/newsfirstlive-kannada/media/post_attachments/wp-content/uploads/2024/11/Cold-Cough.jpg)
ಬೆಂಗಳೂರು: ಆಗೊಮ್ಮೆ ಈಗೊಮ್ಮೆ ಬರ್ತಿರೋ ಮಳೆಯಿಂದ ವಾತಾವರಣ ಬದಲಾಗ್ತಿದೆ. ಇದ್ರಿಂದ ನಾನಾ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ತಿವೆ. ಈಗಾಗಲೇ ರಾಜ್ಯದ ಕೆಲವೆಡೆ ವೈರಲ್ ಫೀವರ್ ಶುರುವಾಗಿದೆ. ಆದ್ರೆ, ಇಂಥಾ ಸಮಯದಲ್ಲಿ ರಾಜ್ಯ ಸರ್ಕಾರದ ಬಳಿ ಜನರ ಜೀವರಕ್ಷಕ ಔಷಧಿಗಳೇ ಇಲ್ಲ ಎಂಬ ಸತ್ಯ ಬಯಲಾಗಿದೆ. ಅದನ್ನ ದಾಖಲೆ ಸಮೇತ ನ್ಯೂಸ್ ಫಸ್ಟ್ ನಿಮ್ಮ ಮುಂದಿಟ್ಟಿದೆ.
ರಾಜ್ಯದಲ್ಲಿ ಕೊರೊನಾ ಬಳಿಕ ಮತ್ತೊಮ್ಮೆ ರೋಗಿಗಳು ಔಷಧಿಗಾಗಿ ಪರದಾಡೋ ಪರಿಸ್ಥಿತಿ ಬಂದೊಂದಗಿದೆ. ಇದಕ್ಕೆ ನಿರ್ಲಕ್ಷ್ಯ ಅನ್ನಬೇಕೋ ಬೇಜವಾಬ್ದಾರಿ ಅನ್ನಬೇಕೋ ಅರ್ಥವೇ ಆಗುತ್ತಿಲ್ಲ.
ಸರ್ಕಾರದ ಬಳಿ ಜನರ ಜೀವರಕ್ಷಕ ಔಷಧಿಗಳೇ ಇಲ್ಲ
ಸದ್ಯ ರಾಜ್ಯ ಸರ್ಕಾರದ ಬಳಿ ಜನರ ಜೀವರಕ್ಷಕ ಔಷಧಿಗಳೇ ಇಲ್ಲವಂತೆ. ಸರ್ಕಾರದ ಔಷಧಿ ದಾಸ್ತಾನು ಕೇಂದ್ರಗಳ ಪರಿಸ್ಥಿತಿ ಬಹಿರಂಗವಾಗಿದೆ. ತೀರಾ ಅಗತ್ಯವಿರುವ 250 ಔಷಧಗಳು ಪುಲ್ ಖಾಲಿಯಾಗಿದೆ. ಪ್ಯಾರಸಿಟಮಲ್, ಅಲ್ಬುಮಿನ್, ಆಂಪಿಸಿಲಿನ್, ಗ್ಲೂಕೋಸ್, ಬ್ಯಾಂಡೇಜ್, ಸರ್ಜಿಕಲ್, ಇಂಜೆಕ್ಷನ್ಗಳು ಖಾಲಿಯಾಗಿವೆ. ಈ ಬಗ್ಗೆ ಕೆಎಸ್‌ಎಂಎಸ್‌ಸಿಎಲ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಪ್ರತಿವರ್ಷ ಅಗತ್ಯ ದಾಸ್ತಾನು ಮಾಡುತ್ತಿದ್ದ ರಾಜ್ಯ ಆರೋಗ್ಯ ಇಲಾಖೆ, ಈ ಬಾರೀ ಅದ್ಯಾಕೋ ಕಣ್ಮುಚ್ಚಿ ಕುಳಿತಂತೆ ಕಾಣ್ತಿದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ಟೆಂಡರ್ ಕರೆದು ಮಾರ್ಚ್ನಲ್ಲಿ ಮುಕ್ತಾಯವಾಗ್ತಿತ್ತು. ಏಪ್ರಿಲ್ ತಿಂಗಳಲ್ಲಿ ಎಲ್ಲಾ ಜಿಲ್ಲಾ ಗೋಡೌನ್ನಲ್ಲಿ ದಾಸ್ತಾನು ಆಗುತ್ತಿತ್ತು. ಆದರೆ ಈ ಬಾರಿ 2 ವರ್ಷಗಳಿಂದ ಪ್ರಕ್ರಿಯೆ ಮುಕ್ತಾಯ ಇನ್ನೂ ಆಗಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.
ಔಷಧಿ ಖರೀದಿ ವಿಭಾಗದ ಜನರಲ್ ಮ್ಯಾನೇಜರ್ ಕೋಟ್ರೇಶ್. ಹೆಚ್, ಡ್ರಗ್ಸ್ ಕನ್ಸಲ್ಟೆಂಟ್ ಡಾ. ಪ್ರಶಾಂತ್, ಕ್ವಾಲಿಟಿ ಕಂಟ್ರೋಲರ್ ಶೀಲವಂತಿ, ಡ್ರಗ್ಸ್ ಮ್ಯಾನೆಜರ್ ಡಾ. ನಂದಿನಿ. ಇವರ ನಿರ್ಲಕ್ಷ್ಯದಿಂದಲೇ ಈ ಪರಿಸ್ಥಿತಿ ಬಂದಿದೆ ಎನ್ನುವ ಆರೋಪ ಇದೆ.
ಕಮಿಷನ್ಗಾಗಿ ನಿರ್ಲಕ್ಷ್ಯನಾ?
ಸಮಯಕ್ಕೆ ಟೆಂಡರ್ ಕರೆಯದೇ KSMSCL ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. 100% ಟೆಂಡರ್ ಪ್ರಕ್ರಿಯೆ ಆದ್ರೂ ಕೂಡ ಕೇವಲ 25% ಸಪ್ಲೇ ಆರ್ಡರ್ ಆಗಿದೆ. ಕಂಪನಿ ಮಾಲೀಕರನ್ನ ಖಾಸಗಿ ಹೋಟೆಲ್ನಲ್ಲಿ ಭೇಟಿಯಾಗಿದ್ದು, ಡೀಲ್ ನಡೆದಿದೆ ಎನ್ನಲಾಗ್ತಿದೆ. ಕಮಿಷನ್ ನೀಡಿದರೆ ಸಪ್ಲೇ ಆದ ಬಿಲ್ ನೀಡಲು ಪೇಮೆಂಟ್ ಆಗುತ್ತೆ. ಕೋಟಿಗಟ್ಟಲೇ ಔಷಧ ಬಿಲ್, ಇಎಂಡಿ, ಭದ್ರತಾ ಠೇವಣಿ ಲಾಕ್ ಆಗಿದೆ. 30 ದಿನಗಳಲ್ಲಿ ಮುಗಿಸುವ ಟೆಂಡರ್ ನಿಯಮಕ್ಕೆ ಇಲ್ಲಿ ಬೆಲೆ ಇಲ್ಲದಂತಾಗಿದೆ. ಬಿಡ್ಡಿಂಗ್ ನಲ್ಲಿ ಇಲಾಖೆ ಅರ್ನೆಸ್ಟ್ ಮನಿ ಡೆಪಾಸಿಟ್ ಮಾಡ್ತಿದೆ. ಭದ್ರತಾ ಠೇವಣಿ ವಾಪಸ್ ನೀಡದೆ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿದೆ. ಟೆಂಡರ್ ರದ್ದಾದ್ರೂ ಭದ್ರತಾ ಠೇವಣಿ & ಇಎಂಡಿ ವಾಪಸ್ ಕೊಟ್ಟಿಲ್ಲ. ಇದರಿಂದ ಸಪ್ಲೈ ಮಾಡಲು ಸಹ ಕಂಪನಿಗಳು ಮುಂದೆ ಬರ್ತಿಲ್ಲ ಎಂದು ಹೇಳಲಾಗ್ತಿದೆ.
ಈಗಾಗಲೇ ರಾಜ್ಯದ ಹಲವೆಡೆ ವೈರಲ್ ಫೀವರ್ ಜಾಸ್ತಿಯಾಗಿದೆ. ರಾಯಚೂರು ಜಿಲ್ಲೆಯಾದ್ಯಂತ ಕೆಮ್ಮು, ಚಳಿ ಜ್ವರ, ಶೀತ, ತಲೆನೋವು ಹಾಗೂ ಮೈಕೈ ನೋವಿನಿಂದ ಬಳಲುತ್ತಿದ್ದಾರೆ. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಬಹುತೇಕ ಫುಲ್ ಆಗಿದೆ. ಒಟ್ನಲ್ಲಿ, ಅಧಿಕಾರಿಗಳ ಹಣ ದಾಹ, ನಿರ್ಲಕ್ಷ್ಯ ರೋಗಿಗಳ ಜೀವದ ಜೊತೆ ಚೆಲಾಟವಾಡ್ತಿದೆ. ಅಗತ್ಯವಿರೋ ಔಷಧಿಗಳು ಇಲ್ಲದಿದ್ರೂ ಸರ್ಕಾರ ಯಾಕೆ ಇನ್ನೂ ಮೌನವಹಿಸಿದೆ ಗೊತ್ತಾಗ್ತಿಲ್ಲ. ಆದಷ್ಟು ಬೇಗ ಔಷಧಿಗಳನ್ನ ದಾಸ್ತಾನು ಮಾಡದಿದ್ರೆ, ಅನಾಹುತ ಕಟ್ಟಿಟ್ಟ ಬುತ್ತಿ.. ಇದಕ್ಕೆ ಸರ್ಕಾರವೇ ಹೊಣೆಯಾಗ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ