/newsfirstlive-kannada/media/media_files/2025/10/04/us_ap_student-2025-10-04-17-31-14.jpg)
ಹೈದರಾಬಾದ್​: ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಯನ್ನು ಅಮೆರಿಕದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗನ್​ನಿಂದ ಶೂಟ್ ಮಾಡಿ ಜೀವ ತೆಗೆದಿದ್ದಾನೆ. ಅಮೆರಿಕದ ಟೆಕ್ಸಾಸ್​ನ ಡಲ್ಲಾಸ್​ ನಗರದಲ್ಲಿ ಈ ಘಟನೆ ನಡೆದಿದೆ.
ಹೈದರಾಬಾದ್ ಮೂಲದ ವಿದ್ಯಾರ್ಥಿ ಚಂದ್ರಶೇಖರ್ ಪೊಲೆ ಗುಂಡೇಟಿನಿಂದ ಜೀವ ಬಿಟ್ಟವರು. 2023ರಲ್ಲಿ ಹೈದರಾಬಾದ್​ನಲ್ಲಿ ಡೆಂಟಲ್​ ಸರ್ಜರಿ ಪದವಿಯನ್ನು ಪೂರ್ಣಗೊಳಿಸಿದ ಬಳಿಕ ಇವರು ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ತೆರಳಿದ್ದರು. ಆರು ತಿಂಗಳ ಹಿಂದೆ ಅಮೆರಿಕದಲ್ಲಿ ಮಾಸ್ಟರ್ಸ್​​ ಡಿಗ್ರಿ ಮುಗಿಸಿದ್ದ ಚಂದ್ರಶೇಖರ್ ಪೊಲೆ, ಪೂರ್ಣ ಅವಧಿ ಉದ್ಯೋಗ ಸಿಗುವವರೆಗೂ ಬದುಕು ನಡೆಸುವುದಕ್ಕಾಗಿ ಪಾರ್ಟ್​ಟೈಮ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಸಿಲಿಂಡರ್ ಸ್ಫೋಟ ಪ್ರಕರಣ; ಜೀವ ಬಿಟ್ಟ ಮತ್ತಿಬ್ಬರು.. ಮೃತರ ಸಂಖ್ಯೆ 4ಕ್ಕೆ ಏರಿಕೆ
ಗ್ಯಾಸ್​ ಸ್ಟೇಷನ್​ನಲ್ಲಿ ಚಂದ್ರಶೇಖರ್ ಪಾರ್ಟ್​ಟೈಮ್ ಉದ್ಯೋಗ ಮಾಡುತ್ತಿದ್ದರು. ಆದರೆ ಗನ್ ಹಿಡಿದುಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಚಂದ್ರಶೇಖರ್ ಮೇಲೆ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾನೆ. ಇದರಿಂದ ರಕ್ತದ ಮಡುವಿನಲ್ಲಿ ನೆಲಕ್ಕೆ ಬಿದ್ದ ಅವರು ಉಸಿರು ಚೆಲ್ಲಿದ್ದಾರೆ. ಸದ್ಯ ಈ ಸುದ್ದಿ ತಿಳಿದು ಹೈದರಾಬಾದ್​ನಲ್ಲಿರುವ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತನ ಕುಟುಂಬಸ್ಥರು ಮಗನ ಮೃತದೇಹವನ್ನು ಭಾರತಕ್ಕೆ ರವಾನೆ ಮಾಡಿಸುವಂತೆ ಆಂಧ್ರದ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಬಿಆರ್​ಎಸ್​ ಶಾಸಕ ಸುಧೀರ್ ರೆಡ್ಡಿ ಹಾಗೂ ಮಾಜಿ ಸಚಿವ ಟಿ ಹರೀಶ್ ರಾವ್ ಅವರು ಹೈದರಾಬಾದ್​ನಲ್ಲಿರುವ ಮೃತನ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅಮೆರಿಕದಿಂದ ತವರಿಗೆ ಮೃತದೇಹ ತರಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ