/newsfirstlive-kannada/media/media_files/2025/09/18/rat-astrologer-1-2025-09-18-08-50-42.jpg)
ಹಸ್ತಸಾಮುದ್ರಿಕ ಭವಿಷ್ಯ ಕೇಳಿದ್ದೀರಿ, ಗಿಳಿ ಭವಿಷ್ಯ ಕೇಳಿದ್ದೀರಿ. ಕೆಲವೆಡೆ ಮುಖ ನೋಡಿಯೂ ಭವಿಷ್ಯ ಹೇಳುತ್ತಾರೆ. ಕವಡೆ ಶಾಸ್ತ್ರದ ಮೂಲಕವೂ ಭವಿಷ್ಯ ಹೇಳುವುದು ಸಹ ನಮಗೆ ಗೊತ್ತು. ಸಾಮಾನ್ಯವಾಗಿ ಹಲವು ಪ್ರದೇಶದಲ್ಲಿ ಗಿಳಿಯನ್ನು ಇಟ್ಟುಕೊಂಡು ಭವಿಷ್ಯ ಹೇಳ್ತಾರೆ. ಗಿಳಿಯ ಮೂಲಕ ಕಾರ್ಡ್ ತೆಗೆದು ಭವಿಷ್ಯ ಹೇಳಲಾಗುತ್ತದೆ. ಆದರೆ ಇಲಿಯ ಮೂಲಕ ಭವಿಷ್ಯ ಹೇಳುವುದು ಕೇಳಿದ್ದೀರಾ?
ಹೌದು ಆಂಧ್ರಪ್ರದೇಶದಲ್ಲಿ ಇಲಿಯ ಮೂಲಕ ಹೇಳುವ ಭವಿಷ್ಯ ಎಲ್ಲರನ್ನೂ ಆಕರ್ಷಿಸುತ್ತಿದೆ. ತಿರುಪತಿ-ಚಿತ್ತೂರು ರಸ್ತೆಯಲ್ಲಿರುವ ಆಂಜೇರಮ್ಮ ದೇವಸ್ಥಾನದಲ್ಲಿ ಇಲಿಯ ಮೂಲಕ ಭವಿಷ್ಯ ಹೇಳಲಾಗುತ್ತಿದೆ.
ಆಂಧ್ರದ ಚಿತ್ತೂರು ಜಿಲ್ಲೆಯ ವಡಮಲೈಪೆಟ್ಟೈಯ ಎಸ್.ವಿ.ಪುರಂನ ಆಂಜೇರಮ್ಮ ದೇಗುಲದಲ್ಲಿ ನಾರಾಯಣವನಂ ಗ್ರಾಮದ ಸಿದ್ದಮುನಿ ಭವಿಷ್ಯ ಹೇಳುತ್ತಾರೆ. ಇವರು ಕಳೆದ 30 ವರ್ಷಗಳಿಂದ ಗಿಳಿಯ ಮೂಲಕ ಜ್ಯೋತಿಷ್ಯ ಹೇಳುತ್ತಿದ್ದರು.
ಇದನ್ನೂ ಓದಿ:ಜ್ವಾಲಾ ಗುಟ್ಟಾರಿಂದ ಉದಾತ್ತ ಕಾರ್ಯ: 30 ಲೀಟರ್ ಎದೆ ಹಾಲು ದಾನ ಮಾಡಿದ ಜ್ವಾಲಾಗುಟ್ಟಾ
ಸಿದ್ದಮುನಿ ಅವರು ಕಳೆದ ವರ್ಷ ಚೆನ್ನೈಗೆ ಹೋದಾಗ ಅಲ್ಲಿ ಇಲಿ ಕಾರ್ಡ್ ತೆಗೆಯುವುದನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಅಲ್ಲಿಂದ ತರಬೇತಿ ಪಡೆದ ಇಲಿಯೊಂದನ್ನು ಖರೀದಿಸಿ ತಂದರಂತೆ. ಆಂಜೇರಮ್ಮ ದೇಗುಲದಲ್ಲಿ ಇಲಿಯ ಮೂಲಕ ಭವಿಷ್ಯ ಹೇಳಿದ್ದು ಜನರನ್ನು ಆಕರ್ಷಿಸಿದೆ. ಅವರು ಆ ಇಲಿಗೆ ಗಣೇಶ ಅಂತ ಹೆಸರಿಟ್ಟಿದ್ದಾರೆ. ಇಲಿ ಗಣೇಶನ ವಾಹನ ಆಗಿರುವುದರಿಂದ ಜನರಿಗೂ ಅದರಿಂದ ಒಳ್ಳೆಯದಾಗಿದೆ ಅಂತಾರೆ.
ಅಲ್ಲದೇ ಇಲಿಯ ಹೆಸರು ಗಣೇಶ ಅಂತ ಇರುವುದರಿಂದ ವಿಘ್ನೇಶ್ವರನ ವಾಹನವಾದ ಇಲಿಯ ಭವಿಷ್ಯದಿಂದ ಒಳ್ಳೆಯದಾಗುತ್ತೆ ಅಂತಾರೆ ಭಕ್ತರು. ಅಲ್ಲದೇ ಗಿಳಿ ಹೋಗಿ ಇಲಿ ತಂದ ಮೇಲೆ ತಮ್ಮ ಅದೃಷ್ಟವೂ ಬದಲಾಗಿದೆ ಅಂತಾರೆ ಸಿದ್ದಮುನಿ.
ವಿಶೇಷ ವರದಿ: ವಿಶ್ವನಾಥ್, ಸೀನಿಯರ್ ಕಾಪಿ ಎಡಿಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ