/newsfirstlive-kannada/media/post_attachments/wp-content/uploads/2025/02/Srilanka-Monkey.jpg)
ತ್ರೇತಾಯುಗದಲ್ಲಿ ಸೀತಾ ಮಾತೆಗಾಗಿ ಲಂಕೆಗೆ ಹೋಗಿದ್ದ ಆಂಜನೇಯನನ್ನು ಕೆಣಕಿದ ರಾವಣನ ಲಂಕೆಯೇ ಸುಟ್ಟು ಭಸ್ಮವಾಯಿತು. ಅದೇ ಲಂಕೆಯಲ್ಲಿ ಇದೀಗ ಆಂಜನೇಯನ ಪ್ರತಿರೂಪ ಎಂದೇ ಹೇಳಲಾಗುವ ವಾನರ ಒಂದು ಬೆಚ್ಚಿ ಬೀಳಿಸುತ್ತಿದೆ. ಇಡೀ ಶ್ರೀಲಂಕಾವನ್ನೇ ಕತ್ತಲಿಗೆ ತಳ್ಳಿದೆ ಒಂದೇ ಒಂದು ಕಪಿ.
ಇದನ್ನೂ ಓದಿ: 35 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಕೇಸ್; ಮಗಳ ಚಿತಾಭಸ್ಮಕ್ಕಾಗಿ ಹೋರಾಡುತ್ತಿದ್ದ ಶ್ರದ್ಧಾ ವಾಕರ್ ತಂದೆ ಹಠಾತ್ ನಿಧನ
ಒಂದೇ ದಿನ.. ಒಂದೇ ಕಪಿ.. ಇಡೀ ದೇಶ ಕತ್ತಲು!
ಫೆಬ್ರವರಿ 9ರಂದು ಇಡೀ ಶ್ರೀಲಂಕಾ ಕತ್ತಲಿನಲ್ಲಿ ಇರುವಂತಾಗಿದೆ. ಹೀಗೆ ಒಂದಿಡೀ ದೇಶವನ್ನು ಕತ್ತಲಿಗೆ ದೂಡಿದ್ದು ಒಂದೇ ಒಂದು ಕಪಿ ಅನ್ನೋ ವಿಚಾರವೇ ಇದೀಗ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಭಾನುವಾರ ಖುಷಿಯಲ್ಲೇ ಇದ್ದ ದ್ವೀಪರಾಷ್ಟ್ರ ಶ್ರೀಲಂಕಾ ಬೆಳಗ್ಗೆ 11.30ಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲದೇ ಪರದಾಡುವಂತಾಯಿತು. ದಕ್ಷಿಣ ಕೊಲಂಬೋದಲ್ಲಿ ಒಂದೇ ಒಂದು ಕೋತಿ ಮಾಡಿದ ಕಿತಾಪತಿಗೆ ಇಡೀ ದೇಶವೇ ವಿದ್ಯುತ್ ಸಂಪರ್ಕವಿಲ್ಲದೇ ಒದ್ದಾಡುವಂತಾಗಿದೆ. ಈ ಹಿಂದೆ 2022ರಲ್ಲಿ ಶ್ರೀಲಂಕಾ ಎದುರಿಸಿದ್ದ ಮಹಾ ಆರ್ಥಿಕ ಮುಗ್ಗಟ್ಟಿನ ಸಂದರ್ಭ ಇಂಧನ ವ್ಯತ್ಯಯದಿಂದಾಗಿ 13 ಗಂಟೆ ಕಾಲ ವಿದ್ಯುತ್ ಇಲ್ಲದೇ ಇಡೀ ದೇಶ ಒದ್ದಾಡಿತ್ತು.
ಆ ಒಂದು ಕೋತಿ ಮಾಡಿದ್ದು ಎಂತಹ ಕಿತಾಪತಿ ಗೊತ್ತಾ?
ಶ್ರೀಲಂಕಾದ ಇಂಧನ ಸಚಿವ ಕುಮಾರ ಜಯಕೋಡಿ ಅದೊಂದು ಕೋತಿ ಮಾಡಿದ ಕಿತಾಪತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಇಡೀ ದೇಶಕ್ಕೆ ವಿದ್ಯುತ್ ಸರಬರಾಜು ಮಾಡುತ್ತಿದ್ದ ಗ್ರಿಡ್ ಟ್ರಾನ್ಸ್ಫಾರ್ಮರ್ಗೆ ಒಂದು ಕೋತಿ ತಾಕಿತ್ತು. ಇದೇ ಕಾರಣಕ್ಕೆ ವಿದ್ಯುತ್ ಸಂಚಾರ ನಿಲ್ಲುವಂತಾಗಿದೆ. ನಮ್ಮ ಎಂಜಿನಿಯರ್ಗಳು ದುರಸ್ಥಿ ಕೆಲಸ ಮಾಡುತ್ತಿದ್ದು, ಆದಷ್ಟು ಬೇಗ ವಿದ್ಯುತ್ ಸರಬರಾಜು ಮೊದಲಿನಂತೆ ಸಿಗಲಿದೆ ಎಂದು ಖುದ್ದು ಸಚಿವ ಜಯಕೋಡಿ ಹೇಳಿದ್ದಾರೆ. ಮತ್ತೊಮ್ಮೆ ಇಂಥಾ ಅಡಚಣೆ ಆಗದಂತೆ ನೋಡಿಕೊಳ್ಳೋದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಅನ್ನೋ ಸಂಗತಿಯನ್ನೂ ಹಂಚಿಕೊಂಡಿದ್ದಾರೆ. ಅಂದು ಮಾರುತಿ.. ಇಂದು ಮಂಗ ಲಂಕನ್ನರನ್ನ ನಿದ್ದೆಗಡಿಸಿದಂತಾಗಿದೆ.
ಕೊನೆಗೆ ಸಿಲೋನ್ ಎಲೆಕ್ಟ್ರಿಕ್ ಬೋರ್ಡ್ ಹೇಳಿದ್ದು ಏನು?
ದ್ವೀಪ ರಾಷ್ಟ್ರ ಶ್ರೀಲಂಕಾದ ರಾಜಧಾನಿ ಕೊಲಂಬೋದಿಂದ 28 ಕಿ.ಮೀ ದೂರದಲ್ಲಿರೋ ಪಣದುರ ಗ್ರಿಡ್ ಸಬ್ ಸ್ಟೇಷನ್ ಬಳಿ ಇದ್ದ ಟ್ರಾನ್ಸ್ಫಾರ್ಮರ್ ಅನ್ನ ಕೋತಿ ಮುಟ್ಟಿದ್ದರಿಂದಾಗಿಯೇ ಬೆಳಗ್ಗೆ 11.30 ಇಂದ ಸಂಜೆ 5.30ರವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಿದೆ ಅಂತ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ನ ಚೇರ್ಮನ್ ಡಾ. ತಿಲಕ್ ಸಿಯಾಂಬಲಪಟಿಯಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಕೋತಿಗೆ ಏನಾಗಿದೆ? ಅನ್ನೋ ಬಗ್ಗೆ ಬಹುಪಾಲು ಶ್ರೀಲಂಕಾ ಸುದ್ಧಿ ಸಂಸ್ಥೆಗಳು ಹೇಳಿಲ್ಲ. ಆದರೆ, ಕೋತಿ ಮಾಡಿದ ಕಿತಾಪತಿಗೆ ಇಡೀ ದೇಶವೇ ರೋಸಿ ಹೋಗಿದೆ.
ವರದಿ: ಬಸವರಾಜು ಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ