/newsfirstlive-kannada/media/media_files/2025/08/11/dogs-1-2025-08-11-13-37-48.jpg)
ನವದೆಹಲಿ: ಇತ್ತೀಚೆಗೆ ಮನುಷ್ಯರ ಮೇಲೆ ಬೀದಿ ನಾಯಿಗಳ ದಾಳಿ ಹೆಚ್ಚಾಗಿ ರೇಬಿಸ್​ಗೆ ಬಲಿ ಆಗುತ್ತಿದ್ದಾರೆ. ಈ ಸಂಬಂಧ ದೆಹಲಿ ಹಾಗೂ ಎನ್​ಸಿಆರ್​ನಲ್ಲಿನ ಬೀದಿ ನಾಯಿಗಳನ್ನು ಹಿಡಿದು ಅವುಗಳ ಆಶ್ರಯಕ್ಕೆ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶ ಹೊರಡಿಸಿದೆ.
ಸಂಬಂಧ ಪಟ್ಟ ಕಚೇರಿಗಳು, ಅಧಿಕಾರಿಗಳು 8 ವಾರದ ಒಳಗಾಗಿ ದೆಹಲಿ ಹಾಗೂ ಎನ್​ಸಿಆರ್​ ಪ್ರದೇಶದ ಬೀದಿಗಳಲ್ಲಿರುವ ನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್​ಗೆ ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುವ ನಾಯಿಗಳನ್ನು ಹಿಡಿಯಬೇಕು. ಅವುಗಳಿಗೆ ಆಶ್ರಯ ಸೌಲಭ್ಯ ಒದಗಿಸಲು ಮುನ್ಸಿಪಾಲ್ ಮತ್ತು ಇತರೆ ಏಜೆನ್ಸಿಗಳು ಕೂಡಿ ಕೆಲಸ ಮಾಡಬೇಕು. ನ್ಯಾಯಾಲಯ ನೀಡಿದ ಗಡುವಿನ ಒಳಗೆ ಕೆಲಸ ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್​ ಆದೇಶ ನೀಡಿದೆ.
ಇದನ್ನೂ ಓದಿ:BJP ಸಂಸದರನ್ನ ಖಾಲಿ ಟ್ರಂಕ್​ಗೆ ಹೋಲಿಸಿ ಡಿ.ಕೆ ಶಿವಕುಮಾರ್ ಕಿಡಿ..ಕಿಡಿ.. ಏನೇನು ಹೇಳಿದರು? VIDEO
ಒಮ್ಮೆ ನಾಯಿಯನ್ನು ಆಶ್ರಯಕ್ಕೆ ಎತ್ತಿಕೊಂಡು ಹೋದ ಮೇಲೆ ಮತ್ತೆ ಬೀದಿಗೆ ತಂದು ಬಿಡಬಾರದು. ಕಾಲೋನಿಗೆ, ಬೀದಿಗೆ ಅಥವಾ ಸಾರ್ವಜನಿಕ ಸ್ಥಳಗಳಿಗೆ ನಾಯಿಗಳನ್ನು ಬಿಡಲೇಬಾರದು ಎಂದು ದೆಹಲಿ ಸರ್ಕಾರ, ಎಂಸಿಡಿ ಹಾಗೂ ಎನ್​ಡಿಎಂಸಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಒಂದು ವೇಳೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬಂದು ನಾಯಿ ವಾಪಸ್​ ತೆಗೆದುಕೊಂಡು ಹೋಗಲು ಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ಕೂಡ ನೀಡಿದೆ.
ನಾಯಿಗಳ ಹಾವಾಳಿ ಹೆಚ್ಚಾಗಿ ರೇಬಿಸ್​ ಹರಡುತ್ತಿರುವುದನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್​ ಸುಮೋಟೋ ಕೇಸ್ ದಾಖಲು ಮಾಡಿಕೊಂಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾ.ಜೆ.ಬಿ ಪಾರ್ದಿವಾಲಾ ಮತ್ತು ನ್ಯಾ.ಆರ್ ಮಹದೇವನ್ ಪೀಠದಿಂದ ನಿರ್ದೇಶನ ಹೊರ ಬಿದ್ದಿದೆ. ದೆಹಲಿ ಹಾಗೂ ಹೊರವಲಯದಲ್ಲಿ 1 ದಿನಕ್ಕೆ ನಾಯಿಗಳು ಕಚ್ಚಿರುವಂತಹ 100 ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದು ರೇಬಿಸ್​ಗೆ ಕಾರಣವಾಗುತ್ತಿರುವುದು ಒಂದು ಕಾರಣವಾದರೆ ಜೊತೆಗೆ ಮಕ್ಕಳು, ಹಿರಿಯ ನಾಗರಿಕರು ಭಯಾನಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ