/newsfirstlive-kannada/media/post_attachments/wp-content/uploads/2025/07/DARSHAN_SMILE.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಆರೋಪಿ ನಟ ದರ್ಶನ್ ಅವರು ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನು ಒದಗಿಸಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಸಂಬಂಧ ದರ್ಶನ್​ಗೆ ನೀಡಿರುವ ಸವಲತ್ತುಗಳ ಬಗ್ಗೆ ಬೆಂಗಳೂರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಕೋರ್ಟ್​ಗೆ ನೀಡಿರುವ ವರದಿ ಮಾಹಿತಿ ಇದೀಗ ಲಭ್ಯವಾಗಿದೆ.
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ವರದರಾಜ್ ಅವರು 57ನೇ ಸಿಸಿಹೆಚ್ ಕೋರ್ಟ್​ಗೆ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ವರದಿಯಲ್ಲಿ ದರ್ಶನ್ ಪರ ವಕೀಲರು ಎತ್ತಿದ್ದ ಎಲ್ಲ ತಕರಾರುಗಳ ಪರಿಶೀಲನೆ ಮಾಡಲಾಗಿದೆ. ದರ್ಶನ್ ಬ್ಯಾರಕ್​ನಲ್ಲಿ 1 ಇಂಡಿಯನ್, 1 ವೆಸ್ಟರ್ನ್ ಟಾಯ್ಲೆಟ್ ಇದೆ. ಹಾಸಿಗೆ, ದಿಂಬು ಕೊಟ್ಟಿಲ್ಲವೆಂಬ ಆರೋಪ ಇದ್ದು ಕೊಲೆ ಆರೋಪಿ ವಿಚಾರಣಾಧೀನ ಕೈದಿಗೆ ಹಾಸಿಗೆ, ದಿಂಬು ನೀಡಲು ಅವಕಾಶವಿಲ್ಲ. ಬಿಸಿಲಿಗೆ ಓಡಾಡಲು ಬಿಡುತ್ತಿಲ್ಲ ಎನ್ನುವುದಕ್ಕೆ ನಿಯಮದಂತೆ 1 ಗಂಟೆ ವಾಕಿಂಗ್, ಆಟವಾಡಲು ಅವಕಾಶ ನೀಡಬಹುದು.
ಆದರೆ ದರ್ಶನ್ ಸೆಲೆಬ್ರಿಟಿ ಆಗಿರುವುದರಿಂದ ಓಡಾಡಿದರೆ ಇತರೆ ಬ್ಯಾರಕ್​ನವರು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್​ಮೆಂಟ್​ಗಳಿಂದ ಫೋಟೋ ತೆಗೆಯುತ್ತಾರೆಂದು ಅಧಿಕಾರಿಗಳ ಆಕ್ಷೇಪಣೆ ಇದೆ. ಜೈಲಿನ ಶಿಸ್ತುಪಾಲನೆ, ನಿರ್ವಹಣೆ ಹೊರತುಪಡಿಸಿ ವಾಕಿಂಗ್, ಆಟಕ್ಕೆ ಅವಕಾಶ ನೀಡಬೇಕು. ಟಿವಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ, ಟಿವಿ ನೋಡಲು ಕೈದಿಗಳಿಗೆ ಅವಕಾಶ ನೀಡಬಹುದು. ಆದರೆ ಪ್ರತಿ ಬ್ಯಾರಕ್​ಗೆ ಟಿವಿ ನೀಡಬೇಕೆಂಬ ನಿಯಮವಿಲ್ಲ.
ಇದನ್ನೂ ಓದಿ:ಇಂದು ಚಿನ್ನ ಖರೀದಿ ಮಾಡೋರಿಗೆ ಗುಡ್​ನ್ಯೂಸ್​.. ಬಂಗಾರದ ಬೆಲೆಯಲ್ಲಿ ಇಳಿಕೆ..!
ದರ್ಶನ್​ ಫೋನ್​ನಲ್ಲಿ ಮಾತನಾಡುವಾಗ ಸ್ಪೀಕರ್ ಆನ್ ಮಾಡಿಸುತ್ತಾರೆಂದು ತಕರಾರು ಇದ್ದು, ಆರೋಪಿಗಳ ಮೇಲೆ ನಿಗಾ ಇಡುವ ದೃಷ್ಟಿಯಿಂದ ಸ್ಪೀಕರ್ ಆನ್ ಮಾಡಲಾಗುತ್ತಿದೆ. ಆರೋಪಿಗಳಿಗೆ ತಿಳಿಸಿ ಫೋನ್ ಕಾಲ್ ರೆಕಾರ್ಡ್​ಗೆ ಅವಕಾಶವಿದೆ. ಈ ಬಗ್ಗೆ ಜೈಲು ಅಧಿಕಾರಿಗಳು ನಿಯಮ ರೂಪಿಸಿದ್ದಾರೆ. ಬೆಳಕಿಲ್ಲದೇ ದರ್ಶನ್ ಕಾಲಿಗೆ ಫಂಗಸ್ ಬಂದಿದೆ ಎನ್ನುವುದಕ್ಕೆ ಉತ್ತರ ಇದ್ದು ಕಾಲಿಗೆ ಫಂಗಸ್ ಬಂದಿಲ್ಲ, ಹಿಮ್ಮಡಿಯಲ್ಲಿ ಬಿರುಕಿದೆ. ಈ ಬಗ್ಗೆ ಚರ್ಮರೋಗ ತಜ್ಞೆ ಜ್ಯೋತಿ ಬಾಯಿ ಅವರಿಂದ ಪರಿಶೀಲಿಸಲಾಗಿದೆ.
ಜೈಲಿನ ವೈದ್ಯಾಧಿಕಾರಿಗಳು ಎರಡು ದಿನಕ್ಕೊಮ್ಮೆ ಬ್ಯಾರಕ್​ಗೆ ಭೇಟಿ ನೀಡುತ್ತಿದ್ದಾರೆ. ದರ್ಶನ್​ಗೆ ಫಿಸಿಯೋಥೆರಪಿ ವ್ಯವಸ್ಥೆ ಕಲ್ಪಿಸಲಾಗಿದೆ. ಸೊಳ್ಳೆ ಬತ್ತಿ, ಕನ್ನಡಿ, ಬಾಚಣಿಗೆ ನೀಡಿಲ್ಲ ಎನ್ನುತ್ತಿದ್ದಾರೆ. ಸಜಾ ಬಂಧಿಗಳಿಗೆ ಮಾತ್ರ ಇವುಗಳನ್ನು ಕೊಡಬಹುದು. ವಿಚಾರಣಾಧೀನ ಕೈದಿಗೆ ಇವು ಕೊಡಲು ಅವಕಾಶವಿಲ್ಲ. ದರ್ಶನ್​ ಬ್ಯಾರಕ್​ ಬಳಿ ರಾತ್ರಿ ಇಡೀ ಕರೆಂಟ್​ ಲೈಟ್ ಹಾಕಿರುತ್ತಾರೆ ಎನ್ನುವುದಕ್ಕೆ ಭದ್ರತೆ ದೃಷ್ಟಿಯಿಂದ ಲೈಟ್ ಆನ್ ಇರುತ್ತದೆ. ಜೈಲು ಅಧಿಕಾರಿಗಳು ಕೈಪಿಡಿಯಲ್ಲಿನ ನಿಯಮ ಪಾಲಿಸಿದ್ದಾರೆ. ಆದರೆ ಸೂರ್ಯನ ಬೆಳಕಿನಲ್ಲಿ ನಡೆದಾಡುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ ಅಷ್ಟೇ. ಉಳಿದಂತೆ ಎಲ್ಲ ನಿಯಮ ಪಾಲನೆಯಾಗಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ವರದರಾಜ್ ಅವರ ವರದಿಯಲ್ಲಿ ಉಲ್ಲೇಖ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ