/newsfirstlive-kannada/media/post_attachments/wp-content/uploads/2024/10/Kaveri-tirthodbhav-2.jpg)
ಕಾವೇರಿ ಅಂದ್ರೆ ನಮಗೆ ಕೇವಲ ಟಿಎಂಸಿ ಲೆಕ್ಕದಲ್ಲಿ ಅಳೆಯುವ ಒಂದು ನೀರಿನ ಆಗರ ಮಾತ್ರವಲ್ಲ, ಅವಳು ನಾಡಿಗೆ ಮಾತೃಸ್ವರೂಪಿಣಿ. ಕೋಟ್ಯಾಂತರ ಜನರ ಜೀವನಾಡಿಯಾಗಿ ಹರಿಯುವ ಜೀವನದಿ. ಈ ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸಕ್ಕೆ ಸಾಕ್ಷಿಯಾಗಿ ಹರಿಯುತ್ತಿರುವ ಜೀವಹನಿ. ಕಾವೇರಿ ಎಂದ ಕೂಡಲೇ ನಮಗೆ ಕೊಡಗು ನೆನಪಾಗುತ್ತದೆ. ಅಲ್ಲಿಯ ಭಾಗಮಂಡಲದ ತಲಕಾವೇರಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ತೀರ್ಥೋದ್ಭವದ ಸಂಭ್ರಮ ನೆನಪಾಗುತ್ತದೆ. ಅಗಸ್ತ್ಯ ಮಹರ್ಷಿಗಳಿಗೆ ವಧುವಾಗಿ ಬಂದ ಅವಳು ನದಿಯಾಗಿ ಹರಿದ ಪೌರಾಣಿಕ ಹಿನ್ನೆಲೆಯೇ ಒಂದು ರೋಚಕ ಅಧ್ಯಾಯ.
ಎಲ್ಲಿಯೋ ಉತ್ತರದಲ್ಲಿದ್ದ ಅಗಸ್ತ್ಯ ಮಹರ್ಷಿಗಳು ದಕ್ಷಿಣಕ್ಕೆ ಆಗಮಿಸಿ ಇಲ್ಲೊಂದು ಅತ್ಯಂತ ಪುರಾತನ ಹಾಗೂ ಶ್ರೀಮಂತಿಕೆಯ ನಾಗರೀಕತೆಯನ್ನು ಹುಟ್ಟುಹಾಕಿದ ಕಥೆಯಿದು. ಮಕ್ಕಳಿಲ್ಲದ ಮಹರ್ಷಿ ಕವೇರ ಬ್ರಹ್ಮಗಿರಿಯಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾರೆ. ಅವರ ಕಠೋರ ತಪಸ್ಸಿಗೆ ಪ್ರತ್ಯಕ್ಷನಾದ ಬ್ರಹ್ಮದೇವರು ನಿನ್ನಲ್ಲಿ ಪೂರ್ವಜನ್ಮದ ಪಾಪದ ಫಲವಿರುವುದರಿಂದ ನಿನಗೆ ಸಂತಾನ ಭಾಗ್ಯವಿಲ್ಲ. ಹೀಗಾಗಿ ನನ್ನ ಮಾನಸ ಪುತ್ರಿ ಲೋಪಮುದ್ರೆಯನ್ನೇ ನಿನಗೆ ಮಗಳಾಗಿ ನೀಡುತ್ತೇನೆಂದು ಲೋಪಮುದ್ರೆಯನ್ನು ಕವೇರನಿಗೆ ನೀಡಿತ್ತಾರೆ ಬ್ರಹ್ಮದೇವರು. ಕವೇರನ ಮಗಳು ಮುಂದೆ ಕಾವೇರಿಯಾಗಿ ಲೋಕಪ್ರಸಿದ್ಧಿ ಪಡೆದಳು. ಉತ್ತರದಿಂದ ದಕ್ಷಿಣದ ಕ್ರೋಡದೇಶಕ್ಕೆ ಬಂದಿದ್ದ ಮಹರ್ಷಿ ಅಗಸ್ತ್ಯ ಕಣ್ಣಿಗೆ ಕಾವೇರಿ ಬೀಳುತ್ತಾಳೆ. ಅವಳ ಲೋಕೋದ್ಧಾರಕ್ಕಾಗಿ ಬಂದಿರುವ ಹಾಗೂ ಆಕೆಯ ಜೀವನುದ್ದೇಶವನ್ನು ತಮ್ಮ ತಪೋಬಲದಿಂದ ಕಂಡುಕೊಂಡ ಅಗಸ್ತ್ಯ ಮಹರ್ಷಿಗಳು ಕಾವೇರಿಯನ್ನು ಮದುವೆಯಾಗುವುದಾಗಿ ಕವೇರನ ಬಳಿ ಕೇಳಿಕೊಳ್ಳುತ್ತಾರೆ. ಕವೇರ ಒಪ್ಪಿಕೊಂಡರೂ ಕೂಡ ಕಾವೇರಿ ಮಾತ್ರ, ನಾನು ಇವರನ್ನು ಮದುವೆಯಾಗುತ್ತೇನೆ, ಆದ್ರೆ ಇವರು ಎಂದಿಗೂ ಕೂಡ ನನ್ನನ್ನು ಬಿಟ್ಟು ಹೋಗಬಾರದು ಎಂದು ಷರತ್ತು ವಿಧಿಸುತ್ತಾಳೆ. ಇದಕ್ಕೆ ಒಪ್ಪಿದ ಅಗಸ್ತ್ಯರು ಕಾವೇರಿಯನ್ನು ವರಿಸುತ್ತಾರೆ. ಲೋಕಕಲ್ಯಾಣಕ್ಕೇ ಎಂದು ಬಂದಿದ್ದ ಲೋಪಮುದ್ರೆ ಒಂದೇ ಒಂದು ನಿಮಿತ್ಯಕ್ಕಾಗಿ ಕಾಯುತ್ತಿರುತ್ತಾಳೆ.
/newsfirstlive-kannada/media/post_attachments/wp-content/uploads/2024/10/Kaveri-tirthodbhav-1.jpg)
ಆ ಒಂದು ನಿಮಿತ್ಯ ಬಂದೇ ಬಿಡುತ್ತದೆ. ಒಂದು ದಿನ ಕಾವೇರಿಯನ್ನು ಕಮಂಡಲದಲ್ಲಿಟ್ಟು ಅಗಸ್ತ್ಯ ಮುನಿಗಳು ಸ್ನಾನಕ್ಕೆಂದು ಹೋಗುತ್ತಾರೆ. ಅದನ್ನೇ ಕಾಯುತ್ತಿದ್ದ ಕಾವೇರಿ ಕಮಂಡಲದಿಂದ ಉಕ್ಕಿ ಹರಿಯಲು ಶುರು ಮಾಡುತ್ತಾಳೆ. ಅಗಸ್ತ್ಯರು ತಡೆದರು, ಊರ ಜನರು ತಡೆದರು ನಿಲ್ಲದ ಕಾವೇರಿ ಧುಮ್ಮಿಕ್ಕಿ ಹರಿಯುತ್ತಲೇ ಸಾಗುತ್ತಾಳೆ. ಆಕೆಯ ಜನ್ಮರಹಸ್ಯ ಅರಿತಿದ್ದ ಅಗಸ್ತ್ಯರು ಸಮುದ್ರದವರೆಗೆ ಅವಳನ್ನು ಹಿಂಬಾಲಿಸುತ್ತಾ ಓಡಿ ಹೋದರು. ಕಾವೇರಿ ಅದಾಗಲೇ ಹರಿದು ಹೋಗಿದ್ದಳು. ಲೋಪಮುದ್ರೆಯಾದ ಕಾವೇರಿ ಲೋಕಪಾವನೆಯಾಗಿದ್ದಳು. ವರ್ಷಕ್ಕೊಮ್ಮೆ ಕ್ರೋಢದ ಜನರಿಗೆ ದರ್ಶನ ನೀಡುವುದಾಗ ವರವಿತ್ತಳು. ಹೀಗೆ ಹರಿದು ಹೋದ ಕಾವೇರಿ ಭಾಗಮಂಡಲದಲ್ಲಿ ಕನ್ನಿಕೆ ಹಾಗೂ ಸುಜ್ಯೋತಿ ನದಿಯನ್ನು ಕೂಡಿ ಅಲ್ಲಿಂದ ಲೋಕಕಲ್ಯಾಣಕ್ಕಾಗಿ ಹರಿದು ಸಮುದ್ರ ಸೇರುತ್ತಾಳೆ. ಹೀಗೆ ಮೂರು ಪವಿತ್ರ ನದಿಗಳು ಸೇರುವ ಸ್ಥಳ ತ್ರೀವೇಣಿ ಸಂಗಮವಾಗಿ ಪುಣ್ಯಕ್ಷೇತ್ರವಾಗಿ ಮಾರ್ಪಡುತ್ತದೆ.
/newsfirstlive-kannada/media/post_attachments/wp-content/uploads/2024/10/Kaveri-tirthodbhav.jpg)
ಅಂದಿನಿಂದ ಇಂದಿನವರೆಗೂ ಕಾವೇರಿ ತಾನು ಕೊಟ್ಟ ಮಾತಿನಂತೆ ತುಲಾ ಮಾಸ ಸಮೀಪಿಸುತ್ತಿದ್ದಂತೆ ತೀರ್ಥರೂಪಿಣಿಯಾಗಿ ದರ್ಶನ ನೀಡುತ್ತಿದ್ದಾಳೆ. ಕೊಡವರ ಪಾಲಿಗೆ ಕುಲದೇವರಾಗಿ ಪೂಜಿಸಲ್ಪಡುತ್ತಿದ್ದಾಳೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲಾ ತೊಳೆದು ಹೋಗುತ್ತವೆ ಎಂಬ ನಂಬಿಕೆ ಇದೆ. ಇಲ್ಲಿ ಪಿಂಡಪ್ರಧಾನ ಮಾಡುವುದರಿಂದ ಮಡಿದವರು ಸ್ವರ್ಗಸೇರುತ್ತಾರೆ ಎಂಬ ನಂಬಿಕೆಯೂ ಇದೆ. ಈ ಎಲ್ಲಾ ಕಾರಣಗಳಿಗಾಗಿ ಕಾವೇರಿ ಇಂದಿಗೂ ಪೂಜ್ಯನೀಯವಾಗಿ, ಲೋಕಪಾವನೆಯಾಗಿ ಸಹಸ್ರಾರು ವರ್ಷಗಳಿಂದ ಈ ನೆಲದಲ್ಲಿ ಪೂಜಿಕೊಂಡು ಬರುತ್ತಿದ್ದಾಳೆ. ಕಾವೇರಿಯಿಲ್ಲದೇ ಕನ್ನಡವಿಲ್ಲ, ಕರ್ನಾಟಕವಿಲ್ಲ. ಕಾವೇರಿಯ ತೀರ್ಥವಿಲ್ಲದೇ ಪುಣ್ಯದ ಫಲವಿಲ್ಲಾ ಎನ್ನುವಷ್ಟು ಪೂಜ್ಯಭಾವದಲ್ಲಿ ನಮ್ಮ ನಾಡಿನ ಜನರಲ್ಲಿ ಕಾವೇರಿ ಬೆರೆತು ಹೋಗಿದ್ದಾಳೆ. ನಾಳೆ ಅಂದ್ರೆ ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ. ಸಹಸ್ರಾರು ಭಕ್ತರು ತಾಯಿಯನ್ನು ಕಣ್ತುಂಬಿಕೊಳ್ಳುತ್ತಾರೆ. ತೀರ್ಥೋದ್ಭವದ ಸಂಭ್ರಮ ಎಲ್ಲೆಡೆಯೂ ಕಳೆಗಟ್ಟಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us