/newsfirstlive-kannada/media/post_attachments/wp-content/uploads/2025/02/BUDGET-2025-1.jpg)
ಕೇಂದ್ರ ಹಣಕಾಸು ಸಚಿವೆ ಇಂದು 2025-26ರ ಸಂಪೂರ್ಣ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಅನೇಕ ಸವಾಲುಗಳು ಅವರ ಮುಂದೆ ಇವೆ. ಜಿಡಿಪಿ ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಮಟ್ಟಕ್ಕೆ ಕುಸಿದಿದೆ. ಶೇಕಡಾ 6.4 ರಷ್ಟು ದೇಶದ ಜಿಡಿಪಿ ಬಂದು ನಿಂತಿದೆ. ಹಣದುಬ್ಬರವು ಕೂಡ ಯಥಾಸ್ಥಿತಿಯಾಗಿ ಎತ್ತರದಲ್ಲಿಯೇ ನಿಂತಿದೆ. ಹಿಗಾಗಿ ಈ ಬಾರಿ ಹಣಕಾಸು ಸಚಿವೆ ಮಂಡಿಸುವ ಬಜೆಟ್ನಲ್ಲಿ ಜನಸಾಮಾನ್ಯರು ಅದರಲ್ಲೂ ಮಧ್ಯಮ ವರ್ಗದ ಕುಟುಂಬಗಳು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿವೆ.
ಇದನ್ನೂ ಓದಿ:BREAKING: ಬಜೆಟ್ಗೂ ಮೊದಲೇ ಗುಡ್ನ್ಯೂಸ್.. ಸಿಲಿಂಡರ್ ಬೆಲೆಯಲ್ಲಿ ಕೊಂಚ ಇಳಿಕೆ..
ಆರ್ಥಿಕ ತಜ್ಞರು ತೆರಿಗೆ ನೀತಿಯಲ್ಲಿ ಕೊಂಚ ನಿರಾಳತೆ ತರಲೇಬೇಕು ಎಂದು ಹೇಳುತ್ತಿದ್ದಾರೆ. ಈ ವರ್ಷದ ಸಾಲಿನ ಬಜೆಟ್ನಲ್ಲಿ ತೆರಿಗೆ ಮಿತಿಯಲ್ಲಿ ಏನಾದರೂ ಬದಲಾವಣೆ ಆಗುತ್ತದೆಯಾ ನೋಡಬೇಕು. ಒಂದು ವರದಿಗಳ ಪ್ರಕಾರ ತೆರಿಗೆ ನೀತಿಯಲ್ಲಿನ ಸುಧಾರಣೆಯೇ ಈ ಬಜೆಟ್ ಪ್ರಮುಖ ಅಂಶವಾಗಿದೆ ಎಂದು ಹೇಳಲಾಗುತ್ತಿದೆ. ತೆರಿಗೆ ವಿನಾಯಿತಿ ಮಿತಿಯನ್ನು 10 ಲಕ್ಷದವರೆಗೆ ಏರಿಸುವ ಸಂಭಾವ್ಯವಿದೆಯೆಂದು ಭಾವಿಸಲಾಗಿದೆ. ಅಲ್ಲದೇ 15-ರಿಂದ 20 ಲಕ್ಷ ಆದಾಯದವರಿಗೆ ಶೇಕಡಾ 25ರಷ್ಟು ತೆರಿಗೆಯನ್ನು ವಿಧಿಸಿ ಹೊಸ ತೆರಿಗೆ ನೀತಿಯನ್ನು ತರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಈ ಸುಧಾರಣೆಗಳು ಮಧ್ಯಮ ವರ್ಗದ ಜನರಿಗೆ ತುಂಬಾ ಅವಶ್ಯಕವಾಗಿವೆ ಹಾಗೂ ಅದರ ಬಗ್ಗೆ ನಿರೀಕ್ಷೆಗಳು ಕೂಡ ಇವೆ. ಇದರಿಂದ ಏರಿಕೆ ಗತಿಯಲ್ಲಿ ಸಾಗುತ್ತಿರುವ ಹಣದುಬ್ಬರಕ್ಕೆ ಬ್ರೇಕ್ ಬೀಳುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ತೆರಿಗೆ ಸುಧಾರಣೆ
ತೆರಿಗೆ ಸುಧಾರಣೆಯ ಜೊತೆ ಜೊತೆಗೆ ಮೂಲಸೌಕರ್ಯಗಳ ಅಭಿವೃದ್ಧಿಯೂ ಕೂಡ ಅವಶ್ಯಕ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಮೂಲಸೌಕರ್ಯಗಳ ಮೇಲೆ ಭಾರೀ ಮೊತ್ತದ ಹೂಡಿಕೆಯಾಗುವ ನಿರೀಕ್ಷೆಯಿದೆ. ಉದ್ಯೋಗಗಳ ಸೃಷ್ಟಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಖಾಸಗಿ ಕಂಪನಿಗಳ ಹೂಡಿಕೆಯನ್ನು ಸೆಳೆದು ಉದ್ಯೋಗ ಸೃಷ್ಟಿಯ ಮೂಲಕ ಪ್ರಧಾನ ಮಂತ್ರಿ ಮೋದಿಯವರ ವಿಕಸಿತ ಭಾರತ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ.
ಅತಿಹೆಚ್ಚು ಗಮನ ಕೊಡುವ ವಲಯಗಳು ಯಾವುವು?
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಚ್ಚು ಗಮನ ಹರಿಸಿದ್ದು ರೈಲ್ವೆ ವಲಯದ ಸುಧಾರಣೆಗೆ. ಈ ಬಾರಿಯೂ ಕೂಡ ಅದರತ್ತ ಹೆಚ್ಚು ಗಮನ ಕೊಡುವ ನಿರೀಕ್ಷೆಯಿದೆ. ರೈಲ್ವೆ ವಲಯದ ಆಧುನಿಕರಣಕ್ಕೆ ಸುಮಾರು 1 ಲಕ್ಷ ಕೋಟಿ ರೂಪಾಯಿ ಅನುದಾನ ಮೀಸಲಿಡುವ ಸಾಧ್ಯತೆ ಇದೆ. ಇನ್ನು ರಕ್ಷಣಾ ವಲಯಕ್ಕೆ ಸುಮಾರು 6 ಲಕ್ಷ ಕೋಟಿ ರೂಪಾಯಿ ಅನುದಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೃಷಿ ವಲಯಕ್ಕೆ ಈ ಬಾರಿ ಹೆಚ್ಚು ಅನುದಾನ ಸಿಗುವ ನಿರೀಕ್ಷೆ ಇದೆ ಸುಮಾರು 1.35 ಲಕ್ಷ ಕೋಟಿಯಿಂದ 1.40 ಲಕ್ಷ ಕೋಟಿವರೆಗೆ ಅನುದಾನ ನೀಡುವ ನಿರೀಕ್ಷೆಯಿದ್ದು ಈ ಮೂಲಕ ರೈತರ ಕಲ್ಯಾಣ ಹಾಗೂ ಕೃಷಿವಲಯದ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ತೆರಿಗೆಯಿಂದ ಬಿಗ್ ರಿಲೀಫ್..? ಚರ್ಚೆ ಹುಟ್ಟು ಹಾಕಿದ ಮೋದಿಯ ಈ ಹೇಳಿಕೆ
ಈಗಾಗಲೇ ಹಣಕಾಸು ಸಚಿವಾಲಯ ತನ್ನ ಬಜೆಟ್ನ್ನು ಸಂಪೂರ್ಣವಾಗಿ ತಯಾರಿ ಮಾಡಿಕೊಂಡಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಎಲ್ಲರ ನಿರೀಕ್ಷೆಗಳು ಎಷ್ಟು ನಿಜವಾಗಲಿವೆ ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ