/newsfirstlive-kannada/media/post_attachments/wp-content/uploads/2024/09/GANESH-1.jpg)
ದೇವಾಲಯಗಳ ನಾಡು, ಕೃಷ್ಣನಗರಿ ಎಂದೆಲ್ಲ ಕರೆಯಲ್ಪಡುವ ಉಡುಪಿಯಲ್ಲಿ ಅಷ್ಟಮಿ, ಗಣೇಶೋತ್ಸವ ಬಂದ್ರೆ ಸಾಕು ಹಬ್ಬದ ವಾತಾವರಣ ನಿರ್ಮಾಣವಾಗುತ್ತೆ. ಮುಖ್ಯವಾಗಿ ಹುಲಿವೇಷಗಳೊಂದಿಗೆ ವಿಭಿನ್ನ ವೇಷಗಳು ಕಣ್ಮುಂದೆ ಹೆಜ್ಜೆ ಹಾಕುತ್ತಾ ಸಾಗುತ್ತೆ. ಇಂತಹ ಹಲವು ವೇಷಗಳಲ್ಲಿ ಯಕ್ಷಗಾನ ವೇಷವೂ ಕಾಣಸಿಗುತ್ತೆ. ಆದ್ರೆ ಹೀಗೆ ಯಕ್ಷಗಾನ ವೇಷ ಹಾಕುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಯಕ್ಷಗಾನ.. ಕರಾವಳಿಯ ಕಲೆ. ಈ ಜಾನಪದ ಕಲೆಗೆ ಅದರದ್ದೇ ಆದ ವಿಶೇಷ ಮಹತ್ವ ಇದೆ. ಕಲೆಯಾಗಿ ಮಾತ್ರವಲ್ಲದೇ ಇದನ್ನೇ ನಂಬಿ ಬದುಕುವ ಲಕ್ಷಾಂತರ ಮಂದಿ ಇದ್ದಾರೆ. ಹರಕೆ ಮೂಲಕ ಸೇವೆ ನೀಡುವುದು ಇದೆ. ಆದ್ರೆ ಯಕ್ಷಗಾನ ವೇಷ ಭೂಷಣವನ್ನ ಕೃಷ್ಣ ಜನ್ಮಾಷ್ಟಮಿ, ಗಣೇಶ ಚೌತಿ, ನವರಾತ್ರಿ ದಿನದಂದು ಹಾದಿ ಬೀದಿಯಲ್ಲಿ ಹಾಕುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ:ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಎಷ್ಟು ತಿಂಗಳಾಯಿತು.. ಶತಕ ಸಿಡಿಸುವಲ್ಲಿ ವಿರಾಟ್ ಫೇಲ್; ಯಾಕೆ?
ಹಬ್ಬದ ಸಂದರ್ಭದಲ್ಲಿ ಯಕ್ಷಗಾನ ವೇಷ ಬೇಡ
ಅಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಹಬ್ಬದ ಸಂದರ್ಭ ಕರಾವಳಿ ಭಾಗದಲ್ಲಿ ವೇಷ ಹಾಕುವ ಸಂಪ್ರದಾಯ ಇದೆ. ಈ ವೇಷ ಹಾಕುವ ಸಂಪ್ರದಾಯದಲ್ಲಿ ಕಳೆದ ಕೆಲ ವರ್ಷಗಳಿಂದ ಯಕ್ಷಗಾನದ ವೇಷ ಭೂಷಣ ಕಾಣಸಿಗುತ್ತಿವೆ. ಕಲಾವಿದರಲ್ಲದೇ ಇತರೆ ಕೆಲ ವ್ಯಕ್ತಿಗಳು ಹೊಟ್ಟೆ ಪಾಡಿಗಾಗಿ ಮತ್ತು ಕೆಲವರು ಕುಡಿತಕ್ಕೆ ಹಣ ಸಂಗ್ರಹ ಮಾಡಲು ಯಕ್ಷಗಾನದ ರಕ್ಕಸ ವೇಷ ಸೇರಿದಂತೆ ಹಲವು ವೇಷ ಭೂಷಣ ಹಾಕುತ್ತಿದ್ದಾರೆ. ಇದಕ್ಕೆ ಯಕ್ಷಗಾನ ಹಿರಿಯ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಸಾಂಸ್ಕೃತಿಕ ಪ್ರಕೋಷ್ಟದ ಹಿರಿಯ ಯಕ್ಷಗಾನ ಕಲಾವಿದರೊಬ್ಬರು ಈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾಡಿನ ಶ್ರೇಷ್ಠ ಕಲೆ ಯಕ್ಷಗಾನವನ್ನ ಹೀಗೆ ಬೀದಿಯಲ್ಲಿ ಧರಿಸಿ ಬರಬೇಡಿ ಎಂದು ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮನವಿ ಮಾಡಿದ್ದಾರೆ. ಯಕ್ಷಗಾನದ ವೇಷ ಧರಿಸಿ ಕುಡಿದು ತಿರುಗಾಡುತ್ತಾರೆ, ಚರಂಡಿಯಲ್ಲಿ ಬೀಳುತ್ತಾರೆ. ಈ ಬಗ್ಗೆ ಜನ ಕರೆ ಮಾಡಿ ಹೇಳುತ್ತಾರೆ ಎಂದು ಬೇಸರ ಹೊರಹಾಕಿದ್ದಾರೆ. ಹಬ್ಬದ ದಿನ ವೇಷ ಹಾಕುವವರು ಕಲಾವಿದರಲ್ಲ. ಸಂಪಾದನೆಗೋಸ್ಕರ ಅಡ್ಡದಾರಿ ಹಿಡಿದವರು. ಈ ಬಗ್ಗೆ ಪೊಲೀಸ್ ಇಲಾಖೆಯ ಗಮನ ಸೆಳೆದಿದ್ದೇವೆ. ಅಗತ್ಯ ಬಿದ್ದರೆ ಯಕ್ಷಗಾನ ಕಲಾವಿದರು ಕಾರ್ಯಾಚರಣೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಗಣಪತಿಗೆ 20 ಕೆ.ಜಿ ಬಂಗಾರದ ಕಿರೀಟ ದಾನ.. ಅನಂತ್ ಅಂಬಾನಿ ಖರ್ಚು ಮಾಡಿದ್ದು ಎಷ್ಟು ಕೋಟಿ ರೂಪಾಯಿ?
ಯಕ್ಷಗಾನ ಕಲೆಯನ್ನ ಅದರ ಮೌಲ್ಯವನ್ನ ಉಳಿಸುವ ಕೆಲಸಕ್ಕೆ ಹಿರಿಯ ಯಕ್ಷಗಾನ ಕಲಾವಿದರು ಮುಂದಾಗಿದ್ದಾರೆ. ಯಕ್ಷಗಾನ ಇರಲಿ, ಹುಲಿವೇಷ ಇರಲಿ ಕುಡಿದು ತೂರಾಡುವುದು ಎಷ್ಟು ಸರಿ ಅನ್ನೋದು ಕಲಾವಿದರ ಪ್ರಶ್ನೆ. ಇನ್ನಾದರೂ ಹಬ್ಬ ಇರಲಿ ಇನ್ಯಾವುದೆ ಸಂದರ್ಭದಲ್ಲಿ ಯಕ್ಷಗಾನದ ಪಾವಿತ್ರ್ಯತೆ ಉಳಿಸುವ ಕಾರ್ಯ ಆಗಬೇಕಿದೆ. ಈ ಮೂಲಕ ಕರಾವಳಿ ಗಂಡುಕಲೆಯ ಪ್ರಾಮುಖ್ಯತೆ ಹಾಗೂ ಗಾಂಭೀರ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ