/newsfirstlive-kannada/media/media_files/2025/09/03/afghanistan-2025-09-03-08-13-02.jpg)
ಅಫ್ಘಾನಿಸ್ತಾನದ ಪರಿಸ್ಥಿತಿ ಘನಘೋರ. ಎಲ್ಲೆಲ್ಲೂ ಸಾವು-ನೋವಿನ ಧ್ವನಿ ಕೇಳಿ ಬರುತ್ತಿದೆ. ರಣಭೀಕರ ಭೂಕಂಪದಿಂದ ಸಾವಿನ ಸಂಖ್ಯೆ 1,400 ದಾಟಿದೆ. 3 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡು ನರಳುವಂತಾಗಿದೆ. ಈ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಇವತ್ತು ದಕ್ಷಿಣ ಭಾಗದಲ್ಲಿ 5.5 ತೀವ್ರತೆಯ ಭೂಕಂಪ ದಾಖಲಾಗಿದೆ. ಇತ್ತ ಭಾರತ ಆಹಾರ ಸಾಮಗ್ರಿ, ವೈದ್ಯಕೀಯ ವಸ್ತುಗಳ ನೆರವು ನೀಡಿದೆ.
ಸಾವಿನ ಮೆರವಣಿಗೆ. ಭೂಕಂಪದ ರೂಪದಲ್ಲಿ ಅಪ್ಪಳಿಸಿದ ಜವರಾಯ ಕೇಕೆ ಹಾಕಿದ್ದಾನೆ. ಛಿದ್ರಛಿದ್ರವಾದ ಮನೆಗಳು, ಕಟ್ಟಡಗಳು.. ಎಲ್ಲಿ ನೋಡಿದರೂ ಅವಶೇಷಗಳೇ.. ಸಾವು-ನೋವುಗಳ ಚೀತ್ಕಾರ ಘನಘೋರ.
1,411 ಮಂದಿ ಸಾವು.. 3 ಸಾವಿರಕ್ಕೂ ಹೆಚ್ಚು ಮಂದಿಗೆ ಗಾಯ
ಅಪ್ಘಾನಿಸ್ತಾನದ ಪೂರ್ವ ಭಾಗ, ಪಾಕಿಸ್ತಾನದ ಪಶ್ಚಿಮ ಗಡಿ ಪ್ರದೇಶ. ಭೂಕಂಪನಾಭಿ ಕೇಂದ್ರ ಜಲಾಲಾಬಾದ್ ಬಳಿ ಇರೋ ಕುನಾರ್, ನಂಗರ್ಹಾರ್, ಲಮ್ಮನ್ ಹಾಗೂ ನುರಿಸ್ತಾನ್ ಪ್ರದೇಶದ ಸುತ್ತಮುತ್ತ ಯಮಪಾಶ ಹಾಕಿರೋ ಭೂಕಂಪ ಮರಣಮೃದಂಗ ಬಾರಿಸಿದೆ. ಇನ್ನು ಕುನಾರ್ ಪ್ರಾಂತ್ಯ ಒಂದರಲ್ಲೇ ಒಂದೇ ರಾತ್ರಿಯಲ್ಲಿ 1400ಕ್ಕೂ ಹೆಚ್ಚು ಜನರನ್ನು ಬಲಿ ಹಾಕಿದೆ. 3 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಈ ಕುರಿತು ತಾಲಿಬಾನ್ ಸರ್ಕಾರದ ವಕ್ತಾರ ಜಬಿವುಲ್ಲಾ ಮುಜಾಹಿದ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಂಟೆಗಂಟೆಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಮೊನ್ನೆ ಭಾನುವಾರ ರಾತ್ರಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು ಜಲಾಲಾಬಾದ್‌ನಿಂದ ಈಶಾನ್ಯಕ್ಕೆ 27 ಕಿ.ಮೀ ದೂರದಲ್ಲಿ ಹಾಗೂ 8 ಕಿ.ಮೀ ಆಳದಲ್ಲಿ ಧರೆ ನಡುಗಿದೆ.
ಸಾವಿನ ಸಂಖ್ಯೆ ಏರಿಕೆಗೆ ದುರ್ಬಲ ಕಟ್ಟಡಗಳೇ ಕಾರಣ!
ಇನ್ನು ಅಫ್ಘಾನಿಸ್ತಾನದಲ್ಲಿ ಹೆಚ್ಚು ಮಣ್ಣಿನ ಮನೆಗಳನ್ನು ನಿರ್ಮಿಸಲಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗಲು ಇದೇ ಪ್ರಮುಖ ಕಾರಣ ಎನ್ನಲಾಗಿದೆ. ಗುಣಮಟ್ಟ ಇಲ್ಲದ ಕಾರಣ ಸ್ವಲ್ಪ ಭೂಕಂಪ ಆದ್ರೆ ಸಾಕು ಕಟ್ಟಡಲು ಮುರಿದು ಬೀಳುತ್ತವೆ. ಇದೇ ಇಷ್ಟೊಂದು ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಭೂಕಂಪ ಪೀಡಿತ ಅಫ್ಘಾನಿಸ್ತಾನಕ್ಕೆ ಭಾರತ ನೆರವು!
ನೆರೆಮನೆ ಅಫ್ಘಾನಿಸ್ತಾನ ಪ್ರಬಲ ಭೂಕಂಪಕ್ಕೆ ತತ್ತರಿಸಿದ್ದು ಭಾರತ ಮಾನವೀಯ ನೆರವು ಘೋಷಿಸಿದೆ. ಟನ್ಗಟ್ಟಲೇ ತುರ್ತು ಆಹಾರ ಸಾಮಗ್ರಿ, ವೈದ್ಯಕೀಯ ಸಾಮಗ್ರಿಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ತಲುಪಿದ್ದು ಅಲ್ಲಿಂದ ಕುನಾರ್ ಪ್ರಾಂತ್ಯ ತಲುಪಿವೆ.
ಇದನ್ನೂ ಓದಿ:ದರ್ಶನ್ಗೆ ಬಳ್ಳಾರಿ ಜೈಲಿನ ಭಯ.. ಇಂದು ನ್ಯಾಯಾಲಯ ಏನ್ ಹೇಳುತ್ತೆ ಅನ್ನೋ ಟೆನ್ಷನ್
ಇನ್ನು ತಾಲಿಬಾನಿಗಳು 2021ರಲ್ಲಿ ಹೊಸ ಸರ್ಕಾರ ರಚನೆ ಮಾಡಿದ ಬಳಿಕ ಸಂಭವಿಸುತ್ತಿರುವ 3ನೇ ಅತಿ ಭೀಕರ ಭೂಕಂಪ ಇದಾಗಿದೆ. ಹಣಕಾಸಿನ ನೆರವು ಕಡಿತ, ದುರ್ಬಲಕ ಆರ್ಥಿಕತೆ, ಇರಾನ್ ಹಾಗೂ ಪಾಕಿಸ್ತಾನದಿಂದ ಲಕ್ಷಾಂತರ ಜನರು ಬಲವಂತವಾಗಿ ಮರಳಿದ್ದರಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ಭೂಕಂಪ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ. ಮತ್ತೊಂದೆಡೆ ಅಮೆರಿಕ ಸೇರಿ ಹಲವು ರಾಷ್ಟ್ರಗಳು ಅಫ್ಘಾನಿಸ್ತಾನಕ್ಕೆ ನೆರವು ನೀಡುವುದನ್ನು ನಿಲ್ಲಿಸಿರುವುದು ದೊಡ್ಡ ಹೊಡೆತವಾಗಿದೆ.
ಅಫ್ಘಾನಿಸ್ತಾನದಲ್ಲಿ ಇವತ್ತು ಮತ್ತೆ 5.5 ತೀವ್ರತೆಯ ಭೂಕಂಪ!
ಈ ಮಧ್ಯೆ ಅಫ್ಘಾನಿಸ್ತಾನದಲ್ಲಿ ಇವತ್ತು ಮತ್ತೆ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿ 5.5 ತೀವ್ರತೆ ಭೂಕಂಪ ದಾಖಲಾಗಿದ್ದು ಇನ್ನೂ ಸಾವು-ನೋವಿನ ವರದಿಯಾಗಿಲ್ಲ. ಪದೇ ಪದೇ ಭೂಕಂಪದ ಹೊಡೆತಕ್ಕೆ ಸಿಲುಕಿ ಅಫ್ಘಾನ್ ಜನರು ನರಳುತ್ತಿದ್ದು ವಿಶ್ವಸಮುದಾಯ ಮಾನವೀಯ ನೆಲೆಯಲ್ಲಿ ನೆರವಿಗೆ ನಿಲ್ಲಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ