ಶ್ರೀಕೃಷ್ಣನ ಭಕ್ತರಿಗೆ ಅತಿದೊಡ್ಡ ಜಯ; ಅಲಹಾಬಾದ್ ಹೈಕೋರ್ಟ್‌ನಿಂದ ಮಹತ್ವದ ಆದೇಶ; ಏನಿದು ವಿವಾದ?

author-image
admin
Updated On
ಶ್ರೀಕೃಷ್ಣನ ಭಕ್ತರಿಗೆ ಅತಿದೊಡ್ಡ ಜಯ; ಅಲಹಾಬಾದ್ ಹೈಕೋರ್ಟ್‌ನಿಂದ ಮಹತ್ವದ ಆದೇಶ; ಏನಿದು ವಿವಾದ?
Advertisment
  • ಹಿಂದು ಮತ್ತು ಕೃಷ್ಣನ ಭಕ್ತರಿಗೆ ಮತ್ತೊಂದು ದೊಡ್ಡ ಜಯ!
  • ಅರ್ಜಿ ಸಲ್ಲಿಸಿದ್ದ ಶ್ರೀಕೃಷ್ಣ ಜನ್ಮಭೂಮಿ ದೇವಾಲಯ ಟ್ರಸ್ಟ್
  • ಅಲಹಾಬಾದ್ ಹೈಕೋರ್ಟ್‌ನಿಂದ ಮಹತ್ವದ ಸೂಚನೆಗಳು

ಅಲಹಾಬಾದ್: ವಾರಾಣಸಿಯ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯ ಮಾದರಿಯಲ್ಲಿ ಮಥುರಾದಲ್ಲೂ ಸರ್ವೇ ಕಾರ್ಯ ನಡೆಯಲಿದೆ. ಮಥುರಾ ಶ್ರೀಕೃಷ್ಣ ಜನ್ಮಭೂಮಿ-ಈದ್ಗಾ ಮಸೀದಿ ವಿವಾದದಲ್ಲಿ ಸರ್ವೇ ನಡೆಸಲು ಅಲಹಾಬಾದ್ ಹೈಕೋರ್ಟ್ ಸಮ್ಮತಿ ಸೂಚಿಸಿದೆ.

ಇದನ್ನೂ ಓದಿ: Gyanvapi Survey: ಇಂದಿನಿಂದ ಜ್ಞಾನವಾಪಿ ಮಸೀದಿ ಸರ್ವೇ ಪುನರಾರಂಭ.. ಹೈಕೋರ್ಟ್ ವಿಧಿಸಿದ ಷರತ್ತುಗಳು ಇಲ್ಲಿವೆ

ಮಥುರಾದ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿಯಲ್ಲಿ ವೈಜ್ಞಾನಿಕ ಸರ್ವೇಗೆ ಶ್ರೀಕೃಷ್ಣ ಜನ್ಮಭೂಮಿ ದೇವಾಲಯ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್‌ ಇಂದು ಮಹತ್ವದ ಆದೇಶ ನೀಡಿದೆ.

publive-image

ಜ್ಞಾನವಾಪಿ ಮಸೀದಿ ಸರ್ವೇ ನಂತರ ಕೃಷ್ಣ ಜನ್ಮಭೂಮಿ ಸರ್ವೇಗೆ ಸಮ್ಮತಿ ಸೂಚಿಸಲಾಗಿದೆ. ಸರ್ವೇ ಕಾರ್ಯಕ್ಕೆ ಮೂವರು ಕೋರ್ಟ್ ಕಮಿಷನರ್​ಗಳ ನೇಮಿಸಲಾಗಿದೆ. ಕಾಶಿಯ ಗ್ಯಾನವಾಪಿ ಮಾದರಿಯಲ್ಲೇ ಸರ್ವೇ ನಡೆಸಲು ಕೋರ್ಟ್‌ ಮಥುರಾದ ಶಾಹಿ ಈದ್ಗಾ ಮಸೀದಿ ಸರ್ವೇಗೆ ಸೂಚನೆ ನೀಡಿದೆ.

ಶ್ರೀಕೃಷ್ಣ ಜನ್ಮಭೂಮಿ ದೇವಾಲಯ ಟ್ರಸ್ಟ್ ಈ ಹಿಂದೆ ಸುಪ್ರೀಂಕೋರ್ಟ್‌ಗೂ ತಮ್ಮ ಮನವಿ ಸಲ್ಲಿಸಿತ್ತು. ಶ್ರೀಕೃಷ್ಣ ಜನ್ಮಭೂಮಿ ದೇವಾಲಯ ಪರ ವಕೀಲ ಸಾರ್ಥಕ್ ಚತುರ್ವೇದಿ ಕೋರ್ಟ್‌ ಆದೇಶದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೈಕೋರ್ಟ್‌ ಇಂದಿನ ಆದೇಶ ಕೋಟಿ, ಕೋಟಿ ಹಿಂದು ಮತ್ತು ಕೃಷ್ಣನ ಭಕ್ತರಿಗೆ ಮತ್ತೊಂದು ದೊಡ್ಡ ಜಯ ಎಂದು ಬಣ್ಣಿಸಿದ್ದಾರೆ.

ಏನಿದು ಶ್ರೀಕೃಷ್ಣ ಜನ್ಮಭೂಮಿ ವಿವಾದ?

ಮಥುರಾದ ಕತ್ರಾ ಕೇಶವ ದೇವಾಲಯದ ಮೇಲ್ಭಾಗ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ. 1669ರಲ್ಲಿ ದೇವಾಲಯದ ಜಾಗದಲ್ಲಿ ಮೊಘಲ್ ದೊರೆ ಔರಂಗಜೇಬ್‌ ದೇವಾಲಯ ಕೆಡವಿ ಇಲ್ಲಿ ಮಸೀದಿ ನಿರ್ಮಿಸಿದ್ದಾನೆ. ವಿವಾದಿತ 13.37 ಎಕರೆ ಜಾಗವನ್ನು ಶ್ರೀಕೃಷ್ಣ ಜನ್ಮಭೂಮಿಗೆ ಸೇರಿದ್ದು ಅನ್ನೋದು ಹಿಂದೂಗಳ ವಾದವಾಗಿದೆ.

20ನೇ ಶತಮಾನದ ಆರಂಭದಲ್ಲಿ ವಾರಾಣಸಿಯ ದೊರೆ ಈ ಜಾಗದ ಮಾಲೀಕರಾಗಿದ್ದರು. 1935ರಲ್ಲಿ ಜಾಗ ವಾರಾಣಾಸಿ ದೊರೆಗೆ ಸೇರಿದ್ದು ಎಂದು ಹೈಕೋರ್ಟ್ ಹೇಳಿದೆ. 1944ರಲ್ಲಿ ಉದ್ಯಮಿ ಯುಗಲ್ ಕಿಶೋರ್ ಬಿರ್ಲಾ ಜಾಗ ಖರೀದಿಸಿ ಶ್ರೀಕೃಷ್ಣ ಜನ್ಮಸ್ಥಾನ ನಿರ್ಮಿಸಿದ್ದರು.

ಈದ್ಗಾ ಮಸೀದಿಯ ಜಾಗ ದೇವಾಲಯಕ್ಕೆ ಸೇರಿದ್ದು ಎಂಬುದಕ್ಕೆ ಸಾಕ್ಷ್ಯ, ಕುರುಹುಗಳಿವೆ. ಈದ್ಗಾ ಮಸೀದಿಯ ಗೋಡೆಗಳ ಮೇಲೆ ಶೇಷನಾಗ ಕೆತ್ತನೆ ಇದೆ. ಜೊತೆಗೆ ಮಸೀದಿಯ ಗೋಡೆಗಳ ಮೇಲೆ ಕಮಲದ ಕೆತ್ತನೆ ಕೂಡ ಇದೆ. ಹೀಗಾಗಿ ದೇವಾಲಯದ ಜಾಗದಲ್ಲೇ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ದೇವಾಲಯದ ಟ್ರಸ್ಟ್ ವಾದಿಸಿದೆ. ಆದರೆ 1991ರ ಧಾರ್ಮಿಕ ಪೂಜಾ ಸ್ಥಳಗಳ ಕಾಯಿದೆಯಡಿ ಧಾರ್ಮಿಕ ಸ್ಥಳಗಳ ಸ್ವರೂಪ ಬದಲಾವಣೆ ಮಾಡಬಾರದು. ಹೀಗಾಗಿ ಈ ಕಾಯಿದೆಯಡಿ ಹಿಂದೂ ಅರ್ಜಿ ವಜಾಗೊಳಿಸಲು ಮುಸ್ಲಿಂ ಪರ ವಕೀಲರ ವಾದಿಸಿದ್ದಾರೆ.

ಶ್ರೀಕೃಷ್ಣ ಜನ್ಮಭೂಮಿ ವಿವಾದದಲ್ಲಿ 1968ರಲ್ಲಿ ಹಿಂದೂ-ಮುಸ್ಲಿಂ ನಡುವೆ ಒಪ್ಪಂದವಾಗಿತ್ತು. ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ- ಶಾಹಿ ಈದ್ಗಾ ಮಸೀದಿ ಟ್ರಸ್ಟ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದ ಪ್ರಕಾರ, 10.9 ಎಕರೆ ಜಾಗ ಶ್ರೀ ಕೃಷ್ಣ ಜನ್ಮಭೂಮಿಗೆ ಸೇರಿದ್ದು. ಉಳಿದ 2.5 ಎಕರೆ ಜಾಗ ಮಸೀದಿಗೆ ಸೇರಿದ್ದು ಎಂದು ಒಪ್ಪಂದವಾಗಿದೆ. ಈ ಒಪ್ಪಂದವನ್ನು ರದ್ದುಪಡಿಸಿ ಸಂಪೂರ್ಣ 13.37 ಎಕರೆ ಜಾಗವನ್ನು ಶ್ರೀಕೃಷ್ಣ ಜನ್ಮಭೂಮಿಗೆ ನೀಡಲು ಈಗ ಹಿಂದೂಗಳ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಶಾಹೀ ಈದ್ಗಾ ಮಸೀದಿ-ದೇವಾಲಯ ಜಾಗದ ಸಂಪೂರ್ಣ ಜಾಗದ ಸರ್ವೇಗೆ ಆದೇಶ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment