/newsfirstlive-kannada/media/post_attachments/wp-content/uploads/2024/10/RAIN_TODYA.jpg)
ಪ್ರತಿ ವರ್ಷ ಮಳೆ ಕೊಟ್ಟ ಕೊಡುಗೆ ನೆನೆದು ಕೈ ಮುಗಿದು ಆನಂದಿಸುತ್ತಿದ್ದ ರಾಜ್ಯದ ಜನತೆ. ಈ ವರ್ಷ ಅದೇ ಮಳೆಯಿಂದ ಸಂಕಷ್ಟಗಳನ್ನ ಅನುಭವಿಸ್ತಿದ್ದಾರೆ. ಮನೆ ಹಾನಿ, ಬೆಳೆ ಹಾನಿ ಅನ್ನೋ ಕೂಗು ರಾಜ್ಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಮಳೆಯಾರ್ಭಟ ಮುಂದುವರಿದಿದೆ. ಬಹುತೇಕ ಜಿಲ್ಲೆಗಳನ್ನ ವರುಣದೇವ ತೊಯ್ದು ತೊಪ್ಪೆಯಾಗುವಂತೆ ಮಾಡಿದ್ದಾನೆ. ಎಲ್ಲೆಲ್ಲೂ ಆಟಾಟೋಪ ಮಾಡಿ ಅವಾಂತರ ಸೃಷ್ಟಿಸಿದ್ದಾನೆ.
ಭಾರೀ ಮಳೆಗೆ ಮಲೆನಾಡು ಅಕ್ಷರಶಃ ಕಂಗಾಲು
ಚಿಕ್ಕಮಗಳೂರಿನಲ್ಲೂ ಮಳೆರಾಯನ ರಣಾರ್ಭಟ ಮುಂದುವರಿದಿದೆ. ಮುತ್ತೋಡಿ, ಮಲ್ಲಂದೂರು ಭಾಗದಲ್ಲಿ 4 ಸೆಂಟಿ ಮೀಟರ್‌ನಷ್ಟು ಮಳೆಯಾಗಿದ್ದು, ರಸ್ತೆಯ ಮೇಲೆ ನದಿಯಂತೆ ಮಳೆ ನೀರು ಹರಿದಿದೆ. ಮಲ್ಲಂದೂರು-ಮುತ್ತೋಡಿ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದೆ. ಪರಿಣಾಮ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗುವ ಸಾಧ್ಯತೆ ಇದ್ದು, ಮಲ್ಲಂದೂರು, ಮುತ್ತೋಡಿ, ಗಾಳಿಗುಡ್ಡೆ, ಮೇಲಿನಹುಲುವತ್ತಿ ಸಂಪರ್ಕ ಕಡಿತಗೊಳ್ಳುವ ಆತಂಕ ಮನೆಮಾಡಿದೆ.
ಇದನ್ನೂ ಓದಿ: ಜಸ್ಟ್ 50 ಪೈಸೆ ಹೆಚ್ಚು ವಸೂಲಿ ಮಾಡಿದ್ದಕ್ಕೆ ಅಂಚೆ ಇಲಾಖೆಗೆ ₹15 ಸಾವಿರ ದಂಡ; ಅಸಲಿಗೆ ಆಗಿದ್ದೇನು?
ದಾವಣಗೆರೆಯಲ್ಲೂ ಕೂಡಾ ಮುಂದುವರಿದ ಮಳೆ
ಬೆಣ್ಣೆನಗರಿ ದಾವಣಗೆರೆಯಲ್ಲೂ ಮಳೆಯ ಮರ್ದನ ಹೆಚ್ಚಾಗಿದೆ. ಕಳೆದ 10 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ವಿದ್ಯಾರ್ಥಿ ಭವನ, ಗುಂಡಿ ಸರ್ಕಲ್ ಬಳಿ ಮಳೆ ನೀರು ನಿಂತು ವಾಹನ ಸವಾರರ ಪರದಾಡುವಂತಾಗಿತ್ತು.
ಕೈ ಸೇರಬೇಕಿದ್ದ ಹತ್ತಿ ಬೆಳೆ ಮಳೆಗೆ ಹಾನಿ, ರೈತ ಕಣ್ಣೀರು
ಧಾರವಾಡ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಪರಿಣಾಮ ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದ ರೈತ ಗುರುನಾಥ ಶೆಟ್ಟರ್, ಬೆಳೆದಿದ್ದ ಹತ್ತಿ ಬೆಳೆ ಸಂಪೂರ್ಣ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದೇ ರೈತ ಕಂಗಾಲಾಗಿ ಕಣ್ಣೀರಿಟ್ಟಿದ್ದಾನೆ.
ಕೋಲಾರ ಜಿಲ್ಲೆಯಲ್ಲಿ ಸುರಿಯುತ್ತಿರುವ ಜಡಿ ಮಳೆಗೆ ಟೊಮೆಟೋ, ಹೂವುಕೋಸು, ಎಲೆಕೋಸು, ಹೂವುಗಳು, ಸೊಪ್ಪು ಬೆಳೆಗಳು ಮಳೆ ಆರ್ಭಟಕ್ಕೆ ಸಿಲುಕಿವೆ. ತೇವಾಂಶ ಹೆಚ್ಚಾದ ಕಾರಣ ಗಿಡಗಳು ಕೊಳೆಯುತ್ತಿದೆ.
ಇದನ್ನೂ ಓದಿ: ಹದಿ ಹರೆಯದಲ್ಲಾಗುವ ಮಾನಸಿಕ ಆಘಾತ; ಇದು ಟೀನೇಜ್ನ ಮತ್ತೊಂದು ಮುಖದ ಅನಾವರಣ
ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಅಕಾಲಿಕ ಮಳೆ
ಕಡಬ ತಾಲೂಕಿನ ಕೆಲ ಭಾಗದಲ್ಲಿ ಗಾಳಿ, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಕೆಲ ರಸ್ತೆಗಳು ಜಲಾವೃತವಾಗಿದ್ದು, ಮಳೆ ನೀರಿನಿಂದ ಶಾಲಾ ಮಕ್ಕಳ ಪರದಾಡಿದ ಪ್ರಸಂಗ ನಡೆದಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಅಂತಾ ಯಾವ ದಿಕ್ಕನ್ನೂ ಬಿಡದೇ ರಾಜ್ಯ ಪೂರ್ತಿ ಮಳೆರಾಯ ಆರ್ಭಟ ಮಾಡುತ್ತಿದ್ದಾನೆ. ಮಳೆಗಾಲ ಮುಗೀತು ಅನ್ನುವಷ್ಟರಲ್ಲಿ ವರುಣ ಅವಾಂತರವನ್ನೇ ಸೃಷ್ಟಿಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ