/newsfirstlive-kannada/media/media_files/2025/09/15/toxic-2025-09-15-15-25-41.jpg)
ಪರಭಾಷಾ ಸಿನಿಮಾಗಳ ಹಾವಳಿ, ಮಿತಿ ಮೀರಿದ ಟಿಕೆಟ್ ದರದ ವಿರುದ್ಧ ಇಡೀ ಇಂಡಸ್ಟ್ರಿ ಏಕರೂಪ ಟಿಕೆಟ್ ದರ ನಿಗದಿ ಮಾಡಬೇಕು ಎಂದು ದಶಕಗಳಿಂದ ಹೋರಾಟ ನಡೆಸಿತ್ತು. ಹತ್ತಾರು ಬಾರಿ ಈ ವಿಚಾರವಾಗಿ ಚರ್ಚೆ, ವಾದ- ಪ್ರತಿವಾದಗಳು ನಡೆದಿದ್ದವು. ಇದೀಗ ರಾಜ್ಯ ಸರ್ಕಾರ ಏಕರೂಪದ ಟಿಕೆಟ್ ದರ ನಿಗದಿ ಮಾಡಿದ್ದು, ಗರಿಷ್ಠ ಟಿಕೆಟ್ ದರ 200 ರೂಪಾಯಿಗೆ ನಿಗದಿ ಪಡಿಸಿದೆ. ಇದು ಒಂದೆಡೆ ಖುಷಿಯ ವಿಚಾರವಾದ್ರೆ, ಮತ್ತೊಂದೆಡೆ ಬಿಗ್ ಬಜೆಟ್ ಸಿನಿಮಾಗಳಿಗೆ ತೊಂದರೆ ಬಿಗಡಾಯಿಸೋ ಸೂಚನೆ ಕೊಟ್ಟಿದೆ. ಹೀಗಾಗಿ ಇಂಡಸ್ಟ್ರಿಯ ಒಳಗೆಯೇ ಪರ- ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ.
'ಬಿಗ್ ಬಜೆಟ್' ಸಿನಿಮಾಗೆ ನಷ್ಟ ಯಾಕೆ..?
ಏಕರೂಪದ ಟಿಕೆಟ್ ದರದಿಂದ ಬಿಗ್ ಬಜೆಟ್ ಸಿನಿಮಾಗಳಿಗೆ ನಷ್ಟವಾಗೋ ಭಯ ಕಾಡುತ್ತಿದೆ. ಸ್ಯಾಂಡಲ್ವುಡ್ನಲ್ಲೀಗ ಬ್ಯಾಕ್ ಟು ಬ್ಯಾಕ್ ದೊಡ್ಡ ಬಜೆಟ್ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಇಡೀ ದೇಶವೇ ಸ್ಯಾಂಡಲ್ವುಡ್ ಕಡೆ ನೋಡುವಂತಹ, ಹೈ ಬಜೆಟ್, ಹೈ ಕ್ವಾಲಿಟಿ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈ ಪಟ್ಟಿಯಲ್ಲಿ ಕಾಂತಾರ ಚಾಪ್ಟರ್ 1, ಟಾಕ್ಸಿಕ್, ಕೆಡಿ, 45, ದಿ ಡೆವಿಲ್, ಮಾರ್ಕ್.. ಹೀಗೆ ಸಾಲು ಸಾಲು ಸಿನಿಮಾಗಳಿವೆ.
ಈ ಚಿತ್ರಗಳಿಗೆ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಲಾಗಿದ್ದು, ಈಗ ಏಕರೂಪದ ಬೆಲೆ ನಿಗದಿಯಿಂದ ನಿರ್ಮಾಪಕರಿಗೆ ನಷ್ಟವಾಗೋ ಭಯ ಕಾಡುತ್ತಿದೆ. ಇದಕ್ಕೆ ನಾನಾ ಕಾರಣಗಳೂ ಇವೆ. ಮೊದಲಿಗೆ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಮತ್ತೊಂದೆಡೆ ವ್ಯಾವಹಾರಿಕ ಹಿನ್ನೆಲೆಯಲ್ಲಿ ನೋಡೋದಾದ್ರೆ ಬಂಡವಾಳ ರಿಕವರ್ ಮಾಡೋದೇ ದೊಡ್ಡ ತಲೆ ನೋವಾಗಿದೆ. ಒಂದೆಡೆ ಸ್ಯಾಟಲೈಟ್ ರೈಟ್ಸ್ ಖರೀದಿಸೋದು ಕಮ್ಮಿಯಾಗ್ತಿದ್ರೆ, ಮತ್ತೊಂದೆಡೆ ಓಟಿಟಿ ವೇದಿಕೆಗಳು ಕನ್ನಡ ಸಿನಿಮಾಗಳಂದ್ರೆ ದೂರ ಹೋಗುತ್ತಿವೆ. ಹೀಗಾಗಿ ಥಿಯೇಟರ್ನಿಂದ ಕಲೆಕ್ಟ್ ಹಣವನ್ನೇ, ನಿರ್ಮಾಪಕರು ನಂಬಿದ್ದಾರೆ. ಹೀಗಾಗಿ ಏಕರೂಪದ ಟಿಕೆಟ್ ದರ ನಿಗದಿ ವಿಚಾರವಾಗಿ ಅಪಸ್ವರ ಕೇಳಿ ಬಂದಿದ್ದು, ಒಂದಷ್ಟು ದೊಡ್ಡ ಪ್ರೊಡಕ್ಷನ್ ಹೌಸ್ಗಳು ಈ ವಿಚಾರವಾಗಿ ಫಿಲ್ಮ್ ಚೇಂಬರ್ ಮೆಟ್ಟಿಲೇರುವ ಸಾಧ್ಯತೆಯಿದೆ.
ತೆಲುಗು ಫಾರ್ಮುಲಾ ತರೋ ಪ್ಲಾನ್..!
ಪರಭಾಷಾ ಸಿನಿಮಾಗಳಿಗೆ ಹೋಲಿಸಿದ್ರೆ, ಕರ್ನಾಟಕದಲ್ಲಿ ಟಿಕೆಟ್ ದರ ಅಧಿಕವಾಗಿತ್ತು. ಅದರಲ್ಲೂ ತಮಿಳುನಾಡು, ಆಂಧ್ರ- ತೆಲಂಗಾಣದ ಟಿಕೆಟ್ ರೇಟ್ಗೆ ಹೋಲಿಸೋದಾದ್ರೆ ಕರ್ನಾಟಕದಲ್ಲಿ ಟಿಕೆಟ್ ದರ ಶೇ. 50 ರಿಂದ ಶೇ. 100ರಷ್ಟು ಹೆಚ್ಚಿತ್ತು. ಕೆಲ ಪರಭಾಷಾ ಸಿನಿಮಾಗಳಿಗಂತೂ ಬೇಕಾಬಿಟ್ಟಿ ಟಿಕೆಟ್ ರೇಟ್ ಜಾಸ್ತಿ ಮಾಡಲಾಗ್ತಿತ್ತು. ಆದ್ರೀಗ ಸಿದ್ದರಾಮಯ್ಯ ಸರ್ಕಾರ ಏಕರೂಪದ ಟಿಕೆಟ್ ನಿಗದಿ ಮಾಡಿದೆ. ಈ ಆದೇಶದ ಪ್ರಕಾರ ಮಲ್ಟಿಪ್ಲೆಕ್ಸ್ ಆಗಲಿ, ಸಿಂಗಲ್ ಸ್ಕ್ರೀನ್ ಥಿಯೇಟರ್ಸ್ ಆಗಲಿ, ವೀಕೆಂಡ್ ಅಥವಾ ವಾರದ ಇನ್ಯಾವುದೇ ದಿನವಾಗಲಿ, ಫಸ್ಟ್ ಡೇ ಶೋ ದಿನವಾಗಲಿ, ಪ್ಯಾನ್ ಇಂಡಿಯಾ ಸ್ಟಾರ್ ನಟನ ಸಿನಿಮಾ ಆಗಿರಲಿ.. ಇದ್ಯಾವುದನ್ನೂ ಲೆಕ್ಕಿಸದೇ ಎಲ್ಲಾ ಸಿನಿಮಾಗಳು 200 ರೂಪಾಯಿಗೆ ಮೀರದಂತೆ ಟಿಕೆಟ್ ದರ ನಿಗದಿ ಪಡಿಸಲಾಗಿದೆ. ಈ ಆದೇಶವನ್ನು ಇಂಡಸ್ಟ್ರಿ ಒಪ್ಪಿಕೊಂಡಿದೆಯಾದ್ರೂ, ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್ಗಳು ಇದರಿಂದಾಗೋ ಸಮಸ್ಯೆಗಳ ಬಗ್ಗೆಯೂ ಚರ್ಚೆಗೆ ಮುಂದಾಗಿವೆ.
ಇದನ್ನೂ ಓದಿ:ಕೇಳ್ರಪ್ಪೋ ಕೇಳಿ.. ಟೆನ್ಷನ್ನಲ್ಲಿ ಉಪೇಂದ್ರ ದಂಪತಿ.. ದುಡ್ಡು ಕೇಳಿದ್ರೆ ಕೊಡಬಾರದಂತೆ..! ಯಾಕೆ..?
10 ರೂಪಾಯಿಗೆ ಸಿನಿಮಾ ಟಿಕೆಟ್
ಹೈ ಬಜೆಟ್ ಸಿನಿಮಾಗಳಿಗೆ ಹೊಡೆತ ಬೀಳಲಿರೋ ಕಾರಣದಿಂದ ಕೆಲ ನಿರ್ಮಾಪಕರು ನೆರೆಯ ತೆಲುಗು ಚಿತ್ರರಂಗದ ಮಾದರಿಯನ್ನು ಕರ್ನಾಟಕದಲ್ಲೂ ತರುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ. ನೆರೆಯ ಆಂಧ್ರ ಪ್ರದೇಶದಲ್ಲೂ ಟಿಕೆಟ್ ದರಗಳು ಬಹಳ ಕಡಿಮೆ ಮಾಡಲಾಗಿತ್ತು. ಅದರಲ್ಲೂ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಟಿಕೆಟ್ ದರ 10 ರೂಪಾಯಿಗಳಿಂದ ಪ್ರಾರಂಭ ಆಗುತ್ತಿದ್ದವು. ಈಗಲೂ ಆಂಧ್ರದಲ್ಲಿ ಕಡಿಮೆ ಟಿಕೆಟ್ ದರವಿದೆ.
ಆದ್ರೆ ದೊಡ್ಡ ಬಜೆಟ್ ಸಿನಿಮಾಗಳು ಸರ್ಕಾರದ ಬಳಿ ಅರ್ಜಿ ಹಾಕಿ, ಬಿಡುಗಡೆ ಆದ ಮೊದಲ ವಾರ ಅಥವಾ 3 ದಿನಗಳ ತನಕ ಟಿಕೆಟ್ ಬೆಲೆ ಹೆಚ್ಚು ಮಾಡಲು ಅವಕಾಶ ನೀಡಲಾಗಿದೆ. ಜೊತೆಗೆ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಅವಕಾಶವಿದೆ. ಇದರಿಂದ ದೊಡ್ಡ ಬಜೆಟ್ ಸಿನಿಮಾಗಳ ಬಿಡುಗಡೆ ಆದ 3-4 ದಿನಗಳಲ್ಲೆ ಬಂಡವಾಳ ರಿಕವರಿ ಮಾಡಿಕೊಳ್ಳಲು ಸಹಕಾರ ಆಗ್ತಿದೆ. ಹೀಗಾಗಿ ಈ ನೀತಿಯನ್ನೇ ಕರ್ನಾಟಕದಲ್ಲೂ ತರಲು ಕೆಲ ನಿರ್ಮಾಪಕರು ಚಿಂತನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ