿ
  • 2001 ಡಿಸೆಂಬರ್‌ನಲ್ಲಿ ಪಂಜಾಬ್ ಗಡಿಯಲ್ಲಿ ನಡೆದ ಕಾರ್ಯಾಚರಣೆ
  • ಕರ್ನಲ್ ಸೋಫಿಯಾ ಅವರಿಗೆ ಅತ್ಯುತ್ತಮ ಸೇವೆಗಾಗಿ ಪ್ರಶಂಸನಾ ಪತ್ರ
  • ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್​ರಿಂದ ಪ್ರಶಂಸಾ ಪತ್ರ

ಸೋಫಿಯಾ ಜೀವನದ ಇಂಟರ್​ಸ್ಟಿಂಗ್ ಪಾರ್ಟ್ ಅಂದ್ರೆ ಇವತ್ತಿನ ಕಾಲದ ಹೆಣ್ಮಕ್ಕಳು ಮದುವೆಯಾದ್ರೆ ಕರೀಯರ್ ಮುಗಿಯುತ್ತೆ ಅಂತೆಲ್ಲ ಹೇಳ್ತಾರೆ. ಆದ್ರೆ ಸೋಫಿಯಾ ಮದ್ವೆಯಾಗಿದ್ರೂ ದೇಶಸೇವೆ ಮರೆತಿಲ್ಲ. ಎರಡನ್ನೂ ಬ್ಯಾಲೆನ್ಸ್ ಮಾಡ್ಕೊಂಡು, ಇವತ್ತು ಇಡೀ ದೇಶದ ಗಮನ ಸೆಳೆದಿದ್ದಾರೆ. ಅಚ್ಚರಿ ಏನಂದ್ರೆ ಸೋಫಿಯಾ ನಮ್ಮ ಕರ್ನಾಟಕದ ಸೊಸೆ ಅನ್ನೋ ವಿಚಾರ.

ಸಂಸಾರಿಯಾಗಿದ್ರೂ ಸಾಧನೆ! ಬೆಳಗಾವಿ ಸೊಸೆ ಸೋಫಿಯಾ!

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರನ್ನ ಕರ್ನಲ್ ಸೋಫೀಯಾ ಖುರೇಷಿ ಮದುವೆಯಾಗಿದ್ದಾರೆ. ಕರ್ನಲ್ ಸೋಫಿಯಾ ಮೂಲತಃ ಗುಜರಾತ್ ರಾಜ್ಯದ ಬರೋಡಾದವರು. 2015ರಲ್ಲಿ ಬೆಳಗಾವಿಯ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವ್ರನ್ನ ಕರ್ನಲ್ ಸುಫೀಯಾ ಕುರೆಷಿ ಲವ್​ ಮ್ಯಾರೇಜ್ ಆಗಿದ್ದಾರೆ. ಪತಿ, ಪತ್ನಿ‌ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ದೇಶ ಸೇವೆ ಮಾಡ್ತಿದ್ದಾರೆ. ಸದ್ಯ ‌ಸೋಫಿಯಾ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸ್ತಿದ್ದಾರೆ.

ಸೊಸೆ ಕರ್ನಾಟಕದ ಗೌರವ ಹೆಚ್ಚಿಸಿದ್ದಾರೆ! ಮಾವ ಹೇಳಿದ್ದೇನು?

ಸೋಫಿಯಾ ಖರೇಷಿ ಆಪರೇಷನ್​ ಸಿಂಧೂರದ ಕಾರ್ಯಾಚರಣೆಯನ್ನ ಜಗತ್ತಿನ ಮುಂದಿಟ್ಟಿದ್ದು ನೋಡಿ ಇಡೀ ಕುಟುಂಬವೇ ಸಂಭ್ರಮಿಸ್ತಿದೆ. ಬೆಳಗಾವಿಯಲ್ಲೂ ಸೊಸೆಯ ಸಾಧನೆ ಕಂಡ ಮಾವ ಗೌಸ್​ ಸಾಬ್, ನಮ್ಮ ಸೊಸೆ ನಮ್ಮ ಊರು ಮತ್ತು ಕರ್ನಾಟಕದ ಗೌರವ ಹೆಚ್ಚಿಸಿದ್ದಾರೆ. ದೇಶದ ಸಲುವಾಗಿ ದುಡಿಯಿರಿ ಅಂತಾ ಮಕ್ಕಳಿಗೆ ಹೇಳಿದ್ದೆ, ಮಕ್ಕಳು ದೇಶ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಸೊಸೆ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

publive-image

ಸೋಫಿಯಾ ಸಾಧನೆಯನ್ನ ಕಂಡು ತಾಜುದ್ದೀನ್ ಬಾಗೇವಾಡಿ ಅವರ ಸಹೋದರ ಕೂಡ ಹೆಮ್ಮೆ ಪಡ್ತಿದ್ದಾರೆ. ಅವರ ಸಾಧನೆ ಬಗ್ಗೆ ಹೇಳೋದಿಕ್ಕೆ ನಮಗೆ ಪದಗಳೇ ಸಾಲ್ತಿಲ್ಲ ಅಂತ ಅತ್ತಿಗೆಯನ್ನ ಹಾಡಿ ಹೊಗಳಿದರು. ತಮ್ಮೂರಿನ ಸೊಸೆ ಇವತ್ತು ದೇಶದ ಗಮನ ಸೆಳೆದಿರೋದನ್ನ ಕಂಡು ಗೋಕಾಕ್​​ನ ಜನ ಕೂಡ ಸಿಕ್ಕಾಪಟ್ಟೆ ಸಂತಸ ಪಟ್ಟಿದ್ದಾರೆ. ಊರಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಪಾಕ್​ ಪರಾಕ್ರಮಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಪಾಪಿ ಪಾಕಿಸ್ತಾನವನ್ನ ಸಂಪೂರ್ಣವಾಗಿ ನಾಶ ಮಾಡಬೇಕು ಅಂತ ಆಕ್ರೋಶ ಕೂಡ ಹೊರ ಹಾಕಿದರು.

ಕರ್ನಾಟಕದ ಸೊಸೆ ಕರ್ನಲ್ ಸೋಫಿಯಾ ಖುರೇಷಿಯೇ ಕಹಾನಿಯೇ ಇಷ್ಟೊಂದು ಇಂಟರ್​ಸ್ಟಿಂಗ್ ಆಗಿದೆ. ಆದ್ರೆ ಆರನೇ ಕ್ಲಾಸ್​ನಲ್ಲೇ ಪೈಲಟ್ ಆಗೋ ಕನಸು ಕಂಡ ವಿಂಗ್ ಕಮಾಂಡ್ ವ್ಯೋಮಿಕಾ ಸಿಂಗ್ ಸ್ಟೋರಿ ಇದಕ್ಕಿಂತ್ಲೂ ರೋಚಕ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment