/newsfirstlive-kannada/media/post_attachments/wp-content/uploads/2025/03/HONEY-TRAP-4.jpg)
ಹನಿಟ್ರ್ಯಾಪ್.. ಇದೊಂದು ಜೇನಿನ ಬಲೆ, ಮಧುಪಾಕ ನೀಡಿ ಗೌಪ್ಯ ವಿಷಯ ಕಕ್ಕಿಸುವ ಸಿಹಿಯಾದ ವಿಷ ಇದು. ಲಲನೆಯರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಎದುರಾಳಿಯ ಎಲ್ಲಾ ಗುಟ್ಟನ್ನು ತಿಳಿದುಕೊಳ್ಳುವ ಹಾಗೂ ಅವರನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳುವ ಒಂದು ಮಹಾಅಸ್ತ್ರ. ಇತ್ತೀಚೆಗೆ ಇದರ ಬಗ್ಗೆ ದೊಡ್ಡ ಸುದ್ದಿಗಳು ಆಚೆ ಬರುತ್ತಿವೆ. ರಾಜಕಾರಣಿಗಳಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೂ ಹನಿಟ್ರ್ಯಾಪ್ಗೆ ಬೀಳುತ್ತಿದ್ದಾರೆ ಎಂಬ ಆರೋಪಗಳು ಸದ್ಯ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಹಾಗಿದ್ರೆ ಏನಿದು ಹನಿಟ್ರ್ಯಾಪ್? ಇದನ್ನು ವಿಶ್ವಕ್ಕೆ ಪರಿಚಯಿಸಿದವರು ಯಾರು ಎಂಬುದರ ಇತಿಹಾಸವನ್ನು ಅಗೆಯುತ್ತಾ ಹೋದರೆ ನಮಗೆ ಆ ದೇಶದ ಗುಪ್ತಚರ ಇಲಾಖೆಯ ಮಹಾ ಕುತಂತ್ರಗಳು ಬಯಲಿಗೆ ಬರುತ್ತವೆ.
ಹನಿಟ್ರ್ಯಾಪ್ ಎಂದರೆ ಒಬ್ಬ ವ್ಯಕ್ತಿಯನ್ನು ಒಂದು ಹೆಣ್ಣು ದೈಹಿಕವಾಗಿ ವಿರೋಧಿಯನ್ನ ತನ್ನತ್ತ ಸೆಳೆದುಕೊಂಡು ಮಿಲನದಲ್ಲಿ ತೊಡಗಿಕೊಂಡು ಅವನಿಂದ ಬೇಕಾದ ವಿಷಯಗಳನ್ನು ಹೆಕ್ಕಿ ತೆಗೆದು ಅದನ್ನು ತನ್ನ ತಂಡಕ್ಕೆ ಮುಟ್ಟಿಸುವ ಒಂದು ಕಾರ್ಯ. ಈ ಹನಿಟ್ರ್ಯಾಪ್ ಎಂಬ ಮೊದಲ ಶಬ್ದ ಕೇಳಿ ಬಂದಿದ್ದು 20ನೇ ಶತಮಾನದ ಆರಂಭದಲ್ಲಿ ಜಾನ್ಹ್ ಲೇ ಕರೆನ್ 1974ರಲ್ಲಿ ಬರೆದ ಟಿಂಕರ್ ಟೈಲರ್ ಸೋಲ್ಜರ್ ಸ್ಪೈ ಎಂಬ ಪುಸ್ತಕದಲ್ಲಿ ಈ ಒಂದು ಪದವನ್ನು ಮೊಟ್ಟ ಮೊದಲ ಬಾರಿಗೆ ಬಳಸಲಾಯಿತು.
ಹನಿಟ್ರ್ಯಾಪ್ ಎಂಬುವುದು ಇದೇ ಕಾಲಕ್ಕೆ ಇವರಿಂದಲೇ ಆರಂಭವಾಯ್ತು ಎಂದು ಖಚಿತವಾಗಿ ಹೇಳಲು ಅಷ್ಟೊಂದು ಸಾಧ್ಯವಿಲ್ಲ. ಅಕ್ಬರ್ ಕಾಲದಲ್ಲಿಯೂ ಕೂಡ ಇಂತಹದೊಂದು ಮಾಯಾಜಾಲವನ್ನು ಹೆಣೆಯಲಾಗುತ್ತಿತ್ತು ಎಂಬ ಉಲ್ಲೇಖಗಳು ನಮಗೆ ಇತಿಹಾಸ ಕಾಲದಲ್ಲಿ ಸಿಗುತ್ತವೆ. ಆದರೆ ಆಧುನಿಕ ಜಗತ್ತಿನಲ್ಲಿ ಹನಿಟ್ರ್ಯಾಪ್ ಎಂಬ ಶಬ್ದವನ್ನು ಮೊದಲು ಪರಿಚಯಿಸಿದ್ದು ರಷ್ಯಾದ ಗುಪ್ತಚರ ಇಲಾಖೆ ಕೆಬಿಜಿ.
ಇದನ್ನೂ ಓದಿ: 40 ಅಲ್ಲ 400 ಮಂದಿಗೆ ಹನಿಟ್ರ್ಯಾಪ್.. ನ್ಯೂಸ್ ಫಸ್ಟ್‌ಗೆ ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ!
1939-1945 ವರೆಗೆ ಎರಡನೇ ಮಹಾವಿಶ್ವಯುದ್ಧವೊಂದು ನಡೆಯಿತು. ಇದಾದ ಬಳಿಕ ನಾಜಿ ಸೈನಿಕರೆಲ್ಲಾ ಶರಣಾದ ನಂತರ ಯುಎಸ್, ಸೋವಿಯತ್ ರಷ್ಯಾ ಹಾಗೂ ಬ್ರಿಟನ್ ಈ ದೇಶಗಳ ನಡುವೆ ಕೋಲ್ಡ್ ವಾರ್ ಒಂದು ಶುರುವಾಯಿತು. ಜಗತ್ತಿನ್ನು ತಮ್ಮ ಮುಷ್ಠಿಯಲ್ಲಿ ಹಿಡಿಯುವಷ್ಟು ಗಟ್ಟಿದೇಶಗಳಾಗಿ ಗುರುತಿಸಿಕೊಳ್ಳಬೇಕು ಎಂಬ ಹಪಾಹಪಿಗೆ ಬಿದ್ದವು. ಇದೇ ವೇಳೆಯೇ ಮೊಟ್ಟ ಮೊದಲ ಬಾರಿಗೆ ಹನಿಟ್ರ್ಯಾಪ್ ಎಂಬ ಮೋಹಜಾಲವನ್ನು ಎಸೆಯಲು ಶುರು ಮಾಡಿದ್ದು ರಷ್ಯಾ! ರಷ್ಯಾದ ಕೆಬಿಜಿ (Komitet Gosudarstvennoy Bezopasnosti) ಇಂತಹದೊಂದು ಮೋಹಕಜಾಲವನ್ನು ಬೀಸಿದ ಮೊದಲ ಚಾಣಾಕ್ಷ ಗುಪ್ತಚರ ಇಲಾಖೆ.
ತನ್ನ ವಿರೋಧಿ ದೇಶದಿಂದ ಬೇಕಾದ ಗೌಪ್ಯ ಮಾಹಿತಿಯನ್ನು ಪಡೆಯಲು ಲಲನೆಯರನ್ನು ಮುಂದುಬಿಟ್ಟು ಬೇಕಾದ ವ್ಯಕ್ತಿಯನ್ನು ಮೋಹದ ಜಾಲದಲ್ಲಿ ಸಿಲುಕಿಸಿ ಅವನಿಂದ ಎಲ್ಲಾ ಮಾಹಿತಿಯನ್ನು ಪಡೆಯುವ ಒಂದು ಪದ್ಧತಿಯನ್ನು ಶುರು ಮಾಡಿದ್ದು ರಷ್ಯಾದ ಗುಪ್ತಚರ ಇಲಾಖೆ ಕೆಬಿಜಿ (ಕೋಮಿಟೇಟ್ ಗೊಸುಡರ್ಸ್ತ್ವೇನ್ನೋಯ್ ಬೆಝೋಪಸ್ನೋಸ್ತಿ). ಇದು ತನ್ನ ವಿರೋಧಿಗಳನ್ನು ಬಲೆಗೆ ಬೀಸಲು ಒಂದು ಲಲನೆಯರ ತಂಡವನ್ನೇ ಕಟ್ಟಿಕೊಂಡಿತ್ತು. ಅವರನ್ನು ‘ಮೊಜ್ನೋ ಗರ್ಲ್ಸ್’ ಎಂದೇ ಕರೆಯಲಾಗುತ್ತಿತ್ತು. ಇವರು ಸೋವಿಯತ್ ರಷ್ಯಾದ ಪರವಾಗಿ ಕಾರ್ಯನಿರ್ವಹಿಸುವ ಮಹಿಳಾ ಗೂಢಚಾರಿಗಳು.
ಈ ಮೊಜ್ನೋ ಗರ್ಲ್ಸ್ಗಳನ್ನೇ ಬಳಸಿಕೊಂಡು ಕೆಬಿಜಿ ತನ್ನ ವಿರುದ್ಧ ವಿರೋಧಿ ದೇಶಗಳು ಹೆಣೆಯುತ್ತಿರುವ ಷಡ್ಯಂತ್ರ, ಆ ದೇಶದ ರಕ್ಷಣಾ ಇಲಾಖೆಯ ಮಾಹಿತಿಗಳು, ತಂತ್ರಜ್ಞಾನದ ಮಾಹಿತಿಗಳನ್ನು ಪಡೆಯುತ್ತಿತ್ತು. ಮುಂದೆ ಇದನ್ನು ದೊಡ್ಡಮಟ್ಟದಾಗಿ ತನ್ನ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು ಇಸ್ರೇಲ್ನ ಮೊಸಾದ್ ಎಂಬ ಗುಪ್ತಚರ ಇಲಾಖೆ. ಆಪರೇಷನ್ ಡೈಮಂಡ್ನಲ್ಲಿ ಇರಾಕ್ನಿಂದ ರಷ್ಯಾದ ಅಂದಿನ ಅತ್ಯಾಧುನಿಕ ಮಿಗ್-21 ವಿಮಾನವನ್ನು ಕದ್ದುಕೊಂಡು ಬರಲು ಮೊಸಾದ್ ಬಳಸಿದ್ದು ಇದೇ ಹನಿಟ್ರ್ಯಾಪ್ ಎಂಬ ಮೋಹಜಾಲವನ್ನು.
ಇನ್ನು ಜರ್ಮನ್ನ ಮಾತಾಹರಿ ಎಂಬ ಯುವತಿಯು ಹನಿಟ್ರ್ಯಾಪ್ಗಾಗಿ ಬಳಕೆಯಾದ ಮಹಾಸುಂದರಿ ಎಂಬ ಸಾಕ್ಷಿಗಳು ಇವೆ. ಇವಳು ಬೀಸಿದ ಮಾಯಾಜಾಲದಿಂದಾಗಿ ಫ್ರಾನ್ಸ್ ಹಲವು ಸೇನಾಧಿಕಾರಿಗಳು ಬಲಿಪಶುವಾದ ಬಗ್ಗೆ ಕಥೆಗಳು ಇವೆ.
ಇದನ್ನೂ ಓದಿ:ಹನಿಟ್ರ್ಯಾಪ್ ರಹಸ್ಯ ಸ್ಫೋಟ.. ಕೊನೆಗೂ ತನಿಖೆಗೆ ಮುಂದಾದ ರಾಜ್ಯ ಸರ್ಕಾರ; ಗೃಹ ಸಚಿವರು ಏನಂದ್ರು?
ಹೀಗೆ ಹನಿಟ್ರ್ಯಾಪ್ ಎಂಬುದು ಆಯಾ ಆಯಾ ದೇಶಗಳು ತನ್ನ ವಿರೋಧಿ ದೇಶದ ಬಗ್ಗೆ ಅಥವಾ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಅಥವಾ ತಮಗೆ ಬೇಕಾದ ಮಾಹಿತಿಯನ್ನು ಕಲೆಹಾಕುವುದಕ್ಕಾಗಿ ಹೂಡಿರುವ ಮನ್ಮಥನ ಮೊಹಕ ಬಾಣ. ಇದನ್ನು ಮೊದಲ ಬಾರಿಗೆ ಶುರು ಮಾಡಿದ್ದು ರಷ್ಯಾದ ಗುಪ್ತಚರ ಇಲಾಖೆ ಕೆಬಿಜಿ.
ವಿಶೇಷ ವರದಿ: ಗೋಪಾಲ್ ಕುಲಕರ್ಣಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ