ಬೆಂಗಳೂರಲ್ಲಿ ರಾತ್ರಿಯಿಂದ ಅಬ್ಬರಿಸಿ ಬೊಬ್ಬೆರಿಯುತ್ತಿರುವ ಮಳೆರಾಯ
ಮಳೆಯಿಂದ ಕೆಟ್ಟುನಿಂತ ಆ್ಯಂಬುಲೆನ್ಸ್, ಆಟೋ, ಸ್ಕೂಟರ್ ಸವಾರರು
ಒಂದಾ, ಎರಡಾ ಸಾಲು ಸಾಲು ಅವಾಂತರಗಳು.. ಇದಕ್ಕೆ ಮುಕ್ತಿ ಯಾವಾಗ?
ನಿನ್ನೆ ರಾತ್ರಿ ಬೆಂಗಳೂರಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರಿದ್ದಿದ್ದಾನೆ. ನಗರದ ಕೆ.ಆರ್.ಮಾರ್ಕೆಟ್, ಜೆ.ಸಿ ರೋಡ್, ವಿಜಯನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಏರಿಯಾಗಳಲ್ಲಿ ಭಾರೀ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಓಕುಳಿಪುರಂ ಅಂಡರ್ ಪಾಸ್ನಲ್ಲಿ ನೀರು ನಿಂತಿದೆ. ಪರಿಣಾಮ ಅಂಡರ್ಪಾಸ್ನಲ್ಲಿ ಆ್ಯಂಬುಲೆನ್ಸ್ ಕೆಟ್ಟು ನಿಂತಿದೆ.ಇದರಿಂದ ಹಾಸನದಿಂದ ಬಂದಿದ್ದ ರೋಗಿ ಪರದಾಡುವಂತೆ ಆಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗ ರಸ್ತೆ ಸಂಪೂರ್ಣ ನೀರಿನಲ್ಲಿ ಮುಳುಗಡೆ ಆಗಿದೆ. ರಸ್ತೆಯಲ್ಲಿ ಸುಮಾರು ಎರಡು ಅಡಿಯಷ್ಟು ನೀರು ನಿಂತಿದೆ. ನೀರು ಸರಾಗವಾಗಿ ಹರಿದು ಹೋಗದೇ ವಾಹನ ಸವಾರರು ಪರದಾಟ ನಡೆಸ್ತಿದ್ದಾರೆ. ಸಿಲ್ಕ್ ಬೋರ್ಡ್ನಲ್ಲಿ ಕಾರು ಒಂದು ನೀರಲ್ಲಿ ಮುಳುಗಿದೆ. ಇನ್ನು ಕೆ.ಆರ್.ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಸಂಪೂರ್ಣ ಜಲ ದಿಗ್ಬಂಧನ ಆಗಿದೆ. ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಳೇಪೇಟೆ, ಕಾಟನ್ ಪೇಟೆ ರಸ್ತೆಯಲ್ಲಿ ಸಂಪೂರ್ಣ ಜಾಲವೃತವಾಗಿದೆ. ಸುಲ್ತಾನ್ ಪೇಟೆ ಮುಖ್ಯ ರಸ್ತೆ ಸಂಪೂರ್ಣ ರಸ್ತೆ ಬಂದ್ ಆಗಿದೆ. ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿದೆ. ಮಧ್ಯ ರಾತ್ರಿ ಸುಮಾರು 2 ಗಂಟೆಗೆ ಶುರುವಾದ ಮಳೆ, ಎರಡ್ಮೂರು ಗಂಟೆಗಳ ಕಾಲ ಬಿಟ್ಟು ಬಿಡದೇ ಗುಡುಗು ಸಹಿತ ಮಳೆಯಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲ ಜಲಾವೃತವಾಗಿದೆ.