/newsfirstlive-kannada/media/post_attachments/wp-content/uploads/2025/01/Prayag-raj-Naga-sadhu.jpg)
ಪ್ರಯಾಗ್‌ರಾಜ್ ಮಹಾಕುಂಭ ಮೇಳದ ವೈಭವದಲ್ಲಿ ಕೋಟ್ಯಾಂತರ ಭಕ್ತರು ಭಾಗಿಯಾಗಿದ್ದಾರೆ. ನಿನ್ನೆ ಮಕರ ಸಂಕ್ರಾಂತಿ ಸಂಭ್ರಮದಲ್ಲಿ ತ್ರಿವೇಣಿ ಸಂಗಮದಲ್ಲಿ ಸಾಧು-ಸಂತರ ಅಪೂರ್ವ ಸಮಾಗಮ ಹೊಸ ದೃಶ್ಯಕಾವ್ಯವನ್ನೇ ಸೃಷ್ಟಿಸಿದೆ. ವಿದೇಶಿ ಭಕ್ತರು ಮಹಾಕುಂಭದ ಮಜಲಿಗೆ ಮಾರುಹೋಗಿದ್ದು ಪುಣ್ಯ ಸ್ಥಾನ ಮಾಡಿ ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳದ ಸಂಭ್ರಮ ಮೇಳೈಸಿದೆ. ಸಾಧು-ಸಂತರು, ಕೋಟ್ಯಾಂತರ ಭಕ್ತರ ಸಮಾಗಮದಿಂದ ಗಂಗಾನದಿ ತೀರದಲ್ಲಿ ದೃಶ್ಯ ಕಾವ್ಯ ಕಳೆಗಟ್ಟಿದೆ. ಕೇಸರಿ ಮಯವಾಗಿರೋ ಪ್ರಯಾಗ್ ರಾಜ್ನಲ್ಲಿ ಸನಾತನ ಧರ್ಮದ ವೈಭವವೇ ಧರೆಗಿಳಿದಂತಿದೆ. ಮಹಾ ಕುಂಭಮೇಳದ ಎರಡನೇ ದಿನ ಕೋಟ್ಯಾನುಕೋಟಿ ಭಕ್ತರ ದಂಡು ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ.
ಇದನ್ನೂ ಓದಿ: ಪ್ರಯಾಗರಾಜ್‌ನಲ್ಲಿ ಮೊದಲ ಪುಣ್ಯಸ್ನಾನ.. ವಿದೇಶಿ ಭಕ್ತರ ಸಂಖ್ಯೆಯಲ್ಲಿ ಏರಿಕೆ; ಹೇಗಿತ್ತು 2ನೇ ದಿನ?
ಮಕರ ಸಂಕ್ರಾಂತಿ ಹಿನ್ನೆಲೆ ಮಹಾ ಕುಂಭಮೇಳಕ್ಕೆ ಜನಸಾಗರ
2ನೇ ದಿನ 1.5 ಕೋಟಿಗೂ ಹೆಚ್ಚು ಭಕ್ತರಿಂದ ಮೊದಲ ಪುಣ್ಯಸ್ನಾನ
ಮಹಾಕುಂಭಮೇಳದ ವೈಭವ, ಮತ್ತೊಂದ್ಕಡೆ ಸಂಕ್ರಾಂತಿ ಸಂಭ್ರಮ ಈ ಎರಡರ ಅಪೂರ್ವ ಸಂಗಮದಿಂದ ಪ್ರಯಾಗ್‌ರಾಜ್ ಭಕ್ತರಿಂದ ತುಂಬಿ ತುಳುಕುತ್ತಿತ್ತು. ದೇಶದ ಮೂಲೆ ಮೂಲೆಯಿಂದ ಮಹಾಕುಂಭ ಮೇಳಕ್ಕೆ ಭಕ್ತರು ಆಗಮಿಸಿ ಬೆಳ್ಳಂಬೆಳಗ್ಗೆ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ್ರು. ಬೆಳಗ್ಗೆ 10 ಗಂಟೆವರೆಗೆ 1 ಕೋಟಿ 38 ಲಕ್ಷ ಭಕ್ತರು ಗಂಗಾನದಿಯಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು ಶಿವನ ಜಪ ಮಾಡಿ ಪುನೀತರಾಗಿದ್ದಾರೆ.
ಸಂಕ್ರಾಂತಿ ಹಿನ್ನೆಲೆ ಸ್ವಾಮೀಜಿಗಳಿಂದ ಅಮೃತ ಸ್ನಾನ
ಮಕರ ಸಂಕ್ರಾತಿ ಹಿನ್ನೆಲೆ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಸ್ವಾಮೀಜಿಗಳು ಸಹ ಅಮೃತ ಸ್ನಾನ ಮಾಡಿದ್ದಾರೆ.. ಅಮೃತ ಸ್ನಾನಕ್ಕೆ ಚಾಲನೆ ನೀಡಿದ ಬಾಲ್ಕಾನಂದ ಮಹಾರಾಜ್ ಭಕ್ತಿಯ ಗಮಲಲ್ಲಿ ಮಿಂದೆದ್ದಿದ್ದಾರೆ.
ನಾಗಸಾಧುಗಳಿಗೆ ಮೊದಲ ಪುಣ್ಯಸ್ನಾನ!
ಪ್ರಯಾಗ್‌ರಾಜ್‌ನಲ್ಲಿ ನಡೆದ ಮೊದಲ ಪುಣ್ಯಸ್ನಾನದಲ್ಲಿ ನಾಗಸಾಧುಗಳೇ ಮೊದಲು ಪುಣ್ಯಸ್ನಾನ ಮಾಡಿದ್ದಾರೆ. 8ನೇ ಶತಮಾನಗಳಿಂದಲೂ ನಾಗಸಾಧುಗಳೇ ಪ್ರಯಾಗ್‌ರಾಜ್‌ನಲ್ಲಿ ಮೊದಲ ಶಾಹಿ ಸ್ನಾನ ಮಾಡಿಕೊಂಡು ಬಂದಿದ್ದಾರೆ. ಶತಮಾನಗಳಿಂದಲೂ ನಾಗಸಾಧುಗಳೇ ಮೊದಲು ಪುಣ್ಯ ಸ್ನಾನ ಮಾಡುವ ಪದ್ಧತಿ ಕುಂಭಮೇಳದಲ್ಲಿ ಆಚರಣೆಯಲ್ಲಿದೆ. 13 ಅಖಾಡದ ಸಾಧುಗಳ ಸ್ನಾನದ ಬಳಿಕ ಉಳಿದವರಿಗೆ ಅವಕಾಶ ಮಾಡಿಕೊಡಲಾಗಿದೆ. ನಾಗಸಾಧುಗಳು ಸ್ನಾನ ಮಾಡೋದನ್ನ ಬಹಳಷ್ಟು ಮಂದಿ ಹತ್ತಿರದಿಂದ ನೋಡಿ ಸಂತಸ ಪಟ್ಟಿದ್ದಾರೆ.
ಒಟ್ನಲ್ಲಿ ಕುಂಭಮೇಳ ಪೂರ್ಣಗೊಳ್ಳುವ ವೇಳೆಗೆ ಸುಮಾರು 45 ಕೋಟಿಗೂ ಅಧಿಕ ಜನ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ. ಮಹಾಕುಂಭ ಮೇಳದ ವೈಭವ ವಿಶ್ವದ ಮೂಲೆ ಮೂಲೆಗಳಿಗೆ ಸನಾತನ ಧರ್ಮದ ಮಹಿಮೆಯನ್ನ ಪಸರಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ