/newsfirstlive-kannada/media/post_attachments/wp-content/uploads/2023/07/Vidhana-Soudha.jpg)
ಲೋಕಸಭೆ ಚುನಾವಣೆ ಬೆನ್ನಲ್ಲೇ ಕರ್ನಾಟಕದಲ್ಲಿ ಉಪಚುನಾವಣೆಯ ಚರ್ಚೆ ಶುರುವಾಗಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಶಾಸಕರು ಲೋಕಸಭೆಗೆ ಆಯ್ಕೆಯಾಗಿದ್ದು ಬೈಎಲೆಕ್ಷನ್ ಎದುರಾಗಿದೆ. ಮೂರು ವಿಧಾನಸಭಾ ಕ್ಷೇತ್ರಗಳ ಟಿಕೆಟ್ಗೆ ಡಜನ್ಗಟ್ಟಲೇ ಆಕಾಂಕ್ಷಿಗಳಿದ್ದು ತೆರೆಮರೆಯಲ್ಲಿ ಟಿಕೆಟ್ ಪಡೆಯುವ ಕಸರತ್ತು ನಡೆಯುತ್ತಿದೆ.
ಸಚಿವ, ಇಬ್ಬರು ಮಾಜಿ ಸಿಎಂಗಳಿಂದ ತೆರವಾಗಿದ್ದ ಸ್ಥಾನಕ್ಕೆ ಬೈಎಲೆಕ್ಷನ್
ಲೋಕಸಭಾ ಮಹಾಸಮರದ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕರ್ನಾಟಕದಲ್ಲಿ ಬೈಎಲೆಕ್ಷನ್ ಉಪಸಮರದ ಚರ್ಚೆ ಶುರುವಾಗಿದೆ. ಸದ್ಯ ರಾಜ್ಯದ ಮೂವರು ಶಾಸಕರು ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡ್ತಿರೋ ಕಾರಣ ಖಾಲಿಯಾದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇಬ್ಬರು ಮಾಜಿ ಸಿಎಂಗಳು ಹಾಗೂ ಓರ್ವ ಸಚಿವ ಮೂವರು ಶಾಸಕರಾಗಿದ್ದರೂ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.
ಇದನ್ನೂ ಓದಿ:ಮುಂಗಾರು ಮಳೆ ಬಿರುಸು.. ಇವತ್ತು ಈ ರಾಜ್ಯಗಳಲ್ಲಿ ಮೊದಲ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ..!
ಬೈ-ಎಲೆಕ್ಷನ್ ಕ್ಷೇತ್ರಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ಶಾಸಕರಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿದ್ದು ಉಪಚುನಾವಣೆ ನಡೆಯಬೇಕಿದೆ. ಅತ್ತ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂಸದರಾಗಿ ಆಯ್ಕೆಯಾಗಿದ್ದು ಬೈಎಲೆಕ್ಷನ್ ನಡೆಯಲಿದೆ. ಇತ್ತ ಸಂಡೂರು ಶಾಸಕರಾಗಿದ್ದ ಸಚಿವ ಇ.ತುಕಾರಾಂ ಲೋಕಸಭೆಗೆ ಆಯ್ಕೆಯಾಗಿದ್ದು ಇಲ್ಲಿಯೂ ಉಪಚುನಾವಣೆ ನಡೆಯಲಿದೆ.
ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ಮೇಲೆ ಯೋಗೇಶ್ವರ್ ಕಣ್ಣು
ಮಾಜಿ ಸಿಎಂ ಕುಮಾರಸ್ವಾಮಿಯಿಂದ ತೆರವಾಗ್ತಿರೋ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು ಹಲವು ಆಕಾಂಕ್ಷಿಗಳಿದ್ದಾರೆ. ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಎಂಟ್ರಿಯಾಗ್ತಾರೆ ಎಂಬ ಗುಸುಗುಸು ಶುರುವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಲ್ಲಿ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ನೆಲೆ ಕಲ್ಪಿಸುವ ಯತ್ನ ನಡೆಯುತ್ತಿದೆ ಎನ್ನಲಾಗಿದೆ. ಮತ್ತೊಂದೆಡೆ ಚನ್ನಪಟ್ಟಣದ ಮೇಲೆ ಸೈನಿಕ ಸಿ.ಪಿ.ಯೋಗೇಶ್ವರ್ ಕೂಡ ಕಣ್ಣಿಟ್ಟಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಡಿಕೆ ವಿರುದ್ಧ ಸೋಲನ್ನಪ್ಪಿದ್ದ ಯೋಗೇಶ್ವರ್ ಉಪಚುನಾವಣೆಯಲ್ಲಿ ಟಿಕೆಟ್ ಪಡೆದು ಗೆಲ್ಲುವ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಕಳೆದ ಬಾರಿ ಮಿಸ್, ಈ ಬಾರಿ ಮಿಸ್ ಆಗುವ ಚಾನ್ಸೇ ಇಲ್ಲ ಅಂತಿದ್ದಾರೆ ನಿತೀಶ್ ಕುಮಾರ್.. ಏನದು..?
ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಪುತ್ರ ಸ್ಪರ್ಧೆ ಮಾಡ್ತಾರಾ?
ಅತ್ತ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲೂ ಉಪಚುನಾವಣೆ ನಡೆಯಲಿದ್ದು ಮಾಜಿ ಸಿಎಂ ಬೊಮ್ಮಾಯಿ ಪುತ್ರ ಭರತ್ ಎಂಟ್ರಿ ಕೊಡಬಹುದು ಎಂಬ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಇದೇ ಕ್ಷೇತ್ರದ ಟಿಕೆಟ್ ಮೇಲೆ ಮಾಜಿ ಸಚಿವ ಬಿ.ಸಿ.ಪಾಟೀಲ್ ಕೂಡ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಇ.ತುಕಾರಾಂರಿಂದ ತೆರವಾಗ್ತಿರೋ ಸಂಡೂರಿಗೆ ಯಾರು ಅಭ್ಯರ್ಥಿ?
ಅತ್ತ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಸಂಸತ್ ಪ್ರವೇಶಿಸಿರುವ ಸಚಿವ ಇ.ತುಕಾರಾಂ ಪ್ರತಿನಿಧಿಸಿದ್ದ ಸಂಡೂರು ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆಗೆ ನಿಲ್ಲಲು ಒಲ್ಲೆ ಎಂದಿದ್ದ ಇ.ತುಕಾರಾಂ ತಮ್ಮ ಪುತ್ರಿಗೆ ಟಿಕೆಟ್ ಕೇಳಿದ್ದರು.
ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ.. ಕ್ಯಾಪ್ಟನ್ ರೋಹಿತ್ ಆಡೋದು ಡೌಟ್..!
ಇದಕ್ಕೊಪ್ಪದ ಹೈಕಮಾಂಡ್ ಇ.ತುಕಾರಾಂಗೆ ಟಿಕೆಟ್ ನೀಡಿತ್ತು. ಆದ್ರೆ ಟಿಕೆಟ್ ಪಡೆಯುವ ಮುನ್ನ ಷರತ್ತು ಇಟ್ಟಿದ್ದ ಇ.ತುಕಾರಾಂ ಒಂದು ವೇಳೆ ನಾನು ಎಂಪಿ ಎಲೆಕ್ಷನ್ನಲ್ಲಿ ಗೆದ್ದರೆ ತಮ್ಮ ಪುತ್ರಿಗೆ ಸಂಡೂರು ಉಪಚುನಾವಣೆಗೆ ಟಿಕೆಟ್ ನೀಡಬೇಕೆನ್ನುವ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದ್ರೆ ಸಂಡೂರಿಗೆ ಹಲವು ಪ್ರಬಲ ಆಕಾಂಕ್ಷಿಗಳಿದ್ದು ತುಕಾರಾಂ ಅಭಿಪ್ರಾಯ ಆಲಿಸಿಯೇ ಟಿಕೆಟ್ ಅಂತಿಮಗೊಳಿಸುವ ಸಾಧ್ಯತೆ ಇದೆ. ಒಟ್ಟಾರೆ, ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಟಿಕೆಟ್ಗೆ ಹಲವು ಆಕಾಂಕ್ಷಿಗಳಿದ್ದು ಅಂತಿಮವಾಗಿ ಯಾರು ಟಿಕೆಟ್ ಪಡೆಯುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ವರದಿ: ಹರೀಶ್ ಕಾಕೋಳ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ