/newsfirstlive-kannada/media/post_attachments/wp-content/uploads/2024/10/SANJEEV-KHANNA.jpg)
ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಮೂರ್ತಿ ಸಂಜೀವ್ ಖನ್ನಾ (Sanjiv Khanna) ಅವರನ್ನು ನೂತನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಹಾಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮುಂದಿನ ನವೆಂಬರ್ 10 ರಂದು ನಿವೃತ್ತರಾಗುತ್ತಿದ್ದಾರೆ. ನ್ಯಾಯಮೂರ್ತಿ ಖನ್ನಾ ಅವರು ನವೆಂಬರ್ 11 ರಿಂದ ಚೀಫ್ ಜಸ್ಟೀಸ್ ಆಫ್ ಇಂಡಿಯಾ ಆಗಲಿದ್ದಾರೆ. ಅವರ ಅಧಿಕಾರಾವಧಿ ಸುಮಾರು 6 ತಿಂಗಳು ಇರುತ್ತದೆ. ಇವರು ಮುಂದಿನ ವರ್ಷ ಅಂದರೆ 2025, ಮೇ 13ರಂದು ನಿವೃತ್ತರಾಗಲಿದ್ದಾರೆ. ಕಳೆದ ಶುಕ್ರವಾರ ಕೇಂದ್ರ ಸರ್ಕಾರ ಸಿಜೆಐಗೆ ಪತ್ರ ಬರೆದು, ಮುಂದಿನ ಮುಖ್ಯ ನ್ಯಾಯಮೂರ್ತಿ ಆಯ್ಕೆ ಸಂಬಂಧ ಪ್ರೊಸೀಜರ್ ಪ್ರಕಾರ ಶಿಫಾರಸು ಮಾಡುವಂತೆ ಕೇಳಿತ್ತು.
ನ್ಯಾಯಮೂರ್ತಿ ಸಂಜೀವ್ ಖನ್ನಾ ಯಾರು?
ನ್ಯಾಯಮೂರ್ತಿ ಸಂಜೀವ್ ಖನ್ನಾ, 1960, 14 ಮೇ ರಂದು ದೆಹಲಿಯಲ್ಲಿ ಜನಿಸಿದರು. 1983ರಲ್ಲಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ (Bar Council of Delhi) ವಕೀಲರಾಗಿ ನೋಂದಾಯಿಸಲ್ಪಟ್ಟರು. ಆರಂಭದಲ್ಲಿ ತೀಸ್ ಹಜಾರಿ ಕಾಂಪ್ಲೆಕ್ಸ್‌ನಲ್ಲಿರುವ ಜಿಲ್ಲಾ ನ್ಯಾಯಾಲಯಗಳಲ್ಲಿ ಲಾ ಪ್ರ್ಯಾಕ್ಟೀಸ್ ಮಾಡಿದರು. ನಂತರ ದೆಹಲಿ ಹೈಕೋರ್ಟ್ಗೆ ಬಂದರು.
ಇದನ್ನೂ ಓದಿ: ದರ್ಶನ್‌ಗೆ ಕೋರ್ಟ್ ಬಿಗ್ ಶಾಕ್.. ಜೈಲಲ್ಲೇ ಲಾಕ್; ಜಾಮೀನು ಯಾಕೆ ಸಿಗಲಿಲ್ಲ? 10 ಕಾರಣಗಳು ಇಲ್ಲಿವೆ!
ಜೊತೆಗೆ ದೀರ್ಘಕಾಲದವರೆಗೆ ಆದಾಯ ತೆರಿಗೆ ಇಲಾಖೆಯಲ್ಲಿ ಹಿರಿಯ ಸ್ಥಾಯಿ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ದೆಹಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಅಮಿಕಸ್ ಕ್ಯೂರಿಯಾಗಿ (Amicus curiae) ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ವಾದಿಸಿದ್ದಾರೆ. 2005ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು.
2006ರಲ್ಲಿ ಖಾಯಂ ನ್ಯಾಯಮೂರ್ತಿಯಾದರು. ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ದೆಹಲಿ ಅಕಾಡೆಮಿ, ದೆಹಲಿ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ (International Arbitration Centre Delhi) ಮತ್ತು ಜಿಲ್ಲಾ ನ್ಯಾಯಾಲಯದ ಅಧ್ಯಕ್ಷ/ಪ್ರಭಾರ ಹುದ್ದೆಯನ್ನೂ ನಿರ್ವಹಿಸಿದ್ದಾರೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು 2019, ಜನವರಿ 18 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ಮಾಡಲಾಯಿತು. ಯಾವುದೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುವುದಕ್ಕಿಂತ ಮುಂಚೆಯೇ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದ ನ್ಯಾಯಮೂರ್ತಿಗಳಲ್ಲಿ ಒಬ್ಬರು.
ಅವರು 17 ಜೂನ್ 2023 ರಿಂದ 25 ಡಿಸೆಂಬರ್ 2023ರವರೆಗೆ ಸುಪ್ರೀಂ ಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಸ್ತುತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಆಡಳಿತ ಮಂಡಳಿಯ ಸದಸ್ಯರೂ ಹೌದು.
ಇದನ್ನೂ ಓದಿ: ಕಾನೂನು ಕುರುಡಲ್ಲ; ನ್ಯಾಯದೇವತೆಯ ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ