/newsfirstlive-kannada/media/media_files/2025/09/05/punjab_rain-2025-09-05-08-48-48.jpg)
ಉತ್ತರ ಭಾರತದಲ್ಲಿ ವರ್ಷರಾಜನ ಚೆಲ್ಲಾಟಕ್ಕೆ ಸೃಷ್ಟಿಯಾಗಿರೋ ಅವಾಂತರಗಳು ಒಂದೆರಡಲ್ಲ. ಉತ್ತರ ಭಾರತಕ್ಕಿದು ಅಪಾಯದ ಗಡಿ ದಾಟಿದ ಪರಿಸ್ಥಿತಿ. ರಜೆ ಪಡೆಯದ ವರುಣ, ರೌದ್ರ ಅವತಾರ ರೂಪದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.
ಪಂಜಾಬ್ನಲ್ಲಿ ಮಳೆ.. ವಿನಾಶವನ್ನೇ ಸೃಷ್ಟಿಸಿದ ಪ್ರವಾಹ!
ಹೊಲಗಳು ಕೆರೆಗಳಾಗಿವೆ, ಮನೆಗಳು ಮುಳುಗಿವೆ, ಬದುಕು ಛಿದ್ರವಾಗಿವೆ. ನಿರಂತರ ಮಳೆ ಮತ್ತು ಪ್ರವಾಹಕ್ಕೆ ಉತ್ತರ ಭಾರತ ತತ್ತರಿಸಿ ಹೋಗಿದೆ. ಅದರಲ್ಲೂ ಪಂಜಾಬ್ ರಾಜ್ಯದ ಜನರಿಗೆ ವರುಣ ದೇವ ವಿನಾಶವನ್ನೇ ಪರಿಚಯಿಸಿದ್ದಾನೆ. ಭೀಕರ ಪ್ರವಾಹಕ್ಕೆ ಪಂಜಾಬ್ನ 23 ಜಿಲ್ಲೆಯ ಪೈಕಿ ಗುರುದಾಸ್ಪುರ ಮತ್ತು ಅಮೃತಸರ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ. ಭೀಕರ ಪ್ರವಾಹ ಸುಮಾರು 1 ಸಾವಿರದ 655 ಕ್ಕೂ ಹೆಚ್ಚು ಹಳ್ಳಿಗಳ ಜನರ ಸಂಕಷ್ಟಕ್ಕೆ ಕಾರಣವಾಗಿದೆ. ಈ ಎರಡು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 7ರವರೆಗೆ ಶಾಲೆಗಳಿಗೆ ರಜೆ ಮುಂದುವರೆಸಲಾಗಿದೆ.
ಪಂಜಾಬ್ನ ಫಜಿಲ್ಕಾ ಭಾಗದಲ್ಲಿ ಮಳೆ ರಾದ್ಧಾಂತ ಸೃಷ್ಟಿಸಿದೆ. ನೂರಾರು ಮನೆಗಳು ಮುಳುಗಿ ಹೋಗಿದ್ರೆ ಸೇತುವೆಗಳು ಮಳೆ ನೀರಲ್ಲಿ ಕಾಣೆಯಾಗಿವೆ. ಜನರ ಪ್ರಾಣ ಉಳಿಸಲು ರಕ್ಷಣಾ ಸಿಬ್ಬಂದಿ ಟ್ಯೂಬ್ಗಳನ್ನ ಬಳಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ನದಿ ದಡದಲ್ಲಿರೋ ಧಾರಿ ದೇವಿ ದೇವಾಲಯ ಮುಳುಗಡೆ
ಉತ್ತರಾಖಂಡದ ಗರ್ವಾಲ್ ಪ್ರದೇಶದ ಶ್ರೀನಗರ ಮತ್ತು ಪೌರಿ ಗರ್ವಾಲ್ ನಡುವಿನ ಅಲಕನಂದಾ ನದಿಯ ದಡದಲ್ಲಿರುವ ಧಾರಿ ದೇವಿಯ ದೇವಾಲಯ ಜಲಾವೃತವಾಗಿದೆ. ಅಲಕನಂದಾ ನದಿಯ ಹರಿವಿನಲ್ಲಿ ಗಣನೀಯ ಏರಿಕೆಯಾಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಯಮುನಾ ನದಿ
ದೆಹಲಿಯ ಯಮುನಾ ನದಿ ನೀರು ಹಲವು ಜನ ವಸತಿ ಪ್ರದೇಶಗಳಿಗೆ ನುಗ್ಗಿದೆ. ಯಮುನಾ ನದಿ ನೀರಿನ ಮಟ್ಟ ಕೊನೆಯ ಹಂತ 208 ಮೀಟರ್ ಸಮೀಪಕ್ಕೆ ತಲುಪಿದೆ. ಇನ್ನೂ ಪ್ರವಾಹದ ನೀರಲ್ಲಿ ನಾಯಿಯೊಂದು ಈಜುತ್ತಾ ಬಂದು ಪ್ರಾಣ ಉಳಿಸಕೊಂಡಿದೆ.
ಇದನ್ನೂ ಓದಿ: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ.. EVM ಮಿಷನ್ನಲ್ಲಿ ಮತದಾನ ಬೇಡವೇ ಬೇಡ, ಶಿಫಾರಸು
ದೆಹಲಿಯಲ್ಲೂ ನೀರೋ ನೀರು
ದೆಹಲಿ ನಗರದ ಅಂಡರ್ ಪಾಸ್ಗಳು ಕೆರೆ ಕೋಡಿ ಬಿದ್ದ ರೀತಿ ಕಾಣುತ್ತಿದೆ.. ದೆಹಲಿಯ ಕಾಶ್ಮೀರಿ ಗೇಟ್ ಭಾಗದಲ್ಲಿ ಮನೆಗಳು ಯಾವ್ದು, ರಸ್ತೆಗಳು ಯಾವ್ದು, ಕೆರೆಗಳು ಯಾವ್ದು ಅಂತ ಗೊತ್ತಾಗದಂತಾಗಿದೆ. ಇತ್ತ ಸೆಕ್ರೆಟರಿಯೇಟ್ನಲ್ಲೂ ಮೊಣಕಾಲುದ್ದಕ್ಕೆ ನೀರು ನಿಂತು ಜನ ಪರದಾಡುವಂತಾಗಿತ್ತು.
ಜಮ್ಮು ಕಾಶ್ಮೀರದಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ, ನದಿಗಳು, ತೊರೆಗಳು, ಮನೆಗಳು, ರೈಲ್ವೆ ವಿಭಾಗವನ್ನ ನುಂಗಿ ನೀರು ಕುಡಿದಿದೆ. ಜಮ್ಮು ಭಾಗದ ರೈಲು ಕಾರ್ಯಾಚರಣೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಜಲಾಘಾತಕ್ಕೊಳಗಾಗಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಮೇಘರಾಜ ವಿರಾಮ ಪಡೆಯದಿದ್ರೆ ದೇವರೇ ಗತಿ ಎನ್ನುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ