ಮೋದಿಗೆ ಆಪ್ತ ಕಾರ್ಯದರ್ಶಿಯಾಗಿ ಯುವ IFS ಅಧಿಕಾರಿ ನೇಮಕ.. ನಿಧಿ ತಿವಾರಿ ಯಾರು?

author-image
Bheemappa
Updated On
ಮೋದಿಗೆ ಆಪ್ತ ಕಾರ್ಯದರ್ಶಿಯಾಗಿ ಯುವ IFS ಅಧಿಕಾರಿ ನೇಮಕ.. ನಿಧಿ ತಿವಾರಿ ಯಾರು?
Advertisment
  • ಐಎಫ್​​ಎಸ್​ ಪರೀಕ್ಷೆಯಲ್ಲಿ ನಿಧಿ ಎಷ್ಟನೇ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ?
  • ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಚೇರಿಯಲ್ಲಿ ಕೆಲಸ ಮಾಡಿದ್ದಾರೆ
  • ಈ ಮೊದಲು ನಿಧಿ ತಿವಾರಿ ಅವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೆ ಗೊತ್ತಾ?

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಪ್ತ ಕಾರ್ಯದರ್ಶಿಯಾಗಿ 2014ರ ಬ್ಯಾಚ್​ನ ಐಎಫ್​ಎಸ್​ ಮಹಿಳಾ ಅಧಿಕಾರಿ ನಿಧಿ ತಿವಾರಿ ಅವರನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಮಾರ್ಚ್ 29 ರಂದು ಹೊರಡಿಸಿದ್ದ ಜ್ಞಾಪಕ ಪತ್ರದಂತೆ ಸಂಪುಟದ ನೇಮಕಾತಿ ಸಮಿತಿಯು, ನಿಧಿ ತಿವಾರಿ ಅವರ ನೇಮಕಾತಿ ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಿದೆ. ಪ್ರಧಾನಿಗೆ ಆಪ್ತ ಕಾರ್ಯದರ್ಶಿಯಾದ ನಿಧಿ ತಿವಾರಿ ಅವರು ಯಾರು?.

ನಿಧಿ ತಿವಾರಿ ಅವರು 2014ರ ಬ್ಯಾಚ್​ನ ಭಾರತೀಯ ವಿದೇಶಾಂಗ ಸೇವೆ (ಐಎಫ್​ಎಸ್​)ಯ ಅಧಿಕಾರಿ ಆಗಿದ್ದಾರೆ. ನಿಧಿ ತಿವಾರಿ, ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿಯ ಮೆಹಮುರ್ಗಂಜ್​ ಮೂಲದವರು. ವಾರಣಾಸಿಯಲ್ಲಿ ಸಹಾಯಕ ಆಯುಕ್ತರಾಗಿ (ವಾಣಿಜ್ಯ ತೆರಿಗೆ) ಕೆಲಸ ಮಾಡುತ್ತಿದ್ದರು. ಈ ಕೆಲಸದ ಜೊತೆ ಜೊತೆಗೆ ಐಎಫ್​ಎಸ್ ಓದಿನ ಕಡೆಗೆ ಹೆಚ್ಚಿನ ಗಮನಕೊಟ್ಟು ಓದುತ್ತಿದ್ದರು. ಹೀಗಾಗಿಯೇ 2013ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಡೀ ಭಾರತದಲ್ಲೇ 96ನೇ ಶ್ರೇಣಿಯಲ್ಲಿ ನಿಧಿ ತಿವಾರಿ ಪಾಸ್ ಆಗಿದ್ದರು.

ಇದನ್ನೂ ಓದಿ:ಹ್ಯಾಟ್ರಿಕ್​ ಸೋಲಿನಿಂದ ಮುಂಬೈ ಇಂಡಿಯನ್ಸ್ ಪಾರು​.. ಹಾರ್ದಿಕ್​ ಪಾಂಡ್ಯ ಪಡೆಗೆ ಮೊದಲ ಗೆಲುವು

publive-image

ತರಬೇತಿಯಲ್ಲಿ ಅತ್ಯುತ್ತಮ ಅಧಿಕಾರಿ ಹಾಗೂ ಅತ್ಯುತ್ತಮ ಪ್ರಬಂಧಕ್ಕಾಗಿ 2016ರಲ್ಲಿ ರಾಯಭಾರಿ ಬಿಮಲ್ ಸನ್ಯಾಲ್ ಸ್ಮಾರಕ ಪದಕ ನೀಡಿ ಗೌರವಿಸಲಾಗಿತ್ತು. ಬಳಿಕ ಇವರು 2022ರಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ಅಧೀನ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಇದಾದ ಮೇಲೆ 2023 ಜನವರಿ 6 ರಿಂದ ಪ್ರಧಾನ ಮಂತ್ರಿ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಿಧಿ ಅವರು ಈ ಹಿಂದೆ ವಿದೇಶಾಂಗ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದೂ ಇದೆ. ವಿದೇಶಾಂಗ ಸಚಿವಾಲಯದಲ್ಲಿ ನಿಶ್ಯಸ್ತ್ರೀಕರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ವರದಿ ನೀಡಲು ವಿದೇಶಾಂಗ ಮತ್ತು ಭದ್ರತೆ ವಿಭಾಗದಲ್ಲಿ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಪ್ರಧಾನಿ ಕಚೇರಿಯಲ್ಲಿ ಒಟ್ಟು 3 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಮಾಡಿದ ಅನುಭವ ನಿಧಿ ಅವರಿಗೆ ಇದೆ.

ರಾಜಸ್ಥಾನದಲ್ಲೂ ನಿಧಿ ತಿವಾರಿ ಕೆಲಸ ಮಾಡಿದ್ದಾರೆ. ಸದ್ಯ ಪ್ರಧಾನಿ ಮೋದಿ ಅವರಿಗೆ ಕಾರ್ಯದರ್ಶಿಗಳಾಗಿ ವಿವೇಕ್ ಕುಮಾರ್ ಮತ್ತು ಹಾರ್ದಿಕ್ ಸತೀಶ್ಚಂದ್ರ ಶಾ ಇದ್ದಾರೆ. ಇದರ ಜೊತೆಗೆ ಇದೀಗ ನಿಧಿ ತಿವಾರಿ ಅವರನ್ನು ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment