/newsfirstlive-kannada/media/media_files/2025/10/17/indvsafg_1-2025-10-17-21-33-25.jpg)
ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಲು ಹೋಗಿ ಪಾಕಿಸ್ತಾನ ಇಂಗು ತಿಂದ ಮಂಗನಂತಾಗಿದೆ. ತಾಲಿಬಾನಿಗಳ ಹೊಡೆತ ತಾಳಲಾಗದೇ ಮುನೀರ್ ಪಡೆ ಮಂಡಿಯೂರಿತ್ತು. ಇದರ ಬೆನ್ನಲ್ಲೇ ಉಭಯ ದೇಶಗಳು 48 ಗಂಟೆಗಳ ಕದನ ವಿರಾಮ ಘೋಷಿಸಿದವು. ಕದನ ವಿರಾಮದ ಅವಧಿ ಅಂತ್ಯವಾಗುತ್ತ ಬಂದಿದ್ದು, ಪಾಕ್​-ಅಫ್ಘಾನ್​ ಗಡಿಯಲ್ಲಿ ಮತ್ತೆ ಟೆನ್ಷನ್​ ಹೆಚ್ಚಾಗಿದೆ.
ನಿಂಗಿದೂ ಬೇಕಿತ್ತಾ ಮಗನೇ, ವಾಪಸ್ಸು ಹೊಂಟ್ಹೋಗು ಶಿವನೇ.. ಈ ಮಾತು ಪಾಪಿ ರಾಷ್ಟ್ರ ಪಾಕಿಸ್ತಾನಕ್ಕೆ ಸರಿಯಾಗಿ ಸೂಟ್​ ಆಗುತ್ತೆ. ಸುಮ್ಮನಿರಲಾಗದೇ ಆಫ್ಘಾನಿಸ್ತಾನದ ಮೇಲೆ ಯುದ್ಧ ಮಾಡಲು ಹೋಗಿ ಇದೀಗ ಮುನೀರ್​ ಪಡೆ ತಾಲಿಬಾನಿಗಳ ಮುಂದೆ ಮಂಡಿಯೂರಿದೆ. ಪಾಪ ಹೇಗಿದೆ ನೋಡಿ ಪಾಕಿಸ್ತಾನದ ಪರಿಸ್ಥಿತಿ.
ಅಫ್ಘಾನ್​ ಮೇಲೆ ದಾಳಿ ನಡೆಸಲು ಹೋಗಿ ಮಂಡಿಯೂರಿದ ಪಾಕ್​
ಅಫ್ಗಾನಿಸ್ತಾನದಲ್ಲಿ ನೆಲೆ ನಿಂತು ಪಾಕಿಸ್ತಾನದಲ್ಲಿ ಉಗ್ರವಾದಿ ಕೃತ್ಯಗಳನ್ನು ಎಸಗುತ್ತಿದೆ ಎಂದು ಆರೋಪಿಸಿ ದಾಳಿಗಳನ್ನು ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ಪಾಕಿಸ್ತಾನದ ಗಡಿಯಲ್ಲಿರುವ ಸೇನಾ ಪೋಸ್ಟ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. 1 ವಾರ ಕಾಲ ಭೀಕರ ಯುದ್ಧವೇ ನಡೆದು ಉಭಯ ಕಡೆ ಹಲವು ಸಾವು ನೋವು ಸಂಭವಿಸಿತ್ತು. ಕೊನೆಗೆ ತಾಲಿಬಾನಿಗಳ ಹೊಡೆತವನ್ನು ತಾಳಲಾಗದೇ ಮುನೀರ್​ ಪಡೆ ಸೋತು ಸುಣ್ಣವಾಗಿ ತಾಲಿಬಾನಿಗಳಿಗೆ ತಲೆಬಾಗಿತ್ತು. ಈ ವೇಳೆ ತಾಲಿಬಾನಿಗಳು ಪಾಕ್​ನ ಯುದ್ಧ ಟ್ಯಾಂಕರ್​ಗಳ ವಶಕ್ಕೆ ಪಡೆದುಕೊಂಡು.. ಅಫ್ಘಾನ್​ ರಸ್ತೆ ರಸ್ತೆಗಳಲ್ಲಿ ಆಟಿಕೆ ವಸ್ತುಗಳಂತೆ ಸಂಚಾರ ಮಾಡುವ ಮೂಲಕ ಪಾಕ್​​ಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.
ಭೀಕರ ಕಾಳಗದಲ್ಲಿ 60 ಪಾಕಿಸ್ತಾನಿ ಸೈನಿಕರನ್ನ ಹತ್ಯೆಗೈದಿದ್ದು 20ಕ್ಕೂ ಹೆಚ್ಚು ಬಾರ್ಡರ್ ಔಟ್ ಪೋಸ್ಟ್‌ಗಳನ್ನ ಧ್ವಂಸಗೊಳಿಸಿದ್ದಾಗಿ ತಾಲಿಬಾನ್​ ಹೇಳಿಕೊಂಡಿದೆ
48 ಗಂಟೆಗಳ ಕದನ ವಿರಾಮ.. ದೋಹಾದಲ್ಲಿ ಸಂಧಾನ ಮಾತುಕತೆಗೆ ವೇದಿಕೆ
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಗಡಿಯಲ್ಲಿ ಒಂದು ವಾರಗಳ ಕಾಲ ಗಡಿಯಲ್ಲಿ ನಡೆದಿದ್ದ ಭೀಕರ ಕಾಳಗಕ್ಕೆ ಸದ್ಯ 48 ಗಂಟೆಗಳ ಕದನ ವಿರಾಮ ಬಿದ್ದಿದೆ. ಉಭಯ ದೇಶಗಳೂ ಕದನ ವಿರಾಮ ಘೋಷಿಸಿಕೊಂಡಿವೆ. ಆದ್ರೆ ಕದನ ವಿರಾಮಯಾಚಿಸಿದ್ದು ಪಾಕಿಸ್ತಾನ ಎಂದು ಅಫ್ಘಾನಿಸ್ತಾನ ಹೇಳಿಕೊಂಡಿದೆ. ಆದ್ರೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ. ಅಫ್ಘಾನಿಸ್ತಾನವೇ ಕದನವಿರಾಮ ಕೇಳಿತು ಎಂದು ಪಾಕಿಸ್ತಾನ ತಲೆಬುಡವಿಲ್ಲದ ವಾದಕ್ಕಿಳಿದೆ. ಇದರ ನಡುವೆ ಕತಾರ್ ಹಾಗೂ ಸೌದಿ ಅರೇಬಿಯಾದ ಮಧ್ಯಸ್ಥಿಕೆಯನ್ನ ಪಾಕಿಸ್ತಾನಯಾಚಿಸಿದ್ದು, ದೋಹಾದಲ್ಲಿ ಸದ್ಯ ಸಂಧಾನ ಮಾತುಕತೆಗೆ ವೇದಿಕೆ ಸಜ್ಜಾಗಿದೆ. ಇನ್ನು ಅಫ್ಘಾನ್ ಮತ್ತು ಪಾಕಿಸ್ತಾನಿ ಮಿಲಿಟರಿ ಪಡೆಗಳು ಯುದ್ಧ ಶಾಶ್ವತವಾಗಿ ಕೊನೆಗೊಳಿಸಬೇಕೆಂದು ವಿಶ್ವಸಂಸ್ಥೆ ಕರೆ ನೀಡಿದೆ.
ತಾಲಿಬಾನ್​ ಜೊತೆ ಕಿರಿಕ್​, ಭಾರತದ ಮೇಲೆ ಗೂಬೆ ಕೂರಿಸಲು ಪಾಕ್​ ಯತ್ನ
ಅಫ್ಘಾನಿಸ್ತಾನದ ಜೊತೆ ಮಿಲಿಟರಿ ಸಂಘರ್ಷ ಆರಂಭಿಸಿ ಪೆಟ್ಟು ತಿಂದಿರುವ ಪಾಕಿಸ್ತಾನ ಭಾರತದ ವಿರುದ್ಧ ಕತ್ತಿ ಮಸೆಯೋದನ್ನು ಮುಂದುವರಿಸಿದೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಈ ಬಡಿದಾಟದ ಹೊಣೆಯನ್ನು ಭಾರತದ ಮೇಲೆ ಹೇರುವ ವ್ಯರ್ಥ ಪ್ರಯತ್ನ ಮಾಡಿದೆ. ಅಫ್ಘಾನಿಸ್ತಾನವು ಭಾರತದ ಪ್ರಾಕ್ಸಿಯಾಗಿ ಯುದ್ಧ ಮಾಡುತ್ತಿದೆ ಎಂದು ಪುಂಗತೊಡಗಿದೆ. ಆದ್ರೆ ಗುಳ್ಳೆ ನರಿ ಪಾಕಿಸ್ತಾನದ ಈ ಆರೋಪಕ್ಕೆ ಭಾರತ ಯಾವುದೇ ಪ್ರತಿಕ್ರಿಯೇ ನೀಡಿಲ್ಲ.
ಇನ್ನು ಕದನ ವಿರಾಮದ ಅವಧಿ ಮುಗಿಯುತ್ತ ಬರ್ತಿದ್ದಂತೆ, ಪಾಕ್​- ಅಫ್ಘಾನ್​ ಗಡಿಯಲ್ಲಿ ಮತ್ತೆ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಉತ್ತರ ವಜೀರಿಸ್ತಾನ್ ಜಿಲ್ಲೆಯ ಸೇವಾ ಆವರಣದಲ್ಲಿ ಟಿಟಿಪಿ ಸೂಸೈಡ್​ ಬಾಂಬ್​ ದಾಳಿ ನಡೆಸಿದೆ ಎಂದು ಪಾಕ್​ ಹೇಳಿಕೊಂಡಿದೆ. ಇದರ ಬೆನ್ನಲ್ಲೇ ಪಾಕ್​ ಕೂಡ ಗಡಿಯತ್ತ ಸೇನೆಯನ್ನು ಜಮಾವಣೆ ಮಾಡಲು ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ