/newsfirstlive-kannada/media/media_files/2025/08/17/kv_prabhakar-2025-08-17-18-44-09.jpg)
ಮಂಡ್ಯ: 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ವೇಳೆಯೇ ಭಾರತ ರಾಜಕೀಯ ನಾಯಕತ್ವದಿಂದ ಆರ್ಥಿಕ ನಾಯಕತ್ವದ ಕೈಗೆ ಜಾರಿರುವುದರ ಪರಿಣಾಮಗಳನ್ನು ಪತ್ರಕರ್ತರು ಪತ್ತೆ ಮಾಡಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರು ಹೇಳಿಕದ್ದಾರೆ.
ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ, ಕೆ.ವಿ ಪ್ರಭಾಕರ್ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯ ಹೋರಾಟವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಭಾರತೀಯ ಪತ್ರಿಕೋದ್ಯಮ ರೂಪಿಸಿದ್ದ ಮಾದರಿಗಳ ಮೇಲೆ ಈಗ ಧೂಳು ಬಿದ್ದಿದೆ. ಆ ಧೂಳನ್ನು ಕೊಡವಿ ಮತ್ತೆ ನಮ್ಮ ಮಾದರಿಗಳಿಗೆ ಜೀವಕೊಡಬೇಕಿದೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಹೊಸ್ತಿಲಲ್ಲಿ ಪತ್ರಿಕೋದ್ಯಮಕ್ಕೆ ಹಣಕಾಸಿನ ಬಡತನವಿತ್ತು. ಆದರೆ ದೇಶವನ್ನು ಕಟ್ಟುವ ರಾಜಕೀಯ, ಸಾಮಾಜಿಕ ಇಚ್ಛಾಶಕ್ತಿಯಲ್ಲಿ ಶ್ರೀಮಂತಿಕೆ ಇತ್ತು. ಆದರೆ ಇಂದು ಪತ್ರಿಕೋದ್ಯಮ ಹಣಕಾಸಿನ ಬಡತನದಿಂದ ಮೇಲೆ ಬಂದಿದ್ದು ಸಾಮಾಜಿಕ ಇಚ್ಛಾಶಕ್ತಿಯ ಬಡತನಕ್ಕೆ ತುತ್ತಾಗಿದೆ. ಇದಕ್ಕೆ ದೇಶ ರಾಜಕೀಯ ನಾಯಕತ್ವದ ಕೈ ಜಾರಿ ಆರ್ಥಿಕ ನಾಯಕತ್ವದ ಕೈವಶವಾಗಿರುವುದೂ ಮುಖ್ಯ ಕಾರಣ ಎಂದು ವಿವರಿಸಿದ್ದಾರೆ.
/filters:format(webp)/newsfirstlive-kannada/media/media_files/2025/08/17/kv_prabhakar_mnd-2025-08-17-18-44-33.jpg)
ಬ್ಯಾಂಕ್​ನಿಂದ ನಮ್ಮ ಹಣ ನಾವು ತೆಗೆದ್ರೆ, ಅದಕ್ಕೆ ಟ್ಯಾಕ್ಸ್​
ಮೊದಲೆಲ್ಲಾ ಆರ್ಥಿಕ ಶಕ್ತಿಗಳನ್ನು ಸರ್ಕಾರಗಳು ನಿಯಂತ್ರಿಸುತ್ತಿದ್ದವು. ಹೀಗಾಗಿ ಬ್ಯಾಂಕ್​ಗಳ ರಾಷ್ಟ್ರೀಕರಣ, ಭೂ ಸುಧಾರಣೆ, ಉಚಿತ ಶಿಕ್ಷಣ, ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣ ರಾಜ್ಯದ ಕಾರ್ಯಕ್ರಮಗಳ ಜಾರಿಗೆ ಸಾಧ್ಯವಾಗಿತ್ತು. ಆದರೆ ಇಂದು ಆರ್ಥಿಕ ಶಕ್ತಿಗಳೇ ಸರ್ಕಾರಗಳನ್ನ ನಿಯಂತ್ರಿಸುತ್ತಾ, ದೇಶವನ್ನು ಮುನ್ನಡೆಸುತ್ತಿರುವುದರಿಂದ ಇಡೀ ಸಾಮಾಜಿಕ ವ್ಯವಸ್ಥೆಯೇ ತಲೆ ಕೆಳಗಾಗಿ ಪ್ರಜೆಗಳು ಕೇವಲ ಗ್ರಾಹಕರಾಗಿದ್ದಾರೆ. ನಮ್ಮದೇ ಬ್ಯಾಂಕ್ ಅಕೌಂಟಿನಿಂದ ನಮ್ಮದೇ 500 ರೂಪಾಯಿ ತೆಗೆದರೂ ಅದಕ್ಕೆ ಶುಲ್ಕ ಬೀಳುತ್ತಿದೆ. ಬಡ ಬೋರೇಗೌಡ ಬೆಳಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಟ್ಟರೆ ತೆರಿಗೆ, ಶುಲ್ಕ, GST, ದಂಡ, ಬಡ್ಡಿ, ಚಕ್ರಬಡ್ಡಿಗಳನ್ನು ದಾಟಿಕೊಂಡೇ ವಾಪಾಸ್ ಮನೆಗೆ ಬರಬೇಕು. ಬೀಡಿ ಬೆಂಕಿಪೊಟ್ಟಣ, ಬಾಳೆ ಹಣ್ಣಿಗೂ ಜಿಎಸ್​ಟಿ ಕಟ್ಟುವ ಪರಿಸ್ಥಿತಿ ಇದೆ. ಯಾಕೆ ಎಂದು ಪ್ರಶ್ನೆ ಮಾಡಬೇಕಾದ ಪತ್ರಿಕೋದ್ಯಮಕ್ಕೆ ಮೈ ಮರೆವು ಬಂದಿರುವುದು ಅಪಾಯದ ಸಂಕೇತ ಎಂದು ಹೇಳಿದ್ದಾರೆ.
ದೇಶವನ್ನು ರಾಜಕೀಯ ನಾಯಕತ್ವದ ಕೈಯಿಂದ, ಆರ್ಥಿಕ ನಾಯಕತ್ವ ತಮ್ಮ ಕೈಗೆ ಕಿತ್ತುಕೊಳ್ಳುವ ಮೊದಲ ಭಾಗವಾಗಿ ಪತ್ರಿಕೆಗಳನ್ನು, ಚಾನಲ್​ಗಳನ್ನು, ಕಾರ್ಪೋರೇಟ್ ಶಕ್ತಿಗಳು ತಮ್ಮ ವಶಕ್ಕೆ ಪಡೆದಿವೆ. ಹೀಗಾಗಿ ಮಾಧ್ಯಮಗಳು ಕಾರ್ಪೋರೇಟ್ ಶಕ್ತಿಗಳು ತೀರ್ಮಾನಿಸಿದ್ದನ್ನು ಜನರಿಗೆ ತೋರಿಸುತ್ತಾ ಪತ್ರಕರ್ತರನ್ನು ಕಾರ್ಪೋರೇಟ್ ಶಕ್ತಿಗಳು ಕೇವಲ ಸ್ಟೆನೋಗ್ರಾಫರ್​ಗಳನ್ನಾಗಿ ಮಾಡಿಟ್ಟಿವೆ. ಹೀಗಾಗಿ ಜನರ ಅನ್ನದ ತಟ್ಟೆ, ಅಡುಗೆ ಮನೆಯ ಕಷ್ಟಗಳ ಮೇಲೆ ಕಣ್ಣಿಟ್ಟಿದ್ದ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ತನಿಖಾ ಪತ್ರಿಕೋದ್ಯಮವನ್ನು ಬೆಡ್ ರೂಮಿನ ಕಡೆಗೆ ತಿರುಗಿಸಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಪತ್ರಿಕೋದ್ಯಮವೇ ದೊಡ್ಡ ಸಮಸ್ಯೆ ಆಗುತ್ತಾ?
ಜನರ ಹೊಟ್ಟೆ ಬಟ್ಟೆ ಕಡೆಗೆ ಕಣ್ಣಿಟ್ಟಿದ್ದ ಕ್ಯಾಮೆರಾಗಳು ಹೊಟ್ಟೆ ಕೆಳಗಿನ ಸೊಂಟಕ್ಕೆ ಗಂಟುಬಿದ್ದಿವೆ. ಇದು ಭಾರತೀಯ ಪತ್ರಿಕೋದ್ಯಮದ ಮಾದರಿ ಅಲ್ಲ. ನಾವೀಗ ಪತ್ರಿಕಾ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ನಮ್ಮ ಮಾದರಿಗಳ ಮೇಲೆ ಕುಳಿತಿರುವ ಧೂಳನ್ನು ಕೊಡವಿಕೊಳ್ಳಬೇಕಿದೆ ಎಂದರು.
ಸ್ವಾತಂತ್ರ್ಯ ದಿನಾಚರಣೆ ಆಗಲಿ, ಪತ್ರಿಕಾ ದಿನಾಚರಣೆ ಆಗಲಿ ಸಂಭ್ರಮಕ್ಕೆ ಸೀಮಿತವಾಗದೆ ಎರಡರ ಮೌಲ್ಯಗಳನ್ನೂ, ವಿಶ್ವಾಸಾರ್ಹತೆಯನ್ನು ಮತ್ತೆ ಜೀವಂತಗೊಳಿಸಿಕೊಳ್ಳಬೇಕಿದೆ. ಪತ್ರಿಕೋದ್ಯಮ ತನ್ನ ಸಮಸ್ಯೆ ಬಗೆಹರಿಸಿಕೊಳ್ಳದಿದ್ದರೆ ಪತ್ರಿಕೋದ್ಯಮವೇ ದೊಡ್ಡ ಸಮಸ್ಯೆ ಆಗಿಬಿಡುವ ಅಪಾಯವಿದೆ. ಅದು ಗಂಭೀರ ವಿಮರ್ಷಿಸಿಕೊಳ್ಳುವ ಮೂಲಕ ಕಳೆದು ಹೋದ ಮಾದರಿಗಳಿಗೆ ಮರು ಜೀವ ಕೊಡುವುದೇ ಅರ್ಥಪೂರ್ಣ ಪತ್ರಿಕಾ ದಿನಾಚರಣೆ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ:ಮತ್ತೆ ಅಖಾಡಕ್ಕೆ ಇಳಿದ ಟಾಟಾ ಸುಮೋ.. Tata Motors ಲಾಂಚ್ ಮಾಡಿದ ಕಾರಿನ ಬೆಲೆ ಇಷ್ಟು ಕಡಿಮೆನಾ?
/filters:format(webp)/newsfirstlive-kannada/media/media_files/2025/08/17/kv_prabhakar_new-2025-08-17-18-46-59.jpg)
ಮಕ್ಕಳಿಗೆ ಕಿವಿ ಮಾತು
ಪ್ರತಿಭಾ ಪುರಸ್ಕೃತರಾದ ಪತ್ರಕರ್ತರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಕೆ.ವಿ ಪ್ರಭಾಕರ್ ಅವರು, ವಿಶ್ವದಲ್ಲೇ ಶ್ರೇಷ್ಠವಾದ ಜಾಗ ಅಂದರೆ ತಾಯಿಯ ಮಡಿಲು. ಆದ್ದರಿಂದ ಮಕ್ಕಳು ಹೆಚ್ಚು ಅಂಕ ಪಡೆಯುವ ಜೊತೆಗೆ ಬದುಕಿನ ಮೌಲ್ಯಗಳು, ತಂದೆ ತಾಯಿಯರ ಆರೈಕೆಯ ಮಾನವೀಯ ಜವಾಬ್ದಾರಿ, ಪ್ರೀತಿಯನ್ನು ಕೊಡಬೇಕು. ಮೊಬೈಲ್ ಗೀಳಿನಿಂದ ಹೊರಗೆ ಬಂದು ಬಾಂಧವ್ಯ ರೂಪಿಸಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲಾ, ಉದ್ಯಮಿ ಜಫ್ರುಲ್ಲಾ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ವಸತಿ ಸಚಿವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಸೇರಿ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us