/newsfirstlive-kannada/media/media_files/2025/10/04/nagpur_hotel-2025-10-04-20-28-11.jpg)
ಇಟಲಿಯ ಗ್ರೊಸೆಟ್​ ಬಳಿಯ ಆರೇಲಿಯಾ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಹಾರಾಷ್ಟ್ರದ ನಾಗ್ಪುರ ಮೂಲದ ಹೋಟೆಲ್ ಉದ್ಯಮಿ ಹಾಗೂ ಅವರ ಪತ್ನಿ ಜೀವ ಕಳೆದುಕೊಂಡಿದ್ದಾರೆ. ಅದೃಷ್ಟವಶಾತ್ ಅವರ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗ್ಪುರದ ಹೋಟೆಲ್ ಉದ್ಯಮಿ ಜಾವೇದ್ ಅಖ್ತರ್ (55) ಹಾಗೂ ಇವರ ಹೆಂಡತಿ ನಾದಿರಾ ಗುಲ್ಶನ್ (47), ಡ್ರೈವರ್​ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಈ ದಂಪತಿ ತಮ್ಮ ಮೂವರು ಮಕ್ಕಳಾದ ಅರ್ಜೂ ಅಖ್ತರ್ (21), ಶಿಫಾ ಅಖ್ತರ್, ಮಗ ಜಝೆಲ್ ಅಖ್ತರ್ ಜೊತೆ ಯೂರೋಪ್​ ಪ್ರವಾಸಕ್ಕೆ ಕಳೆದ ಸೆಪ್ಟೆಂಬರ್​ 22 ರಂದು ತೆರಳಿದ್ದರು. ಫ್ರಾನ್ಸ್ ಪ್ರವಾಸ ಮುಗಿಸಿದ್ದ ಇವರು ಇಟಲಿಯ ಪ್ರವಾಸದಲ್ಲಿದ್ದರು ಎಂದು ಹೇಳಲಾಗಿದೆ.
ಇಟಲಿಯ ಪ್ರಸಿದ್ಧ ಸ್ಥಳಕ್ಕೆ 9 ಆಸನಗಳು ಇರುವ ಮಿನಿ ಬಸ್​ನಲ್ಲಿ ಜಾವೇದ್ ಅಖ್ತರ್ ಕುಟುಂಬ ಪ್ರಯಾಣ ಮಾಡುತ್ತಿತ್ತು. ಈ ವೇಳೆ ಗ್ರೊಸೆಟ್​ ಬಳಿಯ ಆರೇಲಿಯಾ ಹೆದ್ದಾರಿಯಲ್ಲಿ ಮಿನಿ ಬಸ್​ ಕೆಟ್ಟಿದ್ದರಿಂದ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಇದೇ ಸಮಯಕ್ಕೆ ಅತಿ ವೇಗವಾಗಿ ಬಂದ ಟ್ರಕ್​ವೊಂದು ಭಯಾನಕವಾಗಿ ಮಿನಿ ಬಸ್​ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬಸ್​ ಒಳಗಿದ್ದ ಡ್ರೈವರ್ ಹಾಗೂ ಜಾವೇದ್ ಅಖ್ತರ್ ಹಾಗೂ ಅವರ ಪತ್ನಿ ನಾದಿರಾ ಗುಲ್ಶನ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನು ಬಸ್ ಚಾಲಕ ಕೂಡ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇವರ ಮಗಳಾದ ಅರ್ಜೂ ಅವರ ತಲೆಗೆ ಗಂಭೀರವಾದ ಗಾಯಗಳು ಆಗಿದ್ದು ಅವರನ್ನು ಸೆಯೆನ್ ಲೀ ಸ್ಕಾಟ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಶಿಫಾ ಅಖ್ತರ್, ಮಗ ಜಝೆಲ್ ಅಖ್ತರ್ ಅವರು ಫ್ಲಾರೆನ್ಸ್ ಮತ್ತು ಗ್ರೊಸೆಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರನ್ನು ಹೆಲಿಕಾಪ್ಟರ್​ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.
ಇಟಲಿಯಲ್ಲಿರುವ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳು ನಾಗ್ಪುರದ ದಂಪತಿ ನಿಧನಕ್ಕೆ ಸಂತಾಪ ಸೂಚಿಸಿದ್ದು ಅವರಿಗೆ ಬೇಕಾದ ನೆರವು ನೀಡಲಾಗುವುದು ಎಂದು ಹೇಳಿದೆ. ಮೊದಲು ಈ ದಂಪತಿ ಮೃತಪಟ್ಟಿಲ್ಲ ಎನ್ನಲಾಗಿತ್ತು. ಆದರೆ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿ ದಂಪತಿ ಉಸಿರು ಚೆಲ್ಲಿರುವುದು ಸತ್ಯ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ