ಅಮೆರಿಕ ಅಧಿಕಾರಿಯಿಂದ ಪ್ರಾಣ ಕಳ್ಕೊಂಡಿದ್ದ ಭಾರತದ ವಿದ್ಯಾರ್ಥಿನಿ ಕುಟುಂಬಕ್ಕೆ 260 ಕೋಟಿ ಸೆಟಲ್​ಮೆಂಟ್..!

ಅಮೆರಿಕದ ರಸ್ತೆಯಲ್ಲಿ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಆಂಧ್ರ ಮೂಲದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡೂಲ (23) ಕುಟುಂಬಕ್ಕೆ ಅಮೆರಿಕದ ಸಿಯಾಟಲ್ ನಗರ ಆಡಳಿತವು ಬರೋಬ್ಬರಿ 29 ಮಿಲಿಯನ್ ಡಾಲರ್ (ಸುಮಾರು 262 ಕೋಟಿ ರೂ.) ಪರಿಹಾರ ನೀಡಲು ಒಪ್ಪಿಕೊಂಡಿದೆ.

author-image
Ganesh Kerekuli
jaahnavi Kandula
Advertisment

ಅಮೆರಿಕದ ರಸ್ತೆಯಲ್ಲಿ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಆಂಧ್ರ ಮೂಲದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡೂಲ (23) ಕುಟುಂಬಕ್ಕೆ ಅಮೆರಿಕದ ಸಿಯಾಟಲ್ ನಗರ ಆಡಳಿತವು ಬರೋಬ್ಬರಿ 29 ಮಿಲಿಯನ್ ಡಾಲರ್ (ಸುಮಾರು 262 ಕೋಟಿ ರೂ.) ಪರಿಹಾರ ನೀಡಲು ಒಪ್ಪಿಕೊಂಡಿದೆ. ಮಗಳ ಸಾವಿನಿಂದ ನೊಂದು ಬೆಂದಿದ್ದ ಕುಟುಂಬಕ್ಕೆ ಈ ಮೂಲಕ ನಗರ ಆಡಳಿತ ಸಾಂತ್ವನ ಹೇಳಲು ಮುಂದಾಗಿದೆ.

ಅಂದು ನಡೆದಿದ್ದೇನು?

2023ರಲ್ಲಿ ಈ ದಾರುಣ ಘಟನೆ ನಡೆದಿತ್ತು. ನಾರ್ತ್ ಈಸ್ಟರ್ನ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದ ಜಾಹ್ನವಿ ಕಂಡೂಲ ರಸ್ತೆ ದಾಟುತ್ತಿದ್ದರು. ಈ ವೇಳೆ ಡ್ರಗ್ಸ್ ಓವರ್‌ಡೋಸ್ ಕರೆಯೊಂದಕ್ಕೆ ತುರ್ತಾಗಿ ಹೋಗುತ್ತಿದ್ದ ಪೊಲೀಸ್ ಅಧಿಕಾರಿ ಕೆವಿನ್ ಡೇವ್, ತಮ್ಮ ಕಾರನ್ನು ಮಿತಿಮೀರಿದ ವೇಗದಲ್ಲಿ ಚಲಾಯಿಸಿಕೊಂಡು ಬಂದಿದ್ದರು. ಕೇವಲ 40 ಕಿ.ಮೀ (25 mph) ವೇಗದ ಮಿತಿಯಿದ್ದ ರಸ್ತೆಯಲ್ಲಿ ಅವರು 119 ಕಿ.ಮೀ (74 mph) ವೇಗದಲ್ಲಿ ಬಂದು ಜಾಹ್ನವಿಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಜಗತ್ತನ್ನೇ ರೊಚ್ಚಿಗೆಬ್ಬಿಸಿದ್ದ ಆ ವಿಡಿಯೋ!

ಈ ಸಾವು ನೋವಿನ ಸಂಗತಿಯಾಗಿದ್ದರೂ, ಇದರ ನಂತರ ನಡೆದ ಘಟನೆ ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು. ಘಟನೆಯ ಬಗ್ಗೆ ಮಾತನಾಡಿದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ಡೇನಿಯಲ್ ಆಡರರ್ (Daniel Auderer), ತನ್ನ ಬಾಡಿ ಕ್ಯಾಮೆರಾದಲ್ಲಿ ನಗುತ್ತಾ ಮಾತನಾಡಿದ್ದ ದೃಶ್ಯ ಸೆರೆಯಾಗಿತ್ತು. ಆಕೆ ಕೇವಲ ಒಬ್ಬ ಸಾಮಾನ್ಯ ವ್ಯಕ್ತಿ, ಆಕೆಯ ಜೀವಕ್ಕೆ ಸೀಮಿತ ಮೌಲ್ಯವಿದೆ (Limited Value). ಸುಮ್ಮನೆ ಒಂದು ಚೆಕ್ ಬರೆದುಕೊಡಿ ಸಾಕು ಎಂದು ವ್ಯಂಗ್ಯವಾಡಿದ್ದ. ಈ ಮಾತುಗಳು ಭಾರತೀಯ ರಾಜತಾಂತ್ರಿಕರು ಮತ್ತು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಮ್ಯಾನೇಜ್​ಮೆಂಟ್​ಗೆ ಸೆಲೆಕ್ಷನ್​ ಟೆನ್ಶನ್.. ಬೂಮ್ರಾ vs ಸಿರಾಜ್​ ಫೈಟ್..!

jaahnavi Kandula (2)

ಪರಿಹಾರ ಮತ್ತು ನಗರದ ಸ್ಪಷ್ಟನೆ

ಇದೀಗ ಸಿಯಾಟಲ್ ನಗರವು ಜಾಹ್ನವಿ ಕುಟುಂಬದೊಂದಿಗೆ 29 ಮಿಲಿಯನ್ ಡಾಲರ್ ಇತ್ಯರ್ಥಕ್ಕೆ ಒಪ್ಪಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಸಿಟಿ ಅಟಾರ್ನಿ ಎರಿಕಾ ಇವಾನ್ಸ್, ಜಾಹ್ನವಿ ಸಾವು ಹೃದಯ ವಿದ್ರಾವಕ. ಈ ಆರ್ಥಿಕ ಪರಿಹಾರವು ಅವರ ಕುಟುಂಬಕ್ಕೆ ಸ್ವಲ್ಪಮಟ್ಟಿನ ನೆಮ್ಮದಿ ನೀಡಬಹುದು ಎಂದು ಭಾವಿಸುತ್ತೇವೆ. ಜಾಹ್ನವಿ ಅವರ ಜೀವಕ್ಕೆ ಬೆಲೆ ಇದೆ. ಅದು ಅವರ ಕುಟುಂಬಕ್ಕೆ ಮತ್ತು ನಮಗೆ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳಿಗೆ ಶಿಕ್ಷೆ ಏನಾಯ್ತು?

ಅವಹೇಳನಕಾರಿ ಮಾತು ಆಡಿದ್ದ ಅಧಿಕಾರಿ ಡೇನಿಯಲ್ ಆಡರರ್‌ನನ್ನು ಪೊಲೀಸ್ ಇಲಾಖೆಯಿಂದ ವಜಾ ಮಾಡಲಾಗಿದೆ. ಅಪಘಾತ ಮಾಡಿದ ಚಾಲಕ ಕೆವಿನ್ ಡೇವ್‌ನನ್ನು ಕೂಡ ಸೇವೆಯಿಂದ ವಜಾಗೊಳಿಸಲಾಗಿದ್ದು, ನಿರ್ಲಕ್ಷ್ಯದ ಚಾಲನೆಗಾಗಿ 5,000 ಅಮೆರಿಕನ್ ಡಾಲರ್ ದಂಡ ವಿಧಿಸಲಾಗಿದೆ. ಆದರೆ ಉದ್ದೇಶಪೂರಕವಾಗಿ ಅಪಘಾತ ಮಾಡಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧದ ಗಂಭೀರ ಕ್ರಿಮಿನಲ್ ಆರೋಪಗಳನ್ನು ಕೈಬಿಡಲಾಗಿದೆ.

ಇದನ್ನೂ ಓದಿ: 4 ಲಕ್ಷಕ್ಕಾಗಿ ಹೆತ್ತವರನ್ನೇ ಮುಗಿಸಿದ ‘ಅಮೆರಿಕ ರಿಟರ್ನ್’ ಮಗ.. ನಿವೃತ್ತ ನೇವಿ ಅಧಿಕಾರಿ, ವೈದ್ಯೆ ಕೇಸ್​ಗೆ ಟ್ವಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Jaahnavi Kandula
Advertisment