/newsfirstlive-kannada/media/post_attachments/wp-content/uploads/2025/05/KOHLI_BATTING-1.jpg)
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ಯುಗಾಂತ್ಯವಾಗಿದೆ. ಸುದೀರ್ಘ 14 ವರ್ಷಗಳ ಜರ್ನಿಗೆ ದಿಢೀರ್ ನಿವೃತ್ತಿ ಘೋಷಿಸಿ ಕ್ರಿಕೆಟ್ ಲೋಕವನ್ನೇ ಕೊಹ್ಲಿ ಅಚ್ಚರಿಗೆ ದೂಡಿದ್ದಾರೆ. ಇನ್ನೂ 2-3 ವರ್ಷ ಕ್ರಿಕೆಟ್ ಆಡಬಹುದಾದ ಎಲ್ಲಾ ಅವಕಾಶವಿದ್ರೂ ಕೊಹ್ಲಿ ವೈಟ್ ಜೆರ್ಸಿ ಬಿಚ್ಚಿಟ್ಟಿದ್ದಾರೆ. ಮುಂಬರೋ ಮಹತ್ವದ ಇಂಗ್ಲೆಂಡ್ ಟೂರ್ಗೂ ಮುನ್ನ ವಿರಾಟ್ ವಿದಾಯ ಹೇಳಿರೋದು ಟೀಮ್ ಇಂಡಿಯಾ ತೀವ್ರ ಹಿನ್ನಡೆ ತಂದಿಟ್ಟಿದೆ. ಇದೀಗ ಕೊಹ್ಲಿ ಸ್ಥಾನ ತುಂಬೋದ್ಯಾರು ಅನ್ನೋ ದೊಡ್ಡ ಪ್ರಶ್ನೆ ಟೀಮ್ ಇಂಡಿಯಾವನ್ನ ಕಾಡ್ತಿದೆ.
ಕೊಹ್ಲಿ ಟೆಸ್ಟ್ ನಿವೃತ್ತಿಯೊಂದಿಗೆ ಮಹತ್ವದ ನಂಬರ್- 4 ಸ್ಲಾಟ್ ಖಾಲಿಯಾಗಿದೆ. ಲೆಜೆಂಡರಿ ಸಚಿನ್ ತೆಂಡೂಲ್ಕರ್ ನಿವೃತ್ತಿಯ ಬಳಿಕ ಆ ಸ್ಲಾಟ್ನ ವಿರಾಟ್ ಕೊಹ್ಲಿ ಸಮರ್ಥವಾಗಿ ತುಂಬಿದ್ರು. ಕೊಹ್ಲಿ ಟೆಸ್ಟ್ನಲ್ಲಿ ಗಳಿಸಿದ 9,230 ರನ್ಗಳ ಪೈಕಿ 7,564 ರನ್ಗಳು ಬಂದಿದ್ದು ಈ ಸ್ಲಾಟ್ನಲ್ಲೇ. 2013ರಿಂದ 2025ರವರೆಗೆ 160 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ವಿರಾಟ್ ಬರೋಬ್ಬರಿ 50 ಸರಾಸರಿಯಲ್ಲಿ ರನ್ ಕೊಳ್ಳೆ ಹೊಡೆದಿದ್ರು. ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ವಿರಾಟ್, ಭಾರತದ ಬಲ ಹೆಚ್ಚಿಸಿದ್ರು. ಇದೀಗ ಆ ಸ್ಲಾಟ್ ತೆರವಾಗಿದೆ. ಕೊಹ್ಲಿ ಸ್ಥಾನಕ್ಕೆ ಸಮರ್ಥರ ಹುಡುಕಾಟ ನಡೀತಿದೆ. ಆಟಗಾರರ ನಡುವೆ ಪೈಪೋಟಿ ಶುರುವಾಗಿದೆ.
ಸಿಂಹಾಸನ ತ್ಯಜಿಸಿದದ ‘ಕಿಂಗ್’.. ‘ಪ್ರಿನ್ಸ್’ಗೆ ಪಟ್ಟಾಭಿಷೇಕ.?
ಕ್ರಿಕೆಟ್ ದೇವರ ಬಳಿಕ ನಂ- 4 ಸ್ಲಾಟ್ನಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ, ಕಿಂಗ್ ಕೊಹ್ಲಿಯಾಗಿ ಕರಿಯರ್ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇದೀಗ ತೆರವಾದ ಸ್ಲಾಟ್ಗೆ ಪ್ರಿನ್ಸ್ ಎಂದೇ ಬಿಂಬಿತವಾಗಿರೋ ಶುಭ್ಮನ್ ಗಿಲ್ ಎಂಟ್ರಿ ಕೊಡೋ ಸಾಧ್ಯತೆಯಿದೆ. ಆರಂಭದಲ್ಲಿ ಓಪನರ್ ಆಗಿದ್ದ ಗಿಲ್, ಈಗ 3ನೇ ಕ್ರಮಾಂಕದಲ್ಲಿ ಆಡ್ತಿದ್ದಾರೆ. ಕೊಹ್ಲಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರೋ ಶುಭ್ಮನ್ನ 4ನೇ ಸ್ಲಾಟ್ನಲ್ಲಿ ಆಡಿಸೋ ಲೆಕ್ಕಾಚಾರ ಸದ್ಯ ಮ್ಯಾನೇಜ್ಮೆಂಟ್ ವಲಯದಲ್ಲಿ ನಡೀತಿದೆ.
4ನೇ ಕ್ರಮಾಂಕದಲ್ಲಿ ಶೈನ್ ಆಗ್ತಾರಾ ಶ್ರೇಯಸ್.?
ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿ ತಂಡದಿಂದ ದೂರಾಗಿದ್ದ ಶ್ರೇಯಸ್ ಅಯ್ಯರ್ ಇದೀಗ ಕಮ್ಬ್ಯಾಕ್ನ ಎದುರು ನೋಡ್ತಿದ್ದಾರೆ. ರೋಹಿತ್, ಕೊಹ್ಲಿ ನಿವೃತ್ತಿಯಿಂದ ಶ್ರೇಯಸ್ಗೆ ಟೆಸ್ಟ್ ತಂಡದಲ್ಲಿ ಡೋರ್ ಓಪನ್ ಆಗೋ ಸಾಧ್ಯತೆ ದಟ್ಟವಾಗಿದೆ. ಇಷ್ಟು ದಿನ ಲೋವರ್ ಆರ್ಡರ್ನಲ್ಲಿ ಬ್ಯಾಟ್ ಬೀಸ್ತಿದ್ದ ಶ್ರೇಯಸ್ಗೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸೋ ಅವಕಾಶ ಸಿಗೋ ಸಾಧ್ಯತೆಯೂ ಇದೆ. ಈ ಹಿಂದೆ ಕೊಹ್ಲಿ ಅಲಭ್ಯತೆಯಲ್ಲಿ ಶ್ರೇಯಸ್, ಈ ಸ್ಲಾಟ್ನಲ್ಲಿ ಬ್ಯಾಟ್ ಬೀಸಿದ್ರು. ಆ ಪಂದ್ಯದಲ್ಲಿ ನಿರೀಕ್ಷಿತ ಸಕ್ಸಸ್ ಸಿಗದಿದ್ರೂ, ಶ್ರೇಯಸ್ ಆಟ ಪ್ರಾಮಿಸಿಂಗ್ ಅನಿಸಿತ್ತು.
ಕೊಹ್ಲಿ ಸ್ಥಾನದಲ್ಲಿ ಕನ್ನಡಿಗನಿಗೆ ಅವಕಾಶ.?
ಕನ್ನಡಿಗ ದೇವದತ್ತ್ ಪಡಿಕ್ಕಲ್ ಡೆಬ್ಯೂ ಸೀರೀಸ್ನಲ್ಲೇ ಪರ್ಫಾಮೆನ್ಸ್ ನೀಡಿ ಗಮನ ಸೆಳೆದಿದ್ರು. ಈ ಸ್ಲಾಟ್ನಲ್ಲಿ ಸಿಕ್ಕ ಚೊಚ್ಚಲ ಹಾಗೂ ಏಕೈಕ ಅವಕಾಶದಲ್ಲೇ ಪಡಿಕ್ಕಲ್ ಹಾಫ್ ಸೆಂಚುರಿ ಸಿಡಿಸಿದ್ರು. ಆ ಬಳಿಕ ಕೊಹ್ಲಿ ಕಮ್ಬ್ಯಾಕ್ನಿಂದಾಗಿ ಪಡಿಕ್ಕಲ್ಗೆ ಬೆಂಚ್ಗೆ ಸೀಮಿತವಾಗಿದ್ರು. ಇದೀಗ ಕೊಹ್ಲಿ ನಿವೃತ್ತಿಯಾಗಿರೋದ್ರಿಂದ ಟೀಮ್ ಮ್ಯಾನೇಜ್ಮೆಂಟ್ ಕನ್ನಡಿಗನಿಗೆ ಮತ್ತೆ ಅವಕಾಶ ನೀಡೋ ಸಾಧ್ಯತೆ ಹೆಚ್ಚಿದೆ. ಪಡಿಕ್ಕಲ್ ಎಂಟ್ರಿಯಾದ್ರೆ ಲೈಫ್ಟ್ - ರೈಟ್ ಕಾಂಬಿನೇಶನ್ ಕೂಡ ಸಿಗಲಿದೆ.
ರಜತ್ ಪಾಟಿದಾರ್ಗೆ ತೆರೆಯುತ್ತಾ ತಂಡದ ಬಾಗಿಲು.?
ಕೊಹ್ಲಿ ಹೊರಗುಳಿದಿದ್ದ ಇಂಗ್ಲೆಂಡ್ ಸೀರೀಸ್ನಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮೊದಲು ಪ್ರಯೋಗಿಸಿದ್ದೇ ರಜತ್ ಪಾಟಿದಾರ್. ಒಂದಲ್ಲ.. ಬರೋಬ್ಬರಿ 4 ಇನ್ನಿಂಗ್ಸ್ಗಳಲ್ಲಿ ಪಾಟಿದಾರ್ಗೆ ಅವಕಾಶ ಸಿಕ್ಕಿತ್ತು. ಆದ್ರೆ, ಅದೇನು ಒತ್ತಡಕ್ಕೆ ಒಳಗಾದ್ರೋ ಏನೋ ಗೊತ್ತಿಲ್ಲ. ಸಾಮರ್ಥ್ಯವಿದ್ರೂ ಪಾಟಿದಾರ್ ಸಿಡಿಯಲಿಲ್ಲ. ಇದೀಗ ಕೊಹ್ಲಿ ಗುಡ್ ಬೈ ಹೇಳಿರೋದ್ರಿಂದ ಮ್ಯಾನೇಜ್ಮೆಂಟ್ ಮತ್ತೊಮ್ಮೆ ರಜತ್ ಕಡೆಗೆ ತಿರುಗಿ ನೋಡುವಂತಾ ಸಾಧ್ಯತೆಯನ್ನೂ ತಳ್ಳಿಹಾಕಿವಂತಿಲ್ಲ.
ಇದನ್ನೂ ಓದಿ:ಕೊಹ್ಲಿ ಮನವೊಲಿಕೆಗೆ ಇಬ್ಬರು ದಂತಕತೆಗಳ ಕಳುಹಿಸಿದ್ದ BCCI, ಯಾರಿಗೂ ಸೊಪ್ಪು ಹಾಕದ ಕಿಂಗ್..!
ಅನುಭವಿಗಳಾದ ರಹಾನೆ-ಪೂಜಾರಾಗೆ ಕೊನೆ ಚಾನ್ಸ್.?
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿಯಿಂದ ಟೀಮ್ ಇಂಡಿಯಾ ಬ್ಯಾಟಿಂಗ್ ಲೈನ್ಅಪ್ನಲ್ಲಿ ಅನುಭವಿಗಳೇ ಇಲ್ಲದದಂತಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಅನುಭವಿಗಳ ಅಗತ್ಯತೆ ತಂಡಕ್ಕಿದೆ. ಹೀಗಾಗಿ ಟೆಸ್ಟ್ ತಂಡದಿಂದ ದೂರಾಗಿರೋ ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರಗೆ ಮಣೆ ಹಾಕೋ ಸಾಧ್ಯತೆಯೂ ಇದೆ. ಇಬ್ಬರಿಗೂ 4ನೇ ಕ್ರಮಾಂಕದಲ್ಲಿ ಆಡಿದ ಅನುಭವೂ ಇದೆ. ಇಂಗ್ಲೆಂಡ್ನಲ್ಲಿ ಆಡಿದ ಅನುಭವವೂ ಇದೆ. ಇವ್ರ ಕಮ್ಬ್ಯಾಕ್ನಿಂದ ಬ್ಯಾಟಿಂಗ್ ವಿಭಾಗದ ಬ್ಯಾಲೆನ್ಸ್ ಹೆಚ್ಚಲಿದೆ.
ಕೊಹ್ಲಿ ಸ್ಥಾನ ತುಂಬಲು ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಮುಂದೆ ಹಲವು ಆಯ್ಕೆಗಳಿವೆ. ಇವರಲ್ಲಿ ನಂಬರ್ 4 ಸ್ಲಾಟ್ ತುಂಬಬಲ್ಲ ಸಮರ್ಥ ಯಾರು.? ಸಾಮರ್ಥ್ಯ ಯಾರಿಗಿದೆ.? ಅನ್ನೋದನ್ನ ಹುಡುಕೋದೆ ಸದ್ಯಕ್ಕಿರೋ ಬಿಗ್ ಚಾಲೆಂಜ್.!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ