/newsfirstlive-kannada/media/media_files/2025/10/12/pakistan_afghanistan-2025-10-12-22-25-09.jpg)
ಇತ್ತ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ನೀಡಿದ್ದು ಉಭಯ ದೇಶಗಳ ನಡುವೆ ಸ್ನೇಹ-ಸಂಬಂಧ ವೃದ್ಧಿಸುತ್ತಿದ್ರೆ ಅತ್ತ ಭಾರತದ ಶತ್ರು ಪಾಕಿಸ್ತಾನದ ಮೇಲೆ ಅಫ್ಘಾನಿಸ್ತಾನದ ತಾಲಿಬಾನಿ ಸೇನೆ ದಾಳಿ ನಡೆಸಿದೆ. ಮೊನ್ನೆಯ ಪಾಕಿಸ್ತಾನದ ದಾಳಿ ಸೇಡು ತೀರಿಸಿಕೊಂಡಿದ್ದು ಅಫ್ಘಾನಿಸ್ತಾನ- ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಕಿಸ್ತಾನದ ಮೇಲೆ ಅಫ್ಘಾನ್ ಸೇನೆ ಬೆಂಕಿ-ಬಿರುಗಾಳಿ. ತಡರಾತ್ರಿ ಮಿಸೈಲ್​ಗಳ ಸುರಿಮಳೆ. ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಅಪಾರ ಹಾನಿಯಾಗಿದೆ. ಪಾಕಿಸ್ತಾನಕ್ಕೆ ತಾಲಿಬಾನಿ ಸೈನ್ಯ ಏಟು-ಎದುರೇಟು.
ಪಾಕ್​ನ 7 ಗಡಿ ಭಾಗಗಳ ಮೇಲೆ ಅಫ್ಘಾನ್ ದಾಳಿ
ಪಾಕಿಸ್ತಾನ- ಅಫ್ಘಾನಿಸ್ತಾನ ನಡುವೆ ಸಂಘರ್ಷ ಶುರುವಾಗಿದೆ. ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿದ್ದಾಗಿ ತಾಲಿಬಾನ್ ಹೇಳಿಕೊಂಡಿದೆ, ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರವಾಗಿ ತಾಲಿಬಾನ್ ಪ್ರತಿದಾಳಿ ನಡೆಸಿದೆ. ಅಫ್ಘಾನ್ ಸೇನೆ ಪದೇ ಪದೇ ಗಡಿ ಉಲ್ಲಂಘನೆ ಮಾಡ್ತಿದೆ ಅಂತ ಕಾಲು ಕೆರೆದಿದ್ದ ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ತಾಲಿಬಾನಿ ಸೇನೆ ನುಗ್ಗಿ ಹೊಡೆದಿದೆ. ಡ್ಯುರಾಂಡ್ ರೇಖೆಯ ಗಡಿ ಭಾಗದಲ್ಲಿ ಪಾಕ್​ನ 7 ವಿಭಿನ್ನ ಪ್ರದೇಶಗಳ ಮೇಲೆ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿದೆ. ಎರಡೂ ಸೇನೆಗಳ ನಡುವೆ ಸುಮಾರು ಮೂರೂವರೆ ಗಂಟೆ ಗುಂಡಿನ ದಾಳಿಯಾಗಿದ್ದು ತಾಲಿಬಾನಿ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ ಎನ್ನಲಾಗಿದೆ.
ದಾಳಿ ಕುರಿತು ಪ್ರತಿಕ್ರಿಯಿಸಿರೋ ತಾಲಿಬಾನ್ ಸರ್ಕಾರದ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್, ಪಾಕಿಸ್ತಾನದ 25 ಸೇನಾ ನೆಲೆಗಳನ್ನು ಧ್ವಂಸಮಾಡಿದ್ದು 58 ಸೈನಿಕರು ಸಾವನ್ನಪ್ಪಿದ್ದಾರೆ ಹಾಗೂ 30 ಸೈನಿಕರು ಗಾಯಗೊಂಡಿದ್ದಾರೆ ಅಂತ ಹೇಳಿದ್ದಾರೆ. ಅಫ್ಘಾನ್ ಗಡಿ ಪ್ರದೇಶಗಳು ಹಾಗೂ ಡ್ಯುರಾಂಡ್ ಲೈನ್​​ನಲ್ಲಿ ಪರಿಸ್ಥಿತಿ ಸಂಪೂರ್ಣ ನಮ್ಮ ಹಿಡಿತದಲ್ಲಿದೆ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆದಿದ್ದೇವೆ. ನಾವು ಶಾಂತಿ ಬಯಸುತ್ತೇವೆ ಅಂತ ಮಾತುಕತೆಗೆ ಆಹ್ವಾನಿಸಿದ್ದಾರೆ.
ಅಫ್ಘಾನ್ ಮೇಲೆ ಪಾಕಿಸ್ತಾನಿ ಸೇನೆಯಿಂದ ಪ್ರತಿದಾಳಿ
ಆದ್ರೆ, ಅಫ್ಘಾನ್ ಸೇನೆಯ ದಾಳಿಗೆ ಪಾಕಿಸ್ತಾನ ಸೇನೆಯೂ ಪ್ರತೀಕಾರ ತೀರಿಸಿಕೊಂಡಿದೆ. ಅಫ್ಘಾನ್ ಸೇನೆಯ 6 ಚೆಕ್​ಪೋಸ್ಟ್​​ಗಳನ್ನ ನಾಶ ಮಾಡಿದೆ. ಫಿರಂಗಿ, ಗುಂಡಿನ ದಾಳಿಯ ಚಿತ್ರಗಳನ್ನು ಪಾಕಿಸ್ತಾನದ ಮಾಧ್ಯಮಗಳು ಪ್ರಸಾರ ಮಾಡಿವೆ.
ಇದನ್ನೂ ಓದಿ:ತಾಕತ್ ಇದ್ರೆ RSS ಬ್ಯಾನ್ ಮಾಡಲಿ.. ಪ್ರಿಯಾಂಕ್ ಖರ್ಗೆಗೆ MP ರೇಣುಕಾಚಾರ್ಯ ಚಾಲೆಂಜ್
ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಾಕಿಸ್ತಾನ ಪ್ರತಿಜ್ಞೆ!
ಇತ್ತ ಯುದ್ಧದ ಕುರಿತು ಪ್ರತಿಕ್ರಿಯಿಸಿರೋ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಅಫ್ಘಾನಿಸ್ತಾನ ಪ್ರಚೋದನೆ ಹೇಳಿಕೆಯನ್ನು ಖಂಡಿಸಿದ್ದಾರೆ. ತಾಲಿಬಾನಿಗಳ ದಾಳಿಗೆ ಖಡಕ್ ಪ್ರತಿಕ್ರಿಯೆ ಕೊಡುವುದಾಗಿ ಪ್ರತಿಜ್ಞೆಗೈದಿದ್ದಾರೆ. ಮತ್ತೊಂದೆಡೆ ಪಾಕ್​ನ ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ಭಾರತಕ್ಕೆ ಉತ್ತರ ಕೊಟ್ಟಂತೆ ಕಾಬೂಲ್​ಗೆ ಸೂಕ್ತ ಉತ್ತರ ಕೊಡ್ತೀವಿ ಅಂತ ಒಣಜಂಭ ಕೊಚ್ಚಿಕೊಂಡಿದ್ದಾನೆ.
ಆದ್ರೆ ಇತ್ತ ಇವತ್ತು ಬೆಳಗ್ಗೆ ಕೂಡ ತಾಲಿಬಾನ್ ಸೇನೆ ಪಾಕ್ ಗಡಿ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ ಪಾಕ್ ಸೈನಿಕರು ಡುರಾಂಡ್ ರೇಖೆ ದಾಟಿದ್ದರು ಅಂತ ಅಫ್ಘಾನ್ ಸರ್ಕಾರ ಹೇಳಿದೆ. ಅಫ್ಘಾನ್ ವಿದೇಶಾಂಗ ಸಚಿವ ಭಾರತ ಭೇಟಿಗೆ ದೇಶದ್ರೋಹಿ ಎಂದಿದ್ದ ಪಾಕಿಗಳಿಗೆ ತಾಲಿಬಾನಿಗಳು ತಕ್ಕ ತಿರುಗೇಟು ನೀಡುವ ಮೂಲಕ ಎದೆಯುಬ್ಬಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ