/newsfirstlive-kannada/media/post_attachments/wp-content/uploads/2024/11/NIKHIL_CP_YOGESWARA.jpg)
ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರವಾಗಿತ್ತು. ದೇವೇಗೌಡ್ರ ಫ್ಯಾಮಿಲಿಗೂ? ಡಿಕೆ ಬ್ರದರ್ಸ್‌ಗೂ? ನೇರಾನೇರಾ ಯುದ್ಧ ಅಂತಾನೇ ಗುರುತಿಸಿಕೊಂಡಿತ್ತು. ಆದ್ರೆ, ನಿಖಿಲ್‌ಗೆ ಶಾಕ್ ಆಗಿದೆ. ಹಾಗಾದ್ರೆ, ನಿಖಿಲ್‌ಗೆ ಗ್ಯಾರಂಟಿ ಆಘಾತ ಕೊಟ್ಟಿತಾ? ಸ್ಥಳೀಯರಲ್ಲ ಅನ್ನೋದ್ ಹಿನ್ನಡೆಗೆ ಕಾರಣವಾಯ್ತಾ? ಕಮಲ ಪಡೆ ವೋಟ್ ಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಇಲ್ಲದೇ ಇರೋದು ಸೋಲಿಗೆ ಕಾರಣವಾಯ್ತಾ? ಅದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಇದನ್ನೂ ಓದಿ:ಚನ್ನಪಟ್ಟಣದಲ್ಲಿ ಮತ್ತೊಂದು ಪೆಟ್ಟು ತಿಂದ ನಿಖಿಲ್; ದೊಡ್ಡ ಗೌಡರ ಮೊಮ್ಮಗನಿಗೆ ಮತ್ತೆ ಸೋಲಾಗಿದ್ದು ಏಕೆ?
ರಾಜಕೀಯದಲ್ಲಿ ಯಾರೂ ತಾವು ಸೋಲಬೇಕು ಅಂತಾ ಅಖಾಡಕ್ಕಿಳಿಯೋದಿಲ್ಲ. ಪ್ರತಿಯೊಂದು ಚುನಾವಣೆಯಲ್ಲಿಯೂ ತಾವು ಗೆಲ್ಲಬೇಕು. ವಿಜಯ ಪತಾಕೆ ಹಾರಿಸಬೇಕು ಅಂತಾನೇ ರಣಕಣಕ್ಕಿಳೀಯುತ್ತಾರೆ. ಅದರಲ್ಲಿಯೂ ದೊಡ್ಡ ದೊಡ್ಡ ರಾಜಕೀಯ ಕುಟುಂಬಗಳ ಬಗ್ಗೆ ಹೇಳ್ಬೇಕಾ. ಅವರ ಕುಟುಂಬದ ಕುಡಿ ಸ್ಪರ್ಧೆ ಮಾಡುತ್ತಿದೆ ಅಂದ್ರೆ ಏನಾದ್ರೂ ಲೆಕ್ಕಾಚಾರಗಳು ಇದ್ದೇ ಇರುತ್ತವೆ. ಗೆಲುವಿಗೆ ಬೇಕಾದ ರಣತಂತ್ರಗಳು ರೆಡಿ ಇದ್ದೇ ಇರುತ್ತವೆ. ಹಾಗೇ ನಿಖಿಲ್ ಕುಮಾರಸ್ವಾಮಿಯನ್ನು ಈ ಬಾರಿ ಗೆಲ್ಲಿಸಬೇಕು ಅಂತಾನೇ ಕುಮಾರಸ್ವಾಮಿ ಮತ್ತು ದೇವೇಗೌಡ್ರು ಪಣತೊಟ್ಟಿದ್ದರು. ಜಿದ್ದಿನಿಂದ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡಿದ್ದರು. ಆದರೂ ನಿಖಿಲ್‌ಗೆ ಹ್ಯಾಟ್ರಿಕ್ ಸೋಲು ತಪ್ಪಿಸಲು ಸಾಧ್ಯವಾಗಿಲ್ಲ.
ನಿಖಿಲ್‌ಗೆ ಬೀಳಬೇಕಾದ ವೋಟ್ ಟರ್ನ್ ಮಾಡಿದ್ದು ಗ್ಯಾರಂಟಿ!
ಕಳೆದ ಎರಡು ಎಲೆಕ್ಷನ್‌ನಲ್ಲಿ ಕುಮಾರಸ್ವಾಮಿ ಒಂದೇ ಒಂದು ದೊಡ್ಡ ಕ್ಯಾಂಪೇನ್ ಮಾಡದೇ ಚನ್ನಪಟ್ಟಣದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಆದ್ರೆ, ಈ ಬಾರಿ ಕುಮಾರಸ್ವಾಮಿ, ದೇವೇಗೌಡರು ಬೀಡು ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿ ಮತಶಿಕಾರಿ ಮಾಡಿದರೂ ನಿಖಿಲ್ ಗೆಲುವು ಸಾಧ್ಯವಾಗಿಲ್ಲ. ಹಾಗಾದ್ರೆ, ಕುಮಾರಸ್ವಾಮಿಗೆ ಬಿದ್ದಿರೋ ವೋಟ್‌ಗಳು ನಿಖಿಲ್‌ಗೆ ಯಾಕೆ ಬಿದ್ದಿಲ್ಲ ಅಂತಾ ನೋಡ್ತಾ ಹೋದರೆ ಕಾಣಿಸೋದು ಕಾಂಗ್ರೆಸ್‌ನ ಗ್ಯಾರಂಟಿ. ಹೌದು, ಮಹಿಳಾ ಮತಗಳನ್ನು ಕಾಂಗ್ರೆಸ್‌ನತ್ತ ದೊಡ್ಡ ಪ್ರಮಾಣದಲ್ಲಿ ಸೆಳೆದಿದ್ದೇ ಈ ಗ್ಯಾರಂಟಿಗಳು. ಅದರಲ್ಲಿಯೂ ಎಲೆಕ್ಷನ್ ಇನ್ನೇನ್ ಒಂದು ವಾರ ಇದೆ ಅನ್ನೋ ಟೈಮ್‌ನಲ್ಲಿ ಚನ್ನಪಟ್ಟಣ ಕ್ಷೇತ್ರದ ಗೃಹ ಲಕ್ಷ್ಮಿಯರಿಗೆ ಎರಡು ಮೂರರು ತಿಂಗಳ ಹಣ ಬಂದಿತ್ತು. ಇದು ಸ್ತ್ರೀಯರ ವೋಟ್‌ಗಳು ಕಾಂಗ್ರೆಸ್‌ನತ್ತ ಹೋಗುವಂತೆ ಮಾಡಿವೆ ಅನ್ನೋದನ್ನು ರಾಜಕೀಯ ವಿಶ್ಲೇಷಕರೇ ಹೇಳ್ತಿದ್ದಾರೆ.
ಬಿಜೆಪಿಗೆ ದೊಡ್ಡ ವೋಟ್‌ಬ್ಯಾಂಕ್ ಇಲ್ಲದೇ ಇರೋದು!
ಈ ಬಾರಿ ನಿಖಿಲ್ ಕೇವಲ ಜೆಡಿಎಸ್ ಕ್ಯಾಂಡಿಡೇಟ್ ಆಗಿ ಅಖಾಡಕ್ಕಿಳಿದಿರಲಿಲ್ಲ. ದೋಸ್ತಿ ಪಡೆ ಅಭ್ಯರ್ಥಿಯಾಗಿರೋದ್ರಿಂದ ಎನ್‌ಡಿಎ ಅಭ್ಯರ್ಥಿ ಅಂತಾನೇ ಗಣನೆಗೆ ತೆಗೆದುಕೊಳ್ಳಲಾಗಿತ್ತು, ಚನ್ನಪಟ್ಟಣದಲ್ಲಿ ಮೈತ್ರಿಯಿಂದ ಆಗಿರೋ ಬಹುದೊಡ್ಡ ಸಮಸ್ಯೆ ಅಂದ್ರೆ, ಅಲ್ಪಸಂಖ್ಯಾತ ವೋಟ್‌ಗಳು ದಳದಿಂದ ಕೈತಪ್ಪಿ ಹೋಗುವಂತೆ ಆಯ್ತು. ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿಯೇ ಜೆಡಿಎಸ್‌ಗೆ ಮುಸ್ಲಿಂ ಮತಗಳು ಕೈಪ್ಪಿವೆ ಅನ್ನೋದು ಗ್ಯಾರಂಟಿ. ಇನ್ನು ಬಿಜೆಪಿ ಮತ್ತು ದಳದ ವೋಟ್ ಕ್ರೋಢೀಕರಣ ಮಾಡಿ ಗೆಲ್ಲೋಣ ಅಂದ್ರೆ ಕೇಸರಿ ಪಾಳಯದ ವೋಟ್ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರಲೇ ಇಲ್ಲ. ಹೀಗಾಗಿ ನಿಖಿಲ್‌ಗೆ ಹಿನ್ನಡೆಯಾಯ್ತು, ದಳಪತಿಗಳ ಶ್ರಮವೆಲ್ಲ ನೀರಲ್ಲಿ ಮಾಡಿದ ಹೋಮವಾಯ್ತು ಅನ್ನೋ ವಿಶ್ಲೇಷಣೆಗಳು ಕೇಳಿಬರ್ತಿವೆ.
ಸಿಪಿವೈ ವೋಟ್, ಕಾಂಗ್ರೆಸ್ ವೋಟ್ ಕ್ರೋಢೀಕರಣ!
ಕ್ಷೇತ್ರದಲ್ಲಿ ಯೋಗೇಶ್ವರ್ 2018 ಮತ್ತು 2013 ರಲ್ಲಿ ಸೋಲು ಕಂಡಿದ್ದರು. ಆದ್ರೆ, ಆ ಸೋಲು ಭಾರೀ ಅಂತರದ ಸೋಲು ಅಲ್ಲವೇ ಅಲ್ಲವಾಗಿತ್ತು. ಅಂದ್ರೆ, ಕ್ಷೇತ್ರದಲ್ಲಿ ಯೋಗೇಶ್ವರ್‌ಗೆ ತಮ್ಮದೇ ಆದ ಸುಮಾರು 50 ರಿಂದ 60 ಸಾವಿರ ಸ್ವಂತ ವೋಟ್ ಇತ್ತು. ಯೋಗೇಶ್ವರ್ ಪಕ್ಷೇತರವಾಗಿ ಸ್ಪರ್ಧೆ ಮಾಡಲಿ, ಬಿಜೆಪಿಗೆ ಹೋಗಲಿ, ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿ. ಯಾವ್ ಪಕ್ಷಕ್ಕೆ ಹೋದರೂ ಆ ವೋಟ್‌ಗಳು ಅವರ ಜೊತೆಗೆ ಹೋಗ್ತಾ ಇತ್ತು. ಈ ಬಾರಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಯೋಗೇಶ್ವರ್ ಜಂಪ್ ಆಗ್ತಾ ಇದ್ದಂತೆ ಆ ವೋಟ್‌ಗಳು ಹೋಗಿವೆ. ಹಾಗೇ ಕ್ಷೇತ್ರದಲ್ಲಿದ್ದ ಕಾಂಗ್ರೆಸ್ ವೋಟ್‌ಗಳ ಜೊತೆ ಅದು ಕ್ರೋಢೀಕರಣವಾಗಿದೆ. ಇದು ಯೋಗೇಶ್ವರ್ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದ್ರೆ. ನಿಖಿಲ್ ಕುಮಾರಸ್ವಾಮಿಗೆ ಆಘಾತ ಮೂಡಿಸಿದೆ.
ಇದನ್ನೂ ಓದಿ: 3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ; ಹೇಳಿದ್ದೇನು?
ಒಂದು ಕಡೆ ಕ್ಯಾಂಪೇನ್, ಇನ್ನೊಂದು ಕಡೆ ಕೆರೆಗೆ ನೀರು!
ಕಾಂಗ್ರೆಸ್ ಮಾಡಿದ್ದ ಇದೊಂದು ರಣತಂತ್ರ ನಿಖಿಲ್ ಪಾಲಿಗೆ ನುಂಗಲಾರದ ತುತ್ತಾಯ್ತು. ಹ್ಯಾಟ್ರಿಕ್ ಸೋಲಿಗೆ ಕಾರಣವಾಯ್ತು ಅಂದ್ರೆ ಖಂಡಿತ ತಪ್ಪಾಗದು. ಯೋಗೇಶ್ವರ್‌ಗೆ ಭಗೀರಥ ಅನ್ನೋ ನೇಮ್ ಇದೆ. ಅದು ಏಕೆ ಅಂದ್ರೆ, ಅವರು ಈ ಹಿಂದೆ ಸಚಿವರಾಗಿದ್ದಾಗ, ಶಾಸಕರಿದ್ದಾಗ ಚನ್ನಪಟ್ಟಣ ಕ್ಷೇತ್ರಾದ್ಯಂತ ಕೆರೆಗಳನ್ನು ನಿರ್ಮಾಣ ಮಾಡಿ, ಆ ಕೆರೆಗಳಿಗೆ ಇನ್ನೆಲ್ಲಿಂದಲೋ ನೀರು ತಂದು ತುಂಬಿಸಿದ್ದಾರೆ ಅನ್ನೋ ಕಾರಣಕ್ಕೆ. ಈ ಬಾರಿ ಎಲೆಕ್ಷನ್ ಕ್ಯಾಂಪೇನ್ ಶುರುವಾಗ್ತಾನೇ ಕಾಂಗ್ರೆಸ್ ನಾಯಕರು ಯೋಗೇಶ್ವರ್ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ಕೆರೆಗಳನ್ನು ತುಂಬಿಸಿದ್ದಾರೆ ಅಂತಾ ಹೇಳುತ್ತಿದ್ದರು0. ಹಾಗೇ ಇನ್ನೊಂದು ಕಡೆ ಕೆರೆಗಳಿಗೆ ನೀರು ಹರಿಸುತ್ತಲೇ ಇದ್ದರು. ಇದು ಮತದಾರಿಗೆ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ನಿಖಿಲ್‌ಗೆ ಗ್ರಾಮೀಣ ಭಾಗದಲ್ಲಿಯೂ ಹಿನ್ನಡೆಯಾಗಿದೆ.
ಸಿಪಿವೈಗೆ ಸ್ಥಳೀಯ, ಅನುಕಂಪ ಕಾರ್ಡ್ ನಿಖಿಲ್‌ಗೆ ಕೈ ಕೊಟ್ಟಿತಾ?
ಕಳೆದ ಎರಡು ಎಲೆಕ್ಷನ್‌ನಲ್ಲಿ ಯೋಗೇಶ್ವರ್ ಸೋಲು ಕಂಡಿದ್ದರು. ಇದರಿಂದ ಯೋಗೇಶ್ವರ್ ಬಗ್ಗೆ ಕ್ಷೇತ್ರದಲ್ಲಿ ಅನಕಂಪ ಸೃಷ್ಟಿಯಾಗಿತ್ತು. ಇನ್ನೊಂದು ಮಹತ್ವದ ವಿಚಾರ ಅಂದ್ರೆ, ಯೋಗೇಶ್ವರ್ ಸ್ಥಳೀಯ ಅಭ್ಯರ್ಥಿ ಅನ್ನೋದು ಇತ್ತು. ಅದೆಲ್ಲವೂ ಚುನಾವಣೆಯಲ್ಲಿ ಲೆಕ್ಕಾಚಾರಕ್ಕೆ ಬಂತು. ಹಾಗೇ ಕಳೆದ ಲೋಕಸಮರದ ವೇಳೆ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಮಂಜುನಾಥ್ ಗೆಲ್ಲಿಸುವಲ್ಲಿ ಯೋಗೇಶ್ವರ್ ಶ್ರಮಿಸಿದ್ರು. ಹೀಗಾಗಿಯೇ ತಮ್ಗೆ ಈ ಬಾರಿಯ ದೋಸ್ತಿ ಟಿಕೆಟ್ ಬೇಕು ಅಂತಾ ಪಟ್ಟು ಹಾಕಿದ್ರು. ಬಟ್, ಕ್ಯಾಂಪೇನ್ ವೇಳೆ ಕುಮಾರಸ್ವಾಮಿ ಅವ್ರು ತಮಗೆ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಬಂದಿದ್ದೇನೆ ಅನ್ನೋದನ್ನು ಹೇಳ್ಕೊಂಡಿದ್ರು. ಅದು ಯೋಗೇಶ್ವರ್‌ಗೆ ಮತವಾಗಿಸಿದ್ರೆ, ನಿಖಿಲ್‌ಗೆ ಆಘಾತ ತಂದಿದೆ.
ಡಿಕೆ ಬ್ರದರ್ಸ್ ಪ್ರತೀಕಾರ, ಜಿಲ್ಲೆಯಲ್ಲಿ ದಳ ಖಾಲಿ ಖಾಲಿ!
ರಾಮನಗರ ಜಿಲ್ಲೆಯಲ್ಲಿ ಇರೋದು ನಾಲ್ಕು ವಿಧಾನಸಭಾ ಕ್ಷೇತ್ರ. ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ. ಈ ನಾಲ್ಕು ಕ್ಷೇತ್ರಗಳ ಪೈಕಿ ಜೆಡಿಎಸ್ ಬುಟ್ಟಿಯಲ್ಲಿ ಇದ್ದಿದ್ದು ಅಂದರೆ ಅದು ಚನ್ನಪಟ್ಟಣ ಕ್ಷೇತ್ರ ಮಾತ್ರ. ಆದ್ರೆ, ಈಗ ಆ ಕ್ಷೇತ್ರವೂ ದಳಪತಿಗಳ ಕೈತಪ್ಪಿ ಹೋಗಿದೆ. ಹೀಗಾಗಿ ಇಡೀ ರಾಮನಗರ ಜಿಲ್ಲೆಯಲ್ಲಿ ದಳ ಖಾಲಿ ಖಾಲಿ ಅನ್ನುವಂತಾಗಿದೆ. ಇಂತಾವೊಂದು ವಾತಾವರಣ ಸೃಷ್ಟಿ ಮಾಡಬೇಕು ಅನ್ನೋದು ಡಿಕೆ ಬ್ರದರ್ಸ್ ಟಾರ್ಗೆಟ್ ಆಗಿತ್ತು. 2023ರ ವಿಧಾನಸಭೆಯಲ್ಲಿಯೇ ಅಣ್ಣ ತಮ್ಮಂದಿರು ಎಫರ್ಟ್ ಹಾಕಿದ್ರು. ಆದ್ರೆ, ಈಗ ಸಕ್ಸಸ್ ಆಗಿದ್ದಾರೆ. ಆದ್ರೆ, ರಾಜಕೀಯಲ್ಲಿ ಕಾಲಚಕ್ರ ಅನ್ನೋದು ಇರುತ್ತೆ. ಅಲ್ಲಿ ಮೇಲೆ ಹೋದವರು ಕೆಳಗೆ ಬರಬೇಕು. ಹಾಗೇ ಕೆಳಗೆ ಹೋದವರು ಮೇಲೆ ಹೋಗುತ್ತಾರೆ. ಹೀಗಾಗಿ ದಳಪತಿಗಳು ಅಂತಾ ಸಮಯಕ್ಕಾಗಿ ಕಾಯಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ