/newsfirstlive-kannada/media/media_files/2025/08/27/jammu_kashmira-2025-08-27-09-13-53.jpg)
ದಕ್ಷಿಣ ರಾಜ್ಯಗಳ ಮೇಲೆ ಕರುಣೆ ತೋರಿರೋ ಮಳೆರಾಯ, ಉತ್ತರ ರಾಜ್ಯಗಳ ಮೇಲೆ ಮುನಿಸಿಕೊಂಡಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ನಿರಂತರ ಮಳೆಗೆ ಜಮ್ಮು ಮತ್ತು ಕಾಶ್ಮೀರ ತಡವರಿಸಿದರೆ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಚಡಪಡಿಸುತ್ತಿದೆ.
ದಕ್ಷಿಣ ಭಾರತದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ವರುಣ, ಉತ್ತರ ಭಾರತವನ್ನೂ ಹಿಂಡಿ ಹಿಪ್ಪೆ ಮಾಡುತ್ತಿದ್ದಾನೆ. ಅದರಲ್ಲೂ ಕಣಿವೆ ನಾಡು ಜಮ್ಮು & ಕಾಶ್ಮೀರ ಮಳೆಯ ನರ್ತನ ಹೊಡೆತಕ್ಕೆ ಕೊಚ್ಚಿ ಹೋಗುತ್ತಿದೆ. ಜನರಂತು ಜೀವ ಕೈಯಲ್ಲಿಡಿರುವ ಬದುಕುವಂತಾಗಿದೆ.
ವಾಹನಗಳು ಚಲಿಸುವಾಗ ಕುಸಿದ ತಾವಿ ಸೇತುವೆ!
ಜಮ್ಮು ಮತ್ತು ಕಾಶ್ಮೀರ ಜನ ಮಳೆರಾಯ ಮಾಡ್ತಿರೋ ಅವಾಂತರದಿಂದ ಪರದಾಡ್ತಿದ್ದಾರೆ. ಎಡಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆ ಅನೇಕ ದರಂತಗಳು ಸಂಭವಿಸಿದೆ. ಇದರಲ್ಲಿ ಒಂದು ಈ ತಾವಿ ಸೇತುವೆಯ ದುರ್ಘಟನೆ. ನೋಡ ನೋಡುತ್ತಲೇ ವಾಹನಗಳು ಸಾಲಿನಲ್ಲಿ ಚಲಿಸುವಾಗಲೇ ತಾವಿ ಸೇತುವೆ ಕುಸಿದಿದೆ.
ರಸ್ತೆಗಳ ಮೇಲೆ ನಾಲ್ಕು ಅಡಿಗಳಷ್ಟು ನಿಂತ ಮಳೆ ನೀರು!
ರಸ್ತೆಗಳ ಮೇಲೆ ಸುಮಾರು ನಾಲ್ಕು ಅಡಿಗಳಷ್ಟು ಮಳೆ ನೀರು ನಿಂತಿದ್ದು ಕಾರು, ಬೈಕ್, ಮನೆಗಳು ಮುಳುಗಿವೆ. ಜಮ್ಮುವಿನ ಶೇರ್-ಇ-ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮಳೆ ನೀರು ಆವರಿಸಿತ್ತು. ವಿದ್ಯಾಲಯದಲ್ಲಿದ್ದ ವಿದ್ಯಾರ್ಥಿಗಳು ಸಿಲುಕಿಕೊಂಡು ಸುಮಾರು ಗಂಟೆಗಳ ಕಾಲ ಪರದಾಡಿದರು.
ಜಮ್ಮುವಿನ ಜಿಜಿಎಂ ವಿಜ್ಞಾನ ಕಾಲೇಜು ಮತ್ತು ಕ್ಲಸ್ಟರ್ ವಿಶ್ವವಿದ್ಯಾಲಯದ ಆವರಣ ಮುಳುಗಿ, ಜನ ಜೀವನ ಅಸ್ತವ್ಯಸ್ತವಾಗಿದೆ. ಸಿಲುಕಿರುವ ವಿದ್ಯಾರ್ಥಿಗಳನ್ನ ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ದೋಡಾದಲ್ಲಿ ಮೇಘಸ್ಫೋಟದಿಂದ ಭಾರಿ ಪ್ರವಾಹ ಉಂಟಾಗಿದೆ.. ಜಲಾವೃತದ ದೃಶ್ಯಗಳನ್ನ ಹೆಲಿಕಾಪ್ಟರ್ ಮೂಲಕ ಸೆರೆ ಹಿಡಿಯಲಾಗಿದೆ.
ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ.. 13 ಮಂದಿ ಸಾವು
ಜಮ್ಮು ನಗರದಲ್ಲಿ ಕೇವಲ 9 ಗಂಟೆಗಳಲ್ಲಿ 248 ಮಿಮೀ ಮಳೆಯಾಗಿದ್ದು, ಆಗಸ್ಟ್ 1 ರಿಂದ 72 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ನಿನ್ನೆ ವೈಷ್ಣೋದೇವಿ ಮಾರ್ಗದಲ್ಲಿ 6 ಕಡೆ ಭೂಕುಸಿತವಾಗಿದ್ದು, 13 ಜನರು ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಾಯಗೊಂಡಿರೋ ಬಗ್ಗೆ ಮಾಹಿತ ಲಭ್ಯವಾಗಿದೆ.
ಲಡಾಖ್‌ನಲ್ಲಿ ಭಾರೀ ಮಳೆಯಿಂದಾಗಿ ಹಲವಾರು ರಸ್ತೆಗಳು, ರೈಲು ಸೇವೆಗಳು ಮತ್ತು ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ರಂಬನ್ ಜಿಲ್ಲೆಯ ಮರೋಗ್, ದಿಗ್ಡೋಲ್, ಬ್ಯಾಟರಿ ಚಶ್ಮಾ ಮತ್ತು ಕೇಲಾ ಮೋರ್ಹ್‌ಗಳಲ್ಲಿ ಹಲವಾರು ಭೂಕುಸಿತಗಳು, ಮಣ್ಣು ಕುಸಿತ ಮತ್ತು ಗುಂಡಿನ ಕಲ್ಲುಗಳಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಇದನ್ನೂ ಓದಿ: ಧರ್ಮಸ್ಥಳ ಬರುಡೆ ಪ್ರಕರಣ; ಝಣ ಝಣ ಕಾಂಚಾಣ.. ಚಿನ್ನಯ್ಯಗೆ ಅಷ್ಟೊಂದು ಹಣ ಕೊಟ್ಟಿದ್ಯಾರು?
ಪಂಜಾಬ್, ಸಿಯಾಲ್‌ಕೋಟ್‌ನಲ್ಲಿ 362 ಮಿಲಿ ಮೀಟರ್ ಮಳೆ
ಈಶಾನ್ಯ ಪಂಜಾಬ್‌ನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಸಿಯಾಲ್‌ಕೋಟ್‌ನಲ್ಲಿ ದಾಖಲೆಯ ಮಳೆಯಾಗಿದ್ದು, 362 ಮಿಲಿ ಮೀಟರ್ ಮಳೆ ದಾಖಲಾಗಿದೆ. ಸೇತುವೆಗಳು ಕೊಚ್ಚಿಹೋಗಿವೆ.. ಮನೆಗಳು ಮುಳುಗಿವೆ.. ವಾಹನ ಸವಾರರು ಈಜಾಡುತ್ತಿರುವಂತೆ ಕಾಣ್ತಿದೆ. ಈ ಪ್ರವಾಹದ ಬಿಸಿ ಪಂಜಾಬ್ ಗಡಿ ಭಾಗದ ಪಾಕಿಸ್ತಾನಕ್ಕೂ ತಟ್ಟಿದೆ.
ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಎಚ್ಚರಿಕೆ
ಹಿಮಾಚಲ ಪ್ರದೇಶದ ಚಂಬಾ, ಮಂಡಿ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಪಂಜಾಬ್‌ನ ಲುಧಿಯಾನ, ಸಂಗ್ರೂರ್, ಬರ್ನಾಲಾ ಮತ್ತು ಮಾನ್ಸಾ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜಸ್ಥಾನದ ದಕ್ಷಿಣ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜೈಪುರದ ಹವಾಮಾನ ಕೇಂದ್ರವು ರಾಜ್ಸಮಂಡ್, ಸಿರೋಹಿ ಮತ್ತು ಉದಯಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಚ್ಚರಿಕೆ ನೀಡಲಾಗಿದೆ. ಮಳೆಯಿಂದ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಿ ಅಂತ ಹವಾಮಾನ ಇಲಾಖೆ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ