/newsfirstlive-kannada/media/post_attachments/wp-content/uploads/2023/06/SIDDARAMAIAH_WIFE_PARWATI_1.jpg)
ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರಿಗೆ 50-50 ಅನುಪಾತದಲ್ಲಿ 14 ಮೂಡಾ ಸೈಟ್‌ಗಳನ್ನ ಹಂಚಿಕೆ ಮಾಡಲಾಗಿದೆ ಅನ್ನೋ ವಿಚಾರ ವಿವಾದಕ್ಕೆ ಕಾರಣವಾಗಿದೆ. ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಎಂಬುವವರು ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಪತ್ನಿಗೆ 14 ನಿವೇಶನ ಮಂಜೂರಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಮುಡಾದಲ್ಲಿ ಭಾರೀ ಅಕ್ರಮದ ಆರೋಪ.. ನ್ಯೂಸ್ಫಸ್ಟ್ ಜೊತೆ ಬೈರತಿ ಸುರೇಶ್ ಮಾತನಾಡಿದ್ದೇನು?
ದಾಖಲೆಗಳ ಜೊತೆ ಆರೋಪಿಸಿರುವ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಅವರು, ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಬದಲಿ ನಿವೇಶನ ನೀಡಿ ಲಾಭ ಮಾಡಿಕೊಟ್ಟಿರುವುದು ನಿಜ. ಮೈಸೂರಿನ ಕೆಸರೆ ಸರ್ವೇ ನಂಬರ್ 464 ವ್ಯಾಪ್ತಿಯಲ್ಲಿ 3.16 ಗಂಟೆ ಜಾಮೀನು ಸ್ವಾಧೀನ ಮಾಡಿಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ವಿಜಯನಗರದ ಬಡಾವಣೆಯಲ್ಲಿ 14 ನಿವೇಶನವನ್ನು ಸಿಎಂ ಪತ್ನಿಯ ಹೆಸರಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೇವನೂರು ಬಡಾವಣೆಯಲ್ಲಿ ಸಾವಿರಾರು ಸೈಟ್ ಇದ್ದರೂ ವಿಜಯನಗರದಲ್ಲಿ ಕೊಟ್ಟಿರುವುದು ಯಾಕೆ? ಇದು ಲಾಭದ ಉದ್ದೇಶ ಅಲ್ಲವೇ. ಈ ಹಿಂದಿನ ಮೂಡಾ ಆಯುಕ್ತ ನಟೇಶ್ ಈ ಆದೇಶ ಮಾಡಿದ್ದು, ಸಿಎಂ ಪತ್ನಿ ಆರ್ಥಿಕ ಲಾಭವನ್ನು ಮಾಡಿಕೊಟ್ಟಿದ್ದಾರೆ. ಹೀಗಾಗಿ ಮೂಡಾದ 50:50 ಹಗರಣದಲ್ಲಿ ಅವರು ಸಿಎಂ ಪತ್ನಿಯು ಭಾಗಿಯಾಗಿದ್ದಾರೆ ಎಂದು ಗಂಗರಾಜು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ತಮ್ಮ ಧರ್ಮಪತ್ನಿಗೆ ಸೇರಿದ ಜಮೀನನ್ನು ಮೂಡಾ ಸ್ವಾಧೀನ ಮಾಡಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ 50:50 ಅನುಪಾತದಲ್ಲಿ ಬೇರೆಡೆ ನಿವೇಶನಗಳನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಡಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಅವರು ಅಧಿಕಾರದಲ್ಲಿರುವಾಗ ನಮಗೆ ನಿವೇಶನ ಕೊಟ್ಟಿದ್ದಾರೆ. ನನ್ನ ಪತ್ನಿಗೆ ಸೇರಿದ್ದ 3 ಎಕರೆ 16 ಗಂಟೆ ಜಮೀನು ರಿಂಗ್ ರೋಡ್ ಪಕ್ಕದ ಕೆಸರೆಯಲ್ಲಿದೆ. ಅದನ್ನು ನನ್ನ ಬಾವ ಮೈದುನ ಪಡೆದಿದ್ದು ನನ್ನ ಪತ್ನಿಗೆ ದಾನವಾಗಿ ಕೊಟ್ಟಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ತೆಗೆದುಕೊಳ್ಳಲು ಹೋಗಿಲ್ಲ. 50:50 ಅನುಪಾತದಲ್ಲಿ ಕೊಡಬೇಕು ಎಂದು ಕಾನೂನು ಮಾಡಿದ್ದು ಬಿಜೆಪಿಯವರು. ನಮ್ಮ ಜಮೀನನ್ನು ಸ್ವಾಧೀನ ಮಾಡಿಕೊಳ್ಳದೇ ಮೂಡಾದವರು ನಿವೇಶನಗಳನ್ನು ಮಾಡಿ ಹಂಚಿದ್ದರು. ಹಂಚಿದ ಮೇಲೆ ನಮಗೆ ಕಾನೂನುಬದ್ಧವಾಗಿ ನಿವೇಶನ ಕೊಡಬೇಕು. ಅದರಂತೆ 50:50 ಕೊಡಲು ಒಪ್ಪಿದರು.
ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ; ಸರ್ಕಾರ ತನ್ನ ವಿರುದ್ಧದ ಆರೋಪ ಮರೆಮಾಚಲು ದರ್ಶನ್ ಕೇಸ್ಗೆ ಒತ್ತು ನೀಡುತ್ತಿದೆಯಾ?
ಸರ್ಕಾರದ ನಿಯಮಾವಳಿ, ಆದೇಶದ ಪ್ರಕಾರ ಕೊಡಿ ಎಂದು ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಳಿಕೊಂಡಿದ್ದೆವು. ಆಗ ಅವರು ಬೇರೆ ಬೇರೆ ಸ್ಥಳಗಳಲ್ಲಿ ಸಮಾನಾಂತರ ನಿವೇಶನಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ