/newsfirstlive-kannada/media/post_attachments/wp-content/uploads/2024/01/RAMULU-1.jpg)
ಬಿಜೆಪಿಯಲ್ಲಿ ಆಂತರಿಕ ಕಲಹದ ಟೆನ್ಷನ್ ಇಳಿಯುತ್ತಿಲ್ಲ. ಬಣ ಬಡಿದಾಟವನ್ನ ಬಗೆಹರಿಸಲು ಹೈಕಮಾಂಡ್ ಹೆಣಗಾಡ್ತಿದ್ರೆ, ರಾಜ್ಯಕ್ಕೆ ಬಂದ ಉಸ್ತುವಾರಿ ರಾಧಾ ಮೋಹನ್ ದಾಸ್ ಈ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಸಂಡೂರು ಬೈಎಲೆಕ್ಷನ್ ಸೋಲಿನ ಹೊಣೆಯನ್ನ ತಮ್ಮ ನೆತ್ತಿಗೆ ಕಟ್ಟುವ ಯತ್ನಕ್ಕೆ ರಾಮುಲು ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲ, ಪಕ್ಷಕ್ಕೆ ರಾಜೀನಾಮೆ ನೀಡ್ತಿನಿ ಅನ್ನೋ ಮಟ್ಟಿಗೆ ಜಗಳ ತಾರಕಕ್ಕೇರಿದೆ.
ಹೈಕಮಾಂಡ್ ಮದ್ದರೆದ್ರೂ ಬಿಜೆಪಿಯೊಳಗಿನ ಕಿಚ್ಚು ಆರುತ್ತಿಲ್ಲ. ಅಶಿಸ್ತಿನ ವಿರುದ್ಧ ಕ್ರಮಕ್ಕೆ ಆಗ್ರಹ ಹೆಚ್ಚಾಗ್ತಿರುವ ಬಣಗಳ ನಡುವೆ ಸಿಡಿಗುಂಡುಗಳು ಸ್ಫೋಟ ಆಗ್ತಿವೆ. ರಾಜ್ಯ ಬಿಜೆಪಿ ಬಣ ಬಡಿದಾಟಕ್ಕೆ ವಿರಾಮ ಹಾಕಲು ಟೆನ್ಶನ್ನಲ್ಲೇ ಹೆಣಗ್ತಿರುವ ದೆಹಲಿ ದೊರೆಗಳು ನಿನ್ನೆ ಘಟನೆಗೆ ಬೆಚ್ಚಿಬಿದ್ದಿದೆ. ಭಿನ್ನಮತ ಶಮನಕ್ಕೆ ಅಂತ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ರನ್ನ ಕಳಿಸಿತ್ತು. ಆದ್ರೆ, ರಾಧಾಮೋಹನ್ ದಾಸ ಆಡಿದ ಮಾತುಗಳೇ ಕೋರ್ ಕಮಿಟಿ ಸಭೆಯಲ್ಲಿ ಬೆಂಕಿ ಧಗಧಗಿಸಿದೆ..
ಸಂಡೂರು ಬೈಎಲೆಕ್ಷನ್ ಸೋಲು, ಕೆರಳಿ ನಿಂತ ಬಳ್ಳಾರಿ ರಾಮುಲು!
ಇದು ಯುದ್ಧಕಾಂಡ. ಗಣಿನಾಡು ಬಳ್ಳಾರಿಯಲ್ಲಿ ಮೊಳಕೆಯೊಡೆದ ಯುದ್ಧಕಾಂಡ. ಸಂಡೂರು ಸೋಲಿನ ವಿಚಾರ ನಿನ್ನೆ ಕೋರ್ ಕಮಿಟಿ ಸಭೆಯಲ್ಲಿ ಪ್ರತಿಧ್ವನಿಸಿದೆ. ಸಂಡೂರು ಸೋಲು ನಿನ್ನೆ ಕೋರ್ ಕಮಿಟಿಯಲ್ಲಿ ಧಗಧಗಿಸಿದೆ. ಅಷ್ಟಕ್ಕೂ ಸಭೆಯಲ್ಲಿ ಆಗಿದ್ದೇನು? ರಾಮುಲು ಪಕ್ಷ ಬಿಡುವ ಮಾತನಾಡಿದ್ದೇಕೆ? ಈ ಬಗ್ಗೆ ಇಂಚಿಂಚು ಇಲ್ಲಿದೆ.
ರಾಧಾ ಮೋಹನ್ ದಾಸ್ಈಗ ಸಂಡೂರು ಬೈಎಲೆಕ್ಷನ್ನಲ್ಲಿ ಏನಾಯ್ತು? ಶ್ರೀರಾಮುಲು ಅಲ್ಲಿ ಏನ್ ಕೆಲಸನೇ ಮಾಡ್ಲಿಲ್ಲ. ಅಂದಿದ್ದಕ್ಕೆ ಬಿ.ಶ್ರೀರಾಮುಲು ಅಗರವಾಲ್ ಅವರೇ ಏನ್ ಮಾತನಾಡುತ್ತಿದ್ದೀರಿ. ನಿಮ್ಮ ಆರೋಪವನ್ನ ಸಾಕ್ಷಿ ಸಮೇತ ಸಾಬೀತು ಮಾಡಿ, ಮಾಡಲೇಬೇಕು ನೀವು ಎಂದಿದ್ದಾರೆ.
ಅದು ಮಾತ್ರವಲ್ಲ ಬಿ.ಶ್ರೀರಾಮುಲು ನಿಮಗೆ ಗೊತ್ತಿಲ್ಲ. ಇತಿಹಾಸ ತೆಗೆದು ನೋಡಿ. ಸಂಡೂರು ಕ್ಷೇತ್ರದಲ್ಲಿ ಒಂದೇ ಒಂದು ಬಾರಿ ಕೂಡ ಬಿಜೆಪಿ ಗೆದ್ದಿಲ್ಲ. ನಾಮಪತ್ರ ಸಲ್ಲಿಕೆ ದಿನದಿಂದಲೂ ನಾನು ಅಭ್ಯರ್ಥಿ ಪರವಾಗಿ ಓಡಾಡಿದ್ದೀನಿ ಎಂದು ಹೇಳಿದಾಗ, ರಾಧಾ ಮೋಹನ್ ದಾಸ್ ಸರಿ, ಪಕ್ಷದ ಅಭ್ಯರ್ಥಿ ಗೆಲ್ಲಿಸುವಲ್ಲಿ ನೀವು ಕೆಲಸ ಮಾಡಿದ್ರಾ? ಮಾಡಲಿಲ್ಲ ಎಂದಿದ್ದಾರೆ. ಇದಕ್ಕೆ ಮತ್ತಷ್ಟು ಬೇಜಾರು ಮಾಡಿಕೊಂಡ ಬಿ.ಶ್ರೀರಾಮುಲು ನೋಡಿ ನೀವು ಏನೇನೋ ಮಾತಾನಾಡಬೇಡಿ. ನಿಮಗೆ ಯಾರೋ ಕಿವಿ ಚುಚ್ಚಿ ಈ ಮಾತು ಹೇಳಿದ್ದಾರೆ.ಪಕ್ಷ ವಿರೋಧಿ ಮಾಡಿದ್ದೇನೆ ಎಂಬ ಮಾತು ನಿಮಗೆ ಯಾರೋ ಹೇಳಿದ್ದಾರೆ ಹೇಳಿ ಎಂದಿದ್ದಾರೆ.
ಇದನ್ನೂ ಓದಿ:ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಟಿ ರವಿ ವಿರುದ್ಧ ಗರಂ; ಮೋದಿ ಬಗ್ಗೆ ಹಾಗೇ ಮಾತಾಡಬೇಡಿ ಎಂದ ವರಿಷ್ಠರು
ಇದಕ್ಕೆ ರಾಧಾ ಮೋಹನ್ ದಾಸ್ ಇಲ್ಲ, ನೀವು ಪಕ್ಷ ವಿರೋಧಿ ಕೆಲಸ ಮಾಡಿದ್ದೀರಿ ಎಂದು ನೇರವಾಗಿ ಆರೋಪ ಮಾಡಿದಾಗ ಬಿ.ಶ್ರೀರಾಮುಲುಅಧ್ಯಕ್ಷರೇ ವಿಜಯೇಂದ್ರರೆ. ಇದು ತಪ್ಪು. ನನಗೆ ಕರೆದು ಅವಮಾನ ಮಾಡುವಂತಹ ಕೆಲಸ ಆಗ್ತಿದೆ. ನೀವು ನನ್ನ ಸಹಾಯಕ್ಕೆ ಬರ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಕ್ಕೆ ವಿಜಯೇಂದ್ರ ಅವರು ರಾಮುಲು ಅವರೇ ನನ್ನ ವಿರುದ್ಧವೂ ಹೀಗೆ ಹೇಳಿದ್ದಾರೆ ಎಂದಿದ್ದಾರೆ.
ಬಿ.ಶ್ರೀರಾಮುಲು ನಾನು ಎರಡು ಎಲೆಕ್ಷನ್ನಲ್ಲಿ ಸೋತ ನೋವಿನಲ್ಲಿದ್ದಾಗ ಮತ್ತೆ ನೋವು ಮಾಡ್ತಿದ್ದೀರಿ. ನಿಮ್ಮ ಮಾತೇ ನಿಜ ಅಂದ್ರೆ, ನನಗೆ ಬಿಜೆಪಿ ಸಹವಾಸವೇ ಸಾಕು, ರಾಜೀನಾಮೆ ನೀಡ್ತೀನಿ ಎನ್ನುವ ಮಟ್ಟಕ್ಕೆ ಹೋದಾಗ ಸಂಸದ ಬಸವರಾಜ್ ಬೊಮ್ಮಾಯಿ ರಾಮುಲು ಹಾಗೆ ಹೇಳಬೇಡಿ. ಅದೇನಂತ ನೋಡೋಣ ಎಂದು ಸಮಾಧಾನ ಮಾಡಿದ್ದಾರೆ.
ಇದನ್ನೂ ಓದಿ: ಶೀತಲ ಸಮರದ ಮಧ್ಯೆ ಡಿ.ಕೆ ಶಿವಕುಮಾರ್- ಜಾರಕಿಹೊಳಿ ಮುಖಾಮುಖಿ.. ಒಂದೇ ವೇದಿಕೆಯಲ್ಲಿ ಹೇಗಿದ್ದರು?
ಸದಾನಂದ ಗೌಡ, ರಾಧಾಮೋಹನ್ ಜೀ ಉಪ ಚುನಾವಣೆ ಸೋಲಿನ ಕುರಿತ ವರದಿಯನ್ನೇ ನಾನು ಕೊಟ್ಟಿಲ್ಲ. ಅದಕ್ಕೂ ಮೊದಲೇ ನೀವು ಹೇಗೆ ಕೆಲಸ ಮಾಡಿಲ್ಲ ಅಂತಿರಿ ಎಂದು ಕೇಳಿದ್ದಾರೆ ಇದಕ್ಕೆ ರಾಧಾಮೋಹನ್ ದಾಸ್ ಆಯ್ತು ವಿಚಾರ ಇಲ್ಲಿಗೆ ಬಿಡಿ. ರಾಮುಲುಜೀ ಆಯ್ತು ಆ ಬಗ್ಗೆ ನೋಡೋಣ ಎಂದು ಸಮಾಧಾನ ಮಾಡಿದ್ದಾರೆ.
ಇದಿಷ್ಟು ಒಳಗೆ ನಡೆದ ಜೋರು ಮಾತಿನ ಗಲಾಟೆ. ಕೋರ್ ಕಮಿಟಿ ಸಭೆ ಅಂತ್ಯ ಆಗ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಲು ನಿಂತ ರಾಮುಲುರನ್ನ ಓಡೋಡಿ ಬಂದು ಸಿ.ಟಿ.ರವಿ, ವಿಜಯೇಂದ್ರ ತಡೆದಿದ್ದಾರೆ. ಆದ್ರೆ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಸಂಘದ ಇಬ್ಬರು ಪ್ರಮುಖರಿಗೆ ಫೋನ್ ಮಾಡಿದ ರಾಮುಲು ಅಸಮಾಧಾನ ತೋಡ್ಕೊಂಡಿದ್ದಾರೆ..
ಈ ನಡುವೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಾಸಕ ವಿ.ಸುನಿಲ್ಕುಮಾರ್ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟ ವಿ.ಸುನಿಲ್ ಕುಮಾರ್, ಹುದ್ದೆಯನ್ನ ಸಮರ್ಥವಾಗಿ ನಿಭಾಯಿಸಲು ಪೂರ್ಣ ಪ್ರಮಾಣದ ಸಮಯ ಕೊಡಬೇಕು. ಆದ್ರೆ, ಪಕ್ಷದ ಜವಾಬ್ದಾರಿ ನಿಭಾಯಿಸಲು ವೈಯಕ್ತಿಕ ಸಮಸ್ಯೆ ಅಡ್ಡಿಯಾಗ್ತಿದೆ ಅಂತ ಕಾರಣ ಕೊಟ್ಟಿದ್ದಾರೆ.
ಈ ಗಲಾಟೆಗಳ ಮಧ್ಯೆ ರಾಜ್ಯ ನಾಯಕರಿಗೆ ರಾಧಾಮೋಹನ್ ದಾಸ್ ಪಕ್ಷ ಸಂಘಟನೆಗಾಗಿ ಎಚ್ಚರಿಕೆ ಹೆಜ್ಜೆ ಇಡುವಂತೆ ಕಿವಿಮಾತು ಹೇಳಿದ್ದಾರೆ.. ಸಂಘಟನೆ ಬಲಪಡಿಸಲು ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡುವ ಮಾನದಂಡ ನಿಗದಿ ಮಾಡಿದ್ದಾರೆ.
39 ಸಂಘಟನಾತ್ಮಕ ಜಿಲ್ಲೆಯಲ್ಲಿ ಎಸ್‌ಸಿ-ಎಸ್‌ಟಿ, ಓಬಿಸಿ ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯತೆ ನೀಡಬೇಕು. 45 ರಿಂದ 60 ವರ್ಷ ವಯೋಮಾನದವರಿಗೆ ಮಾತ್ರ ಜಿಲ್ಲಾಧ್ಯಕ್ಷ ಹುದ್ದೆಗೆ ಅವಕಾಶ ನೀಡೋಣ. ಅತಿ ಚಿಕ್ಕ ವಯಸ್ಸಿನವರು ಬೇಡ. 60 ವರ್ಷದ ಮೇಲ್ಪಟ್ಟವರು ಬೇಡ ಎಂಬ ನಿರ್ಧಾರ ತಿಳಿಸಿದ್ದಾರೆ.. ಕೋರ್ ಕಮಿಟಿ ಸದಸ್ಯರಿಗೂ ಹೆಸರು ಸೂಚಿಸಲು ಅವಕಾಶ ನೀಡಲಾಗಿದೆ. ಆ ಹೆಸರನ್ನು ಹೈಕಮಾಂಡ್‌ಗೆ ಕಳಿಸಬೇಕು. ಆ ಬಳಿಕ ಜಿಲ್ಲಾಧ್ಯಕ್ಷರ ಹೆಸರನ್ನ ಹೈಕಮಾಂಡ್ ಫೈನಲ್ ಮಾಡಲಿದೆ ಅಂತ ಕೋರ್ ಕಮಿಟಿ ಸಭೆಯಲ್ಲಿ ಅಗರವಾಲ್ ಪ್ರಸ್ತಾಪಿಸಿದ್ದಾರೆ.. ಮುಂದಿನ ಚುನಾವಣೆ ಮತ್ತು ಕಾಂಗ್ರೆಸ್ ಗ್ಯಾರೆಂಟಿಗಳ ಕುರಿತು ಗಮನಹರಿಸಲು ಸೂಚನೆ ನೀಡಿರುವ ಅಗರವಾಲ್, ಮಹಿಳಾ ಮತಗಳನ್ನ ಸೆಳೆಯುವಂತೆ ಹುಕುಂ ನೀಡಿದ್ದಾರೆ.
ಇದನ್ನೂ ಓದಿ:ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಯೋಗ ಕ್ಷೇಮ ವಿಚಾರಿಸಿದ ಸಿಎಂ ಸಿದ್ದರಾಮಯ್ಯ; ಆರೋಗ್ಯದ ಬಗ್ಗೆ ಹೇಳಿದ್ದೇನು?
ಇನ್ನು, ರೇಣುಕಾಚಾರ್ಯ ನೇತೃತ್ವದ ತಂಡದಿಂದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಉಸ್ತುವಾರಿ ಭೇಟಿ ನಡೆದಿದೆ. ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲೂ ಮಾಹಿತಿ ಸಂಗ್ರಹಿಸಿರುವ ರಾಧಾ ಮೋಹನ್ ದಾಸ್, ಈ ಮಾಹಿತಿ ಆಧರಿಸಿ ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ. ಒಟ್ಟಾರೆ, ಬಿಜೆಪಿಯಲ್ಲಿ ಬಳ್ಳಾರಿ ಬಣ ಬಡಿದಾಟ ಬಾಂಬ್ನಂತೆ ಸಿಡಿದಿದ್ದು, ಈ ರೋಷಾಗ್ನಿ ಆರಿಸಲು ಹರಸಾಹಸ ನಡೆದಿದೆ.
ಇನ್ನು ರಾಧಾಮೋಹನ್ ದಾಸ್ ಮಾತನಾಡಿರುವ ಬಗ್ಗೆ ನ್ಯೂಸ್ಫಸ್ಟ್ ಜೊತೆ ಫೋನ್ನಲ್ಲಿ ಮಾತನಾಡಿದ ಶ್ರೀರಾಮುಲು ಜನಾರ್ದನ ರೆಡ್ಡಿ ಅವರ ಉದ್ದೇಶ ಏನಾಗಿದೆ ಅಂದ್ರೆ, ರಾಮುಲು ಅವರು ಏನೆ ಇದ್ರು, ನಮ್ಮಿಂದನೇ ಗೆಲುವು ಆಗ್ಬೇಕು. ನಮ್ಮಿಂದನೇ ಎಲ್ಲಾ ಆಗಬೇಕು ಅಂತ ತಲೆಲೀ ಇದ್ದು, ಅವರು ಇತ್ತೀಚೆಗೆ ನಮ್ಮ ಬಗ್ಗೆ ಕೆಟ್ಟದಾಗಿ ಹೇಳ್ಕೊಂತಾ ಹೋಗ್ತಿದ್ದಾರೆ. ನನಗೆ ನೋಡ್ರಿ, ನನಗೆ ರಾಧಾಮೋಹನ್ ದಾಸ್ ಅವರು ಹೇಳಿದಂತ ಟೈಂನಲ್ಲಿ ನೋವಾಗಿದ್ದಂತು ಸತ್ಯ. ನನಗೆ ಎಷ್ಟು ನೋವಾಗಿದೆ ಅಂದ್ರೆ ಜೀವನದಲ್ಲಿ ನನಗೆ ಡೈಜೆಷನ್ ಮಾಡ್ಕೊಳ್ಳಕ್ಕಾಗದಷ್ಟು ನೋವಾಗಿದೆ. ಯಾಕಂದ್ರೆ ಆ ರೀತಿ ಮಾತಾಡಬಾರದಿತ್ತು. ಬೇಸರ ಆಗಿದೆ ಅಂತ ಹೇಳ್ಕೋತಾಯಿದ್ದೀನಿ. ಪಾರ್ಟಿ ಬಿಡೊ ಅಂತ ಪ್ರಶ್ನೆ ಬರಲ್ಲ. ಪಾರ್ಟಿ ಬಿಡಲ್ಲ. ಅಂತ ಪರಿಸ್ಥಿತಿ ಬಂದ್ರೆ ಹೇಳಿ ಬಿಡ್ತೀನಿ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ