/newsfirstlive-kannada/media/post_attachments/wp-content/uploads/2025/06/CONGRESS.jpg)
ಸಾಮಾಜಿಕ ಆರ್ಥಿಕ ಸಮೀಕ್ಷೆಯ ಜಾತಿ ಗಣತಿ ವರದಿ ರಾಜ್ಯ ರಾಜಕೀಯದಲ್ಲಿ ಭಾರೀ ಕಿಚ್ಚು ಹೊತ್ತಿಸಿತ್ತು. ಪ್ರಬಲ ಸಮುದಾಯಗಳ ತೀವ್ರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ, ಯಾವುದಕ್ಕೂ ಜಗ್ಗದೇ ಸಂಪುಟದ ಮುಂದೆ ಜಾತಿ ಗಣತಿ ವರದಿಯನ್ನು ಮಂಡನೆ ಮಾಡಿ, ಅಹಿಂದ ಸಮುದಾಯಗಳ ಕೈವಶಕ್ಕೆ ಪ್ಲಾನ್ ಮಾಡಿದ್ರು. ಆದ್ರೀಗ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಮಟ್ಟದಲ್ಲೇ ಭಾರೀ ಹಿನ್ನಡೆಯಾಗಿದೆ. ಹಳೆಯ ಜಾತಿ ಗಣತಿ ಯಥಾವತ್ತ ಜಾರಿಗೆ ಮುಂದಾಗಿದ್ದ ಸಿಎಂ, ಹೈಕಮಾಂಡ್ನ ಸೂಚನೆಯಂತೆ ರಾಜ್ಯದಲ್ಲಿ ಮರು ಸರ್ವೇ ಬಗ್ಗೆ ಘೋಷಣೆ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಕೇಂದ್ರದ ಮೋದಿ ಸರ್ಕಾರ ಇತ್ತೀಚಿಗಷ್ಟೇ, ಜನಗಣತಿ ಜೊತೆ ದೇಶಾದ್ಯಂತ ಜಾತಿಗಣತಿಗೂ ನಿರ್ಧಾರ ಕೈಗೊಂಡಿತ್ತು. ಇದೀಗ ಮಹತ್ವದ ಬೆಳವಣಿಗೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ 10 ವರ್ಷಗಳ ಹಿಂದಿನ ಜಾತಿಗಣತಿ ವರದಿಯನ್ನು ಕೈಬಿಟ್ಟು ಹೊಸದಾಗಿ ಜಾತಿಗಣತಿ ಮಾಡಲು ರಾಜ್ಯಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ಹೆಂಡ್ತಿ ಅಲ್ಲ ರಾಕ್ಷಸಿ; ಸೋನಮ್, ಲವರ್ ಸೇರಿ ಮಾಡಿದ್ದ ಪ್ಲಾನ್.. ಇಂಚಿಂಚೂ ಮಾಹಿತಿಯೂ ಬೆಚ್ಚಿ ಬೀಳಿಸುತ್ತೆ!
ಮರು ಸಮೀಕ್ಷೆ ಯಾಕೆ?
- ಜಾತಿ ಗಣತಿ ವರದಿ ಬಂದು 10 ವರ್ಷಗಳೇ ಕಳೆದಿವೆ
- ವರದಿಯಲ್ಲಿ ಕೆಲ ನೂನ್ಯತೆಗಳು ಇವೆ ಎಂಬ ಆರೋಪ
- ಅಂಕಿ ಅಂಶಗಳ ಬಗ್ಗೆ ಹಲವು ಸಮುದಾಯಗಳ ಆಕ್ಷೇಪ
- ವರದಿಗೆ ಒಕ್ಕಲಿಗ, ಲಿಂಗಾಯತ ಸಚಿವರಿಂದ ವಿರೋಧ
- ಕಾಂಗ್ರೆಸ್ ಶಾಸಕರು, ಹಿರಿಯ ನಾಯಕರಿಂದಲೂ ಆಕ್ಷೇಪ
- ಸಂಪುಟ ಸಭೆಯಲ್ಲಿ ಮರು ಸಮೀಕ್ಷೆಗೆ ಸಚಿವರಿಂದ ಆಗ್ರಹ
- ಜಂಟಿ ಹೋರಾಟಕ್ಕೆ ಮುಂದಾಗಿದ್ದ ಪ್ರಬಲ ಸಮುದಾಯಗಳು
- ಪ್ರಬಲ ಸಮುದಾಯಗಳ ವಿರೋಧಕ್ಕೆ ಮಣಿದು ಮರು ಸರ್ವೇ
- ಹೊಸ ಸರ್ವೇ ನಡೆಸುವುದರಿಂದ ಸಮುದಾಯಗಳಲ್ಲಿ ಜಾಗೃತಿ
ಹೈಕಮಾಂಡ್ ಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯಗೆ ಒಂದು ರೀತಿಯಲ್ಲಿ ಹಿನ್ನಡೆಯಾದಂತಾಗಿದೆ. ಮರು ಸಮೀಕ್ಷೆ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸ್ವಾಗತಿಸಿದ್ದಾರೆ. ಹಾಗೂ ಸರ್ವರ ಒಳಿತಿಗಾಗಿ ಉತ್ತಮ ರೀತಿಯಲ್ಲಿ ರಾಜ್ಯ ಸರ್ಕಾರ ಗಣತಿಯನ್ನು ನಡೆಸಿದಲ್ಲಿ ಸಂಪೂರ್ಣ ಸಹಕಾರವಿರುತ್ತೆ ಎಂದು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಾಗ್ದಾಳಿ
ಜಾತಿ ಗಣತಿ ಮರು ಸರ್ವೇಗೆ ನಿರ್ಧರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯದಿಂದ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲಾ, ಜಾತಿ ಜನಗಣತಿಯನ್ನು ಪ್ರಸ್ತಾಪಿಸುತ್ತದೆ. ಅದು ಸಾಮಾಜಿಕ ಕಾಳಜಿಯಿಂದಲ್ಲ, ಬದಲಾಗಿ ನಾಡಿನ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸದಾ ಸಂಚು ರೂಪಿಸುತ್ತಿರುತ್ತದೆ. ಈಗಾಗಲೇ ಜಾತಿಗಣತಿಗಾಗಿ ಖರ್ಚು ಮಾಡಿರುವ ₹160 ಕೋಟಿಗೂ ಹೆಚ್ಚು ಹಣ ಸಂಪೂರ್ಣ ವ್ಯರ್ಥ ಎಂದು ಒಪ್ಪಿಕೊಳ್ಳುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಒಟ್ಟಾರೆ.. 10 ವರ್ಷಗಳ ಹಳೆಯ ಜಾತಿ ಗಣತಿಯನ್ನೇ ಜಾರಿಗೆ ಮಾಡಲು ಮುಂದಾಗಿದ್ದ ಸಿಎಂ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ. ಇನ್ನು ಕೇಂದ್ರ ಸರ್ಕಾರ ಕೂಡ ಜನಗಣತಿ ಜೊತೆ ಜಾತಿ ಗಣತಿ ಮಾಡುವುದಾಗಿ ಹೇಳಿದೆ. ಈಗಿದ್ದರೂ ಮತ್ತೆ ಮರು ಸರ್ವೇಗೆ ಕೈ ಹಾಕಿದ್ಯಾಕೆ.. ಈ ಹಿಂದೆ ವರದಿಗೆ ಖರ್ಚು ಮಾಡಿದ 160 ಕೋಟಿ ರೂಪಾಯಿ ಹಣ ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದಂತೆ ಆಗಲ್ವೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ: ವಿಜಯ್ ಮಲ್ಯಗೆ ತಪ್ಪದ ಸಂಕಷ್ಟಗಳು.. ಸಾಲ, ಬಡ್ಡಿ, ಚಕ್ರ ಬಡ್ಡಿಯ ಅಸಲಿ ಲೆಕ್ಕಾಚಾರ ಇಲ್ಲಿದೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ