/newsfirstlive-kannada/media/media_files/2025/08/17/c-p_radhakrishnan-2025-08-17-20-24-03.jpg)
ನವದೆಹಲಿ: ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಎನ್‌ಡಿಎ ಇಂದ ಸಿ.ಪಿ ರಾಧಾಕೃಷ್ಣನ್ ಅವರ ಹೆಸರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಘೋಷಣೆ ಮಾಡಿದ್ದಾರೆ.
ಮಹಾರಾಷ್ಟ್ರದ ರಾಜ್ಯಪಾಲ ಆಗಿರುವ ಸಿ.ಪಿ ರಾಧಾಕೃಷ್ಣನ್ ಅವರು ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧೆ ಮಾಡಲಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ ನಡ್ಡಾ ಅವರು ಮಾಹಿತಿ ನೀಡಿದ್ದಾರೆ. ಎನ್‌ಡಿಎ ಕೂಟದ ಸಂಸದೀಯ ಸಭೆಗಳಲ್ಲಿ ಸಿ.ಪಿ ರಾಧಾಕೃಷ್ಣನ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಜಗದೀಪ್ ಧನಕರ್ ಅವರ ಹಠಾತ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ. ಈ ಸಂಬಂಧ ಇಂದು ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸಿ.ಪಿ ರಾಧಾಕೃಷ್ಣನ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಇವರು ಈ ಮೊದಲು ತಮಿಳುನಾಡಿನ ಬಿಜೆಪಿ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ:ಯಾಕೆ ಎಂದು ಪ್ರಶ್ನೆ ಮಾಡೋ ಪತ್ರಿಕೋದ್ಯಮ ಮೈ ಮರೆಯುತ್ತಿದೆ, ಇದು ಅಪಾಯ; KV ಪ್ರಭಾಕರ್
ಸಿ.ಪಿ ರಾಧಾಕೃಷ್ಣನ್ ಅವರ ಪೂರ್ಣ ಹೆಸರು, ಚಂದ್ರಾಪುರಂ ಪೊನ್ನುಸಾಮಿ ರಾಧಾಕೃಷ್ಣನ್ ಆಗಿದೆ. ಇವರು 1957 ಅಕ್ಟೋಬರ್ 20 ರಂದು ಜನಿಸಿದ್ದಾರೆ. ಜಾರ್ಖಂಡ್ ರಾಜ್ಯಪಾಲರಾಗಿದ್ದರು. ತೆಲಂಗಾಣ ಹಾಗೂ ಪುದುಚೇರಿಯ ಹೆಚ್ಚುವರಿ ಗವರ್ನರ್ ಆಗಿ ಕೆಲಸ ಮಾಡಿದ್ದಾರೆ. ಬಿಜೆಪಿಯ ಸದಸ್ಯರಾಗಿದ್ದ ಇವರು ಎರಡು ಬಾರಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಪಡೆದು ಸಂಸದರು ಆಗಿದ್ದರು.
ಆಗಿನ ಮದ್ರಾಸ್ ರಾಜ್ಯದಲ್ಲಿ ತಿರುಪ್ಪುರಿನಲ್ಲಿ ಸಿ.ಪಿ ರಾಧಾಕೃಷ್ಣನ್ ಅವರು ಜನಿಸಿದ್ದರು. ಬಳಿಕ ತಮ್ಮ 16ನೇ ವಯಸ್ಸಿನಿಂದಲೂ ಆರ್ಎಸ್ಎಸ್ ಹಾಗೂ ಜನ ಸಂಘದೊಂದಿಗೆ ಗುರುತಿಸಿಕೊಂಡಿದ್ದಾರೆ. ಸದ್ಯ ಈಗ ಮಹಾರಾಷ್ಟ್ರದ ರಾಜ್ಯಪಾಲರು ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ