ಲೆಬನಾನ್‌ ದೇಶದಲ್ಲಿ ಪೇಜರ್ ಬ್ಲಾಸ್ಟ್‌ ಬೆನ್ನಲ್ಲೇ ಮತ್ತೆ ನಿಗೂಢ ಸ್ಫೋಟಗಳು; ಡೆಡ್ಲಿ ಪ್ಲಾನ್‌ನ ರಹಸ್ಯ ಇಲ್ಲಿದೆ!

author-image
admin
Updated On
ಲೆಬನಾನ್‌ ದೇಶದಲ್ಲಿ ಪೇಜರ್ ಬ್ಲಾಸ್ಟ್‌ ಬೆನ್ನಲ್ಲೇ ಮತ್ತೆ ನಿಗೂಢ ಸ್ಫೋಟಗಳು; ಡೆಡ್ಲಿ ಪ್ಲಾನ್‌ನ ರಹಸ್ಯ ಇಲ್ಲಿದೆ!
Advertisment
  • ಜಸ್ಟ್‌ 30 ನಿಮಿಷ ಸಾವಿರಾರು ಪೇಜರ್​​ಗಳು ಒಂದೇ ಸಮನೆ ಸ್ಫೋಟ
  • ಏಕಾಏಕಿ ಸಾವಿರಾರು ಪೇಜರ್​ಗಳು​ ಸ್ಫೋಟಗೊಂಡಿದ್ದು ಹೇಗೆ?
  • ಮಾರ್ಕೆಟ್​​ನಲ್ಲಿ, ಕಾರಲ್ಲಿ, ನಿಂತಲ್ಲಿ, ಕುಂತಲ್ಲಿ ಎಲ್ಲಂದ್ರಲ್ಲಿ ಪೇಜರ್ ಬ್ಲಾಸ್ಟ್‌!

ಭೀಕರ... ಬರ್ಬರ... ನೋಡ ನೋಡುತ್ತಲೇ ಮಾರ್ಕೆಟಲ್ಲಿ ಲಕ್ಷ್ಮಿ ಬಾಂಬ್ ರೀತಿ ಸಿಡಿದ ಸ್ಫೋಟಕಗಳು. ತಮ್ಮ ಬಳಿಯೇ ಇದ್ದ ವಸ್ತುವೊಂದು ತಮ್ಮನ್ನೇ ಸ್ಫೋಟಿಸಿದಾಗ ಬೆಚ್ಚಿಬಿದ್ದ ಜನ ದಿಕ್ಕಾಪಾಲಾಗಿದ್ದಾರೆ. ಲೆಬೆನಾನ್‌ನಲ್ಲಿ ನಿನ್ನೆ ಪೇಜರ್ ಬ್ಲಾಸ್ಟ್‌ ಆದ ಬಳಿಕ ಮತ್ತೆ ನಿಗೂಢ ಸ್ಫೋಟ ಸಂಭವಿಸಿದೆ. ಜನವಸತಿ ಕಟ್ಟಡಗಳನ್ನೇ ಟಾರ್ಗೆಟ್‌ ಮಾಡಲಾಗಿದ್ದು, ವೈರ್‌ಲೆಸ್‌ ಡಿವೈಸ್‌ಗಳನ್ನು ಬಳಸಿಕೊಂಡು ಬ್ಲಾಸ್ಟ್‌ ಮಾಡಲಾಗುತ್ತಿದೆ.

ಒಂದೊಂದು ದೃಶ್ಯವೂ ಘೋರ. ರಸ್ತೆ ಬದಿಯಲ್ಲಿ, ಮಾರ್ಕೆಟ್​​ನಲ್ಲಿ, ಕಾರಲ್ಲಿ, ನಿಂತಲ್ಲಿ, ಕುಂತಲ್ಲಿ ಎಲ್ಲಂದ್ರಲ್ಲಿ ರಕ್ತ ಮೆತ್ತಿಕೊಂಡು ಜನ ಒದ್ದಾಡಿದ್ದಾರೆ. ಎಷ್ಟೋ ಜನರ ಕೈ ಕಾಲುಗಳು ಛಿದ್ರ ಛಿದ್ರವಾಗಿವೆ. ಇನ್ನೆಷ್ಟೋ ಜನರ ಒಂದೊಂದು ಅಂಗಾಂಗಳೂ ರಕ್ತ ಕಾರಿಕೊಂಡಿವೆ. ಮಗದಷ್ಟು ಜನರ ಮೈ ಅಕ್ಷರಶಃ ಭೀಕರ ದಾಳಿಗೆ ತುತ್ತಾಗಿದೆ. ಹೀಗೆ, ಎಲ್ಲಂದ್ರಲ್ಲಿ ಜನ ಭಯಭೀತಗೊಂಡ್ರು. ಬಹುಪಾಲು ಜನರಂತೂ ಅಮ್ಮಾ ಅಂತ ನೆಲಕ್ಕುರುಳಿದವರು ನೆತ್ತರಿನ ಮಧ್ಯೆ ಒದ್ದಾಡುತ್ತಲೇ ಪ್ರಾಣ ಬಿಟ್ಟಿದ್ದಾರೆ.

publive-image

ಈ ಒಂದೊಂದು ದೃಶ್ಯವೂ ಯುದ್ಧದ ಚಿತ್ರಣವನ್ನು ಕಟ್ಟಿ ಕೊಡುತ್ತಿದೆ. ಭೀಕರವಾಗಿ ಗಾಯಗೊಂಡವರನ್ನ ಆ್ಯಂಬುಲೆನ್ಸ್​​ನಲ್ಲಿ ಹೊತ್ತೊಯ್ಯುವ ದೃಶ್ಯಗಳೂ ಸಹ ಇದು ರಣರಂಗ ಅಂತಲೇ ಹೇಳುವಂತಿದೆ. ಹೀಗೆ, ಒಂದಿಡೀ ನಗರ, ಒಂದಿಡೀ ದೇಶ ತಲ್ಲಣಗೊಂಡಿದೆ. ಇದೊಂದು ಅಕ್ಷರಶಃ ನಿಗೂಢ ದಾಳಿ.. ನಿಗೂಢ ಸ್ಫೋಟ.. ಹೀಗೂ ದಾಳಿ ಮಾಡಬಹುದಾ ಅಂತಾ ಜಗತ್ತೇ ಬೆಚ್ಚಿಬೀಳುವಂತೆ ಮಾಡಿದ ಭೀಭತ್ಸ ಅಟ್ಯಾಕ್.

ಇದನ್ನೂ ಓದಿ: ಲೆಬನಾನ್​​ನಲ್ಲಿ ಪೇಜರ್​​ಗಳ ಸರಣಿ​ ಅನಾಹುತ; 9 ಸಾವು 2800 ಮಂದಿಗೆ ಗಾಯ.. ಪೇಜರ್ ಅಂದ್ರೆ ಏನು..? 

ಮಧ್ಯಾಹ್ನ 3 ಗಂಟೆ.. 30 ನಿಮಿಷಗಳ ಕಾಲ ಸ್ಫೋಟ.. ಮಾರಣಹೋಮ!
ಅದು ಮಧ್ಯಾಹ್ನ 3 ಗಂಟೆಯ ಸರಿಸುಮಾರು. ಲೆಬನಾನ್​ ದೇಶದ ಬೈರುತ್‌ನ ಉಪನಗರಗಳು, ಸಿರಿಯಾದ ಕೆಲವು ಭಾಗಗಳಲ್ಲಿ ಏಕಾಏಕಿ ಸ್ಫೋಟ ಶುರುವಾಯ್ತು. ಹಾಗಂತ ಯಾರೋ ಇಸ್ರೆಲ್ ಬಾಂಬ್ ದಾಳಿ ನಡೆಸಲಿಲ್ಲ. ಕ್ಷಿಪಣಿ ದಾಳಿಯ ಮೂಲಕ ಕಟ್ಟಡಗಳನ್ನು ನೆಲಸಮ ಮಾಡಲಿಲ್ಲ. ಗನ್ ಮೂಲಕ ಗುಂಡಿನ ಸುರಿಮಳೆಗೈಯಲಿಲ್ಲ. ಆದರೂ 30 ನಿಮಿಷಗಳ ಕಾಲ ಅಕ್ಷರಶಃ ರಣರಂಗವೇ ಸೃಷ್ಟಿಯಾಗಿದೆ. ಲೆಬನಾನ್ ಅನ್ನೋ ಬೂದಿ ಮುಚ್ಚಿದ ಕೆಂಡ ಏಕಾಏಕಿ ಎದುರಾದ ಸ್ಫೋಟಕ್ಕೆ ಪ್ರಕ್ಷುಬ್ಧಗೊಂಡಿದೆ. ಇರಾನ್‌ನ ರಾಯಭಾರಿ ಸೇರಿದಂತೆ ಸುಮಾರು 3000 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದಿಂದ ಉಂಟಾದ ಗಾಯಗಳು ಹೇಗಿವೆ ಅಂದ್ರೆ ಅದನ್ನು ನೇರವಾಗಿ ತೋರಿಸೋಕೂ ಆಗದಷ್ಟು ರಕ್ತ ಸುರಿಯುತ್ತಲೇ ಇದೆ. ಮಾಂಸ ಖಂಡಗಳು ಛಿದ್ರಛಿದ್ರಗೊಂಡಿವೆ. 10ಕ್ಕೂ ಅಧಿಕ ಮಂದಿ ಬರ್ಬರವಾಗಿ ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ 30 ನಿಮಿಷಗಳ ಕಾಲ ಮಾರಣ ಹೋಮ ಮಾಡಿದ ನಿಗೂಢ ಸ್ಫೋಟಕ ಯಾವುದು ಗೊತ್ತಾ? ಪೇಜರ್.. ಯಸ್.. ಇದೊಂದು ಪೇಜರ್​ ಬಾಂಬ್​ ದಾಳಿ.

30 ನಿಮಿಷ ಸಾವಿರಾರು ಪೇಜರ್​​ಗಳು ಒಂದೇ ಸಮನೆ ಸ್ಫೋಟ!
ಇದು ಅಚ್ಚರಿಯ ಹಾಗೂ ಅತಿ ಭೀಕರ ಮುನ್ನೆಚರಿಕೆ ಆಗಿದೆ. ಯಾಕಂದ್ರೆ ಜಿಪಿಎಸ್​​ ವ್ಯವಸ್ಥೆ ಇಲ್ಲದ, ಮೈಕ್ರೋಫೋನೂ ಇಲ್ಲದ, ಸಣ್ಣದೊಂದು ಕ್ಯಾಮರಾವೂ ಇಲ್ಲದ ಆಫ್ಟ್ರಾಲ್ 140 ಗ್ರಾಮ್ ತೂಕದ ಪೇಜರ್​​ಗಳು ಅಟ್ಟಹಾಸಗೈದಿವೆ. ವ್ಯಕ್ತಿ ವ್ಯಕ್ತಿಯ ನಡುವೆ ಕಮ್ಯೂನಿಕೇಷನ್​ಗೆ ಅಂತಾ ಬಳಸುವಂತಹ 80, 90ರ ದಶಕದ ಅತಿ ಜನಪ್ರಿಯ ಪೇಜರ್​ಗಳು ಪ್ರಳಯವನ್ನೇ ಸೃಷ್ಟಿಸಿವೆ. ವಿಪರ್ಯಾಸ ಅಂದ್ರೆ ಯಾವ ಯಹೂದಿಗಳನ್ನು ಕಂಡ್ರೆ ನಖಶಿಖಾಂತ ಉರಿದುಬೀಳುವ ಹಿಜ್ಬುಲ್ಲಾ ಬಂಡುಕೋರರ ದಂಡು ಅದೇ ಯಹೂದಿ ಇವ್ರಿಂಗ್ ಗ್ರಾಸ್ ಸಂಶೋಧಿಸಿದ ಪೇಜರ್​​ಗಳಿಂದಲೇ ಗಡಗಡ ನಡುಗಿ ಹೋಗಿದ್ದಾರೆ. ತಮ್ಮದೇ ನೆಲದ ಸಾವಿರಾರು ಜನ ತೀವ್ರವಾಗಿ ಗಾಯಗೊಳ್ಳುವಂಥಾ ಸ್ಥಿತಿಗೆ ಸಮಸ್ಯೆಯನ್ನು ತಂದುಕೊಂಡಿದ್ದಾರೆ. ಯಾಕಂದ್ರೆ, ಲೆಬನಾನ್​​ನಲ್ಲಿ ಸೃಷ್ಟಿಯಾಗಿರೋ ದಾಳಿಯ ಪ್ರಳಯಕ್ಕೆ ಬಹುಮುಖ್ಯ ಕಾರಣ ಪೇಜರ್​​ಗಳು. ಸತತ 30 ನಿಮಿಷಗಳ ಕಾಲ ಸಾವಿರಾರು ಪೇಜರ್​ಗಳು ಸ್ಫೋಟಗೊಂಡಿವೆ.

ಏನಿದು ಪೇಜರ್​? ಏತಕ್ಕೆ ಬಳಸ್ತಾರೆ? ಸ್ಫೋಟಗೊಂಡಿದ್ದು ಏಕೆ?
ಈ ಪೇಜರ್​​ನ ಬಳಸಿ ಸ್ಫೋಟ ಮಾಡಿದ್ದೇಗೆ ಅಂತಾ ಹೇಳೋದಕ್ಕೂ ಮುಂಚೆ ಈ ಪೇಜರ್​ ಅಂದ್ರೇನು ಅಂತಾ ತಿಳಿದುಕೊಳ್ಳಲೇ ಬೇಕು. ಮೊಬೈಲ್​​ಗಿಂತ ಮುಂಚೆ ಪೇಜರ್​ಗಳನ್ನೇ ಸಂವಹನಕ್ಕಾಗಿ ಬಳಸಲಾಗುತ್ತಿತ್ತು. ವ್ಯಕ್ತಿಗಳು ಮೊಬೈಲ್ ರೀತಿಯೇ ಇವನ್ನು ಇಟ್ಟುಕೊಂಡ ಸಂಚರಿಸಬಹುದಾಗಿತ್ತು. ಆದರೆ ಇವುಗಳ ಮೂಲಕ ಸಂದೇಶ ಮಾತ್ರ ಕಳಿಸಬಹುದು. ಮೊಬೈಲ್ ರೀತಿ ಮಾತನಾಡಲು ಆಗದು. ಒಂದು ಕಾಲಕ್ಕೆ ಪೇಜರ್​​ ಇದ್ರೆ ಜನರು ಅವುನ್ನ ದೊಡ್ಡಕಣ್ಣುಗಳಿಂದ ನೋಡ್ತಿದ್ರು.

ಆದ್ರೀಗ ಪೇಜರ್​ ಜಮಾನ ಮುಗಿದಿದೆ. ಅಕ್ಷರಶಃ ಪೇಜರ್​ಗಳು ಔಟ್​ಡೇಟೆಡ್​​ ಆಗಿವೆ. ಆದಾಗ್ಯೂ, ಲೆಬನಾನ್​​ ಹಾಗೂ ಸಿರಿಯಾ ಭಾಗದಲ್ಲಿ ಭಯದ ಪ್ರಳಯವನ್ನು ಸೃಷ್ಟಿಸಿವೆ. ಅಷ್ಟಕ್ಕೂ ಅದ್ಯಾವ ಕಾರಣಕ್ಕೆ ಇಲ್ಲೇ ಇಷ್ಟೊಂದು ಸ್ಫೋಟವಾಯ್ತು. ಅನಾಹುತ ಆಯ್ತು ಅಂತ ನೋಡಿದ್ರೆ, ಹಿಜ್ಬುಲ್ಲಾ ಸಂಘಟನೆಯ ನಾಯಕನೊಬ್ಬನ ಇತ್ತೀಚೆಗಿನ ಆದೇಶ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿಯೇ ಹಿಜ್ಬುಲ್ಲಾ ಬಂಡುಕೋರರು ಈ ದಾಳಿ ಹಿಂದೆ ತಮ್ಮ ಪರಮಶತ್ರು ದೇಶ ಇಸ್ರೆಲ್​ ಇದೆ ಅಂತ ಅರೋಪಿಸುತ್ತಿದೆ. ಅಷ್ಟೇ ಅಲ್ಲ. ಇಂಥ ನಿಗೂಢ ದಾಳಿಗೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ ಕುಖ್ಯಾತವಾಗಿದ್ದು ಪ್ರತೀಕಾರ ತೀರಿಸಿಕೊಳ್ಳುವ ಮಾತುಗಳನ್ನೂ ಹಿಜ್ಬುಲ್ಲಾ ಸಂಘಟನೆ ಹೇಳುತ್ತಿದೆ. ಅಲ್ಲದೇ, ಪೇಜರ್ ಸ್ಫೋಟಗಳಿಗೆ ಇಸ್ರೇಲ್ ಕಾರಣ ಎಂದು ಹಿಜ್ಬುಲ್ಲಾ ದೂಷಿಸಿದೆ. ಈ ಅಪರಾಧ ಕೃತ್ಯಕ್ಕೆ ಇಸ್ರೇಲ್ ಹೊಣೆ ಎಂದಿದೆ. ಇನ್ನೊಂದೆಡೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸುವುದಾಗಿ ಲೆಬನಾನ್ ಘೋಷಿಸಿದೆ.

publive-image

ಹಿಜ್ಬುಲ್ಲಾ ಬಂಡುಕೋರರು ಪೇಜರ್​ ಹಿಂದೆ ಬಿದ್ದಿದ್ದು ಏಕೆ?
ಹಿಜ್ಬುಲ್ಲಾ ಸಂಘಟನೆ ತನ್ನದೇ ಆದ ಒಂದು ಟೆಲಿಕಾಂ ನೆಟ್​ವರ್ಕ್ ವ್ಯವಸ್ಥೆ ರೂಪಿಸಿಕೊಂಡಿದೆ. ಟೆಕ್ನಾಲಜಿ ವಿಷ್ಯದಲ್ಲಿ ಆಕಾಶದೆತ್ತರಕ್ಕೆ ಬೆಳೆದಿರುವ ಇಸ್ರೇಲ್​ ಯಾವುದೇ ಟೈಮಲ್ಲೂ ಮೊಬೈಲನ್ನೇ ಟ್ರ್ಯಾಪ್​ ಮಾಡಿ ಸ್ಫೋಟ ಮಾಡಬಹುದು ಅನ್ನೋ ಭೀತಿ ಅವರದ್ದು. ​​ಈ ಕಾರಣದಿಂದ ಕಳೆದ ವರ್ಷ ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಮೊಬೈಲ್ ಫೋನ್‌ಗಳನ್ನು ಬಳಸದಂತೆ ಹಿಜ್ಬುಲ್ಲಾ ತನ್ನ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿತ್ತು. ಹಾಗಾಗಿಯೇ, ಇವ್ರೆಲ್ಲಾ ಔಟ್​ಡೇಟೆಡ್​​ ಪೇಜರ್​​ಗಳನ್ನ ಬಳಸುತ್ತಿದ್ದರು. ಹಿಜ್ಬುಲ್ಲಾ ಲೀಡರ್​ ಹಸನ್ ನಸ್ರುಲ್ಲಾ ಫೆಬ್ರುವರಿಯಲ್ಲಿ ಮಾಡಿದ ಭಾಷಣದಲ್ಲಿ ಮಹತ್ವದ ಸಂದೇಶ ನೀಡಿದ್ದರು. ಯಾವುದೇ ಕಾರಣಕ್ಕೂ ಫೋನ್ ಬಳಸಬೇಡಿ. ಇದು ಇಸ್ರೇಲ್​ಗೆ ಸಹಕಾರಿ. ನಮ್ಮ ಪಾಲಿಗೆ ಅಪಾಯಕಾರಿ. ಭದ್ರತೆಯ ದೃಷ್ಟಿಯಿಂದಾಗಿ ಮೊಬೈಲ್ ಬಳಸಬೇಡಿ ಅಂತಾ ಆದೇಶ ನೀಡಿದ್ದ. ಹಾಗಾಗಿಯೇ ಹಿಜ್ಬುಲ್ಲಾ ಸದಸ್ಯರು ಪೇಜರ್​​ಗಳ ಬೆನ್ನು ಬಿದ್ದಿದ್ರು.

ಮೊಬೈಲ್​​ ಫೋನ್ ಮೂಲಕ ಇಸ್ರೆಲ್ ತಮ್ಮ ಅಡಗುದಾಣಗಳನ್ನು ಪತ್ತೆ ಹಚ್ಚಬಹುದು ಎನ್ನುವುದು ಹಿಜ್ಬುಲ್ಲಾ ಸಂಘಟನೆಯ ನಾಯಕರ ತಲೆನೋವಾಗಿತ್ತು. ಇಸ್ರೇಲಿ ಗೂಢಚರರು ತಮ್ಮೊಳಗೆ ನುಸುಳಬಹುದೆಂಬ ಆತಂಕದಿಂದ ಈ ರೀತಿ ಆದೇಶ ಮಾಡಲಾಗಿತ್ತು. ಇದೇ ಆದೇಶದ ಕಾರಣಕ್ಕೇ ಹಿಜ್ಬುಲ್ಲಾ ಗ್ಯಾಂಗ್ ಪೇಜರ್‌ಗಳನ್ನು ಹೆಚ್ಚಾಗಿ ಬಳಸುತ್ತಿದೆ. ಇವೂ ಕೂಡ ಇಸ್ರೇಲ್ ಕೆಂಗಣ್ಣಿಗೆ ಗುರಿಯಾಗಿವೆ. ಹಿಜ್ಬುಲ್ಲಾ ಚಲನವಲನಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ, ಸಂಘಟನೆಯ ಸದಸ್ಯರು ಮೊಬೈಲ್ ಫೋನ್ ಗಳನ್ನು ತಮ್ಮೊಂದಿಗೆ ಒಯ್ಯಬಾರದು ಎಂದು ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಪೇಜರ್​ ಎಂದರೇನು? ​ಹಿಜ್ಬುಲ್ಲಾಗಳು 1980ರ ಹಳೆಯ ಸಾಧನವನ್ನು ಈಗಲೂ ಬಳಸುತ್ತಿರೋದೇಕೆ? 

ಪೇಜರ್​ಗಳ ಭಯಾನಕ ಸ್ಫೋಟ ನಿಜಕ್ಕೂ ಸಾಧ್ಯವೇ?
ಏಕಾಏಕಿ ಸಾವಿರಾರು ಪೇಜರ್​ಗಳು​ ಸ್ಫೋಟಗೊಂಡಿದ್ದೇಗೆ?
ಗ್ರೆನೇಡ್, ಬಾಂಬ್, ಗುಂಡಿನ ದಾಳಿ ನಡೆಸೋದು ಈಗಿನ ಸಂಪ್ರದಾಯ. ಈಗಿನ ಕಾಲದ ಯುದ್ಧದ ಮಾದರಿ. ಆದ್ರೆ, ಇವುಗಳ ದಾಳಿ ಒಂದು ನಿರ್ದಿಷ್ಟ ಪ್ರದೇಶ ಹಾಗೂ ನಿರ್ದಿಷ್ಟ ಪ್ರಮಾಣದ ಜನರಿಗಷ್ಟೇ ಸೀಮಿತವಾಗಿರುತ್ತೆ. ಆದರೆ, ಸದ್ಯ ಪೇಜರ್​ಗಳು ಸೃಷ್ಟಿಸಿರುವ ಪ್ರಳಯ ನೋಡಿದ್ರೆ, ನಿಜಕ್ಕೂ ಆತಂಕ ಆಗದೇ ಇರೋದಿಲ್ಲ. ಪೇಜರ್​​ ಸ್ಫೋಟ ಮುಂದಿನ ದಿನಗಳಲ್ಲಿ ಯಾವುದೇ ವ್ಯಕ್ತಿ, ಯಾವುದೇ ಉಗ್ರ ಸಂಘಟನೆ ಅಥವಾ ಯಾವುದೇ ದೇಶ ತನ್ನ ಶತ್ರುಗಳನ್ನು ಗುರಿಯಾಗಿಸಿ ಏಕಕಾಲಕ್ಕೆ ದಾಳಿ ನಡೆಸಿ ಭೀಕರ ಅನಾಹುತ ಸೃಷ್ಟಿಸಬಲ್ಲದು ಅನ್ನೋ ಮುನ್ಸೂಚನೆ ಇದ್ರಿಂದ ಸಿಕ್ಕಿದೆ ಅಂದ್ರೂ ತಪ್ಪಿಲ್ಲ. ಅಷ್ಟಕ್ಕೂ ವಾಸ್ತವದಲ್ಲಿ ಪೇಜರ್​ಗಳನ್ನ ಸ್ಫೋಟಿಸೋಕೆ ಸಾಧ್ಯವೇ? ಅತಿಯಾದ ಚಾರ್ಜಿಂಗ್​​ ಸಮಸ್ಯೆ, ಮ್ಯಾನ್ಯುಫ್ಯಾಕ್ಚರಿಂಗ್ ಸಮಸ್ಯೆ ಬಿಟ್ಟರೇ ಕೆಲವೇ ಕೆಲವು ಸಂಧರ್ಭಗಳಲ್ಲಷ್ಟೇ ಪೇಜರ್​ ಸ್ಫೋಟಗೊಳ್ಳಲು ಸಾಧ್ಯ. ವಾಸ್ತವ ಹೀಗಿರುವಾಗ ಪೇಜರ್​ಗಳು ಸ್ಫೋಟಗೊಂಡು ಇಷ್ಟು ದೊಡ್ಡ ಮಟ್ಟದ ಭಯದ ಪ್ರಳಯವನ್ನು ಸೃಷ್ಟಿಸಿದ್ದು ಹೇಗೆ? ಇಂಥದ್ದೊಂದು ಪ್ರಶ್ನೆಯ ಜಾಡು ಹಿಡಿದು ಹೊರಟರೇ 2 ತಿಂಗಳ ಹಿಂದೆ ಶುರುವಾದ ಆಪರೇಷನ್​​ ಕಣ್ಮುಂದೆ ಬರುತ್ತೆ.

ತೈವಾನ್ ಕಂಪನಿಗೆ 5000 ಪೇಜರ್​ಗಳಿಗೆ ಆರ್ಡರ್​ ಮಾಡಿದ್ದ ಹಿಜ್ಬುಲ್ಲಾ!
ತೈವಾನ್ ಮೂಲದ ಗೋಲ್ಡ್ ಅಪೋಲೋ ಅನ್ನೋ ಕಂಪನಿಗೆ ಸುಮಾರು ಹಲವು ತಿಂಗಳ ಹಿಂದೆಯೇ ಹಿಜ್ಬುಲ್ಲಾ ಸಂಘಟನೆ ಸುಮಾರು 5000 ಪೇಜರ್​ಗಳನ್ನು ಒದಗಿಸುವಂತೆ ಆರ್ಡರ್ ಮಾಡಿತ್ತಂತೆ. ಇಲ್ಲಿಯವರೆಗೂ ಹಿಜ್ಬುಲ್ಲಾ ಸಂಘಟನೆಗೆ ಇಷ್ಟೊಂದು ಪೇಜರ್​ಗಳನ್ನ ಗೋಲ್ಡ್​ ಅಪೋಲೋ ಸಂಸ್ಥೆ ಒದಗಿಸಿಯೇ ಇರಲಿಲ್ಲ. ಇನ್ನು, ಈ ದಾಳಿ ಬಗ್ಗೆ ಸ್ಪಷ್ಟನೆ ನೀಡಿರುವ ಗೋಲ್ಡ್ ಅಪೋಲೋ ತಮಗೂ ಈ ದಾಳಿಯಲ್ಲಿ ಸ್ಫೋಟಗೊಂಡ ಪೇಜರ್​ಗಳಿಗೂ ಸಂಬಂಧವಿಲ್ಲ ಅಂದುಬಿಟ್ಟಿದೆ. ಅಷ್ಟೇ ಅಲ್ಲ, ಇದು ಬೇರೆ ಕಂಪನಿಯ ಪೇಜರ್​ಗಳಂತೆ ಕಾಣುತ್ತಿದ್ದು, ನಮ್ಮ ಬ್ರ್ಯಾಂಡ್​ದಲ್ಲ ಅಂತಲೂ ಹೇಳಿದೆ. ಹಂಗೇರಿ ರಾಜಧಾನಿ ಬುಡಾಪೆಸ್ಟ್​​ ಮೂಲದ ಬಿಎಸಿ ಕನ್ಸ್​ಲ್ಟಿಂಗ್​ ಕೆಫ್​ಟಿ ಕಂಪನಿ ಈ ಪೇಜರ್​​ಗಳನ್ನು ಹಿಜ್ಬುಲ್ಲಾ ಸದಸ್ಯರಿಗೆ ಕಳುಹಿಸಿದೆ ಅಂತಲೂ ಆರೋಪಿಸಿದೆ. ಆದ್ರೆ, ಸ್ಫೋಟಗೊಂಡ ಪೇಜರ್​​ಗಳ ಮೇಲೆ ಗೋಲ್ಡ್ ಅಪೋಲೋ ಬ್ರಾಂಡಿಂಗ್​ ಇರೋದು ಚೆನ್ನಾಗಿಯೇ ಕಾಣುತ್ತಂತೆ.

ಮೊಸಾದ್ ಅನ್ನೋ ಯಮದೂತ ಈ ಡೆಡ್ಲಿ ಪ್ಲಾನ್ ಮಾಡಿದ್ನಾ?
ಸಾವಿರಾರು ಪೇಜರ್‌ಗಳ ಸ್ಫೋಟದ ಹಿಂದೆ ಈಗೊಂದು ದೊಡ್ಡ ಅನುಮಾನ ವ್ಯಕ್ತವಾಗುತ್ತಿದೆ. ಎಲ್ಲೋ ಒಂದೋ ಎರಡೋ ಸ್ಪೋಟಗೊಂಡಿದ್ರೆ, ಅಚಾನಕ್​ ಆಗಿ ಆರಗಿರಬಹುದು ಅಂತಾ ಅಂದಾಜಿಸಬಹುದಿತ್ತು. ಬಟ್, ಇಲ್ಲಿ ಹಿಜ್ಬುಲ್ಲಾ ಸದಸ್ಯರು, ನಾಯಕರನ್ನೇ ಗುರಿಯಾಗಿಸಿಕೊಂಡು ಬ್ಲ್ಯಾಸ್ಟ್​ ಮಾಡಲಾಗಿದ್ದು, ಇಂತಹ ಕೆಲಸ ಆ ಒಂದು ನಿಗೂಢ ಪಡೆಯಿಂದ ಮಾತ್ರ ಸಾಧ್ಯ ಅಂತಲೇ ಹೇಳಲಾಗ್ತಿದೆ. ಹೌದು, ಆ ಡೆಡ್ಲಿ ಪಡೆ ಬೇರಾವುದೂ ಅಲ್ಲ, ವಿಶ್ವದಲ್ಲೇ ಅತಿಮಾನುಷ ಗುಪ್ತಚರ ಸಂಸ್ಥೆ ಅಂತಲೇ ಕರೆಸಿಕೊಳ್ಳುವ ಮೊಸಾದ್.

ಹೌದು, ಲೆಬನಾನ್​ನಲ್ಲಿ ಪೇಜರ್​​ಗಳನ್ನೇ ಟ್ರ್ಪಾಪ್​ ಮಾಡಿ ದಾಳಿ ಮಾಡಿರೋದ್ರ ಹಿಂದೆ ಮೊಸಾದ್​ ಕೈವಾಡ ಮೇಲ್ನೋಟಕ್ಕೇ ಬಲಿಷ್ಠವಾಗಿ ಕಾಣ್ತಿದೆ. ಯಾಕಂದ್ರೆ, ಕಳೆದ ಅಕ್ಟೋಬರ್‌ನಿಂದ ಇಲ್ಲಿವರೆಗೂ ಹಲವು ಹಿಜ್ಬುಲ್ಲಾ ಕಮಾಂಡರ್​​ಗಳನ್ನೇ ಗುರಿಯನ್ನಾಗಿಸಿಕೊಂಡು ದಾಳಿ ಮಾಡಿರೋ ಮೊಸಾದ್ ಅವ್ರಿಗೇ ಚೂರು ಸುಳಿವೇ ಸಿಗದಂತೆ ಹತ್ಯೆ ಮಾಡಿಹಾಕಿದೆ.. ಈಗ ಈ ಪೇಜರ್​ ಅಟ್ಯಾಕ್​ ಹಿಂದಿನ ಸೂತ್ರಧಾರ ಕೂಡ ಮೊಸಾದ್​ ಎನ್ನುವ ಯಮದೂತ ಅನ್ನೋದು ಹಲವರ ವಾದ.. ಅಷ್ಟೇ ಅಲ್ಲ, ಈ ದಾಳಿ ಹಿಂದೆ ಕೇಳಿಬರ್ತಿರೋ ಮತ್ತೊಂದು ವಾದ ಬಗ್ಗೆ ಕೇಳಿದ್ರೆ, ನೀವು ಅಕ್ಷರಶಃ ಕಕ್ಕಾಬಿಕ್ಕಿಯಾಗ್ತೀರಾ. ಪೇಜರ್​ನೊಳಗೆ ಹಿಜ್ಬುಲ್ಲಾ ಸದಸ್ಯರಿಗೆ ಗೊತ್ತೇ ಆಗದಂತೆ 3 ಗ್ರಾಂ ಸ್ಫೋಟಕ ಇಟ್ಟು ಅವರನ್ನ ಚಿಂದಿ ಉಡಾಯಿಸಲಾಗಿದೆ ಅನ್ನೋ ಮಾಹಿತಿಯೂ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment