/newsfirstlive-kannada/media/post_attachments/wp-content/uploads/2025/01/Nimisha-1.jpg)
ಯೆಮನ್ ಪ್ರಜೆಯನ್ನ ಜೀವ ತೆಗೆದ ಆರೋಪದಲ್ಲಿ 2017ರಿಂದ ಜೈಲುವಾಸ ಅನುಭವಿಸುತ್ತಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಯೆಮೆನ್ ಸರ್ಕಾರ ಗಲ್ಲು ಶಿಕ್ಷೆ ವಿಧಿಸಿದೆ. ನರ್ಸ್ ನಿಮಿಷಾ ಪ್ರಿಯಾರನ್ನ ಬಿಡಿಸಿ ತರಲು ಅವರ ಕುಟುಂಬ ಪರದಾಡುತ್ತಿದ್ದು, ನರ್ಸ್ ಬಿಡುಗಡೆಗಾಗಿ ಎಲ್ಲಾ ಸಹಾಯ ಮಾಡುವುದಾಗಿ ವಿದೇಶಾಂಗ ಸಚಿವಾಲಯದ ಮಾಹಿತಿ ನೀಡಿದೆ. ಈ ನರ್ಸ್ ಮರಣ ದಂಡನೆಗೆ ಗುರಿಯಾಗಲು ಕಾರಣವಾದ ಕತೆಯೇ ಹೃದಯವಿದ್ರಾವಕವಾಗಿದೆ.
ನಿಮಿಷ ಪ್ರಿಯಾ.. ವೃತ್ತಿಯಲ್ಲಿ ನರ್ಸ್.. ದುಡ್ಡು ಮಾಡುವ ಕನಸಿಟ್ಟುಕೊಂಡು ಕೇರಳದಿಂದ ದೂರದ ಯೆಮೆನ್‌ಗೆ ಪ್ರಯಾಣ ಬೆಳಸಿದ್ರು. ಅಲ್ಲೆ ಕೆಲ ವರ್ಷಗಳ ಕಾಲ ಹಗಲು ರಾತ್ರಿ ದುಡಿದು ಬಳಿಕ ತನ್ನದೆ ಆದ ಸ್ವಂತ ಕ್ಲಿನಿಕ್ ಓಪನ್ ಮಾಡಿದ್ರು. ಅಂದುಕೊಂಡಂತೆ ಎಲ್ಲವನ್ನೂ ಸಾಧಿಸಿದ್ರು. ಆದ್ರೆ ವಿಧಿಯ ಆಟಕ್ಕೆ ಸಿಲುಕಿ ಈಗ ಯೆಮೆನ್ ಸರ್ಕಾರದಿಂದಲೇ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.
2017ರಲ್ಲಿ ಯೆಮೆನ್ ಪ್ರಜೆ ಕೊಂದ ಆರೋಪ
2017ರಲ್ಲಿ ಯೆಮೆನ್ ಪ್ರಜೆ ಸಾಯಿಸಿದ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಲಾಗಿದೆ. ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.
ನರ್ಸ್ ಕುಟುಂಬದ ಪರ ನಿಂತ ಭಾರತ ಸರ್ಕಾರ
ಗಲ್ಲು ಶಿಕ್ಷೆಗೆ ಗುರಿಯಾಗಿರುವ ನರ್ಸ್ ನಿಮಿಷಾ ಪ್ರಿಯಾ ಬಿಡುಗಡೆಗಾಗಿ ಅವರ ಕುಟುಂಬ ಪರದಾಡುತ್ತಿದೆ.. ಸದ್ಯ ಭಾರತ ಸರ್ಕಾರ ನರ್ಸ್ ಕುಟುಂಬದ ಬೆನ್ನಿಗೆ ನಿಂತಿದ್ದು, ಆಕೆಯ ಬಿಡುಗಡೆಗಾಗಿ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು ಅಂತ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಲ್ಲುಶಿಕ್ಷೆಗೆ ಕಾರಣವೇನು?
- ಕೇರಳದ ನಿಮಿಷಾ ಪ್ರಿಯಾ 2011ರಲ್ಲಿ ಯೆಮೆನ್‌ಗೆ ತೆರಳಿದ್ದರು
- ಮೊದಲು ಯೆಮೆನ್ನಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿದ್ದ ಪ್ರಿಯಾ
- 2015ರಲ್ಲಿ ಮೆಹದಿ ಎಂಬಾತನ ಸಹಾಯದಿಂದ ಕ್ಲಿನಿಕ್ ಓಪನ್
- ಯೆಮನ್ನಲ್ಲಿ ಹೊರಗಿನವರು ಸಂಸ್ಥೆ ಸ್ಥಾಪಿಸುವ ಅವಕಾಶವಿಲ್ಲ
- ಹೀಗಾಗಿ ಪ್ರಿಯಾ ಯೆಮೆನ್ ಪ್ರಜೆ ಜೊತೆ ಸೇರಿ ಕ್ಲಿನಿಕ್ ಸ್ಥಾಪನೆ
- ಇದನ್ನೇ ದುರುಪಯೋಗಪಡಿಸಿಕೊಂಡ ತಲಾಲ್ ಮೆಹದಿ
- ತಾನೇ ಆಕೆಯ ಗಂಡನೆಂದು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದ
- ಜೊತೆಗೆ ನಿಮಿಷ ಪ್ರಿಯಾಳ ಸಂಪಾದನೆಯನ್ನ ಲಪಟಾಯಿಸಿದ್ದ
- ಅಷ್ಟೇ ಅಲ್ಲದೇ ಪ್ರಿಯಾಳ ಪಾಸ್‌ಪೋರ್ಟ್ ಕಸಿದುಕೊಂಡಿದ್ದ
- ಪೊಲೀಸರ ಸಹಾಯ ಕೇಳಿದ್ರೂ ಯಾವ್ದೇ ಸಹಾಯ ಸಿಕ್ಕಿರಲಿಲ್ಲ
- ಕಡೆಗೆ ಹೇಗಾದ್ರೂ ಪಾಸ್‌ಪೋರ್ಟ್ ವಾಪಸ್ ಪಡೆಯಬೇಕಿತ್ತು
- ಆತನಿಗೆ ಮಾದಕ ದ್ರವ್ಯ ನೀಡಿ ಮಂಪರು ಬರುವಂತೆ ಮಾಡಿದ್ದಳು
- ದುರಾದೃಷ್ಟವಶಾತ್ ಡ್ರಗ್ ಓವರ್ ಡೋಸ್ ಆಗಿ ಉಸಿರು ನಿಲ್ಲಿಸಿದ
- ಹೀಗಾಗಿ ನಿಮಿಷಾ 2017ರಿಂದ ಜೈಲುವಾಸ ಅನುಭವಿಸುತ್ತಿದ್ದಾರೆ
ನಿಮಿಷಾಳನ್ನು ಹೇಗಾದರು ಭಾರತಕ್ಕೆ ವಾಪಸ್ ಕರೆತರಬೇಕೆಂದು ಆಕೆಯ ಫ್ಯಾಮಿಲಿ ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ರು.. 2023ರಲ್ಲಿ ಯೆಮನ್‌ನ ಸುಪ್ರೀಂ ಕೋರ್ಟ್ ಶಿಕ್ಷೆಯನ್ನ ಎತ್ತಿ ಹಿಡಿದಿತ್ತು, ಆದ್ರೇ ಇದೀಗ ಯೆಮನ್ ಅಧ್ಯಕ್ಷ ಮರಣದಂಡನೆ ಪ್ರಕ್ರಿಯೆಗೆ ಅನುಮತಿ ನೀಡಿದ್ದಾರೆ.
ಒಂದು ತಿಂಗಳೊಳಗೆ ಮರಣದಂಡನೆ ಶಿಕ್ಷೆ ನಿರೀಕ್ಷೆ
ನೇಣಿನ ಕುಣಿಕೆಯಿಂದ ಪಾರಾಗಲು ಪ್ರಿಯಾಳಿಗೆ ಒಂದೇ ಒಂದು ಅವಕಾಶ ಮಾತ್ರ ಉಳಿದಿದೆ.. ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಬೇಕಿದೆ. ಇದರ ಜೊತೆಗೆ ಅವರ ಬುಡಕಟ್ಟು ನಾಯಕ ಕ್ಷಮೆ ನೀಡುವುದರ ಮೇಲೂ ಅವಲಂಬಿತವಾಗಿದೆ. ಈಗಾಗಲೇ ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ನಿಮಿಷಾ ಕುಟುಂಬಸ್ಥರು ಹಣ ಹೊಂದಿಸಿದ್ದಾರೆ. ಇಷ್ಟಾದ್ರೂ ಒಂದು ವೇಳೆ ಕ್ಷಮೆಯನ್ನು ಪಡೆಯಲು ವಿಫಲವಾದರೆ ನಿಮಿಷಾ ಅವರಿಗೆ ಒಂದು ತಿಂಗಳೊಳಗೆ ಮರಣದಂಡನೆ ಶಿಕ್ಷೆಯಾಗಲಿದೆ. ಸದ್ಯ, ನಿಮಿಷಾ ಪ್ರಿಯಾಳ ಕುಟುಂಬಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಸಹಾಯದ ಹಸ್ತ ಚಾಚಿದ್ದು, ಮೆಹದಿ ಕುಟುಂಬ ಪ್ರಿಯಾಳನ್ನು ಕ್ಷಮಿಸುತ್ತಾರಾ ಇಲ್ಲವಾ ಎಂದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ