/newsfirstlive-kannada/media/post_attachments/wp-content/uploads/2025/03/bhimavva-shillekyatha-2.jpg)
ದೇಹ ಬಾಗಿದೆ. ಚರ್ಮ ಸುಕ್ಕಾಗಿದೆ. ವಯಸ್ಸಿನ ಭಾರ ಆವರಿಸಿದೆ. ಆದರೆ ಸಾಧನೆಯ ಹಪಹಪಿ ಕಡಿಮೆಯಾಗಿಲ್ಲ. ಉತ್ಸಾಹ ಕುಂದಿಲ್ಲ. 96 ವಸಂತಗಳೇ ಕಳೆದ್ರೂ, ಯುವಕರಿಗೆ ಸೆಡ್ಡು ಹೊಡೆಯುವ ಛಾತಿ ಇರೋರು ಪದ್ಮಶ್ರೀ ಭೀಮವ್ವ ಶಿಳ್ಳೆಕ್ಯಾತರ. ವಿಶ್ವಕ್ಕೆ ತೊಗಲು ಗೊಂಬೆಯಾಟ ಪರಿಚಯಿಸಿದ ನಮ್ಮ ಮಣ್ಣಿನ ಮಗಳು.
ತಮ್ಮ 14ನೇ ವಯಸ್ಸಿನಿಂದ ಇಲ್ಲಿಯವರೆಗೂ ತೊಗಲುಗೊಂಬೆಯಾಟವನ್ನು ಕುಲಕಸುಬಾಗಿ ಮಾಡಿಕೊಂಡು ಬಂದವ್ರು ಭೀಮವ್ವ. ಕೊಪ್ಪಳ ತಾಲೂಕಿನ ಕುಗ್ರಾಮ ಮೋರನಾಳ ಗ್ರಾಮದಲ್ಲಿ 1929ರಲ್ಲಿ ಜನಿಸಿದ ಭೀಮವ್ವ ಶಿಳ್ಳೆಕ್ಯಾತರ, ಅನಕ್ಷರಸ್ಥೆಯಾಗಿದ್ರೂ ವಂಶ ಪಾರಂಪರ್ಯವಾಗಿ ಬಂದ ತೊಗಲುಗೊಂಬೆಯಾಟ ಕಲೆಯನ್ನು ಉಳಿಸಿಕೊಂಡು ಬಂದವರು.
ಇಡೀ ಜಿಲ್ಲೆಯಲ್ಲಿ ಇದೊಂದೇ ಕುಟುಂಬ ನೂರಾರು ವರ್ಷಗಳಿಂದ ತೊಗಲು ಗೊಂಬೆಯಾಟ ಪ್ರದರ್ಶಿಸುತ್ತಾ ಬಂದಿದೆ. ಪೌರಾಣಿಕ ಕಥೆ ಆಧಾರಿತ ರಾಮಾಯಣ, ಕುರುಕ್ಷೇತ್ರ, ವಿರಾಟ ಪರ್ವ, ಲವಕುಶ ಕಾಳಗ, ಕರ್ಣಪರ್ವ, ದ್ರೌಪದಿ ವಸ್ತ್ರಾಪಹರಣ, ಆದಿಪರ್ವ ಸೇರಿ ಮಹಾಭಾರತದ 18 ಪರ್ವಗಳನ್ನ ಪ್ರದರ್ಶಿಸೋ ಹೆಗ್ಗಳಿಕೆ ಭೀಮವ್ವರದ್ದು.
ಇದನ್ನೂ ಓದಿ: ಗೊಂಬೆಯಾಟದ ಭೀಮವ್ವಗೆ ಪದ್ಮಶ್ರೀ.. ಗ್ರಾಮೀಣ ಭಾರತದ ರಿಯಲ್ ಸೂಪರ್ ಸ್ಟಾರ್ಸ್ ಇವ್ರು! ಹೇಗೆ ಗೊತ್ತಾ?
ಭೀಮವ್ವ ಮಗ ಕೇಶಪ್ಪ ಶಿಳ್ಳೆಕ್ಯಾತರ ಹಾಗೂ ಇವರ ಮಕ್ಕಳು ಸೇರಿ ಒಟ್ಟು 6 ಜನರು ಜನರು ಗೊಂಬೆಯಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಭೀಮವ್ವ ಶಿಳ್ಳೆಕ್ಯಾತರ ಅಮೆರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್, ಹಾಲೆಂಡ್ ಮುಂತಾದ ದೇಶಗಳಲ್ಲಿ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನು ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾರೆ.
ಭೀಮವ್ವ ಶಿಳ್ಳೆಕ್ಯಾತರ ಸಾಧನೆಯನ್ನು ಕಂಡು ರಾಜ್ಯ ಸರ್ಕಾರವು ಅವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 1993ರಲ್ಲಿ ತೆಹರಾನ್‌ನಲ್ಲಿ ಬೊಂಬೆ ಉತ್ಸವ ಪ್ರಶಸ್ತಿ, 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಪ್ರಶಸ್ತಿ ಜೊತೆಗೆ 2024ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಮ್ಮ ಮಣ್ಣಿನ ಕಲೆಯನ್ನ ವಿಶ್ವದುಗ್ಗಲಕ್ಕೂ ಪರಿಚಯಿಸಿದ, ಅದರ ಪ್ರಸಾರದಲ್ಲಿ ನಿರತರಾಗಿರೋ ಭೀಮವ್ವ ಶಿಳ್ಳೆಕ್ಯಾತರ ನ್ಯೂಸ್‌ಫಸ್ಟ್‌ನ ಮಹಿಳಾ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ