/newsfirstlive-kannada/media/post_attachments/wp-content/uploads/2024/11/WOMEN-WHISKEY-1.jpg)
ಒಂದು ಕಾಲವಿತ್ತು. ಮಹಿಳೆಯರು ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಸೇರಲು, ಮದ್ಯದ ಮಹಲುಗಳಲ್ಲಿ ಕಾಲಿಡಲು ಹೆದರುವಂತ ಕಾಲ. ಆದ್ರೆ ಕಾಲ ಬದಲಾದಂತೆ, ಸಾಮಾಜಿಕ ವ್ಯವಸ್ಥೆಗಳು ಹಾಗೂ ಆರ್ಥಿಕ ವ್ಯವಸ್ಥೆಗಳು ಬದಲಾಗುತ್ತಾ ಹೋದಂತೆ ಬದುಕುವ ರೀತಿಗಳು ಚೆಂಜ್ ಆದವು. ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಹುಡುಗಿಯರು ಮಹಿಳೆಯರು ಕಾಣಸಿಗಲಾರಂಭಿಸಿದರು. ಪಬ್ ಬಾರ್ಗಳಲ್ಲಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಇರುವ ಡ್ರಿಂಕ್ಗಳನ್ನು ಗುಟುಕರಿಸಲು ಶುರು ಮಾಡಿದರು. ಅವರ ಗ್ಲಾಸ್ಗಳಲ್ಲಿಯೂ ವೈನ್ ಹಾಗೂ ಕಡಿಮೆ ಆಲ್ಕೋಹಾಲ್ ಇರುವ ಮದ್ಯಗಳು ಬೀಳಲು ಆರಂಭಿಸಿದವು. ಆದ್ರೆ ಈಗ ಹೊಸ ಅಧ್ಯಯನ ಹೇಳುತ್ತಿರುವುದು ಬೇರೆ ಕಳೆದ ಹತ್ತು ವರ್ಷಗಳಿಂದ ಭಾರತೀಯ ಮಹಿಳೆಯರು ವೈನ್ನಿಂದ ವಿಸ್ಕಿಗೆ ಶಿಫ್ಟ್ ಆಗಿದ್ದಾರೆ ಎಂದು.
ಭಾರತದ ಆಲ್ಕೋಹಾಲ್ ಜಗತ್ತಿನ ಲೀಡಿಂಗ್ ಕಂಪನಿಯಾದ ಡಿಯಾಜಿಯೋ ಇಂಡಿಯಾ ಹೇಳುವ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಶೇಕಡಾ 64 ರಷ್ಟು ಮಹಿಳೆಯರು ವಿಸ್ಕೀಯತ್ತ ತಮ್ಮ ಪ್ರೀತಿಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಲಾಗಿದೆ. ಬದಲಾದ ಸಾಮಾಜಿಕ ವ್ಯವಸ್ಥೆಯೂ ಈ ಒಂದು ಬದಲಾವಣೆಗೆ ನಾಂದಿಯಾಗಿದೆ ಎಂದು ಕೂಡ ಡಿಯಾಜಿಯೊ ಇಂಡಿಯಾ ಹೇಳಿದೆ.
ಭಾರತದಲ್ಲಿ ಮಹಿಳೆಯರು ವೈನ್ ಬೀಯರ್ನಿಂದ ವಿಸ್ಕೀಗೆ ಶಿಫ್ಟ್ ಆಗಲು ಪ್ರಮುಖ ಕಾರಣ ಅವರು ಆರ್ಥಿಕವಾಗಿ ಸ್ವಾತಂತ್ರ್ಯ ಹೊಂದಿದ್ದು ಎಂದು ಹೇಳಲಾಗಿದೆ. ಸದ್ಯ ಭಾರತದಲ್ಲಿನ ಈ ತಲೆಮಾರಿನ ಮಹಿಳೆಯರು ಆರ್ಥಿಕವಾಗಿ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ತಮ್ಮ ಬದುಕನ್ನ ತಾವೇ ನಿರ್ಧರಿಸಿಕೊಳ್ಳುತ್ತಾರೆ. ಐಟಿ ಬಿಟಿಯಂತಹ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಲಕ್ಷಾಂತರ ರೂಪಾಯಿ ಸಂಬಳವನ್ನು ಪಡೆಯುತ್ತಿದ್ದಾರೆ. ಇದು ಅವರ ಗ್ಲಾಸ್ಗೆ ವಿಸ್ಕಿಎಂಬ ನಶೆಯ ಹಳದಿ ದ್ರವ್ಯ ಬಂದು ಬೀಳುವಂತೆ ಮಾಡಿದೆ.
ಇದನ್ನೂ ಓದಿ:ಎಂಥಾ ಕಾಲ ಬಂತು.. ಗಿಡದ ಜೊತೆ ಡೇಟಿಂಗ್, ರೊಮ್ಯಾನ್ಸ್; ಈ ಹುಡುಗಿ ಕಥೆ ಕೇಳಿದ್ರೆ ಕಳೆದೇ ಹೋಗ್ತೀರಾ!
ಈ ಒಂದು ಬದಲಾವಣೆ ಕಳೆದೆರಡು ವರ್ಷಗಳಲ್ಲಿ ಎಷ್ಟು ಮಟ್ಟಿಗೆ ಬದಲಾವಣೆಯಾಗಿದೆ ಎಂದರೆ, ಎರಡು ವರ್ಷಗಳ ಹಿಂದೆ ಶೇಕಡಾ 24 ರಷ್ಟು ಹೆಣ್ಣು ಮಕ್ಕಳು ವಿಸ್ಕಿಕುಡಿಯುತ್ತಿದ್ದರು ಆದ್ರೆ ಈಗ ಅದರ ಸಂಖ್ಯೆ ಶೇಕಡಾ 40ಕ್ಕೆ ಮುಟ್ಟಿದೆ ಎಂದು ಅಂಕಿ ಅಂಶಗಳು ಇವೆ ಎಂದು ಡಿಯಾಜಿಯೊ ಇಂಡಿಯಾದ ಚೀಫ್ ಮಾರ್ಕೆಟಿಂಗ್ ಆಫೀಸರ್ ರುಚಿರಾ ಜೈಟ್ಲೀ ಹೇಳುತ್ತಾರೆ.
ಇದನ್ನೂ ಓದಿ:11 ಡ್ರೈವಿಂಗ್ ಲೈಸೆನ್ಸ್.. ಬೃಹತ್ ವಾಹನಗಳನ್ನು ಚಲಾಯಿಸಿದ ಭಾರತದ ಮೊದಲ ಮಹಿಳೆ.. ಯಾರೀ ಗಟ್ಟಿಗಿತ್ತಿ?
ಕೇವಲ ವಿಸ್ಕಿಗೆ ಮಾತ್ರವಲ್ಲ, ವಿಸ್ಕಿ ಮೂಲದ ಕಾಕ್ಟೇಲ್ಗೂ ಕೂಡ ಮಹಿಳೆಯರಿಂದ ಭಾರೀ ಡಿಮ್ಯಾಂಡ್ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ. ಪಬ್ ಮತ್ತು ಬಾರ್ಗಳಲ್ಲಿ ಈಗ ಮಹಿಳೆಯರಿಮದ ವಿಸ್ಕಿಗೆ ಡಿಮ್ಯಾಂಡ್ ಜಾಸ್ತಿಯಾಗುತ್ತಿದೆ. ಈ ಹಳದಿ ದ್ರವ್ಯಕ್ಕೆ ಮಾರು ಹೋಗಿದ್ದಾರೆ ಭಾರತೀಯ ಮಹಿಳೆಯರು. ಕಳೆದ ಹತ್ತು ವರ್ಷಗಳಲ್ಲಿ ಇಂತಹದೊಂದು ಭಾರೀ ಬದಲಾವಣೆ ಮದ್ಯ ಪ್ರಪಂಚದಲ್ಲಿ ಕಂಡು ಬಂದಿದೆ. ವೈನ್ ಬೀಯರ್ ಬಿಟ್ಟು ಈವಾಗ ವಿಸ್ಕಿ ಗ್ಲಾಸಿನತ್ತ ಹೆಚ್ಚು ಕೈಚಾಚುತ್ತಿದ್ದಾರೆ ಮಹಿಳೆಯರು.
ಸಾಮಾಜಿಕ ವ್ಯವಸ್ಥೆಗಳು ಬದಲಾದಂತೆ ಪರಂಪರೆಗಳು ಕೂಡ ಬದಲಾಗುತ್ತವೆ. ಹಳೆಯದು ಕಳಚಿ ಬಿದ್ದು ಹೊಸ ವ್ಯವಸ್ಥೆ ಸೃಷ್ಟಿಯಾಗುತ್ತದೆ. ಮದ್ಯವೆಂಬ ಸುರಲೋಕದಲ್ಲಿಯೂ ಕೂಡ ಈಗ ಇದೇ ಬದಲಾವಣೆಯಾಗಿದೆ. ಇದು ವಿಸ್ಕಿ ಕಂಪನಿಗಳು ಖುಷಿ ಪಡುವ ಸುದ್ದಿಯೇ ಹೊರತು ಒಂದು ಸಾಮಾಜಿಕ ವ್ಯವಸ್ಥೆಯಲ್ಲಾಗಿರುವ ಈ ರೀತಿಯ ಬದಲಾವಣೆಗಳು ನಾಗರಿಕ ಸಮಾಜಕ್ಕೆ ಅಷ್ಟೊಂದು ಒಳ್ಳೆಯದು ಅಲ್ಲ. ಆರೋಗ್ಯ ದೃಷ್ಟಿಯಿಂದಲೂ ಕೂಡ ಈ ಬೆಳವಣಿಗೆ ಆತಂಕಕಾರಿಯೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ