/newsfirstlive-kannada/media/post_attachments/wp-content/uploads/2025/01/CM_SIDDU-2.jpg)
ರಾಜ್ಯ ಕಾಂಗ್ರೆಸ್‌ನೊಳಗಿನ ಈ ಬಂಡಾಟಕ್ಕೆ ಮದ್ದರೆಯಲು ಪ್ರಯಾಸದಿಂದ ಹೆಣಗುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಮತ್ತೆ ಸುರ್ಜೇವಾಲರನ್ನೇ ರಾಜ್ಯಕ್ಕೆ ಕಳುಹಿಸಿದೆ. ಒಬ್ಬ ವ್ಯಕ್ತಿ ಒಂದು ಹುದ್ದೆ ಕೂಗು ಅಂತ್ಯ ಹಾಡಲು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ ಶಿವಕುಮಾರ್, ಬೆಳಗಾವಿ ಚಾಣಕ್ಯ ಸತೀಶ್ ಜಾರಕಿಹೊಳಿ ನಡುವೆ ಸಂಧಾನಕ್ಕೆ ಯತ್ನ ನಡೆಯುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ನಲ್ಲಿ ಬಣ ರಾಜಕಾರಣ ಜೋಗುಳ ಹಾಡ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಎದ್ದ ದಂಗಲ್ ಧಗಧಗಿಸ್ತಿದೆ. ಕನಕಪುರ ಬಂಡೆಯ ಬುಡಕ್ಕೆ ಡೈನಾಮೈಟ್ ಇಟ್ಟು ಸಾರಥಿ ಪಟ್ಟ ಸ್ಫೋಟಿಸಲು ಸಿಎಂ ಸಿದ್ದರಾಮಯ್ಯ ಬಣ ಎಡೆಬಿಡದೇ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಸ್ಥಾನಮಾನ ಗಿಟ್ಟಿಸಲು ಡೆಲ್ಲಿ ಅಂಗಡಿಯ ದಾರಿ ತೋರಿಸಿದ ಡಿ.ಕೆ ಶಿವಕುಮಾರ್ ಮೊದಲ ಬಾರಿಗೆ ಕೋಪಾಗ್ನಿ ಧರಿಸಿ ತಿರುಗಿಬಿದ್ದಿದ್ದಾರೆ. ಇದರ ಮಧ್ಯೆ ಎಐಸಿಸಿ ಅಧ್ಯಕ್ಷರ ಮಾತು ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಕೈ ನಾಯಕರ ವಾಕ್ಸಮರ, ಖರ್ಗೆ ಖಡಕ್ ವಾರ್ನಿಂಗ್
ರಾಜ್ಯ ಕಾಂಗ್ರೆಸ್‌ನೊಳಗಿನ ಕಿತ್ತಾಟ ಸೂಕ್ಷ್ಮವಾಗಿ ಗಮನಿಸ್ತಿರುವ ಹೈಕಮಾಂಡ್, ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಸ್ವಲ್ಪ ಯಾಮಾರಿದ್ರೂ ದಿಡ್ಡಿ ಬಾಗಿಲು ಕ್ಲೋಸ್ ಆಗಲಿದೆ. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜಟಾಪಟಿಗೆ ಖರ್ಗೆ ಕಡು ಮಾತನ್ನ ಆಡಿದ್ದಾರೆ. ಯಾವಾಗ ಏನು ನಿರ್ಣಯ ತಗೋಬೇಕು ನಮಗೆ ಬಿಟ್ಟಿದ್ದು ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನೆ ಕೆಲಸ ಮಾಡಬೇಕು ಅಂತ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ನಿರ್ಣಯ ತೆಗೆದುಕೊಳ್ಳುವುದು ನಮಗೆ ಬಿಟ್ಟದ್ದು
ನನ್ನದೊಂದು ಸೂಚನೆ ಏನೆಂದರೆ ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನೆ ಕೆಲಸ ಮಾಡಬೇಕು. ಯಾವಾಗ ಏನು ನಿರ್ಣಯ ತೆಗೆದುಕೊಳ್ಳಬೇಕು ಅದು ನಮಗೆ ಬಿಟ್ಟದ್ದು. ಮೊದಲು ಕೊಟ್ಟಂತಹ ಕೆಲಸಗಳನ್ನು ಮಾಡಿ. ಜನರನ್ನು ಅಭಿವೃದ್ಧಿ ಕಡೆ ಒಯ್ದು ಮತ್ತು ಪಕ್ಷಕ್ಕೆ ಬಲ ತಂದು ಆ ಕೆಲಸ ಮೊದಲು ಮಾಡಲಿ. ಇದೆಲ್ಲಾ ಮಾತನಾಡುವುದು ಅವಶ್ಯಕತೆ ಇಲ್ಲ.
ಕಾಂಗ್ರೆಸ್ ಹೈಕಮಾಂಡ್ ಏನ್ ಹೇಳುತ್ತದೆ ಅದೇ ಫೈನಲ್. ಯಾರು ಯಾರು ಏನು ಹೇಳುತ್ತಾರೋ ಅದು ಅವರ ಇಚ್ಛೆ ಅದು. ಅವರ ಇಚ್ಛೆಯಂತೆ ಹೈಕಮಾಂಡ್ ನಡೆದುಕೊಳ್ಳಲು ಆಗೋದಿಲ್ಲ. ಹೈಕಮಾಂಡ್‌ಗೆ ತನ್ನದೇ ಆದ ಟಾರ್ಗೆಟ್ ಇರುತ್ತದೆ. ಅದರ ಪ್ರಕಾರ ಅವರು ನಿರ್ಧಾರ ಮಾಡುತ್ತಾರೆ. ಆದರೆ ಇಲ್ಲಿ ನೂರು ಜನ ನೂರು ಮಾತನಾಡಿದರೆ ಅದಕ್ಕೆ ನಾನು ಉತ್ತರ ಕೊಡಲು ಆಗೋದಿಲ್ಲ.
ಪಕ್ಷದಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳಲು ನಾನು, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ಇದ್ದೇವೆ. ಅದಕ್ಕೆ ಅವರು ಈಗ ಮಧ್ಯಂತರ ವಹಿಸಿಕೊಳ್ಳುವ ಅವಶ್ಯಕತೆ ಇಲ್ಲ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಹೈಕಮಾಂಡ್‌ಗೆ ತನ್ನದೇ ಆದ ಟಾರ್ಗೆಟ್ ಇದೆ ಎಂದ ಖರ್ಗೆ
ಇನ್ನೂ ಕೆಪಿಸಿಸಿ ಪಟ್ಟದ ಬಗ್ಗೆ ಎದ್ದಿರೋ ಆಂತರಿಕ ಜಟಾಪಟಿ ಬಗ್ಗೆ ಖಾರವಾಗಿ ಖರ್ಗೆ ಮಾತನಾಡಿದ್ದಾರೆ. ಹೈಕಮಾಂಡ್‌ಗೆ ತನ್ನದೇ ಆದ ಟಾರ್ಗೆಟ್ ಇದೆ. ಹೈಕಮಾಂಡ್ ನಿರ್ಣಯವೇ ಅಂತಿಮ ಎಂದಿದ್ದಾರೆ. ಪಕ್ಷದಲ್ಲಿ ನಡೆಯೋ ಎಲ್ಲಾ ಬೆಳವಣಿಗಳ ಬಗ್ಗೆ ನಿರ್ಣಯ ಕೈಗೊಳ್ಳಲು ನಾನು, ರಾಹುಲ್ ಗಾಂಧಿ ಇದ್ದೇವೆ ಅಂತ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ:BCCI ಹೊಸ ನಿಯಮಕ್ಕೆ ಬೆಚ್ಚಿಬಿದ್ದ ಸ್ಟಾರ್ಸ್.. IPLನಿಂದ ಔಟ್, ಸಂಬಳ ಕಟ್..!
ಸತೀಶ್-ಡಿ.ಕೆ ಶಿವಕುಮಾರ್ ಜೊತೆ ಸುರ್ಜೇವಾಲಾ ಮೀಟಿಂಗ್
ಕಾಂಗ್ರೆಸ್ ಪಟ್ಟಕ್ಕಾಗಿ ಸತೀಶ್ ಜಾರಕಿಹೊಳಿ- ಡಿ.ಕೆ ಶಿವಕುಮಾರ್ ಮದ್ಯೆ ಎದ್ದಿರೋ ಬೆಂಕಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮದ್ದೆರೆಯುತ್ತಿದ್ದಾರೆ. ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಪ್ರತ್ಯೇಕ ಸಭೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್- ಸತೀಶ್ ಜಾರಕಿಹೊಳಿ ನಡುವಿ ಬಣಬಡಿದಾಟಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ ಬ್ರೇಕ್ ಹಾಕಲು ಶತಪ್ರಯತ್ನ ನಡೆಸ್ತಿದ್ದಾರೆ.
ಬೆಳಗಾವಿಯಲ್ಲಿ ಬೀಡುಬಿಟ್ಟ ಸುರ್ಜೇವಾಲ, ಸಂಧಾನಕ್ಕೆ ಹೆಣಗಾಡುತ್ತಿದ್ದಾರೆ. ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಖರ್ಗೆ ಮಾತಿಗೆ ಕೈ ನಾಯಕರು ಬಗ್ಗುತ್ತಾರೋ ಅಥವಾ ಅವರ ಹಠವನ್ನೇ ಮುಂದುವರೆಸುವರೋ ಎಂಬುದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ